ಬೆಂಗಳೂರು ಮೆಟ್ರೊ 2ಎ, 2ಬಿ ಹಂತಗಳಿಗೆ ಕೇಂದ್ರದ ಅನುಮೋದನೆ: ಸಂಸದ ತೇಜಸ್ವಿ ಸೂರ್ಯ ಸಂತಸ

ಒಟ್ಟು ₹ 14,788.101 ಕೋಟಿ ವೆಚ್ಚದಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಬರಲಿದೆ. ಭಾರತ ಸರ್ಕಾರವು ಈಕ್ವಿಟಿ ಮತ್ತು ಸಾಲದ ರೂಪದಲ್ಲಿ ಯೋಜನೆಗೆ ನೆರವಾಗಲಿದೆ. ಯೋಜನೆಯು 5 ವರ್ಷಗಳ ಒಳಗೆ ಮುಗಿಯಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆ.

ಬೆಂಗಳೂರು ಮೆಟ್ರೊ 2ಎ, 2ಬಿ ಹಂತಗಳಿಗೆ ಕೇಂದ್ರದ ಅನುಮೋದನೆ: ಸಂಸದ ತೇಜಸ್ವಿ ಸೂರ್ಯ ಸಂತಸ
ನಮ್ಮ ಮೆಟ್ರೋ (ಸಾಂಕೇತಿಕ ಚಿತ್ರ)
Follow us
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jun 07, 2021 | 10:43 PM

ಬೆಂಗಳೂರು: ಬೆಂಗಳೂರು ಮೆಟ್ರೊ ಯೋಜನೆಯ 2 ಎ ಮತ್ತು 2 ಬಿ ಹಂತಗಳಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿರುವುದನ್ನು ಭಾರತ ಸರ್ಕಾರದ ನಗರಾಭಿವೃದ್ಧಿ ಸಚಿವಾಲಯ ಸೋಮವಾರ ಕರ್ನಾಟಕದ ಮುಖ್ಯ ಕಾರ್ಯದರ್ಶಿಗೆ ಬರೆದಿರುವ ಪತ್ರದಲ್ಲಿ ಅಧಿಕೃತವಾಗಿ ತಿಳಿಸಿದೆ. ಸೆಂಟ್ರಲ್ ಸಿಲ್ಕ್​ ಬೋರ್ಡ್​ ಜಂಕ್ಷನ್​ನಿಂದ ಕೆ.ಆರ್.ಪುರಂವರೆಗೆ ಸಂಪರ್ಕ ಕಲ್ಪಿಸುವ 19.75 ಕಿ.ಮೀ. ಅಂತರದ ಹಂತ 2ಎ ಹಾಗೂ ಕೆ.ಆರ್.ಪುರಂನಿಂದ ಹೆಬ್ಬಾಳ ಜಂಕ್ಷನ್ ಮೂಲಕ ವಿಮಾನ ನಿಲ್ದಾಣದವರೆಗೆ ಸಂಪರ್ಕ ಕಲ್ಪಿಸುವ 38.44 ಕಿ.ಮೀ. ಅಂತರದ ಹಂತ 2 ಬಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದು ಪತ್ರದಲ್ಲಿ ಸ್ಪಷ್ಟಪಡಿಸಲಾಗಿದೆ.

ಒಟ್ಟು ₹ 14,788.101 ಕೋಟಿ ವೆಚ್ಚದಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಬರಲಿದೆ. ಭಾರತ ಸರ್ಕಾರವು ಈಕ್ವಿಟಿ ಮತ್ತು ಸಾಲದ ರೂಪದಲ್ಲಿ ಯೋಜನೆಗೆ ನೆರವಾಗಲಿದೆ. ಯೋಜನೆಯು 5 ವರ್ಷಗಳ ಒಳಗೆ ಮುಗಿಯಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆ. ಕೇಂದ್ರ ನಗರಾಭಿವೃದ್ಧಿ ಸಚಿವಾಲಯದ ಪತ್ರವನ್ನು ಸಂಸದ ತೇಜಸ್ವಿ ಸೂರ್ಯ ಟ್ವೀಟ್ ಮಾಡಿ, ಭಾರತ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ್ದಾರೆ.

ಈ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿರುವ ವಿಷಯವನ್ನು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯೆಲ್ ಏಪ್ರಿಲ್​ 21ರಂದು ತಿಳಿಸಿದ್ದರು. ಈ ಯೋಜನೆಯ ಅನುಷ್ಠಾನವು ಬೆಂಗಳೂರಿನಲ್ಲಿ ಮೆಟ್ರೋ ಮೂಲಕ ಪ್ರಯಾಣ ಕೈಗೊಳ್ಳುವವರಿಗೆ ಅನುಕೂಲವಾಗಲಿದೆ ಹಾಗೂ ಸಾರ್ವಜನಿಕರಿಗೆ ಅತ್ಯುತ್ತಮ ಸಾರಿಗೆ ಸೇವೆ ಒದಗಿಸಲು ಸಹಕಾರಿಯಾಗಲಿದೆ ಎಂದು ಪಿಯೂಷ್ ಗೋಯಲ್ ಹೇಳಿದ್ದರು.

ಯೋಜನೆಯು 30 ಮೆಟ್ರೋ ನಿಲ್ದಾಣಗಳನ್ನು ಒಳಗೊಂಡಿರುತ್ತದೆ. ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಹೆಬ್ಬಾಳದವರೆಗಿನ ಐಟಿ ಇಂಡಸ್ಟ್ರಿ ಉದ್ಯೋಗಿಗಳಿಗೆ, ವಿಮಾನ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರಿಗೆ ಹೆಚ್ಚಿನ ಸಹಾಯವಾಗಲಿದೆ. ಈ ಯೋಜನೆಗೆ ಕರ್ನಾಟಕ ರಾಜ್ಯ ಸರ್ಕಾರವು ಜನವರಿ 2019ರಲ್ಲಿ ಅನುಮೋದನೆ ನೀಡಿದೆ. ಕೇಂದ್ರ ಸರ್ಕಾರವು 2021 ಏಪ್ರಿಲ್ 28ರಂದು 14,788 ಕೋಟಿ ರೂಪಾಯಿಗಳಿಗೆ ಅನುಮೋದನೆ‌ ನೀಡಿದೆ.

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು ಪ್ರಮುಖ ಭೂಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಕಾಮಗಾರಿ ಪ್ರಾರಂಭಿಸಲು ಸಿದ್ಧವಾಗಿದೆ. 58 ಕಿ.ಮೀ.‌ ಮೆಟ್ರೋ ಮಾರ್ಗವನ್ನು 5 ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ ಪೂರ್ಣಗೊಳಿಸಲು ಮೆಟ್ರೋ ರೈಲು ನಿಗಮ ಯೋಜನೆ ಹಾಕಿಕೊಂಡಿದೆ.

(Bengaluru Metro Phase 2A 2B Got Govt of India Approval Says Tejasvi Surya)

ಇದನ್ನೂ ಓದಿ: 3ನೇ ಅಲೆಗೆ ವೇಗದ ಸಿದ್ಧತೆ: ಕೊವಿಡ್ ಕಾರ್ಯಪಡೆ ಸಭೆಯಲ್ಲಿ ಮಹತ್ವದ ಚರ್ಚೆ

ಇದನ್ನೂ ಓದಿ: PM Narendra Modi ಕೊವಿಡ್ ವಿರುದ್ಧದ ಹೋರಾಟದಲ್ಲಿ ಲಸಿಕೆಯೇ ನಮ್ಮ ಸುರಕ್ಷಾ ಕವಚ: ನರೇಂದ್ರ ಮೋದಿ

Published On - 10:42 pm, Mon, 7 June 21