ಕೊರೊನಾ ನಂತರ ಬೆಂಗಳೂರಿನಲ್ಲಿ ಐಷಾರಾಮಿ ಮನೆ ಖರೀದಿಸುವವರ ಸಂಖ್ಯೆ 142% ಹೆಚ್ಚಳ
ಈ ವರ್ಷದ ಜನವರಿ ಮತ್ತು ಸೆಪ್ಟೆಂಬರ್ ನಡುವೆ ನಗರದಲ್ಲಿ ದಾಖಲೆಯ ಮಟ್ಟದಲ್ಲಿ 9,220 ಐಷಾರಾಮಿ ಮನೆಗಳನ್ನು ಮಾರಾಟ ಮಾಡಲಾಗಿದ್ದು, 2022 ರಲ್ಲಿ ಇದೇ ಅವಧಿಯಲ್ಲಿ 3,810 ಮನೆಗಳ ಮಾರಾಟವಾಗಿತ್ತು ಎಂದು ತಿಳಿದು ಬಂದಿದೆ. ಆಸ್ತಿ ಸಲಹಾ ಸಂಸ್ಥೆಯಾದ ಅನಾರಾಕ್‌ನ ಅಂಕಿಅಂಶಗಳ ಪ್ರಕಾರ ಬೆಂಗಳೂರು ಸೇರಿದಂತೆ ಏಳು ನಗರಗಳಲ್ಲಿ ಐಷಾರಾಮಿ ಮನೆಗಳ ಮಾರಾಟ ಹೆಚ್ಚಾಗಿದೆ.

ಬೆಂಗಳೂರು, ಅ.30: ಇತ್ತೀಚೆಗೆ ಜನ ಆಸ್ತಿ ಮಾಡುವುದರಲ್ಲಿ ಆಸಕ್ತಿ ಹೆಚ್ಚಿಸಿಕೊಂಡಿದ್ದಾರೆ. ಐಷಾರಾಮಿ ಮನೆ, ಬಂಗಲೆ ಖರೀದಿಸುತ್ತಿದ್ದಾರೆ. ಈ ವರ್ಷದ ಮೊದಲ ಒಂಬತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ 1.5 ಕೋಟಿ ರೂ.ಗಿಂತ ಹೆಚ್ಚಿನ ಬೆಲೆಯಲ್ಲಿ ಐಷಾರಾಮಿ ಮನೆಗಳ ಮಾರಾಟವಾಗಿದ್ದು ಅದು 142% ಹೆಚ್ಚಳ ಕಂಡಿದೆ (Luxury Home Sales) . ಈ ವರ್ಷದ ಜನವರಿ ಮತ್ತು ಸೆಪ್ಟೆಂಬರ್ ನಡುವೆ ನಗರದಲ್ಲಿ ದಾಖಲೆಯ ಮಟ್ಟದಲ್ಲಿ 9,220 ಐಷಾರಾಮಿ ಮನೆಗಳನ್ನು ಮಾರಾಟ ಮಾಡಲಾಗಿದ್ದು, 2022 ರಲ್ಲಿ ಇದೇ ಅವಧಿಯಲ್ಲಿ 3,810 ಮನೆಗಳ ಮಾರಾಟವಾಗಿತ್ತು ಎಂದು ತಿಳಿದು ಬಂದಿದೆ. ಆಸ್ತಿ ಸಲಹಾ ಸಂಸ್ಥೆಯಾದ ಅನಾರಾಕ್‌ನ ಅಂಕಿಅಂಶಗಳ ಪ್ರಕಾರ ಬೆಂಗಳೂರು ಸೇರಿದಂತೆ ಏಳು ನಗರಗಳಲ್ಲಿ ಐಷಾರಾಮಿ ಮನೆಗಳ ಮಾರಾಟ ಹೆಚ್ಚಾಗಿದೆ.
ಏಳು ನಗರಗಳಲ್ಲಿ ಸೆಪ್ಟೆಂಬರ್ ಅಂತ್ಯದವರೆಗೆ ಸುಮಾರು 84,400 ಯುನಿಟ್‌ಗಳು ಮಾರಾಟವಾಗಿವೆ. ಹೈದರಾಬಾದ್ನಲ್ಲಿ ಐಷಾರಾಮಿ ಮನೆ ಖರೀದಿಸುವವರ ಸಂಖ್ಯೆ ಹೆಚ್ಚಾಗಿದ್ದು 260% ಮೂಲಕ ಗಮನಾರ್ಹ ಜಿಗಿತವನ್ನು ಕಂಡಿದೆ. ಚೆನ್ನೈ 143% ಹೆಚ್ಚಳ ಕಂಡಿದೆ. ಮುಂಬೈ ಮತ್ತು ದೆಹಲಿಯಂತಹ ದೊಡ್ಡ ನಗರಗಳು ಸ್ಥಿರವಾದ ಬೆಳವಣಿಗೆಯನ್ನು ಕಂಡಿವೆ.
ಮಾಹಿತಿಯ ಪ್ರಕಾರ, 2023 ರ ಮೊದಲ ಒಂಬತ್ತು ತಿಂಗಳಲ್ಲಿ ಈ ಏಳು ನಗರಗಳಲ್ಲಿ ಸುಮಾರು 3.5 ಲಕ್ಷ ವಸತಿ ಘಟಕಗಳು ಮಾರಾಟವಾಗಿವೆ ಮತ್ತು ಅವುಗಳಲ್ಲಿ 24% ಅಥವಾ ಸರಿಸುಮಾರು 84,400 ಯುನಿಟ್‌ಗಳು 1.5 ಕೋಟಿ ರೂ.ಗಿಂತ ಹೆಚ್ಚು ಬೆಲೆಯ ಐಷಾರಾಮಿ ಮನೆಗಳಾಗಿವೆ. 2023 ರ ಮೊದಲ ಒಂಬತ್ತು ತಿಂಗಳಲ್ಲಿ ಎಲ್ಲಾ ಬಜೆಟ್ ವಿಭಾಗಗಳಲ್ಲಿ ಬೆಂಗಳೂರು ಸುಮಾರು 47,100 ಯುನಿಟ್‌ಗಳನ್ನು ಮಾರಾಟ ಮಾಡಿದೆ, ಅದರಲ್ಲಿ ಐಷಾರಾಮಿ ವಸತಿಗಳ ಪಾಲು 20% ರಷ್ಟಿದೆ.
ಇದನ್ನೂ ಓದಿ: Capital gain Tax: ನೀವು ಮನೆ ಖರೀದಿಸಿ ಲಾಭಕ್ಕೆ ಮಾರಿದರೆ ಎಷ್ಟು ತೆರಿಗೆ ಕಟ್ಟಬೇಕು? ಇಲ್ಲಿದೆ ಲೆಕ್ಕಚಾರ
ರಿಯಲ್ ಎಸ್ಟೇಟ್ ಏಜೆಂಟ್‌ಗಳು ಮತ್ತು ಕೆಲವು ರಿಯಲ್ ಎಸ್ಟೇಟ್ ಸಂಸ್ಥೆಗಳು ಖಾಸಗಿ ಸುದ್ದಿ ಪತ್ರಿಕೆ ಜೊತೆ ಮಾತನಾಡಿದ್ದು, ಈ ವೇಳೆ ಕೆಲ ಮಾಹಿತಿಯನ್ನು ಹಂಚಿಕೊಂಡಿವೆ. ಕೊರೊನಾ ಸಮಯದಲ್ಲಿ ಎದುರಾದ ವರ್ಕ್ ಫ್ರಂ ಹೋಮ್ ಅನುಭವದ ನಂತರ ಜನರು ವಿಶಾಲವಾದ ಮನೆಗಳನ್ನು ಖರೀದಿಸಲು ಆಸಕ್ತಿ ಬೆಳೆಸಿಕೊಂಡಿದ್ದಾರೆ. ಹೆಚ್ಚುತ್ತಿರುವ ಬಾಡಿಗೆಯಿಂದ ಬೆಸತ್ತ ಜನ ಬಾಡಿಗೆ ಮನೆಗಳಲ್ಲಿ ವಾಸಿಸುವ ಬದಲು ಸ್ವಂತ ಮನೆಗಳನ್ನು ಖರೀದಿಸುವುದೇ ಲೇಸು ಎಂಬ ಯೋಚನೆ ಮಾಡುತ್ತಿದ್ದಾರೆ. ಹೀಗಾಗಿ ಮನೆ ಖರೀದಿಸುವವರ ಸಂಖ್ಯೆ ಹೆಚ್ಚಿದೆ ಎಂದು ತಿಳಿಸಿದರು.
ಬೆಂಗಳೂರಿನ ಕಾನ್ಫೆಡರೇಶನ್ ಆಫ್ ರಿಯಲ್ ಎಸ್ಟೇಟ್ ಡೆವಲಪರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಕ್ರೆಡೈ) ಅಧ್ಯಕ್ಷ ಕಿಶೋರ್ ಜೈನ್ ಮಾತನಾಡಿ, ಅನೇಕ ಕಾರಣಗಳಿಂದಾಗಿ ಬೆಂಗಳೂರಿನಲ್ಲಿ ಐಷಾರಾಮಿ ಮನೆಗಳಿಗೆ ಹೆಚ್ಚಿನ ಬೇಡಿಕೆಯಿದೆ. ಕೋವಿಡ್-19 ಕ್ಕಿಂತ ಮೊದಲು, ಜನರು 2BHK ಮನೆಗಳೇ ಸಾಕು ಎನ್ನುತ್ತಿದ್ದರು, ಆದರೆ ಈಗ ಪ್ರವೃತ್ತಿ ಬದಲಾಗಿದೆ. ಮತ್ತು ಬಿಲ್ಡರ್‌ಗಳ ಬಳಿ ಲಭ್ಯವಿರುವ ಎಲ್ಲಾ ವಿಶಾಲವಾದ ಮತ್ತು ಐಷಾರಾಮಿ ಮನೆಗಳನ್ನು ಮಾರಾಟ ಮಾಡಲಾಗಿದೆ. ಈಗ 2BHK ಮನೆಗಳನ್ನು ಖರೀದಿಸುವವರ ಸಂಖ್ಯೆ ಕಡಿಮೆಯಾಗಿದೆ ಎಂದರು.
“ಕೋವಿಡ್-19 ರ ನಂತರ, ಜನ ಸ್ವಂತ ಮನೆಯನ್ನು ಹೊಂದುವ ಪ್ರಾಮುಖ್ಯತೆಯನ್ನು ಅರಿತುಕೊಂಡಿದ್ದಾರೆ. ಮನೆಯಿಂದ ಕೆಲಸ ಮಾಡುವ ಸೌಲಭ್ಯ, ತೋಟಗಾರಿಕೆ, ಹೋಮ್ ಥಿಯೇಟರ್ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಹೊಂದಲು ಆದ್ಯತೆ ನೀಡುತ್ತಿದ್ದಾರೆ. ಆದ್ದರಿಂದ, ಐಷಾರಾಮಿ ಮನೆಗಳಿಗೆ ಬೇಡಿಕೆಯಿದೆ ಮತ್ತು ಅಂತಹ ಮನೆಗಳ ಮಾರಾಟದಲ್ಲಿ ಹೆಚ್ಚಳವಾಗಿದೆ ಎಂದು ಜೈನ್ ಹೇಳಿದರು.
ಪ್ರಾಪರ್ಟಿ ಟೆಕ್ ಸಂಸ್ಥೆ NoBroker ನ ಅರ್ಧವಾರ್ಷಿಕ ವರದಿಯ ಪ್ರಕಾರ ಬೆಂಗಳೂರು ಮತ್ತು ಚೆನ್ನೈನಲ್ಲಿ ಮನೆ ಹುಡುಕುವವರ ಸಂಖ್ಯೆ ಹೆಚ್ಚುತ್ತಿದೆ ಎಂದು ಬಹಿರಂಗಪಡಿಸಿದೆ. 27% ರಷ್ಟು ಹೆಚ್ಚು ವಿಸ್ತಾರವಾದ ಮನೆಗಳನ್ನು ಜನ ಹುಡುಕುತ್ತಿದ್ದಾರಂತೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ