
ಬೆಂಗಳೂರು, ಅಕ್ಟೋಬರ್ 15: ಸ್ಟಿಂಗ್ ಆಪರೇಷನ್ ವಿಚಾರವಾಗಿ ರಾಜ್ಯ ಕಾಂಗ್ರೆಸ್ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ಮುಂದುವರಿಸಿದ್ದು, ನನ್ನನ್ನು ಫಿಕ್ಸ್ ಮಾಡಬೇಕು ಅಂತಾ ಮೊನ್ನೆಯಿಂದ ಚರ್ಚೆ ನಡೆಯುತ್ತಿದೆ. ಒಂದು ಹೆಣ್ಣು ಮಗಳನ್ನ ಕಳಿಸಿ 5 ದಿನ ರೇವಣ್ಣರನ್ನು ಒಳಗೆ ಕಳಿಸಿದ್ರಲ್ಲಾ, ಹಾಗೆ ನನ್ನನ್ನು ಒಳಗೆ ಕಳುಹಿಸಲು ಯತ್ನಿಸಲಾಗ್ತಿದೆ. ನಿಮ್ಮ ಸಿಎಂ ಮಾತನಾಡಿದ್ರಲ್ಲ ಆಡಿಯೋ ಆ ಬಗ್ಗೆ ತನಿಖೆ ಮಾಡಿದ್ರಾ? ತನಿಖೆಗೊಳಗಾಗಬೇಕಿದ್ದ ವ್ಯಕ್ತಿ ಠಾಣೆಯಲ್ಲೇ ಆರಾಮವಾಗಿ ಮಾತಾಡ್ತಾನೆ. ನಿನ್ನೆ DCP ಕಚೇರಿಯಲ್ಲಿ ಕಾಲು ಮೇಲೆ ಕಾಲು ಹಾಕಿ ಕೂತಿದ್ನಂತೆ. ಸ್ಟಿಂಗ್ ಆಪರೇಷನ್ ವಿಡಿಯೋ ಹಂಚಿಕೆ ಪ್ರಕರಣ ಸಂಬಂಧ ಶಿವಕುಮಾರ್ ಅವರೇ ಮೊದಲು ನಿಮ್ಮ ಮೊಬೈಲ್ ತನಿಖೆಗೆ ಕೊಡಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಪ್ರಕರಣ ಸಂಬಂಧ ಸಂಶಯ ಬಂದ್ರೆ ಕುಮಾರಸ್ವಾಮಿಯವರನ್ನೂ ಕರೆಸುತ್ತೇನೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ನಾನು ಈಗಲೇ ಬರುತ್ತೇನೆ ಅರೆಸ್ಟ್ ಮಾಡಿ ಎಂದು ಪ್ರಿಯಾಂಕ್ಗೆ ಕುಮಾರಸ್ವಾಮಿ ಸವಾಲು ಹಾಕಿದ್ದಾರೆ. ಈಗಲೇ ನಾನು ಕಮಿಷನರ್ ಕಚೇರಿಗೆ ಬರುತ್ತೇನೆ ಟಚ್ ಮಾಡಿ ನೋಡಿ. ಗೃಹ ಇಲಾಖೆ ಏನು ನಿಮ್ಮ ಅಪ್ಪನ ಆಸ್ತಿನಾ? ತಾಕತ್, ಯೋಗ್ಯತೆ ಇದ್ದರೆ ಹಾಲಿ ಜಡ್ಜ್ ನೇತೃತ್ವದಲ್ಲಿ ತನಿಖೆ ನಡೆಸಿ. ಹೋರಾಟಕ್ಕೆ ರೆಡಿ ಇದ್ದೀನಿ, ಬನ್ನಿ ಅಖಾಡಕ್ಕೆ ಎಂದವರು ಸವಾಲು ಹಾಕಿದ್ದಾರೆ. ನಿಮ್ಮದು ನಾನು ನೋಡದೆ ಇರುವ ಅಧಿಕಾರನಾ? ಎಂದೂ ಪ್ರಶ್ನಿಸಿದ್ದಾರೆ. ಒಬ್ಬ ಮುಖ್ಯಮಂತ್ರಿನಾ ಟ್ರ್ಯಾಪ್ ಮಾಡೋಕೆ ಪ್ಲ್ಯಾನ್ ಮಾಡ್ತಾನೆ, ಮೊದಲು ಅವನನ್ನು ಅರೆಸ್ಟ್ ಮಾಡಿ. ಕರ್ನಾಟಕ ರಾಜ್ಯವನ್ನು ಇಂತಹ ಪರಿಸ್ಥಿತಿಗೆ ತಂದು ಬಿಟ್ಟಿದ್ದಾರೆ. ಅದಕ್ಕಾಗಿ ಇಷ್ಟು ಆಕ್ರೋಶವಾಗಿ ಪದ ಬಳಸಿ ಮತನಾಡಿದ್ದೇನೆ. ಅದಕ್ಕಾಗಿ ರಾಜ್ಯದ ಜನರಿಗೆ ಕ್ಷಮೆ ಕೇಳುತ್ತೇನೆ. ನನಗೆ ರಕ್ತ ಕುದಿಯುತ್ತಿದೆ, ನಮ್ಮ ಈ ರಾಜ್ಯ ಉಳಿಯಬೇಕು ಎಂದು ಕೇಂದ್ರ ಸಚಿವರು ಹೇಳಿದ್ದಾರೆ.
ಇದನ್ನೂ ಓದಿ: ‘ಕಾರ್ಡ್ ಪ್ರಿಂಟ್ ಮಾಡಿ ವಶಕ್ಕೆ ಪಡೆಯಲು ಇದೇನು ಮದುವೇನಾ?’: ಕುಮಾರಸ್ವಾಮಿ ಆರೋಪಕ್ಕೆ ಪ್ರಿಯಾಂಕ್ ಖರ್ಗೆ ಕೌಂಟರ್
ಸ್ಟಿಂಗ್ ಬಗ್ಗೆ ಸಿದ್ದರಾಮಯ್ಯನವರು ಸಂಪೂರ್ಣವಾಗಿ ಹೇಳಿದ್ದರೂ ಯಾಕೆ ತನಿಖೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿರುವ ಹೆಚ್.ಡಿ.ಕುಮಾರಸ್ವಾಮಿ, ನಮ್ಮ ಪಕ್ಷದ ಜಾಲತಾಣದ ಯುವಕನನ್ನು ಯಾವ ನೋಟಿಸ್ ಕೊಡದೆ ಮನೆಯಿಂದ 6 ಗಂಟೆಗೆ ಕರೆದೊಯ್ಯುತ್ತಾರೆ. ಆ ಯುವಕನಿಗೆ ಅದು ಹೇಳಿ, ಇದು ಹೇಳಿ ಎಂದು ಹಿಂಸೆ ಕೊಡ್ತಾರೆ. ಆ ಹುಡುಗರನ್ನ ಕರೆದೊಯ್ಯುವ ಬದಲು, ಸಿಎಂ ಮತ್ತು ಅವರ ಜೊತೆ ಇರುವವರ ಮೊಬೈಲ್ ಚೆಕ್ ಮಾಡಿ. ನಾವು ಸ್ಟಿಂಗ್ ಆಪರೇಷನ್ ಮಾಡಿ ಜೆ.ಪಿ.ನಗರದಲ್ಲಿ ಇಟ್ಟುಕೊಳ್ಳುತ್ತೀವಾ? ಎಂದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡಿ.ಕೆ.ಶಿವಕುಮಾರ್ಗೆ ಸಿದ್ದರಾಮಯ್ಯರ ಪೆನ್ಡ್ರೈವ್ ಕೊಟ್ಟ ಆ ಹೆಣ್ಮಗಳು ಯಾರು? ಸಿದ್ದರಾಮಯ್ಯ ಎಲ್ಲಿ ದೂರು ಕೊಟ್ಟಿದ್ದಾರೆ, ಆ ಬಗ್ಗೆ ಮಾಹಿತಿ ಇಲ್ಲ. ಎಫ್ಐಆರ್ ಆದ ಮೇಲೆ ಅಪ್ಡೇಟ್ ಆಗಬೇಕು, ಯಾಕೆ ಆಗಿಲ್ಲ? ಸಿದ್ದರಾಮಯ್ಯರನ್ನು ಯಾಕೆ ಸಿಎಂ ಸ್ಥಾನದಿಂದ ಕೆಳಗೆ ಇಳಿಸಿದ್ರು? ಸಿದ್ದರಾಮಯ್ಯ ಅವರೇ ಹರಕೆ ಕುರಿ ಆಗಬೇಡಿ, ಧೈರ್ಯವಾಗಿ ಎದುರಿಸಿ. ಈ ಸರ್ಕಾರ ಕಿತ್ತು ಹಾಕುವ ಸಮಯ ಬಂದಿದೆ. ನಾನೂ ಸಿದ್ದರಾಮಯ್ಯ ಅವರ ವಿರುದ್ಧ ಹೋರಾಟ ಮಾಡಿದ್ದೇನೆ. ಆದರೆ ನಿಮ್ಮ ರೀತಿ ವಿಡಿಯೋ ಇಟ್ಟುಕೊಂಡಿಲ್ಲ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸ್ಟಿಂಗ್ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಮಾತನಾಡಿದ್ದು ಯಾರು? ಸ್ಟಿಂಗ್ ಆಪರೇಷನ್ ವಿಚಾರವನ್ನು ನಾನು ಚರ್ಚಿಸಿದ್ನಾ? ಸಂಪುಟದಲ್ಲಿ ನಡೆದ ರಹಸ್ಯವನ್ನು ಮಾಧ್ಯಮಗಳಲ್ಲಿ ಬಿಟ್ಟಿದ್ಯಾರು? ಸ್ಟಿಂಗ್ ಫೈಲ್ ಸಂಪುಟ ಸಭೆಗೆ ತೆಗೆದುಕೊಂಡು ಹೋಗಿದ್ಯಾರು? ನೈಸ್ ಅಕ್ರಮ ಹೊರಗೆ ಬರಬಾರದೆಂದು ಹೀಗೆ ಮಾಡಿದ್ದಾರೆ. ಸಿದ್ದರಾಮಯ್ಯ, ಪರಮೇಶ್ವರ್ ವಿಡಿಯೋ ಬರಬಹುದೆಂದು ಈ ಹಿಂದೆ ರಮೇಶ್ ಜಾರಕಿಹೊಳಿ ಅವರೇ ಎಚ್ಚರಿಸಿದ್ದರು. ರಾಜ್ಯದ ಜನರಿಗೆ ಕೇಳುತ್ತೇನೆ, ವಿಕೃತಿ ಮನಸ್ಸಿನ ಸಿಎಂ ಬೇಕಾ? ನಾನು ಆರಾಮಾಗಿ ನಿದ್ದೆ ಮಾಡ್ತೇನೆ, ನಿದ್ದೆಗೆಡುತ್ತಿರುವುದು ನೀವು ಎಂದೂ ಕುಮಾರಸ್ವಾಮಿ ಹೇಳಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:07 pm, Thu, 15 October 26