ಪ್ರೀತಿಸಿ ಮದ್ವೆಯಾಗಿದ್ದ ಜೋಡಿ ಬದುಕಿನಲ್ಲಿ ಹೊಕ್ಕಿದ ಅನುಮಾನದ ಭೂತ, ಪತ್ನಿ ದುರಂತ ಸಾವು
ಅನುಮಾನ ಎನ್ನುವ ಭೂತ ತಲೆಯೊಳಗೆ ಹೊಕ್ಕಿಬಿಟ್ಟರೆ ಅದೆಂತಹ ಸಂಬಂಧಕ್ಕೂ ಅಲ್ಲಿ ಬೆಲೆ ಇರುವುದಿಲ್ಲ. ಅನುಮಾನ ಎನ್ನುವುದು ಎಂತಹ ಪ್ರೀತಿಯನ್ನು ಬೇಕಾದರೂ ಕೊಂದುಬಿಡುತ್ತೆ ಎಂಬುವುದಕ್ಕೆ ಇದೇ ಸಾಕ್ಷಿ. 9 ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಆದ್ರೆ, ಇಷ್ಟಪಟ್ಟು ಪ್ರೀತಿಸಿ ಮದುವೆಯಾಗಿದ್ದ ಜೋಡಿ ಸಂಸಾರದಲ್ಲಿ ಅನುಮಾನದ ಭೂತ ಹೊಕ್ಕಿದ್ದು, ಈ ಅನುಮಾನದ ಭೂತಕ್ಕೆ ಪತ್ನಿ ಬಲಿಯಾಗಿದ್ದಾಳೆ.
ಬೆಂಗಳೂರು, (ಡಿಸೆಂಬರ್ 21): ಪತಿ ಮೇಲಿನ ಅನುಮಾನದ ಪೀಡೆಯನ್ನು ನೆತ್ತಿಗೇರಿಸಿಕೊಂಡು ಪತ್ನಿ ತನ್ನ ಜೀವನ್ನೇ ಕಳೆದುಕೊಂಡಿರುವ ದಾರುಣ ಘಟನೆ ಬೆಂಗಳೂರಿನ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪತಿ ಬೇರೆ ಮಹಿಳೆ ಜತೆ ಅನೈತಿಕ ಸಂಬಂಧ ಹೊಂದಿದ್ದಾನೆಂದು ಅನುಮಾನಗೊಂಡು ಪತ್ನಿ ನೇಣಿಗೆ ಕೊರಳೊಡ್ಡಿದ್ದಾಳೆ. ಐಶ್ವರ್ಯಾ(26) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಬಾಗಲಗುಂಟೆಯ ಎಸ್ಕೆವೈ ಸಲೂನ್ ನಡೆಸುತ್ತಿದ್ದ ಐಶ್ವರ್ಯಾಗೆ ಗಂಡನ ಮೇಲಿ ಅನುಮಾನಪಟ್ಟ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ.
ನವೀನ್ ಹಾಗೂ ಐಶ್ವರ್ಯಾ 9 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಸಂಸಾರ ಚೆನ್ನಾಗಿ ಇತ್ತು. ಐಶ್ವರ್ಯಾ ಬಾಗಲಗುಂಟೆಯಲ್ಲಿ ಎಸ್ಕೆವೈ ಸಲೂನ್ ನಡೆಸುತ್ತ ರೀಲ್ಸ್ ಮಾಡಿಕೊಂಡು ಖುಷಿ ಖುಷಿಯಾಗಿದ್ದಳು. ಆದ್ರೆ, ಇತ್ತೀಚೆಗೆ ಐಶ್ವರ್ಯಾಗೆ ಗಂಡನ ಮೇಲೆ ಅನುಮಾನ ಶುರುವಾಗಿತ್ತು. ತನ್ನ ಪತಿ ನವೀನ್ ಬೇರೆ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾನೆಂಬ ಅನುಮಾನ ಐಶ್ವರ್ಯಗೆ ಇತ್ತು. ಇದೇ ವಿಚಾರಕ್ಕೆ ನವೀನ್ ಹಾಗೂ ಐಶ್ವರ್ಯಾ ಮಧ್ಯ ಕಳೆದ ಒಂದು ವಾರದಿಂದ ಗಲಾಟೆ ನಡೆಯುತ್ತಿತ್ತು.
ಇದನ್ನೂ ಓದಿ: ನೆಲಮಂಗಲ: ಕೆಜಿಗಟ್ಟಲೆ ಚಿನ್ನ ಕೊಂಡೊಯ್ದು ಆಭರಣ ಅಂಗಡಿ ಮಾಲೀಕರಿಗೇ ಧಮ್ಕಿ ಹಾಕಿದ ಮಹಿಳೆ!
ಇದರ ಮಧ್ಯ ನವೀನ್, ಪತ್ನಿ ಐಶ್ವರ್ಯಗೆ ಹೇಳದೇ ಧರ್ಮಸ್ಥಳಕ್ಕೆ ಟ್ರಿಪ್ಗೆ ಹೋಗಿದ್ದಾನೆ. ಇದರಿಂದ ಐಶ್ವರ್ಯ ಅನುಮಾನ ಮತ್ತಷ್ಟು ಹೆಚ್ಚಾಗಿದೆ. ನಂತರ ಧರ್ಮಸ್ಥಳದಿಂದ ಮನೆಗೆ ಬಂದಾಗ ಐಶ್ವರ್ಯ, ನವೀನ್ ಜೊತೆ ಗಲಾಟೆ ಮಾಡಿದ್ದಾಳೆ. ನಂತರ ವಿಶ್ರಾಂತಿಗೆಂದು ನವೀನ್ ರೂಮ್ಗೆ ಹೋಗಿದ್ದಾನೆ. ಆದ್ರೆ, ಇತ್ತ ಐಶ್ವರ್ಯ ಅದೇ ಕೋಪದಲ್ಲಿ ಮತ್ತೊಂದು ರೂಮ್ಗೆ ತೆರಳಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಇನ್ನು ಈ ಬಗ್ಗೆ ಪತಿ ನವೀನ್ ಪ್ರತಿಕ್ರಿಯಿಸಿದ್ದು, ನನ್ನ ಮೇಲಿನ ಅನುಮಾನಕ್ಕೆ ವಾರದಿಂದ ಗಲಾಟೆ ನಡೆಯುತ್ತಿತ್ತು. ಅದೇ ಕೋಪದಲ್ಲಿ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಎಂದಿದ್ದಾರೆ. ಈ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ