ಕಾಂಗ್ರೆಸಿಗರ ಮನವೊಲಿಕೆಗೆ ಮಣಿದ ಬಸವರಾಜ ಹೊರಟ್ಟಿ: ಸಭಾಪತಿ ಸ್ಥಾನಕ್ಕೆ ರಾಜೀನಾಮೆ

Basavaraj Horatti: ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಸ್ಥಾನದ ಸುತ್ತ ನಡೆಯುತ್ತಿದ್ದ ರಾಜಕೀಯ ಹೈಡ್ರಾಮಾಗೆ ಕೊನೆಗೂ ತೆರೆ ಬಿದ್ದಿದ್ದು, ಹಿರಿಯ ನಾಯಕ ಬಸವರಾಜ ಹೊರಟ್ಟಿ ಅವರು ತಮ್ಮ ಹುದ್ದೆಗೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ. ಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರ ಸುದೀರ್ಘ ಮನವೊಲಿಕೆಯ ನಂತರ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಸ್ವ ಇಚ್ಛೆಯಿಂದ ಹುದ್ದೆ ತೊರೆಯುತ್ತಿರೋದಾಗಿ ಅವರು ತಿಳಿಸಿದ್ದಾರೆ.

ಕಾಂಗ್ರೆಸಿಗರ ಮನವೊಲಿಕೆಗೆ ಮಣಿದ ಬಸವರಾಜ ಹೊರಟ್ಟಿ: ಸಭಾಪತಿ ಸ್ಥಾನಕ್ಕೆ ರಾಜೀನಾಮೆ
ಬಸವರಾಜ ಹೊರಟ್ಟಿ
Image Credit source: Tv9 and PTI
Edited By:

Updated on: Aug 07, 2026 | 2:42 PM

ಮುಖ್ಯಾಂಶಗಳು

  • ಕೊನೆಗೂ ಸಭಾಪತಿ ಹುದ್ದೆ ತೊರೆದ ಬಸವರಾಜ ಹೊರಟ್ಟಿ
  • ಕಾಂಗ್ರೆಸಿಗರ ಮನವೊಲಿಕೆ ಬೆನ್ನಲ್ಲೇ ರಾಜೀನಾಮೆ ಸಲ್ಲಿಕೆ
  • ಸ್ವಇಚ್ಛೆಯಿಂದ ರಾಜೀನಾಮೆ ಎಂದು ಪತ್ರದಲ್ಲಿ ಉಲ್ಲೇಖ

ಬೆಂಗಳೂರು, ಆಗಸ್ಟ್​​ 07: ಸಾಕಷ್ಟು ರಾಜಕೀಯ ಬೆಳವಣಿಗಳ ಬಳಿಕ ಕೊನೆಗೂ ಕರ್ನಾಟಕ ವಿಧಾನ ಪರಿಷತ್​​ನ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ ನೀಡಿದ್ದಾರೆ. ಸಿಎಂ ಡಿಕೆಶಿ, ಕೆಪಿಸಿಸಿ ಅಧ್ಯಕ್ಷರ ಸುದೀರ್ಘ ಮನವೊಲಿಕೆ ಬಳಿಕ ಅವರು ಹುದ್ದೆ ತೊರೆದಿದ್ದು, ಸ್ವಇಚ್ಛೆಯಿಂದ ರಾಜೀನಾಮೆ ಎಂದು ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ. ಹೊರಟ್ಟಿ ಅವರನ್ನು ಹಂಗಾಮಿ ಸಭಾಪತಿಯಾಗಿ ಸರ್ಕಾರ ಮುಂದುವರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಪರಿಷತ್ ಸದಸ್ಯೆಯಾಗಿ ಗಾಯತ್ರಿ ಶಾಂತೇಗೌಡ ಪ್ರಮಾಣವಚನ ಕಾರ್ಯಕ್ರಮದ ಬಳಿಕವೂ ವಿಧಾನಸೌಧದ ಸಭಾಪತಿಗಳ ಕಚೇರಿಯಲ್ಲಿ ಹೊರಟ್ಟಿ ಜೊತೆ ಸಿಎಂ ಡಿಕೆಶಿ, ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್ ಚರ್ಚೆ ನಡೆಸಿದ್ದರು. ಅದಕ್ಕೂ ಮೊದಲು ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಬಸವರಾಜ ಹೊರಟ್ಟಿ ಭೇಟಿ ನೀಡಿದ್ದರು. ಸಿಎಂ ಜೊತೆ ಮಾತುಕತೆ ಬಳಿಕ ಬಹಳ ಸಿಟ್ಟಿನಿಂದಲೇ ಹೊರಬಂದಿದ್ದರು.

ಇದನ್ನೂ ಓದಿ: ಸಭಾಪತಿ ಹೊರಟ್ಟಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಕಾಂಗ್ರೆಸ್​​ ಸಿದ್ಧತೆ: ಇಂದೇ ನಿಲುವಳಿ ನೋಟಿಸ್​​?

ಸಿಎಂ ಡಿಕೆಶಿ ಹೇಳಿದ್ದೇನು?

CM DK Shivakumar On Basavaraj Horatti's Resignation | ಗೌರವದಿಂದ ರಾಜೀನಾಮೆ ಸಲ್ಲಿಸಿದ್ದಾರೆ: ಸಿಎಂ ಡಿಕೆಶಿ

ಇನ್ನು ಬಸವರಾಜ ಹೊರಟ್ಟಿ ಅವರ ರಾಜೀನಾಮೆ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಡಿಕೆಶಿ, ಅವರಿಗೆ ರಾಜಕೀಯದ ವಾಸ್ತವಾಂಶದ ಅರಿವಿದೆ. ಹೀಗಾಗಿಯೇ ಗೌರವಯುತವಾಗಿ ರಾಜೀನಾಮೆ ಸಲ್ಲಿಸಿದ್ದಾರೆ. ಹೊಸಬರು ಆಯ್ಕೆ ಆಗುವ ತನಕ ಅವರೇ ಹಂಗಾಮಿ ಸಭಾಪತಿಗಳಾಗಿರಬೇಕು ಎಂದು ರಾಜ್ಯಪಾಲರಿಗೆ ಮನವಿ ಮಾಡಿರೋದಾಗಿ ತಿಳಿಸಿದ್ದಾರೆ.

ಸಿಎಂ ಭೇಟಿ ಬಗ್ಗೆ ಹೊರಟ್ಟಿ ಸ್ಪಷ್ಟನೆ

ಆಗಸ್ಟ್​​ 14ರಂದು ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡೋದಾಗಿ ನಿನ್ನೆಯೇ ಹೊರಟ್ಟಿ ಅವರು ಘೋಷಿಸಿದ್ದರು. ಈ ನಡುವೆ ಇಂದು ಅವರು ಸಿಎಂ ನಿವಾಸಕ್ಕೆ ಭೇಟಿ ನೀಡಿದ್ದು ಭಾರಿ ಕುತೂಹಲಕ್ಕೆ ಕಾರಣವಾಗಿತ್ತು. ಆದರೆ ಭೇಟಿ ಹಿಂದನ ಕಾರಣವನ್ನು ಅವರು ಟಿವಿ9 ಜೊತೆ ಬಿಚ್ಚಿಟ್ಟಿದ್ದು, ಕೊನೇಯದಾಗಿ ಧನ್ಯವಾದ ಹೇಳಲು ಡಿಕೆಶಿ ಅವರ ಮನೆಗೆ ತೆರಳಿದ್ದೆ. ಇಲ್ಲಿಯವರೆಗೆ ಸಹಕಾರ ನೀಡಿದ್ದಕ್ಕೆ ಧನ್ಯವಾದ ಎಂದು ತಿಳಿಸಿರೋದಾಗಿ ಹೇಳಿದ್ದಾರೆ. ಕಾಂಗ್ರೆಸಿರ ಆರೋಪದ ಬಗ್ಗೆಯೂ ಪ್ರತಿಕ್ರಿಯಿಸಿರುವ ಅವರು, ಈಗ ಆ ಬಗ್ಗೆ ಮಾತನಾಡುತ್ತಿರೋದೇಕೆ. 23 ಮಂದಿ ಕಾಂಗ್ರೆಸ್​​ ಸದಸ್ಯರೇ ನನ್ನ ಕೆಲಸವನ್ನ ಕೊಂಡಾಡಿದ್ದಾರೆ. ಈಗ ಈ ರೀತಿ ಹೇಳಿದರೆ ಆಗಿನ ಹೇಳಿಕೆಗೆ ಏನು ಅರ್ಥವಿದೆ ಎಂದೂ ಅವರು ಪ್ರಶ್ನಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 2:05 pm, Fri, 7 August 26

ಹರೀಶ್ ಜಿ.ಆರ್​.

ಹರೀಶ್ ಜಿ.ಆರ್ ಮೂಲತಃ ಚಿಕ್ಕಮಗಳೂರಿನವರಾಗಿದ್ದು, ಪೌಢ ಶಿಕ್ಷಣವನ್ನು ಉಜಿರೆಯ ಎಸ್ ಡಿಎಂ ಸಂಸ್ಥೆಯಲ್ಲಿ ಹಾಗೂ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ದಲ್ಲಿ ಬಿ.ಎ ಪದವಿಯನ್ನು, ಮಾನಸ ಗಂಗೋತ್ರಿಯ EMMRC ಸಂಸ್ಥೆಯ ಎಲೆಕ್ಟ್ರಾನಿಕ್ ಮೀಡಿಯಾ ವಿಷಯದಲ್ಲಿ ಎಂಎಸ್ಸಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸಧ್ಯ ಪತ್ರಿಕೋದ್ಯಮದಲ್ಲಿ 14 ವರ್ಷದ ಅನುಭವ ಹೊಂದಿರುವ ಇವರು, ದೆಹಲಿಯಲ್ಲಿಯೇ 10 ವರ್ಷಗಳ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿದ್ದಾರೆ. ರಾಜ್ಯ, ರಾಜಕೀಯ, ರಾಷ್ಟ್ರೀಯ, ಅಂತರರಾಷ್ಟ್ರೀಯ, ಸುಪ್ರೀಂಕೋರ್ಟ್ ವರದಿಗಾರಿಕೆಯಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಅಯೋಧ್ಯೆ ರಾಮಮಂದಿರದ ತೀರ್ಪು ನಿಂದ ಹಿಡಿದು ಮಂದಿರ ಉದ್ಘಾಟನೆವರೆಗೂ ವರದಿ ಮಾಡಿದ ಅನುಭವ ಹೊಂದಿದ್ದಾರೆ. ಪುಲ್ವಾಮ ಉಗ್ರರ ದಾಳಿ, ಪಹಲ್ಗಾಂ ಉಗ್ರರ ದಾಳಿ, ಆದಾದ ನಂತರದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಗಳನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಗ್ರೌಂಡ್ ರಿಪೋರ್ಟ್ ಮಾಡಿರುವ ಅನುಭವ ಹೊಂದಿದ್ದಾರೆ.. ಉತ್ತರಖಂಡದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಗಳನ್ನು ಗ್ರೌಂಡ್ ರಿಪೋರ್ಟ್ ಮಾಡಿದ್ದಾರೆ. 2019‌ ಹಾಗೂ 2024ರ ಲೋಕಸಭಾ ಚುನಾವಣೆಯಲ್ಲಿ ವಿವಿಧ ರಾಜ್ಯಗಳನ್ನು ಸುತ್ತಿ ಜನರ ರಾಜಕೀಯ ನಾಡಿಮಿಡಿತದ ವರದಿ ಮಾಡಿದ್ದಾರೆ.. ಸಧ್ಯ ಇವರು ಬೆಂಗಳೂರಿನಲ್ಲಿ ರಾಜಕೀಯ ವರದಿಗಾರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

Read More
Loading...
Unable to load recommendations.
Follow Us