AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉದ್ಘಾಟನೆ ಆಡಂಬರವಿಲ್ಲದೇ ನಾಗಸಂದ್ರ-ಮಾದಾವರ ಮೆಟ್ರೋ ಸೇವೆ ಆರಂಭ

ಬೆಂಗಳೂರಿನ ಮೆಟ್ರೋದ ಹಸಿರು ರೈಲು ಮಾರ್ಗವು ನಾಗಸಂದ್ರದಿಂದ ಮಾದಾವರಕ್ಕೆ 3.14 ಕಿಮೀ ವಿಸ್ತರಣೆಗೊಂಡಿದೆ. ಡಿಸಿಎಂ ಡಿಕೆ ಶಿವಕುಮಾರ್ ಅವರು ಇಂದು ಪ್ರಾಯೋಗಿಕ ಚಾಲನೆ ನೀಡಿದ್ದು, ನಾಳೆಯಿಂದ ಸಾರ್ವಜನಿಕರಿಗೆ ಲಭ್ಯವಾಗಲಿದೆ. ತುಮಕೂರು ರಸ್ತೆಯಲ್ಲಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ವಿಸ್ತರಣೆ ಮಾಡಲಾಗಿದೆ.

ಉದ್ಘಾಟನೆ ಆಡಂಬರವಿಲ್ಲದೇ ನಾಗಸಂದ್ರ-ಮಾದಾವರ ಮೆಟ್ರೋ ಸೇವೆ ಆರಂಭ
Kiran Surya
| Updated By: ಗಂಗಾಧರ​ ಬ. ಸಾಬೋಜಿ|

Updated on:Nov 06, 2024 | 3:20 PM

Share

ಬೆಂಗಳೂರು, ನವೆಂಬರ್ 06: ಸಿಟಿ ಜನರ ಬಹುನಿರೀಕ್ಷಿತ ನಾಗಸಂದ್ರದಿಂದ ಮಾದಾವರ ವರೆಗಿನ 3.14-ಕಿಮೀ. ವಿಸ್ತರಿತ ಮಾರ್ಗದಲ್ಲಿ ನಮ್ಮ ಮೆಟ್ರೋ (Metro) ಗ್ರೀನ್ ಲೈನ್ ಸಂಚಾರಕ್ಕೆ ಸಿದ್ಧವಾಗಿದೆ. ಆ ಮೂಲಕ ನೆಲಮಂಗಲ, ತುಮಕೂರು, ಮಾಕಳಿ ಮಾರ್ಗದ ಜನರ ಹಲವು ವರ್ಷಗಳ ಕನಸು ನನಸಾಗಿದೆ. ನಾಳೆ ಸಾರ್ವಜನಿಕರಿಗೆ ಮೆಟ್ರೋ ಆರಂಭಗೊಳ್ಳಿದ್ದು, ಇಂದು ಡಿಸಿಎಂ ಡಿಕೆ ಶಿವಕುಮಾರ್​ ಪ್ರಾಯೋಗಿಕ ಚಾಲನೆ ನೀಡಿದ್ದಾರೆ. ತುಮಕೂರು ರಸ್ತೆಯಲ್ಲಿ ಸಂಚಾರ ದಟ್ಟಣೆ ನಿವಾರಿಸುವ ದೃಷ್ಟಿಯಿಂದ ಎರಡನೇ ಹಂತದ ಮೆಟ್ರೋ ಯೋಜನೆಯ ಅಡಿಯಲ್ಲಿ ಈ ಮೆಟ್ರೋ ಮಾರ್ಗವನ್ನು ವಿಸ್ತರಿಸಲಾಗಿದೆ.

ಸದ್ಯ ನಾಗಸಂದ್ರ ನಿಲ್ದಾಣದವರೆಗೂ ಹಸಿರು ಮಾರ್ಗ ಇದ್ದು, ನಾಗಸಂದ್ರದಿಂದ‌ ಮಾದಾವರವರೆಗೂ ಮೆಟ್ರೋ ಮಾರ್ಗ ವಿಸ್ತೃತ ಮಾಡಲಾಗಿದೆ. ಯಶವಂತಪುರದಿಂದ ಮಾದಾವರವರೆಗೂ ಪ್ರಾಯೋಗಿಕ ಸಂಚಾರ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​ ವಿಸ್ತೃತ ಮೆಟ್ರೋ ಮಾರ್ಗದಲ್ಲಿ ಪ್ರಯಾಣಿಸಿದ್ದಾರೆ.

ಇನ್ನು ಈ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್​ ಟ್ವೀಟ್ ಮಾಡಿದ್ದು, ನಾಗಸಂದ್ರದಿಂದ ಮಾದಾವರ ಮೆಟ್ರೋ ನಿಲ್ದಾಣದವರೆಗಿನ ವಿಸ್ತರಿತ 3.14 ಕಿಮೀ ಮಾರ್ಗವನ್ನು ಇಂದು ಪರಿಶೀಲನೆ ನಡೆಸಿದೆ. ನಾಗರಿಕರನ್ನು ಹೆಚ್ಚು ಕಾಯಿಸುವುದು ಸರಿಯಲ್ಲ ಎನ್ನುವ ಕಾರಣಕ್ಕೆ ಈಗಲೇ ಹೊಸ ಮಾರ್ಗದ ಸೇವೆಯನ್ನು ಆರಂಭಿಸಲಾಗಿದ್ದು, ಸದ್ಯದಲ್ಲೇ ಅಧಿಕೃತವಾಗಿ ಉದ್ಘಾಟಿಸಲಾಗುವುದು ಎಂದು ತಿಳಿಸಿದ್ದಾರೆ.

ಡಿಕೆ ಶಿವಕುಮಾರ್​ ಟ್ವೀಟ್

ಇಡೀ ದೇಶದಲ್ಲೇ ಅತಿ ಹೆಚ್ಚು ಮೆಟ್ರೋ ಪ್ರಯಾಣಿಕರನ್ನು ಬೆಂಗಳೂರು ಹೊಂದಿದೆ. ವಿಸ್ತರಿತ 3.14 ಕಿ.ಮೀ ಸೇರಿ ಬೆಂಗಳೂರು ಮೆಟ್ರೋ 76.95 ಕಿಮೀ ವ್ಯಾಪ್ತಿಯನ್ನು ಹೊಂದಿದೆ. ಮೆಟ್ರೋ ಕಾಮಗಾರಿಯನ್ನು ತ್ವರಿತವಾಗಿ ಮುಗಿಸಲು ಆದ್ಯತೆ ನೀಡಲಾಗುತ್ತಿದ್ದು, ಮುಂದಿನ ವರ್ಷಕ್ಕೆ ಇನ್ನೂ 30 ಕಿ.ಮೀ ಸೇರ್ಪಡೆಯಾಗಲಿದೆ ಎಂದಿದ್ದಾರೆ.

2026ಕ್ಕೆ ಬೆಂಗಳೂರು ಮೆಟ್ರೋದ ಒಟ್ಟು ವ್ಯಾಪ್ತಿ 175 ಕಿ.ಮೀ ಆಗಲಿದೆ ಎಂದು ತಿಳಿಸಿದೆ. ಈ ವೇಳೆ ಸಂಸದ ತೇಜಸ್ವಿ ಸೂರ್ಯ, ನೆಲಮಂಗಲ ಶಾಸಕ ಎಂ. ಶ್ರೀನಿವಾಸ್‌, ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ ರಾವ್‌ ಮೊದಲಾದವರು ಉಪಸ್ಥಿತರಿದ್ದರು.

ನಾಳೆ ಸಾರ್ವಜನಿಕರಿಗೆ ಮೆಟ್ರೋ ಆರಂಭ ಆಗುತ್ತೆ: ತೇಜಸ್ವಿ ಸೂರ್ಯ

ಸಂಸದ ತೇಜಸ್ವಿ ಸೂರ್ಯ ಪ್ರತಿಕ್ರಿಯಿಸಿದ್ದು, ಡಿಸಿಎಂ ಮತ್ತು ಶಾಸಕರ ಜೊತೆಗೆ ಮಾದಾವರವರಗೆ ಪ್ರಾಯೋಗಿಕ ಚಾಲನೆ ನೀಡಿದ್ದೇವೆ. ನಾಳೆ ಸಾರ್ವಜನಿಕರಿಗೆ ಮೆಟ್ರೋ ಆರಂಭ ಆಗುತ್ತೆ. ಸಾರ್ವಜನಿಕರಿಗೆ ಅನಕೂಲ ಆಗಲಿ ಅಂತ ಉದ್ಘಾಟನೆ ಮಾಡಿದ್ದೇವೆ. ನಿನ್ನೆ ಪ್ರಧಾನಿ ‌ಕಚೇರಿಗೆ ನಾನು ಮಾತನಾಡಿದ್ದೆ. ಮೆಟ್ರೋ ಆರಂಭ ಮಾಡಲು ಮನವಿ‌ ಮಾಡಿದ್ದೆ ಎಂದು ಹೇಳಿದ್ದಾರೆ.

298 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ

ಅಕ್ಟೋಬರ್ 4 ರಂದು ರೈಲ್ವೆ ಸುರಕ್ಷತಾ ಆಯುಕ್ತರು ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದರು. ಇಲ್ಲಿಯವರೆಗೆ ನಾಗಸಂದ್ರ ಟು ಮಾದಾವರ ಮಾರ್ಗ ಓಪನ್ ಮಾಡಿರಲಿಲ್ಲ. 298 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ನಿನ್ನೆ ಮೆಟ್ರೋ ಓಪನ್ ಮಾಡಲು ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿತ್ತು. ಈ ಹಿನ್ನೆಲೆಯಲ್ಲಿ ಯಶವಂತಪುರ ಮೆಟ್ರೋ ಸ್ಟೇಷನ್​ನಿಂದ ಮಾದಾವರವರೆಗೆ ಸಂಚಾರ ಮಾಡುವ ಮೂಲಕ ಪ್ರಯೋಗಿಕ ಸಂಚಾರಕ್ಕೆ ನೀಡಿದ್ದಾರೆ.

ನಾಳೆ ಬೆಳಿಗ್ಗೆ ಐದು ಗಂಟೆಯಿಂದ ಮಾದಾವರ ದಿಂದ ಸಿಲ್ಕ್ ಇನ್ಸ್ಟಿಟ್ಯೂಟ್ ವರೆಗೆ ಮೆಟ್ರೋ ರೈಲು ಸಂಚಾರ ಮಾಡಲಿದೆ. ಕಳೆದ ವರ್ಷ ನೇರಳೆ ಮಾರ್ಗದ ಬೈಯಪ್ಪನಹಳ್ಳಿ ಟು ಕೆ.ಆರ್ ಪುರ ಮೆಟ್ರೋ ಉದ್ಘಾಟನೆ ಮಾಡಲಾಗಿತ್ತು. ಯಾವುದೇ ವಿ.ಐ.ಪಿ ಕಾರ್ಯಕ್ರಮಗಳ ಆಯೋಜನೆ ಇಲ್ಲದೇ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಲಾಯಿತು. ವಿಸ್ತರಿತ ಹಸಿರು ಮಾರ್ಗದಲ್ಲಿ ಮಂಜುನಾಥ ನಗರ, ಚಿಕ್ಕಬಿದರಕಲ್ಲು, ಮಾದಾವರ ಗಳನ್ನು ಒಳಗೊಂಡ 3 ಮೆಟ್ರೋ ನಿಲ್ದಾಣಗಳಿವೆ.

ಇದನ್ನೂ ಓದಿ: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ನಾಗಸಂದ್ರ ಮಾದಾವರ ಮಾರ್ಗ ಕೊನೆಗೂ ಕಾರ್ಯಾಚರಣೆಗೆ ಸಿದ್ಧ

ತುಮಕೂರು ರಸ್ತೆಯಲ್ಲಿನ ಸಂಚಾರ ದಟ್ಟಣೆ ನಿಯಂತ್ರಣದಲ್ಲಿ ಈ ಮಾರ್ಗವು ಬಹುಮುಖ್ಯ ಪಾತ್ರ ವಹಿಸಲಿದೆ. ಸದ್ಯ ಹಸಿರು ಮಾರ್ಗದ ನಾಗಸಂದ್ರ ಟು ಸಿಲ್ಕ್ ಇನ್ಸ್ಟಿಟ್ಯೂಟ್ ವರೆಗೆ ಮೆಟ್ರೋ ರೈಲುಗಳು ಸಂಚಾರ ಮಾಡುತ್ತಿವೆ. ಹಸಿರು ಮಾರ್ಗ 29 ಮೆಟ್ರೋ ಸ್ಟೇಷನ್ ಗಳಿಂದ 31 ಕಿಮೀ ಉದ್ದವಿದ್ದು, ಮೂರು ಮೆಟ್ರೋ ‌ಸ್ಟೇಷನ್‌ಗಳಿಗೆ ಚಾಲನೆ ಸಿಕ್ಕರೆ, 34.14 ಕಿಮೀ ವಿಸ್ತೀರ್ಣವಾಗಲಿದೆ. ಹಸಿರು ಮಾರ್ಗದಲ್ಲಿ ಒಟ್ಟು 32 ಮೆಟ್ರೋ ಸ್ಟೇಷನ್​ಗಳಿರಲಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:13 pm, Wed, 6 November 24