
ಬೆಂಗಳೂರು, ಆಗಸ್ಟ್ 26: ಪಂಚತಾರಾ ಹೋಟೆಲ್, ಪಬ್, ಇಂದಿರಾ ಕ್ಯಾಂಟೀನ್ ಬಳಿಕ ಇದೀಗ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆಯ ಅಧಿಕಾರಿಗಳು (Food Safety Raids) ಜಿಬಿಎ ವ್ಯಾಪ್ತಿಯ ಪ್ರಮುಖ ಪ್ರತಿಷ್ಠಿತ ಕ್ಲಬ್‌ಗಳ (Clubs) ಮೇಲೆ ದಾಳಿ ಮಾಡಿ ಪರಿಶೀಲನೆ ಮಾಡಿದ್ದಾರೆ. ಕ್ಲಬ್‌ಗಳ ಅಡುಗೆಮನೆಗಳಲ್ಲಿ ಆಹಾರ ಸುರಕ್ಷತೆ ಮತ್ತು ನೈರ್ಮಲ್ಯವನ್ನು ಸಂಪೂರ್ಣವಾಗಿ ಗಾಳಿಗೆ ತೂರಲಾಗಿದ್ದು, ಬಹುತೇಕ ಕಡೆಗಳಲ್ಲಿ ಜಿರಳೆಗಳ ಕಾಟ ಮತ್ತು ಅಸ್ವಚ್ಛತೆ ಪತ್ತೆಯಾಗಿದೆ. ಆ ಮೂಲಕ ಸದಸ್ಯತ್ವ ಪಡೆಯಲು 2 ಲಕ್ಷದಿಂದ ಬರೋಬ್ಬರಿ 25 ಲಕ್ಷದವರೆಗೂ ಶುಲ್ಕ ವಸೂಲಿ ಮಾಡುವ ರಾಜಧಾನಿಯ ಹೈಫೈ ಕ್ಲಬ್‌ಗಳ ಅಸಲಿ ಬಣ್ಣ ಬಯಲಾಗಿದೆ.
ಸೆಂಚುರಿ ಕ್ಲಬ್, ಕೆಎಸ್‌ಸಿಎ (KSCA) ಕ್ಲಬ್, ಬೌರಿಂಗ್ ಕ್ಲಬ್, ಕ್ಯಾಥೊಲಿಕ್ ಕ್ಲಬ್, ಟೆನ್ನಿಸ್ ಕ್ಲಬ್, ವಿಜಯನಗರ ಕ್ಲಬ್, ಮಹಾಲಕ್ಷ್ಮಿ ಲೇಔಟ್ ಕ್ಲಬ್ ಹಾಗೂ ಮಲ್ಲೇಶ್ವರಂ ಕ್ಲಬ್‌ಗಳಲ್ಲಿ ಅಧಿಕಾರಿಗಳು ತಪಾಸಣೆ ಮಾಡಿದರು. ಈ ಕ್ಲಬ್‌ಗಳಲ್ಲಿ ದಕ್ಷಿಣ ಭಾರತ, ಉತ್ತರ ಭಾರತದ ಚಿಕನ್ ತಂದೂರಿ, ಫಿಶ್ ತವಾ ಫ್ರೈ, ಪನೀರ್ ಟಿಕ್ಕಾ, ಬಿರಿಯಾನಿ ಸೇರಿದಂತೆ ವಿವಿಧ ಬಗೆಯ ಸಸ್ಯಾಹಾರಿ ಮತ್ತು ಮಾಂಸಾಹಾರಿ ಭಕ್ಷ್ಯಗಳನ್ನು ತಯಾರಿಸಲಾಗುತ್ತಿತ್ತು. ದಾಳಿ ವೇಳೆ ಅಡುಗೆ ಮನೆಯ ಸ್ವಚ್ಛತೆ, ಸಿಬ್ಬಂದಿಯ ವೈಯಕ್ತಿಕ ನೈರ್ಮಲ್ಯ, ಡ್ರೈನೇಜ್, ಹಾಟ್ ವಾಟರ್ ವ್ಯವಸ್ಥೆ, ಫ್ರೋಜನ್ ಸ್ಟೋರೇಜ್ ಮತ್ತು ಎಣ್ಣೆಯ ಗುಣಮಟ್ಟವನ್ನು ತಪಾಸಣೆ ಮಾಡಲಾಗಿದೆ.
ಅತ್ಯಂತ ಜನಪ್ರಿಯ ಕೆಎಸ್‌ಸಿಎ ಕ್ಲಬ್‌ನಲ್ಲಿ ಆಹಾರ ಸುರಕ್ಷತಾ ನಿಯಮಗಳ ಭಾರೀ ಉಲ್ಲಂಘನೆ ಪತ್ತೆಯಾಗಿದೆ. ಆಹಾರ ಸಿದ್ಧಪಡಿಸುವ ಸಿಬ್ಬಂದಿ ವೈಯಕ್ತಿಕ ನೈರ್ಮಲ್ಯದ ಕೊರತೆ ಕಂಡುಬಂದಿದ್ದು, ಆಹಾರ ಕತ್ತರಿಸಲು ನಿಷೇಧಿತ ಪ್ಲಾಸ್ಟಿಕ್ ಕಟಿಂಗ್ ಬೋರ್ಡ್ ಬಳಸುತ್ತಿದ್ದರು. ಡ್ರೈನೇಜ್ ಬ್ಲಾಕ್ ಆಗಿದ್ದು, ಫ್ರೋಜನ್ ಸ್ಟೋರೇಜ್ ಪ್ರದೇಶ ತೀವ್ರ ಅಸ್ವಚ್ಛತೆಯಿಂದ ಕೂಡಿತ್ತು.
ಇದನ್ನೂ ಓದಿ: ಸಿಬ್ಬಂದಿ ಕೊರತೆ ನಡುವೆಯೂ ಕಳಪೆ ಆಹಾರ ವಿರುದ್ಧ ಸಮರ ಸಾರಿರುವ ಆಹಾರ ಸುರಕ್ಷತಾ ಇಲಾಖೆ ಮೇಲೆ ಈಗ ಜನರಿಗೂ ಸಿಟ್ಟು! ಯಾಕೆ ಗೊತ್ತೇ?
ಸಸ್ಯಾಹಾರಿ ಮತ್ತು ಮಾಂಸಾಹಾರಿ ಪದಾರ್ಥಗಳನ್ನು ಪ್ರತ್ಯೇಕವಾಗಿ ಇಡದೆ ಒಟ್ಟಿಗೆ ಸಂಗ್ರಹಿಸಲಾಗಿತ್ತು. ಜೊತೆಗೆ ‘ಕೆ ಶಕ್ತಿ’ ತೊಗರಿಬೇಳೆ ಹಾಗೂ ತಿಲಾಪಿಯಾ ಮೀನಿನ ಪ್ಯಾಕೆಟ್‌ಗಳ ಮೇಲೆ ಪ್ಯಾಕಿಂಗ್ ದಿನಾಂಕ, ಬ್ಯಾಚ್ ನಂಬರ್, ಎಂಆರ್‌ಪಿಯಂತಹ ಕಡ್ಡಾಯ ಲೇಬಲ್ ವಿವರಗಳೇ ಇರಲಿಲ್ಲ. ಪಾತ್ರೆ ತೊಳೆಯುವ ಸ್ಥಳದಲ್ಲಿ ಬಿಸಿನೀರಿನ ವ್ಯವಸ್ಥೆಯೂ ಇರಲಿಲ್ಲ.
ತಪಾಸಣೆ ವೇಳೆ ಬೌರಿಂಗ್ ಕ್ಲಬ್, ಸೆಂಚುರಿ ಕ್ಲಬ್ ಹಾಗೂ ಮಲ್ಲೇಶ್ವರಂ ಕ್ಲಬ್‌ಗಳ ಆಹಾರ ಸಂಗ್ರಹಣಾ ಸ್ಥಳಗಳಲ್ಲಿ ಸ್ವಚ್ಛತೆಯ ಕೊರತೆಯ ಜೊತೆಗೆ ಜಿರಳೆಗಳ ಕಾಟ ಇರುವುದು ಕಂಡುಬಂದಿದೆ. ಕ್ಯಾಥೊಲಿಕ್ ಕ್ಲಬ್‌ನಲ್ಲಿ ಆಹಾರ ತಯಾರಿ ಮತ್ತು ಪಾತ್ರೆ ತೊಳೆಯುವ ಜಾಗದಲ್ಲಿ ನಿಯಮ ಉಲ್ಲಂಘನೆಯಾಗಿದ್ದರೆ, ಟೆನ್ನಿಸ್ ಕ್ಲಬ್‌ನಲ್ಲಿ ಸಿಬ್ಬಂದಿಯ ವೈದ್ಯಕೀಯ ಪ್ರಮಾಣಪತ್ರದ ದಾಖಲೆಗಳೇ ಇರಲಿಲ್ಲ. ಇನ್ನು ವಿಜಯನಗರ ಹಾಗೂ ಮಹಾಲಕ್ಷ್ಮಿ ಲೇಔಟ್ ಕ್ಲಬ್‌ಗಳಲ್ಲೂ ಆಹಾರ ಸಂಗ್ರಹಣೆ ಹಾಗೂ ತಯಾರಿಕೆಯಲ್ಲಿ ಗಂಭೀರ ಲೋಪಗಳು ಪತ್ತೆಯಾಗಿವೆ. ಸದ್ಯ ಲೋಪ ಎಸಗಿರುವ ಕ್ಲಬ್‌ಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಆಹಾರ ಇಲಾಖೆ ಮುಂದಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.