‘‘ಬಿ ಖಾತಾ ಆಸ್ತಿ ಮಾಲೀಕರಿಗೆ ಇನ್ನು ಬೆಸ್ಕಾಂ ತಾತ್ಕಾಲಿಕ ಸಂಪರ್ಕ ಸಿಗಲ್ಲ!’’
ಬೆಂಗಳೂರು ಜಲ ಮಂಡಳಿಯಿಂದ ನೀರಿನ ಸಂಪರ್ಕ ಹಾಗೂ ಬೆಸ್ಕಾಂನಿಂದ ವಿದ್ಯುತ್ ಸಂಪರ್ಕ ಪಡೆಯಲು ಬಿಬಿಎಂಪಿಯಿಂದ ಕಟ್ಟಡಗಳ ಸ್ವಾಧೀನಾನುಭವ ಪ್ರಮಾಣ ಪತ್ರ ಅಥವಾ ಒಸಿ ಸರ್ಟಿಫಿಕೇಟ್ ಪಡೆಯಬೇಕೆಂಬ ನಿಯಮದ ಬಗ್ಗೆ ಕೆಲವು ದಿನಗಳ ಹಿಂದೆ ಬಿಬಿಎಂಪಿ ಮುಖ್ಯ ಆಯುಕ್ತರು ಪ್ರಕಟಣೆ ಹೊರಡಸಿದ್ದರು. ಇದರಿಂದ, ಬಿ ಖಾತಾ ಹೊಂದಿರುವ ಬೆಂಗಳೂರಿನ ಆಸ್ತಿ ಮಾಲೀಕರು ಅನುಭವಿಸುತ್ತಿರುವ ಸಮಸ್ಯೆ ಏನು? ತೊಂದರೆಗಳೇನು? ಆಸ್ತಿ ಮಾಲೀಕ ಶ್ರೀನಿವಾಸ ಎಂಬವರು ಬರೆದ ಅನುಭವ ಲೇಖನ ಇಲ್ಲಿದೆ.

‘‘ನಾನೊಬ್ಬ ಬಿ ಖಾತಾ ನಿವೇಶನ ಹೊಂದಿರುವಂಥ ಆಸ್ತಿ ಮಾಲೀಕ. ಈಗ ಮನೆ ನಿರ್ಮಾಣ ಮಾಡುತ್ತಾ ಇದ್ದೇನೆ. ಮೇ ಹದಿನೇಳನೇ ತಾರೀಕು ದಾಖಲಾತಿಯೊಂದು ಬೇಕಾಗಿದ್ದರಿಂದ ಬೆಸ್ಕಾಂ (ಕತ್ರಿಗುಪ್ಪೆ ಹತ್ತಿರ ಇರುವ ಬೆಸ್ಕಾಂ ಕಚೇರಿ) ಕಚೇರಿಗೆ ತೆರಳಿದ್ದೆ. ಎಣಿಕೆ ಕೂಡ ಮಾಡಲು ಸಾಧ್ಯವಿಲ್ಲದ ರೀತಿಯಲ್ಲಿ ಐದೇ ನಿಮಿಷದಲ್ಲಿ ನನಗೆ ಆ ದಾಖಲಾತಿಯನ್ನು ಸಂಬಂಧಪಟ್ಟ ಅಧಿಕಾರಿ ಕೊಟ್ಟುಬಿಟ್ಟರು. ಬಹಳ ಖುಷಿ ಹಾಗೂ ಆಶ್ಚರ್ಯವಾಯಿತು. ಆ ಸಂದರ್ಭದಲ್ಲಿಯೇ ಮೂರು ಕಿಲೋ ವಾಟ್ ಸಾಮರ್ಥ್ಯದಲ್ಲಿ ಮನೆಗೆ ಸರ್ವೀಸ್ ತೆಗೆದುಕೊಳ್ಳುವುದಕ್ಕೆ ಎಷ್ಟು ಖರ್ಚಾಗುತ್ತದೆ ಎಂಬ ಪ್ರಶ್ನೆಯನ್ನು ಅವರ ಬಳಿ ಕೇಳಿದೆ. ಅದಕ್ಕೆ ಅವರು, ಸರ್ಕಾರದ ಆದೇಶದ ಪ್ರಕಾರ ನಾವೀಗ ಮನೆಗಳಿಗೆ ಸರ್ವೀಸ್ ಕೊಡುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದೇವೆ. ಇನ್ನು ನಿಮ್ಮದು ಬಿ ಖಾತೆ, ಆದ್ದರಿಂದ ಈಗ ಆಗಿದ್ದಲ್ಲಿ ತಾತ್ಕಾಲಿಕವಾದ ಸಂಪರ್ಕ ಸಹ ಸಿಗುತ್ತಿರಲಿಲ್ಲ ಅಂದರು.
ಒಂದು ಕ್ಷಣ ಎದೆ ಧಸಕ್ ಅಂದಿತು. ಏಕೆಂದರೆ, ಬಿ ಖಾತಾ ನಿವೇಶನಗಳಿಗೆ ಆಸ್ತಿ ಮಾಲೀಕರೇ ಮುಂದಾಗಿ ಕೇಳಿದರೂ ನಕ್ಷೆ ಮಂಜೂರಾತಿಯೋ ಅಥವಾ ಸರ್ಕಾರಕ್ಕೆ ಕಟ್ಟಬೇಕಾದ ಸಂಬಂಧಪಟ್ಟ ಶುಲ್ಕವನ್ನೋ ಕಟ್ಟಿಸಿಕೊಳ್ಳುವುದಿಲ್ಲ. “ಅಕ್ಕಪಕ್ಕದವರ ಜೊತೆಗೆ ಗಲಾಟೆ ಮಾಡಿಕೊಳ್ಳದೆ ಕಟ್ಟಿಕೊಂಡು ಹೋಗಿರಿ,” ಅನ್ನೋ ಉತ್ತರವನ್ನು ಬಿಬಿಎಂಪಿ ಅಧಿಕಾರಿಯೇ ನನಗೆ ಹೇಳಿದ್ದರು. ಸರಿ, ಹಾಗೆಯೇ ನಾನು ಸಹ ಮನೆ ನಿರ್ಮಾಣವನ್ನು ಮಾಡಿಕೊಂಡು ಬಂದಿದ್ದು, ಈಗ ಮುಕ್ತಾಯ ಹಂತದಲ್ಲಿ ತನಕ ಬಂದಾಗಿದೆ. ಈಗ, ಮನೆಗೆ ಬೆಸ್ಕಾಂ ಸರ್ವೀಸ್ ಕೊಡುವುದಕ್ಕೆ ಸಂಬಂಧಿಸಿದಂತೆ ನಿಯಮವೊಂದನ್ನು ತರುತ್ತಿದ್ದಾರೆ ಅನ್ನೋ ಮಾತನ್ನು ಬೆಸ್ಕಾಂ ಅಧಿಕಾರಿಯೊಬ್ಬರು ಹೇಳಿದರು.
ಏನು ಆ ನಿಯಮ ಅಂತಲೂ ಕೇಳಿದೆ. ಬಿಬಿಎಂಪಿಯಿಂದ ಒಸಿ, ಸಿಸಿ ತರಬೇಕಂತೆ. ಅದಕ್ಕೂ ಮುನ್ನ “ನಂಬಿಕೆ ನಕ್ಷೆ” ಅನ್ನೋದನ್ನು ಒಬ್ಬ ಎಂಜಿನಿಯರ್ ಬಳಿ ಮಾಡಿಸಿದಂತಹ ಪ್ಲಾನ್ ಅನ್ನು ಅಪ್ ಲೋಡ್ ಮಾಡಿಸಿ, ಬಿಬಿಎಂಪಿ ಎಂಜಿನಿಯರ್ ಆ ಕಟ್ಟಡದ ಪರಿಶೀಲನೆ ಮಾಡಿ, ಅದಕ್ಕೆ ಒಪ್ಪಿಗೆ ಸೂಚಿಸಬೇಕಂತೆ. ಇನ್ನು ಮನೆಯ ನಿರ್ಮಾಣದ ಯಾವುದೇ ಹಂತದಲ್ಲಿ ಬಿಬಿಎಂಪಿ ಎಂಜಿನಿಯರ್ ಸ್ಥಳಕ್ಕೆ ಬಂದು, ಪರಿಶೀಲನೆ ಮಾಡಬಹುದು. ಒಂದು ವೇಳೆ ನಿಯಮ ಮೀರಿ ನಿರ್ಮಾಣ ಮಾಡುತ್ತಿದ್ದಲ್ಲಿ ಅಗತ್ಯ ಕ್ರಮವನ್ನು ತೆಗೆದುಕೊಳ್ಳಬಹುದು. ಸರಿ, ಈಗಾಗಲೇ ತಾತ್ಕಾಲಿಕವಾಗಿ ಸಂಪರ್ಕ ತೆಗೆದುಕೊಂಡ ಬೆಸ್ಕಾಂ ಗ್ರಾಹಕರ ಗತಿಯೇನು ಎಂಬುದು ನನ್ನ ಮುಂದಿನ ಪ್ರಶ್ನೆಯಾಗಿತ್ತು.
ಹದಿನೈದು ದಿನದಲ್ಲಿ ಸರ್ಕಾರ ಏನಾದರೂ ತೀರ್ಮಾನ ಮಾಡಬಹುದು, ಸ್ವಲ್ಪ ತಡೆಯಿರಿ ಎಂದು ಬೆಸ್ಕಾಂ ಅಧಿಕಾರಿಗಳೇ ಧೈರ್ಯವನ್ನು ಹೇಳಿದರು. ಆಗ ನನಗೆ ಉದ್ಭವಿಸಿದ ಕೆಲವು ಪ್ರಶ್ನೆಗಳು ಹೀಗಿವೆ:
- ಬಿ ಖಾತಾ ಖಾಲಿ ನಿವೇಶನಗಳಿಗೆ ಸರ್ಕಾರ ಕಂದಾಯ- ತೆರಿಗೆ ಕಟ್ಟಿಸಿಕೊಳ್ಳುತ್ತದೆ. ಮನೆ ನಿರ್ಮಾಣ ಆದ ನಂತರದಲ್ಲಿ ಅದಕ್ಕೆ ತೆರಿಗೆಯನ್ನು ಕಟ್ಟಿಸಿಕೊಳ್ಳುತ್ತದೆ. ಆದರೆ ಮನೆ ನಿರ್ಮಾಣಕ್ಕೆ ನಕ್ಷೆಗೆ ಅನುಮತಿಯನ್ನು ಕೊಡುವುದಿಲ್ಲ.
- ಇನ್ನು ಹೀಗೆ ನಕ್ಷೆಗೆ ಅನುಮತಿ ಇಲ್ಲದೆ, ಬಿ ಖಾತಾ ಆಸ್ತಿಯಾದ್ದರಿಂದ ಯಾವುದೇ ರಾಷ್ಟ್ರೀಕೃತ ಬ್ಯಾಂಕ್ನಲ್ಲಿ ಗೃಹ ಸಾಲವೋ ಅಥವಾ ನಿವೇಶನ ಖರೀದಿಗೋ ಸಾಲ ಸಿಗುವುದಿಲ್ಲ.
- ಇನ್ನು ನಕ್ಷೆ, ರೋಡ್ ಕಟ್ಟಿಂಗ್ ಅನುಮತಿ ಇಲ್ಲದ್ದರಿಂದ ಬೆಂಗಳೂರು ಜಲ ಹಾಗೂ ಒಳಚರಂಡಿ ಮಂಡಳಿಯವರು ದಂಡವನ್ನು ಕಟ್ಟಿಸಿಕೊಂಡು ಆ ನಂತರ ನೀರು- ಒಳಚರಂಡಿ ಸಂಪರ್ಕ ನೀಡುತ್ತಾರೆ.
- ಇದೀಗ ಬೆಸ್ಕಾಂ ತಾತ್ಕಾಲಿಕ ಸಂಪರ್ಕ ಕೊಡುವುದಕ್ಕೆ, ಸರ್ವೀಸ್ ನೀಡುವುದಕ್ಕೆ ಹೊಸ ನಿಯಮವನ್ನು ತಂದಿದ್ದಾರೆ. ಅದೇನು ಹೊಸ ನಿಯಮ ಬರಬೇಕೋ ಅದುವರೆಗೆ ಸರ್ವೀಸ್ ನೀಡುವುದನ್ನು ಹಾಗೂ ತಾತ್ಕಾಲಿಕ ಸಂಪರ್ಕ ಕೊಡುವುದನ್ನೂ ನಿಲ್ಲಿಸಿದ್ದಾರೆ.
ಬಿ ಖಾತೆ ಆಸ್ತಿಗಳಿಗೆ ಸಂಬಂಧಿಸಿದಂತೆ ಇಷ್ಟೆಲ್ಲ ತಲೆ ನೋವಿರುವಾಗ ಅವುಗಳನ್ನು ಎ ಖಾತಾ ಆಸ್ತಿಯಾಗಿ ಮಾಡುವುದಕ್ಕೆ ಏನು ಕಾನೂನು ಬದ್ಧ ಸಂಭವನೀಯ ನಿಯಮಗಳು ಇದೆಯೋ ಅದನ್ನು ಜಾರಿಗೆ ತನ್ನಿ. ಅಭಿವೃದ್ಧಿ ಶುಲ್ಕವನ್ನು ಕಟ್ಟಿಸಿಕೊಳ್ಳಿ. ಎ ಖಾತೆಯಾಗಿ ಮಾಡಿಕೊಡಿ. ಇಲ್ಲ, ಬಿ ಖಾತಾ ಆಸ್ತಿಗಳ ಖರೀದಿಯೇ ಮಾಡಬಾರದು ಅಂತಾದಲ್ಲಿ ನೋಂದಣಿಯೇ ಆಗದಂತೆ ನಿಯಮವನ್ನು ತಂದುಬಿಟ್ಟರೆ ಅಷ್ಟರ ಮಟ್ಟಿಗೆ ಸಾರ್ವಜನಿಕರ ಹಿತಾಸಕ್ತಿಯನ್ನು ಕಾಪಾಡಿದಂತೆ ಆಗುತ್ತದೆ ಅಂತ ಬೆಸ್ಕಾಂ ಅಧಿಕಾರಿಗಳ ಎದುರು ಏನೇನೋ ಬಡಬಡಾಯಿಸಿದೆ.
ಇದನ್ನೂ ಓದಿ: ಇನ್ಮುಂದೆ ಮನೆ ಕಟ್ಟುವ ಮುಂಚೆ OC ಸರ್ಟಿಫಿಕೆಟ್ ಕಡ್ಡಾಯ: ಇಲ್ಲಾಂದ್ರೆ ವಿದ್ಯುತ್, ನೀರಿನ ಸಂಪರ್ಕವಿಲ್ಲ
ಆಮೇಲೆ ಹೊಳೆದದ್ದು ಏನೆಂದರೆ, ಅಧಿಕಾರಿಗಳು ಅಂದರೆ ಸರ್ಕಾರದ ನಿಯಮ ಪಾಲನೆ ಮಾಡುವವರೇ ವಿನಾ ಸ್ವತಃ ಅವರು ಇವ್ಯಾವುದಕ್ಕೂ ಉತ್ತರದಾಯಿತ್ವ ಇರುವವರಲ್ಲ. ಬಿ ಖಾತಾ ಆಸ್ತಿ ಇರುವವರಿಗೆ ತಾತ್ಕಾಲಿಕವಾಗಿಯಂತೂ ಬೆಸ್ಕಾಂನವರು ಬೆಂಗಳೂರು ವ್ಯಾಪ್ತಿಯಲ್ಲಿ ತಾತ್ಕಾಲಿಕ ಸಂಪರ್ಕವನ್ನೋ ಅಥವಾ ಸರ್ವೀಸ್ ಅನ್ನೋ ನೀಡುವುದಿಲ್ಲ ಎಂಬುದು ತಿಳಿದುಬಂದಿರುವ ಸಂಗತಿ. ಈ ಬಗ್ಗೆ ಯಾರನ್ನು ಹೋಗಿ ಕೇಳಬೇಕು ಅನ್ನೋದು ನನ್ನಂಥ ಜನ ಸಾಮಾನ್ಯನಿಗೆ ಗೊತ್ತೇ ಆಗುವುದಿಲ್ಲ. ಏಕೆಂದರೆ ಯಾರ ಬಳಿ ಹೋಗಿ ಕೇಳಿದರೂ ಅವರು ಮೇಲುಗಡೆಗೆ ಬೊಟ್ಟು ಮಾಡುತ್ತಾರೆ. ಹಾಗೆ ಬೊಟ್ಟಿನ ದಿಕ್ಕು ಮೇಲಕ್ಕೆ ಸಾಗುತ್ತದೆಯೇ ವಿನಾ ಉತ್ತರವೋ ಪರಿಹಾರವೋ ಸಿಗುವುದಿಲ್ಲ. ಬೆಂಗಳೂರಿನಲ್ಲಿ ಲಕ್ಷಾಂತರ ಬಿ ಖಾತಾ ಆಸ್ತಿಗಳಿವೆ. ಹದಿನೈದು ದಿನವೋ ತಿಂಗಳೋ ನಂತರದಲ್ಲಿ ನಿಯಮ ರೂಪಿಸಬಹುದು ಅಥವಾ ರೂಪಿಸದೆಯೂ ಇರಬಹುದು. ಅಲ್ಲಿಯ ತನಕ ನಮ್ಮಂಥವರ ಗತಿ ಏನು- ಸ್ಥಿತಿ ಏನು?’’.
(ಇಲ್ಲಿ ಪ್ರಕಟವಾಗಿರುವ ಅಭಿಪ್ರಾಯ ಲೇಖಕರದ್ದೇ ವಿನಃ ‘ಟಿವಿ9 ಕನ್ನಡ ಡಿಜಿಟಲ್’ನದ್ದಾಗಿರುವುದಿಲ್ಲ)
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:13 pm, Sat, 17 May 25








