
ಬೆಂಗಳೂರು, ಸೆಪ್ಟೆಂಬರ್ 18: ಹಣಕ್ಕಾಗಿ 13 ವರ್ಷದ ಬಾಲಕ ಪ್ರಜ್ವಲ್ನನ್ನ ಕಿಡ್ನ್ಯಾಪ್ ಮಾಡಿ ಬರ್ಬರವಾಗಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಓರ್ವ ಆರೋಪಿ ಭಾಸ್ಕರ್ ರೆಡ್ಡಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ತನಿಖೆ ವೇಳೆ ಹಲವು ವಿಚಾರಗಳನ್ನು ಬಾಯಿಬಿಟ್ಟಿದ್ದಾನೆ. ಕೊಲೆ ಅಂತ ಕೇಸ್ ದಾಖಲಾಗಿದೆ. ಇನ್ನು ಈಶಾನ್ಯ ವಿಭಾಗದ ಡಿಸಿಪಿ ಮಿಥುನ್ ಕುಮಾರ್ ಘಟನೆಯನ್ನ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿಪಿ ಮಿಥುನ್ ಕುಮಾರ್, ‘ಏರ್‌ಪೋರ್ಟ್ ರಸ್ತೆಯಲ್ಲಿ ಕಿಯಾ ಕಾರೊಂದು ನಿಂತಿದ್ದ ಎರಡು ಕಾರುಗಳಿಗೆ ಡಿಕ್ಕಿ ಹೊಡೆದಿತ್ತು. ಸ್ಥಳಕ್ಕೆ ತೆರಳಿದ ಪೊಲೀಸರು ಕಾರನ್ನು ಪರಿಶೀಲಿಸಿದಾಗ ಒಳಗೆ ಬಾಲಕನ ಮೃತದೇಹ ಪತ್ತೆಯಾಗಿದೆ. ಈ ವೇಳೆ ಚಾಲಕನನ್ನು ವಿಚಾರಿಸಿದಾಗ, ‘ರಸ್ತೆಯಲ್ಲಿ ಬರುವಾಗ ಆಕ್ಸಿಡೆಂಟ್ ಆಗಿತ್ತು, ಶವ ವಿಲೇವಾರಿ ಮಾಡಲು ತೆಗೆದುಕೊಂಡು ಹೋಗುತ್ತಿದ್ದೇನೆ ಎಂದು ಹೇಳಿದ್ದ. ಆದರೆ ಅನುಮಾನ ಹಿನ್ನೆಲೆ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದಾಗ ಭೀಕರ ಕೃತ್ಯ ಬಯಲಾಗಿದೆ’ ಎಂದಿದ್ದಾರೆ.
ಇದನ್ನೂ ಓದಿ: ಹಣಕ್ಕಾಗಿ 13 ವರ್ಷದ ಬಾಲಕನ ಕಿಡ್ನ್ಯಾಪ್ ಮಾಡಿ ಕೊಲೆ: ಕಾರಿನ ಡಿಕ್ಕಿಯಲ್ಲಿ ಶವಕಂಡು ಪೊಲೀಸರಿಗೇ ಶಾಕ್!
‘ಕೊಲೆ ಆರೋಪಿ ಭಾಸ್ಕರ್ ಮೂಲತಃ ಆಂಧ್ರಪ್ರದೇಶದ ನೆಲ್ಲೂರು ಮೂಲದವನಾಗಿದ್ದು, ತಂದೆ, ತಾಯಿ ಮತ್ತು ಸಹೋದರನ ಜೊತೆ ವಾಸವಿದ್ದ. ಮೃತ ಬಾಲಕ ಪ್ರಜ್ವಲ್ ಹಾಗೂ ಆರೋಪಿ ಭಾಸ್ಕರ್ ಅಕ್ಕಪಕ್ಕದ ಮನೆಯವರಾಗಿದ್ದರು. ಬುಧವಾರ ಸಂಜೆ ಭಾಸ್ಕರ್ ತನ್ನ ಸ್ನೇಹಿತನ ಜೊತೆ ಕಾರಿನಲ್ಲಿ ಬಂದು ಪ್ರಜ್ವಲ್‌ನನ್ನು ಕರೆದುಕೊಂಡು ಹೋಗಿದ್ದ’ ಎಂದು ಅವರು ಹೇಳಿದರು.
‘ಬಾಲಕನನ್ನು ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಖಾಲಿ ಜಾಗಕ್ಕೆ ಕರೆದೊಯ್ದ ಆರೋಪಿಗಳು, ಅಲ್ಲಿ ನೀಲಗಿರಿ ಕಟ್ಟಿಗೆಯಿಂದ ಆತನ ತಲೆಗೆ ಹೊಡೆದಿದ್ದಾರೆ. ಬಳಿಕ ಕಾಂಪೌಂಡ್ ಪಕ್ಕದ ಗುಂಡಿಗೆ ತಳ್ಳಿ, ಎರಡು ಸಿಮೆಂಟ್ ಹಾಲೋಬ್ರಿಕ್ಸ್ ಕಲ್ಲುಗಳಿಂದ ಬಾಲಕನ ತಲೆ ಮತ್ತು ಎದೆ ಭಾಗಕ್ಕೆ ಹೊಡೆದು ಸಾಯಿಸಿದ್ದಾರೆ. ಪ್ರಜ್ವಲ್ ಮೃತಪಟ್ಟ ನಂತರ ಶವವನ್ನು ಹಳೆಯ ಬಟ್ಟೆಯಲ್ಲಿ ಸುತ್ತಿ ಕಾರಿನ ಡಿಕ್ಕಿಯಲ್ಲಿ ಹಾಕಿದ್ದಾರೆ’ ಎಂದರು.
‘ಶವದೊಂದಿಗೆ ಹೊಸಹಳ್ಳಿ ಮುಖಾಂತರ ಆಂಧ್ರಪ್ರದೇಶಕ್ಕೆ ತೆರಳಲು ಆರೋಪಿಗಳು ಮುಂದಾಗಿದ್ದಾರೆ. ಆದರೆ ಮಾರ್ಗಮಧ್ಯೆ ಹೊಸಹಳ್ಳಿಯಲ್ಲಿ ಕಾರು ಲೈಟ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ನಂತರ ಅಲ್ಲಿಂದ ಬಳ್ಳಾರಿ ರಸ್ತೆಯ ಮಹಾವೀರ ಅಪಾರ್ಟ್‌ಮೆಂಟ್ ಬಳಿ ಬಂದಾಗ, ರಸ್ತೆಯಲ್ಲಿ ನಿಂತಿದ್ದ ಕಾರುಗಳಿಗೆ ಡಿಕ್ಕಿ ಹೊಡೆದು ಸಿಕ್ಕಿಬಿದ್ದಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.
‘ಇನ್ನು ಪ್ರಕರಣದಲ್ಲಿ ಸದ್ಯ ಒಬ್ಬ ಆರೋಪಿ ಸಿಕ್ಕಿಬಿದ್ದಿದ್ದು, ಕೃತ್ಯದಲ್ಲಿ ಭಾಗಿಯಾಗಿದ್ದ ಇನ್ನೊಬ್ಬ ಆರೋಪಿ ನಾಪತ್ತೆಯಾಗಿದ್ದಾನೆ. ಆತನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಕೊಲೆಗೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ಮುಂದುವರಿದಿದೆ’ ಎಂದು ಡಿಸಿಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.