ಬೆಂಗಳೂರು ದರೋಡೆ: ಕಾನ್ಸ್​ಟೇಬಲ್​ ಸಸ್ಪೆಂಡ್​, ಇನ್ಮುಂದೆ ಇನ್ಸ್​ಪೆಕ್ಟರ್​ ಗಮನಕ್ಕೆ ತರದೆ ಕೇಸ್ ನಡೆಸುವಂತಿಲ್ಲ

ಬೆಂಗಳೂರಿನಲ್ಲಿ ನಡೆದ 7.11 ಕೋಟಿ ರೂ ದರೋಡೆ ಪ್ರಕರಣದ ಮಾಸ್ಟರ್‌ಮೈಂಡ್​ ಎನ್ನಲಾಗುತ್ತಿರುವ ಗೋವಿಂದಪುರ ಠಾಣೆಯ ಕಾನ್ಸ್‌ಟೇಬಲ್ ಅಣ್ಣಪ್ಪ ನಾಯ್ಕ್​​ನನ್ನು ಸಸ್ಪೆಂಡ್ ಮಾಡಲಾಗಿದೆ. ಸದ್ಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕಮಿನಷರ್​​ ಎಲ್ಲಾ ಪೊಲೀಸ್ ಠಾಣೆಗಳ ಪಿಎಸ್‌ಐ, ಎಎಸ್‌ಐ, ಹೆಡ್ ಕಾನ್ಸ್‌ಟೇಬಲ್‌ ಮತ್ತು ಕಾನ್ಸ್‌ಟೇಬಲ್‌ಗಳ ಚಟುವಟಿಕೆಗಳ ಮೇಲೆ ನಿಗಾವಹಿಸಲು ಸೂಚನೆ ನೀಡಿದ್ದಾರೆ.

ಬೆಂಗಳೂರು ದರೋಡೆ: ಕಾನ್ಸ್​ಟೇಬಲ್​ ಸಸ್ಪೆಂಡ್​, ಇನ್ಮುಂದೆ ಇನ್ಸ್​ಪೆಕ್ಟರ್​ ಗಮನಕ್ಕೆ ತರದೆ ಕೇಸ್ ನಡೆಸುವಂತಿಲ್ಲ
ಪೊಲೀಸ್​ ಕಾನ್ಸ್​ಟೇಬಲ್​ ಅಣ್ಣಪ್ಪ ನಾಯ್ಕ್
Edited By:

Updated on: Nov 23, 2025 | 7:25 PM

ಬೆಂಗಳೂರು, ನವೆಂಬರ್​ 23: ನಗರದಲ್ಲಿ ಹಾಡಹಗಲೇ ನಡೆದಿದ್ದ 7.11 ಕೋಟಿ ರೂ. ಹಣ ದರೋಡೆ ಪ್ರಕರಣವನ್ನು (Robbery Case) ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಕೇಸ್​ನಲ್ಲಿ ಭಾಗಿಯಾಗಿದ್ದ ಗೋವಿಂದಪುರ ಠಾಣೆ ಪೊಲೀಸ್​ ಕಾನ್ಸ್​ಟೇಬಲ್​ ಅಣ್ಣಪ್ಪ ನಾಯ್ಕ್​​ ಅನ್ನು ಸಸ್ಪೆಂಡ್​ (suspend) ಮಾಡಿ ಪೂರ್ವ ವಿಭಾಗದ ಡಿಸಿಪಿ ಬಿ.ದೇವರಾಜ್​ರಿಂದ ಆದೇಶ ಹೊರಡಿಸಲಾಗಿದೆ. ಇನ್ನು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಬೆಂಗಳೂರು ಕಮಿನಷರ್​ ಸೀಮಂತ್​ ಕುಮಾರ್, ಆಯಾ ಠಾಣೆಗಳಲ್ಲಿ ಎಲ್ಲರನ್ನ ಖುದ್ದು ವಿಚಾರಣೆ ಮಾಡಿ ರಿಪೋರ್ಟ್​ ನೀಡುವಂತೆ ಆಯಾ ವಿಭಾಗದ ಡಿಸಿಪಿ ಮತ್ತು ಎಸಿಪಿಗಳಿಗೆ ಸೂಚಿಸಿದ್ದಾರೆ.

ಹಾಡಹಗಲೇ ಹಣ ಲೂಟಿ ಹೊಡೆಯಲು ಗೋವಿಂದಪುರ ಠಾಣೆ ಪೊಲೀಸ್ ಕಾನ್ಸ್​ಟೇಬಲ್ ಅಣ್ಣಪ್ಪ ಸಾಥ್ ನೀಡಿದ್ದ. ಈ ಅಣ್ಣಪ್ಪ ನಾಯ್ಕ್ ಇಡೀ ದರೋಡೆಯ ಮಾಸ್ಟರ್‌ಮೈಂಡ್ ಎನ್ನಲಾಗಿದೆ. ಇತನೇ ಹುಡುಗರನ್ನ ದರೋಡೆಗೆ ಸಿದ್ಧಪಡಿಸಿದ್ದ ಎಂಬ ವಿಚಾರವು ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿತ್ತು.

ಇದನ್ನೂ ಓದಿ: ಬೆಂಗಳೂರಿನಲ್ಲಿ 7 ಕೋಟಿ ರೂ. ದರೋಡೆ: 5.56 ಕೋಟಿ ಸಿಕ್ಕಿದ್ದೆಲ್ಲಿ? ಖದೀಮರ ಖರ್ತಾನಕ್ ಹೆಜ್ಜೆ ಗುರುತು ಬಯಲು

ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಬೀಟ್ ಸಿಬ್ಬಂದಿಯಾಗಿ ಅಣ್ಣಪ್ಪ ನಾಯ್ಕ್ ಕೆಲಸ ಮಾಡುತ್ತಿದ್ದ. ಈ ಹಿಂದೆ ಕ್ರೈಂ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಅಣ್ಣಪ್ಪನನ್ನು ಅಲ್ಲಿಂದ ತೆಗೆದು ಬೀಟ್ ಡ್ಯೂಟಿಗೆ ಹಾಕಲಾಗಿತ್ತು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾನತು ಮಾಡಲಾಗಿದೆ.

ಅಧಿಕಾರಿಗಳಿಗೆ ಖಡಕ್​ ​ಸೂಚನೆ ನೀಡಿದ ಕಮಿನಷರ್​ ಸೀಮಂತ್​ ಕುಮಾರ್​

ಇನ್ನು ಸಿದ್ದಾಪುರ ಠಾಣಾ ವ್ಯಾಪ್ತಿಯಲ್ಲಿ ನಡೆದ ದರೋಡೆ ಕೇಸ್​ನಲ್ಲಿ ಕಾನ್ಸ್​ಟೇಬಲ್​​ ಭಾಗಿ ಹಿನ್ನೆಲೆ ಬೆಂಗಳೂರು ಕಮಿನಷರ್​ ಸೀಮಂತ್​ ಕುಮಾರ್​ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಬೆನ್ನಲ್ಲೇ ಎಲ್ಲಾ ಠಾಣೆಯ ಪಿಎಸ್​ಐ, ಎಎಸ್ ಐ, ಹೆಡ್ ಕಾನ್ಸ್​ಟೇಬಲ್ ಹಾಗೂ ಕಾನ್ಸ್​ಟೇಬಲ್​​​ಗಳ ಮಾನಿಟರಿಂಗ್​​​ಗೆ ಸೂಚಿಸಿದ್ದಾರೆ.

ಇದನ್ನೂ ಓದಿ: Bengaluru: ಖಾಕಿ ತನಿಖೆ ವೇಳೆ ಬಯಲಾಯ್ತು 7.11 ಕೋಟಿ ಹಣ ದರೋಡೆಯ ಗುಟ್ಟು!

ಇತ್ತೀಚೆಗೆ ಇಂದಿರಾನಗರ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ಕಾನ್ಸ್​ಟೇಬಲ್​​ಗಳಿಂದ ಸುಲಿಗೆ ಮಾಡಲಾಗಿದೆ. ಇದೀಗ ದರೋಡೆ ಕೇಸ್​ನಲ್ಲೂ ಕಾನ್ಸ್​ಟೇಬಲ್ ಭಾಗಿ ಆಗಿದ್ದಾನೆ. ಕಿಡ್ನಾಪ್, ಬೆದರಿಕೆ ಸೇರಿದಂತೆ ಕೆಲ ಪ್ರಕರಣಗಳಲ್ಲಿ ಕೆಳ ಹಂತದ ಸಿಬ್ಬಂದಿಗಳೆ ಭಾಗಿ ಆಗುತ್ತಿದ್ದು, ಹೀಗಾಗಿ ಕೆಳಹಂತದ ಸಿಬ್ಬಂದಿ ಮೇಲೆ ನಿಗಾವಹಿಸದ ಇನ್ಸ್​ಪೆಕ್ಟರ್​ಗಳಿಗೆ ಕಮಿಷನರ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಇನ್ಸ್​ಪೆಕ್ಟರ್​ಗಳ ಗಮನಕ್ಕೆ ತರದೆ ಸಿಬ್ಬಂದಿ ಯಾವ ಕೇಸ್​ಗಳನ್ನ ನಡೆಸುವಂತಿಲ್ಲ ಎಂದು ಸೂಚನೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಶಿವಪ್ರಸಾದ್​ ಬಿ.

2015 ರಲ್ಲಿ ಸಮಯ ವಾಹಿನಿ ಮೂಲಕ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವರದಿಗಾರನಾಗಿ ವೃತ್ತಿ ಆರಂಭಿಸಿದೆ. ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಹಿರಿಯ ಕ್ರೈಮ್ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ . ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿಗಳನ್ನು ಮಾಡುತ್ತಿದ್ದೇನೆ. ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನವನಾಗಿದ್ದು, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂಎಸ್ (ಕಮ್ಯೂನಿಕೇಷನ್) ಸ್ನಾತಕೋತ್ತರ ಪದವಿ ಹಾಗೂ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಕಾನೂನು ಪದವೀಧರನಾಗಿದ್ದೇನೆ.

Read More
Loading...
Unable to load recommendations.
Follow Us