ವಂಚನೆ ಪ್ರಕರಣ: ಹಾಲಶ್ರೀಯನ್ನು ಸಿಸಿಬಿ ಕಸ್ಟಡಿಗೆ ನೀಡಿದ ಕೋರ್ಟ್, ತನಿಖೆಯ ಅಸಲಿ ಆಟ ಈಗ ಶುರು
ಚೈತ್ರಾ ಕುಂದಾಪುರ ಆ್ಯಂಡ್ ಗ್ಯಾಂಗ್ನಿಂದ 5 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ 3ನೇ ಆರೋಪಿ ಅಭಿನವ ಹಾಲಶ್ರೀಯನ್ನು ಕೋರ್ಟ್, 10 ದಿನಗಳ ಕಾಲ ಸಿಸಿಬಿ ಕಸ್ಟಡಿಗೆ ನೀಡಿದೆ. ಹಾಲಶ್ರೀ ಈಗ ಸಿಸಿಬಿ ಕಸ್ಟಡಿಗೆ ಸಿಕ್ಕಿದ್ದು, ಮತ್ತೊಂದೆಡೆ ವಿಚಾರಣೆಗೆ ಸ್ಪಂದಿಸಿದೇ ಆಸ್ಪತ್ರೆ ಸೇರಿದ್ದ ಪ್ರಮುಖ ಆರೋಪಿ ಚೈತ್ರಾ ಕುಂದಾಪುರ ಡಿಸ್ಚಾರ್ಜ್ ಆಗಿದೆ. ಹೀಗಾಗಿ ಪ್ರಕರಣದ ತನಿಖೆಯ ಅಸಲಿ ಆಟ ಈಗ ಶುರುವಾಗಲಿದೆ.
ಬೆಂಗಳೂರು, (ಸೆಪ್ಟೆಂಬರ್ 20): ಚೈತ್ರಾ ಕುಂದಾಪುರ (Chaitra Kundapura) ಆ್ಯಂಡ್ ಗ್ಯಾಂಗ್ನಿಂದ 5 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ 3ನೇ ಆರೋಪಿ ಅಭಿನವ ಹಾಲಶ್ರೀಯನ್ನು(abhinav Halashree) ಕೋರ್ಟ್, 10 ದಿನಗಳ ಕಾಲ ಸಿಸಿಬಿ ಕಸ್ಟಡಿಗೆ ನೀಡಿದೆ. ಸೆಪ್ಟೆಂಬರ್ 29ರವರೆಗೆ ಹಾಲಶ್ರೀಯನ್ನು ಸಿಸಿಬಿ ಕಸ್ಟಡಿಗೆ ನೀಡಿ ಬೆಂಗಳೂರಿನ 19ನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದೆ. ಪ್ರಕರಣ ಸಂಬಂಧ ಹೆಚ್ಚಿನ ವಿಚಾರಣೆ, ಮಹಜರು ಪ್ರಕ್ರಿಯೆ ನಡೆಸಬೇಕರುವುದರಿಂದ ಆರೋಪಿಯನ್ನು ತಮ್ಮ ವಶಕ್ಕೆ ನೀಡಬೇಕೆಂದು ಸಿಸಿಬಿ, ನ್ಯಾಯಾಧೀಶರ ಮುಂದೆ ಮನವಿ ಮಾಡಿದೆ. ಸಿಸಿಬಿಯ ಈ ಮನವಿ ಪುರಸ್ಕರಿಸಿದ ಕೋರ್ಟ್, ಆರೋಪಿಯನ್ನು ಸೆಪ್ಟೆಂಬರ್ 29ರ ವರೆಗೆ ಸಿಸಿಬಿ ಕಸ್ಟಡಿಗೆ ನೀಡಿ ಆದೇಶಿಸಿದೆ. ಇನ್ನು ಹಾಲಶ್ರೀ ಜಾಮೀನು ಅರ್ಜಿ ವಿಚಾರಣೆಯನ್ನು ಕಾಯ್ದಿರಿಸಿದೆ.
ಎಂಎಲ್ಎ ಟಿಕೆಟ್ ಕೊಡಿಸುವುದಾಗಿ ಉದ್ಯಮಿ ಗೋವಿಂದ್ ಬಾಬು ಪೂಜಾರಿಗೆ ಎನ್ನುವರಿಗೆ ಕೋಟ್ಯಂತರ ರೂಪಾಯಿ ತೆಗೆದುಕೊಂಡು ವಂಚನೆ ಪ್ರಕರಣದಲ್ಲಿ ಈಗಾಗಲೇ ಪ್ರಮುಖ ಆರೋಪಿ ಚೈತ್ರಾ ಕುಂದಾಪುರ ಬಂಧನವಾಗಿದ್ದು, ಸಿಸಿಬಿ ಪೊಲೀಸರು ತನಿಖೆ ನಡೆಸಿದ್ದಾರೆ. ಇನ್ನು ಇಷ್ಟು ದಿನ ತಲೆಮರೆಸಿಕೊಂಡಿದ್ದ ಪ್ರಕರಣದ ಮೂರನೇ ಆರೋಪಿ ಹಾಲಶ್ರೀಯನ್ನು ನಿನ್ನೆ (ಸೆಪ್ಟೆಂಬರ್ 19) ಒಡಿಶಾದ ಕಟಕ್ನಲ್ಲಿ ಬಂಧಿಸಲಾಗಿತ್ತು.
ಪ್ರಕರಣದ ತನಿಖೆಯ ಅಸಲಿ ಆಟ ಈಗ ಶುರು
ಚೈತ್ರಾ ಅಂಡ್ ಗ್ಯಾಂಗ್ ನಿಂದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿದ್ದ ಹಾಲಶ್ರೀ ಈಗ ಸಿಸಿಬಿ ಕಸ್ಟಡಿಗೆ ಸಿಕ್ಕಿದ್ದು, ಮತ್ತೊಂದೆಡೆ ವಿಚಾರಣೆಗೆ ಸ್ಪಂದಿಸಿದೇ ಆಸ್ಪತ್ರೆ ಸೇರಿದ್ದ ಪ್ರಮುಖ ಆರೋಪಿ ಚೈತ್ರಾ ಕುಂದಾಪುರ ಡಿಸ್ಚಾರ್ಜ್ ಆಗಿದೆ. ಹೀಗಾಗಿ ಪ್ರಕರಣದ ತನಿಖೆಯ ಅಸಲಿ ಆಟ ಈಗ ಶುರುವಾಗಲಿದೆ.
ಹಾಲಶ್ರೀ ಸ್ವಾಮೀಜಿ ಸಿಕ್ಕಿಬೀಳಲಿ ಎಲ್ಲಾ ಹೊರಬೀಳುತ್ತೆ ಅಂತಾ ಚೈತ್ರಾ ಬಾಂಬ್ ಹಾಕಿದ್ದಳು. ಅದರಂತೆ ಕಳೆದ 6 ದಿನಗಳಿಂದ ತಲೆಮರೆಸಿಕೊಂಡಿದ್ದ ಹಾಲಶ್ರೀ ಕೊನೆಗೂ ಸಿಸಿಬಿ ಖೆಡ್ಡಾಗೆ ಬಿದ್ದಿದ್ದಾನೆ. ಹೀಗಾಗಿ ಇಬ್ಬರನ್ನು ಸಿಸಿಬಿ ಪೊಲೀಸರು ವಿಚಾರಣೆಗೆ ತೀವ್ರಗೊಳಿಸಲಿದ್ದಾರೆ. ಸಮಯ ಬಂದರೆ ಚೈತ್ರಾ ಹಾಗೂ ಹಾಲಶ್ರೀಯನ್ನು ಮುಖಾಮುಖಿ ಕೂಡಿಸಿಕೊಂಡು ವಿಚಾರಣೆ ಮಾಡುವ ಸಾಧ್ಯತೆಗಳಿವೆ.
ಒಡಿಶಾದಲ್ಲಿ ಸಿಕ್ಕಿಬಿದ್ದ ಸ್ವಾಮೀಜಿ
ಒಡಿಶಾದಲ್ಲಿ ರೈಲಿನಲ್ಲಿ ಓಡಾಡುತ್ತಿದ್ದ ಸ್ವಾಮೀಜಿಯನ್ನು ಸಿಸಿಬಿ ಸಿನಿಮಾ ಸ್ಟೈಲ್ನಲ್ಲಿ ಲಾಕ್ ಮಾಡಿ ನಿನ್ನೆ(ಸೆಪ್ಟೆಂಬರ್ 19) ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆತಂದ ಹಾಲಶ್ರೀ ಸ್ವಾಮೀಜಿಯನ್ನು ನಂತರ ನೇರವಾಗಿ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ತಪಾಸಣೆ ನಡೆಸಲಾಯ್ತು. ಇದಾದ ಬಳಿಕ ಬೆಂಗಳೂರಿನ ಹೊರವಲಯದಲ್ಲಿ 5-6 ಕಡೆ ಸ್ಥಳ ಮಹಜರು ನಡೆಸಲಾಗಿದೆ ಎನ್ನಲಾಗಿದೆ. ಇದೀಗ ಕೋರ್ಟ್ ಸಹ ಹಾಲಶ್ರೀಯನ್ನು ಸಿಸಿಬಿ ಕಸ್ಟಡಿಗೆ ನೀಡಿದ್ದು, ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಳ್ಳಲಿದೆ.
ಇನ್ನು 5 ಕೋಟಿ ವಂಚನೆ ಪುರಾಣದ ಹಿಂದೆ ಇನ್ನೂ ಯಾರ್ಯಾರ ಕೈವಾಡವಿದೆ ಎನ್ನುವುದನ್ನು ಚೈತ್ರಾ ಹೇಳಿದಂತೆ ಸ್ವಾಮೀಜಿ , ಸಿಸಿಬಿ ಮುಂದೆ ಬಹಿರಂಗಪಡಿಸ್ತಾರಾ ಎನ್ನುವ ಕುತೂಹಲ ಮೂಡಿಸಿದೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:40 am, Wed, 20 September 23