ಬೇಡ ಬ್ರೋ & ರೈಸ್ ಅಭಿಯಾನ! ಬೆಂಗಳೂರು ಪೂರ್ವ ವಿಭಾಗದ ಪೊಲೀಸರಿಂದ ವಿಶೇಷ ಕಾರ್ಯಾಚರಣೆ; ಏನಿದು? ಇಲ್ಲಿದೆ ಮಾಹಿತಿ
ಬೆಂಗಳೂರು ಪೂರ್ವ ವಿಭಾಗದ ಪೊಲೀಸರು 'ಬೇಡ ಬ್ರೋ & ರೈಸ್' ಅಭಿಯಾನದಡಿ ಶಾಲಾ-ಕಾಲೇಜುಗಳ ಸುತ್ತಮುತ್ತಲಿನ 575 ಅಂಗಡಿಗಳ ಮೇಲೆ ದಾಳಿ ನಡೆಸಿ ಪರಿಶೀಲಿಸಿದ್ದಾರೆ. ತಿನಿಸುಗಳಲ್ಲಿ ಮಾದಕ ವಸ್ತು ಮಿಕ್ಸ್ ಮಾಡಿ ಮಾರಾಟ ಮಾಡುವ ಶಂಕೆ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆದಿದ್ದು, 4 NDPS ಹಾಗೂ 282 ಕೊಕ್ಟಾ ಕೇಸ್‌ಗಳನ್ನು ದಾಖಲಿಸಲಾಗಿದೆ. ಯುವಜನತೆಯಲ್ಲಿ ಡ್ರಗ್ಸ್ ವಿರುದ್ಧ ಜಾಗೃತಿ ಮೂಡಿಸಲು 125 ಶೈಕ್ಷಣಿಕ ಸಂಸ್ಥೆಗಳೊಂದಿಗೆ ಸಭೆ ನಡೆಸಲಾಗಿದೆ.

ಮುಖ್ಯಾಂಶಗಳು
- ಪೊಲೀಸರಿಂದ 'ಬೇಡ ಬ್ರೋ' ಕಾರ್ಯಾಚರಣೆ; 575 ಅಂಗಡಿಗಳಲ್ಲಿ ಡ್ರಗ್ಸ್ ತಪಾಸಣೆ.
- 4 ಎನ್‌ಡಿಪಿಎಸ್ ಕೇಸ್ ದಾಖಲು, 27 ಅನುಮಾನಾಸ್ಪದ ವಾಹನಗಳು ಜಪ್ತಿ.
- 125 ಶಾಲಾ-ಕಾಲೇಜುಗಳಲ್ಲಿ ಸಭೆ ನಡೆಸಿ ಡ್ರಗ್ಸ್ ವಿರುದ್ಧ ಜಾಗೃತಿ.
ಬೆಂಗಳೂರು, ಸೆಪ್ಟೆಂಬರ್ 02: ನಗರದಲ್ಲಿ ಯುವಜನತೆಯನ್ನು ಮಾರಕ ಡ್ರಗ್ಸ್‌ನಿಂದ ಮುಕ್ತಗೊಳಿಸಲು ಮತ್ತು ಅವರಲ್ಲಿ ಜಾಗೃತಿ ಮೂಡಿಸಲು ಬೆಂಗಳೂರು ಪೂರ್ವ ವಿಭಾಗದ ಪೊಲೀಸರು ಬೃಹತ್ ಕಾರ್ಯಾಚರಣೆ ನಡೆಸಿದ್ದಾರೆ. ‘ಬೇಡ ಬ್ರೋ & ರೈಸ್’ (Beda Bro & RISE) ಎಂಬ ವಿನೂತನ ಅಭಿಯಾನದಡಿ, ಶಾಲಾ-ಕಾಲೇಜುಗಳ ಸುತ್ತಮುತ್ತಲಿನ ಅಂಗಡಿ-ಮುಂಗಟ್ಟುಗಳ ಮೇಲೆ ದಿಢೀರ್ ದಾಳಿ ನಡೆಸಿ ಪರಿಶೀಲಿಸಲಾಗಿದೆ.
ಏನಿದು ‘ಬೇಡ ಬ್ರೋ & RISE’ ಅಭಿಯಾನ?
ಯುವಜನರಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಮಾದಕ ವ್ಯಸನದ ವಿರುದ್ಧ ಹೋರಾಡಲು ಈ ಕಾರ್ಯಾಚರಣೆ ರೂಪಿಸಲಾಗಿದೆ. ‘ಬ್ರೋ, ನಮಗೆ ಡ್ರಗ್ಸ್ ಬೇಡ’ (Beda Bro) ಎಂಬ ಸ್ಪಷ್ಟ ಸಂದೇಶವನ್ನು ಸಾರುವ ಜೊತೆಗೆ, ಯುವಸಮೂಹವು ಡ್ರಗ್ಸ್ ವಿರುದ್ಧ ಧ್ವನಿ ಎತ್ತಿ ಸಮಾಜದಲ್ಲಿ ಸಕಾರಾತ್ಮಕವಾಗಿ ಬೆಳೆಯಬೇಕು, (RISE – Research, Innovation, Support, and Empowerment) ಜಾಗೃತರಾಗಬೇಕು ಎಂಬುದೇ ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ. ಕೇವಲ ಡ್ರಗ್ಸ್ ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸುವುದು ಮಾತ್ರವಲ್ಲದೆ, ಶೈಕ್ಷಣಿಕ ಸಂಸ್ಥೆಗಳ ಜೊತೆ ಕೈಜೋಡಿಸಿ ಯುವಕರನ್ನು ಮಾದಕ ಜಾಲದಿಂದ ದೂರವಿಡುವುದು ಇದರ ಗುರಿ.
ಬೃಹತ್ ಪರಿಶೀಲನೆ ಮತ್ತು ಪೊಲೀಸರ ಕ್ರಮ
ವಿದ್ಯಾರ್ಥಿಗಳಿಗೆ ಸರಬರಾಜಾಗುವ ತಿನಿಸುಗಳು, ಚಾಕೊಲೇಟ್ ಅಥವಾ ಜ್ಯೂಸ್‌ಗಳಲ್ಲಿ ಮಾದಕ ವಸ್ತುಗಳನ್ನು ಮಿಕ್ಸ್ ಮಾಡಿ ಮಾರಾಟ ಮಾಡಲಾಗುತ್ತಿದೆ ಎಂಬ ಶಂಕೆಯ ಹಿನ್ನೆಲೆಯಲ್ಲಿ ಈ ತನಿಖೆ ನಡೆಸಲಾಗಿದೆ. ಶಾಲಾ-ಕಾಲೇಜುಗಳ ಸುತ್ತಮುತ್ತಲಿದ್ದ ಮೆಡಿಕಲ್ ಶಾಪ್, ಹೋಟೆಲ್, ದಿನಸಿ ಅಂಗಡಿ, ಸ್ಟೇಷನರಿ, ಐಸ್‌ಕ್ರೀಮ್ ಪಾರ್ಲರ್ ಹಾಗೂ ಜೆರಾಕ್ಸ್ ಮಳಿಗೆಗಳು ಸೇರಿದಂತೆ ಒಟ್ಟು 575 ವಾಣಿಜ್ಯ ಮಳಿಗೆಗಳನ್ನು ತನಿಖೆ ಮಾಡಲಾಗಿದೆ.
ಪರಿಶೀಲನೆ ವೇಳೆ ಕೆಲವು ಕಡೆ ಮಾದಕ ವಸ್ತುಗಳು ಪತ್ತೆಯಾಗಿದ್ದು, 4 ಎನ್‌ಡಿಪಿಎಸ್ (NDPS) ಪ್ರಕರಣಗಳು ದಾಖಲಾಗಿವೆ. 305 ಅನುಮಾನಾಸ್ಪದ ವ್ಯಕ್ತಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, 232 ಪೆಟ್ಟಿ ಕೇಸ್ ಹಾಗೂ 282 ಕೊಕ್ಟಾ (COTPA – ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯ್ದೆ) ಕೇಸ್‌ಗಳನ್ನು ದಾಖಲಿಸಲಾಗಿದೆ. 27 ಅನುಮಾನಾಸ್ಪದ ವಾಹನಗಳನ್ನು ಜಪ್ತಿ ಮಾಡಲಾಗಿದೆ.
ಯುವಜನತೆಯಲ್ಲಿ ಅರಿವು ಮೂಡಿಸಲು 125 ಶೈಕ್ಷಣಿಕ ಸಂಸ್ಥೆಗಳ ಆಡಳಿತ ಮಂಡಳಿ ಮತ್ತು ವಿದ್ಯಾರ್ಥಿಗಳೊಂದಿಗೆ ಪೊಲೀಸರು ಜಾಗೃತಿ ಸಭೆಗಳನ್ನು ನಡೆಸಿದ್ದಾರೆ. ಡ್ರಗ್ಸ್ ಮುಕ್ತ ಬೆಂಗಳೂರು ನಿರ್ಮಾಣಕ್ಕೆ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಪೊಲೀಸರೊಂದಿಗೆ ಸಹಕರಿಸಬೇಕೆಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




