ಎಐಸಿಸಿ ಕಾರ್ಯದರ್ಶಿ, ದೇವರಾಜ ಅರಸು ಮೊಮ್ಮಗ ಸೂರಜ್ ಹೆಗ್ಡೆ ಹೃದಯಾಘಾತದಿಂದ ನಿಧನ
ಎಐಸಿಸಿ ಕಾರ್ಯದರ್ಶಿ ಹಾಗೂ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಸೂರಜ್ ಹೆಗ್ಡೆ (50) ಅವರು ತೀವ್ರ ಹೃದಯಾಘಾತದಿಂದ ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಭಾನುವಾರ ರಾತ್ರಿ ನಿಧನರಾಗಿದ್ದಾರೆ. ಮಾಜಿ ಸಿಎಂ ದಿ. ಡಿ. ದೇವರಾಜ ಅರಸು ಅವರ ಮೊಮ್ಮಗನಾಗಿದ್ದ ಸೂರಜ್ ಹೆಗ್ಡೆ ಅವರ ಅಕಾಲಿಕ ನಿಧನಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಕಾಂಗ್ರೆಸ್ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು, ಜೂನ್ 08: ಎಐಸಿಸಿ ಕಾರ್ಯದರ್ಶಿ ಹಾಗೂ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ರಾಜ್ಯ ಉಪಾಧ್ಯಕ್ಷರಾಗಿದ್ದ ಹಿರಿಯ ಕಾಂಗ್ರೆಸ್ ನಾಯಕ ಸೂರಜ್ ಹೆಗ್ಡೆ (50) ಅವರು ಹೃದಯಾಘಾತದಿಂದ ಭಾನುವಾರ (ಜೂನ್ 8) ರಾತ್ರಿ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಅಂದು ರಾತ್ರಿ ಇದ್ದಕ್ಕಿದ್ದಂತೆ ತೀವ್ರ ಹೃದಯಾಘಾತಕ್ಕೊಳಗಾದ ಸೂರಜ್ ಹೆಗ್ಡೆ ಅವರನ್ನು ತಕ್ಷಣವೇ ನಗರದ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
ಮುಖ್ಯಾಂಶಗಳು
- ಎಐಸಿಸಿ ಕಾರ್ಯದರ್ಶಿ ಸೂರಜ್ ಹೆಗ್ಡೆ ಹೃದಯಾಘಾತದಿಂದ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.
- ಇವರು ಮಾಜಿ ಸಿಎಂ ದಿ. ದೇವರಾಜ ಅರಸು ಅವರ ಮೊಮ್ಮಗನಾಗಿದ್ದರು.
- ಸೂರಜ್ ಹೆಗ್ಡೆ ನಿಧನಕ್ಕೆ ಕಾಂಗ್ರೆಸ್ ನಾಯಕರು ತೀವ್ರ ಸಂತಾಪ ಸೂಚಿಸಿದ್ದಾರೆ.
ಮೃತರು ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸು ಅವರ ಮೊಮ್ಮಗನಾಗಿದ್ದು, ಪಕ್ಷದ ಸಂಘಟನೆಯಲ್ಲಿ ಅತ್ಯಂತ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ರಾಷ್ಟ್ರೀಯ ಯುವ ಕಾಂಗ್ರೆಸ್ ಉಸ್ತುವಾರಿಯಾಗಿ ರಾಜಕೀಯ ಜೀವನ ಆರಂಭಿಸಿದ್ದ ಸೂರಜ್ ಹೆಗ್ಡೆ , ಎಐಸಿಸಿ ಕಾರ್ಯದರ್ಶಿಯಾಗಿ ತಮಿಳುನಾಡು ಹಾಗೂ ಪುದುಚೇರಿ ರಾಜ್ಯಗಳ ಕಾಂಗ್ರೆಸ್ ಉಸ್ತುವಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದರು. ಸದ್ಯ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದರು.
ಗಣ್ಯರ ಸಂತಾಪ
ಸೂರಜ್ ಹೆಗ್ಡೆ ಅವರ ಅಕಾಲಿಕ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ತೀವ್ರ ಆಘಾತ ಮತ್ತು ಸಂತಾಪ ವ್ಯಕ್ತಪಡಿಸಿದ್ದಾರೆ.
ಎಐಸಿಸಿ ಕಾರ್ಯದರ್ಶಿಗಳು, ಕೆಪಿಸಿಸಿ ಉಪಾಧ್ಯಕ್ಷರು ಹಾಗೂ ರಾಜ್ಯ ಗ್ಯಾರಂಟಿ ಸಮಿತಿಯ ಉಪಾಧ್ಯಕ್ಷರಾಗಿದ್ದ ನನ್ನ ಆತ್ಮೀಯ ಸಹೋದ್ಯೋಗಿ ಶ್ರೀ ಸೂರಜ್ ಹೆಗ್ಗಡೆ ಅವರ ಹಠಾತ್ ನಿಧನದ ಸುದ್ದಿ ತಿಳಿದು ತೀವ್ರ ಆಘಾತವಾಗಿದೆ.
ಸಂಘಟನಾ ಚಾತುರ್ಯ ಹಾಗೂ ಜನಪರ ಕಾಳಜಿಯ ಮೂಲಕ ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ಅವರು ನೀಡಿದ ಕೊಡುಗೆ ಅನನ್ಯವಾದದ್ದು.… pic.twitter.com/ngvs4PZZJQ
— DK Shivakumar (@DKShivakumar) June 7, 2026
ಸೂರಜ್ ಹೆಗ್ಡೆ ಅವರ ಅಗಲಿಕೆಯ ಸುದ್ದಿ ಕೇಳಿ ಮನಸ್ಸಿಗೆ ತೀವ್ರ ಆಘಾತವಾಗಿದೆ. ಇಷ್ಟು ಚಿಕ್ಕ ವಯಸ್ಸಿಗೆ ಅವರು ನಮ್ಮನ್ನು ಅಗಲಿದ್ದಾರೆ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಅವರು ತಮ್ಮ ತಾತ ದೇವರಾಜ ಅರಸು ಅವರ ಹಾದಿಯಲ್ಲೇ ಸಾಗುತ್ತಾ, ಹಿಂದುಳಿದ ವರ್ಗಗಳು, ಕಾರ್ಮಿಕರ ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಶ್ರಮಿಸುತ್ತಿದ್ದರು. ಗ್ಯಾರಂಟಿ ಸಮಿತಿಯ ಉಪಾಧ್ಯಕ್ಷರಾಗಿ ಉತ್ತಮ ಕಾರ್ಯ ನಿರ್ವಹಿಸುತ್ತಿದ್ದ ಪ್ರಬಲ ನಾಯಕನನ್ನು ಕಾಂಗ್ರೆಸ್ ಪಕ್ಷ ಕಳೆದುಕೊಂಡಿದೆ ಎಂದು ಸಿಎಂ ಡಿಕೆ ಶಿವಕುಮಾರ್ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬಕ್ಕೆ ಈ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಕಾಂಗ್ರೆಸ್ ನಾಯಕರು ಪ್ರಾರ್ಥಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.




