
ಬೆಂಗಳೂರು, ಆಗಸ್ಟ್ 7: ಬೆಂಗಳೂರಿನ (Bengaluru) ಪಂಚತಾರಾ ಹೋಟೆಲ್‌ಗಳಿಗೆ ಆರೋಗ್ಯ ಸುರಕ್ಷತಾ ವಿಭಾಗದ ಅಧಿಕಾರಿಗಳು ಶುಕ್ರವಾರ ಶಾಕ್ ನೀಡಿದ್ದಾರೆ. ಆಹಾರದ ಗುಣಮಟ್ಟ, ಸಂಸ್ಕರಣೆ ಮತ್ತು ಸ್ವಚ್ಛತೆ ಪರಿಶೀಲನೆಗಾಗಿ 30ಕ್ಕೂ ಹೆಚ್ಚು ಅಧಿಕಾರಿಗಳ ತಂಡ ವಿವಿಧ ಪಂಚತಾರಾ ಹೋಟೆಲ್‌ಗಳ ಮೇಲೆ ದಾಳಿ ನಡೆಸಿದೆ. ಈ ವೇಳೆ ಕೆಲ ಹೋಟೆಲ್‌ಗಳಲ್ಲಿ ಕಳಪೆ ಗುಣಮಟ್ಟದ ತರಕಾರಿಗಳು, ಕೊಳೆತ ಈರುಳ್ಳಿ ಹಾಗೂ ಆಲೂಗಡ್ಡೆ ಪತ್ತೆಯಾಗಿವೆ. ಇನ್ನು ಕೆಲವು ಹೋಟೆಲ್‌ಗಳಲ್ಲಿ ಡೆನ್ಮಾರ್ಕ್ನಿಂದ ಆಮದಾದ ಹೆಪ್ಪುಗಟ್ಟಿದ ಮಾಂಸ, ಅವಧಿ ಮುಗಿದ ಹಾಲು ಪತ್ತೆಯಾಗಿವೆ.
ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ಸೂಚನೆ ಮೇರೆಗೆ ಆರೋಗ್ಯ ಸುರಕ್ಷತಾ ವಿಭಾಗದ ಅಧಿಕಾರಿಗಳು ಬೆಂಗಳೂರಿನಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ. 30ಕ್ಕೂ ಹೆಚ್ಚು ಅಧಿಕಾರಿಗಳ ತಂಡ ನಗರದ ಪಂಚತಾರಾ ಹೋಟೆಲ್‌ಗಳಿಗೆ ತೆರಳಿ ಆಹಾರದ ಗುಣಮಟ್ಟ, ಅಡುಗೆ ಪ್ರಕ್ರಿಯೆ, ಸ್ವಚ್ಛತೆ ಹಾಗೂ ಆಹಾರ ಸಂಗ್ರಹಣಾ ವ್ಯವಸ್ಥೆಯನ್ನು ಪರಿಶೀಲಿಸಿದೆ.
ಶಾಂಗ್ರೀಲಾ ಹೋಟೆಲ್‌ನಲ್ಲಿ ಪರಿಶೀಲನೆ ನಡೆಸಿದ ಅಧಿಕಾರಿಗಳಿಗೆ ಅಡುಗೆ ಕೋಣೆಯಲ್ಲಿನ ಕೆಲ ಆಹಾರ ಪದಾರ್ಥಗಳ ಗುಣಮಟ್ಟದ ಬಗ್ಗೆ ಅನುಮಾನ ಮೂಡಿದೆ. ಪರಿಶೀಲನೆ ವೇಳೆ ಕಳಪೆ ಗುಣಮಟ್ಟದ ತರಕಾರಿಗಳು, ಕೊಳೆತ ಈರುಳ್ಳಿ ಹಾಗೂ ಆಲೂಗಡ್ಡೆ ಪತ್ತೆಯಾಗಿವೆ. ಅಧಿಕಾರಿಗಳು ಅವುಗಳ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.
ಇನ್ನು ಕೆಲವು ಹೋಟೆಲ್‌ಗಳ ಮೇಲಿನ ದಾಳಿ ವೇಳೆ ಅಜಿನೊಮೋಟೊ ಸೇರಿದಂತೆ ಕೆಲವು ಹಾನಿಕಾರಕ ಅಂಶಗಳಿರುವ ಶಂಕಿತ ಪದಾರ್ಥಗಳು ಪತ್ತೆಯಾಗಿವೆ ಎನ್ನಲಾಗಿದೆ. ಅವುಗಳ ಮಾದರಿಯನ್ನೂ ಅಧಿಕಾರಿಗಳು ಸಂಗ್ರಹಿಸಿ ಲ್ಯಾಬ್ ಪರೀಕ್ಷೆಗೆ ಕಳುಹಿಸಿದ್ದಾರೆ. ಪರೀಕ್ಷಾ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
ಇದೇ ವೇಳೆ ಲಲಿತ್ ಅಶೋಕ್ ಹೋಟೆಲ್‌ಗೂ ಆರೋಗ್ಯಾಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. 10ಕ್ಕೂ ಹೆಚ್ಚು ಅಧಿಕಾರಿಗಳು ಅಡುಗೆ ಕೋಣೆ, ಆಹಾರ ಸಂಗ್ರಹಿಸುವ ಸ್ಥಳ ಹಾಗೂ ತಯಾರಿಸಲಾದ ಖಾದ್ಯಗಳನ್ನು ಪರಿಶೀಲಿಸಿದ್ದಾರೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಶಾಲಾ-ಕಾಲೇಜುಗಳ ಸುತ್ತಮುತ್ತ ಜಂಕ್ ಫುಡ್ ನಿಷೇಧ: ಉದ್ದೇಶವೇನು?
ಪಂಚತಾರಾ ಹೋಟೆಲ್‌ಗಳಲ್ಲೂ ಆಹಾರ ಸುರಕ್ಷತಾ ನಿಯಮಗಳ ಪಾಲನೆಯಾಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಈ ಕಾರ್ಯಾಚರಣೆ ನಡೆಸಲಾಗಿದೆ. ಲ್ಯಾಬ್ ಪರೀಕ್ಷೆಯ ವರದಿ ಬಳಿಕ ಆಹಾರ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಯಾವುದೇ ಉಲ್ಲಂಘನೆ ದೃಢಪಟ್ಟರೆ ನಿಯಮಾನುಸಾರ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:19 pm, Fri, 7 August 26