ಅತ್ತ ವೋಟಿಂಗ್ ಡಿಲೀಟ್, ಇತ್ತ ಬದುಕಿರುವವರನ್ನೇ ಸಾಯಿಸಿ ರೇಷನ್ ಕಾರ್ಡ್ ರದ್ದು
ಕರ್ನಾಟಕದಲ್ಲಿ ಸದ್ಯ ಎಸ್ಐಆರ್ ಹಾಗೂ ಫಾರ್ಮ್-7 ವಿಚಾರ ರಾಜಕೀಯ ಚರ್ಚೆಯ ಪ್ರಮುಖ ವಿಷಯವಾಗಿದೆ. ಅಲ್ಪಸಂಖ್ಯಾತರ ಹಾಗೂ ದಲಿತರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲು ಫಾರ್ಮ್-7 ದುರ್ಬಳಕೆಯಾಗುತ್ತಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ಇನ್ನೊಂದೆಡೆ ಬದುಕ್ಕಿದ್ದವರನ್ನೂ ಸಾಯಿಸಿ ಅವರ ರೇಷನ್ ಕಾರ್ಡ್ಗಳನ್ನು ರದ್ದುಗೊಳಿಸಲಾಗುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ.

ಬೆಂಗಳೂರು/ಮಂಡ್ಯ, (ಅಕ್ಟೋಬರ್ 07): ಫಾರ್ಮ್ 7 ದುರುಪಯೋ ಆಗಿದೆ, ಕಾಂಗ್ರೆಸ್ ಬೆಂಬಲಿಸುವವರ, ಅಲ್ಪ ಸಂಖ್ಯಾತ ಮತಗಳನ್ನೇ ಟಾರ್ಗೆಟ್ ಮಾಡಲು ಎಸ್ಐಆರ್ ಅನ್ನು ಬಿಜೆಪಿ ಬಳಸಿದೆ. ಅದರಲ್ಲೂ ಮುಖ್ಯವಾಗಿ ಅಲ್ಪಸಂಖ್ಯಾತರ ಹಾಗೂ ದಲಿತರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಡಿಲೀಟ್ ಮಾಡಿಸಲಾಗುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಏತನ್ಮಧ್ಯೆ, ಕರ್ನಾಟಕದಲ್ಲಿ ಸದ್ದಿಲ್ಲದೇ ರೇಷನ್ ಕಾರ್ಡ್ ರದ್ದಾಗುತ್ತಿವೆ. ಕಾರ್ಡ್ ಹೋಲ್ಡರ್ ಬದುಕಿದ್ದರೂ ಸಹ ಸಾವನ್ನಪ್ಪಿದ್ದಾರೆ ಎಂದು ಪಡಿತರ ಚೀಟಿಗಳನ್ನು ಕ್ಯಾನ್ಸಲ್ ಮಾಡಲಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ಮಂಡ್ಯದಲ್ಲಿ ಎರಡು ಪ್ರಕರಣಗಳು ಬೆಳಕಿಗೆ ಬಂದಿವೆ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಹಾರುವಳ್ಳಿ ಗ್ರಾಮದ ಗಿರಿಯಮ್ಮ ಹಾಗೂ ಮಂಡ್ಯದ ಗುತ್ತಲು ಬಡಾವಣೆಯ ನಿವಾಸಿ ಶಫಿಉಲ್ಲಾಖಾನ್ ರೇಷನ್ ಕಾರ್ಡ್ ಗೆ ಹೆಬ್ಬೆಟ್ಟು ಕೊಡಲು ಹೋಗಿದ್ದಾಗ ಮೃತಪಟ್ಟಿದ್ದಾರೆ ಎಂದು ತೋರಿಸಿದೆ. ಜೀವಂತವಾಗಿದ್ದರೂ ಸರ್ಕಾರಿ ದಾಖಲೆಗಳಲ್ಲಿ ಸಾಯಿಸಿ ರೇಷನ್ ಕಾರ್ಡ್ ರದ್ದುಗೊಳಿಸಲಾಗಿದೆ. ಇದಕ್ಕೆ ಹೊಣೆ ಯಾರು? ಎನ್ನುವುದು ಪ್ರಶ್ನೆಯಾಗಿದೆ.
ರೇಷನ್ ಕಾರ್ಡ್ಗಾಗಿ ಅಜ್ಜಿ ಪರದಾಟ
ಗಿರಿಯಮ್ಮ ಆ.06ರಂದು ರೇಷನ್ ಕಾರ್ಡ್ ಗೆ ಹೆಬ್ಬೆಟ್ಟು ಕೊಡಲು ಪಾಂಡವಪುರಕ್ಕೆ ಹೋಗಿದ್ದ ವೇಳೆ ನೀನು ಸತ್ತೋಗಿದ್ದೀಯಾ ಹೋಗಮ್ಮ ಎಂದು ಹೇಳಿ ಕಳುಹಿಸಲಾಗಿದೆ. ಒಂದು ವಾರದಿಂದ ಇದನ್ನು ಸರಿಪಡಿಸಿ ಅಂತ ಕಚೇರಿ ಅಲೆದಿದ್ದಾರೆ. ಆದ್ರೆ ಯಾರು ಕಷ್ಟ ಕೇಳಿಲ್ಲ. ಇದರಿಂದ ಆಕ್ರೋಶಗೊಂಡ ಮಹಿಳೆ, ಊಟ ಇಲ್ಲ ಹಸಿವಿನಿಂದ ಓಡಾಡುತ್ತಿದ್ದೇನೆ ಎಂದು ಯಾರು ಮೂಸಿ ನೋಡುತ್ತಿಲ್ಲ ಎಂದು ಅಧಿಕಾರಿಗಳ ವಿರುದ್ಧ ಕೆಂಡಾಮಂಡಲರಾಗಿ ಕೂಗಾಡಿದ್ದಾರೆ. ಕೊನೆಗೆ ವೃದ್ದೆಯ ರೇಷನ್ ಕಾರ್ಡ್ ಸಮಸ್ಯೆ ಬಗೆಹರಿಸಲು ಮುಂದಾದ ತಾಲೂಕು ಆಡಳಿತ ಮುಂದಾಗಿದೆ.
ಇದನ್ನೂ ಓದಿ: ಬದುಕಿದ್ದಾಗಲೇ ವ್ಯಕ್ತಿಗೆ ಮರಣ ಪ್ರಮಾಣ ಪತ್ರ: ಅಧಿಕಾರಿಗಳ ಎಡವಟ್ಟಿಗೆ ರೇಷನ್, ಬ್ಯಾಂಕ್ ಖಾತೆ ಕಳೆದುಕೊಂಡು ವ್ಯಕ್ತಿ ಪರದಾಟ!
ಬದುಕಿದವರನ್ನೇ ಸಾಯಿಸಿದ್ರು
ಇನ್ನು ಈ ರೀತಿಯ ಸಮಸ್ಯೆ ಎದುರಿಸುತ್ತಿರುವವರು ಮಂಡ್ಯದ ಗುತ್ತಲು ಬಡಾವಣೆಯ ನಿವಾಸಿ ಶಫಿಉಲ್ಲಾಖಾನ್. ಕಳೆದ ಮೂರು ತಿಂಗಳಿಂದ ಇವರಿಗೆ ಸಿಗಬೇಕಿದ್ದ ಪಡಿತರ ಕಾರ್ಡ್‌ನ ರೇಷನ್ (Ration Card) ಬಂದ್ ಆಗಿದೆ. ರೇಷನ್ ಕಾರ್ಡ್‌ನಲ್ಲಿ ಏನಾಗಿದೆ ಎಂದು ಪರಿಶೀಲನೆ ಮಾಡಲು ಹೋದ ಶಫಿಉಲ್ಲಾಖಾನ್ ಅವರಿಗೆ ದೊಡ್ಡ ಶಾಕ್ ಎದುರಾಗಿತ್ತು. ಅಧಿಕಾರಿಗಳು ಇವರನ್ನು 2024ರಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ನಮೂದಿಸಿ, ಅಧಿಕೃತ ಮರಣ ಪ್ರಮಾಣಪತ್ರವನ್ನೇ ಸೃಷ್ಟಿಸಿಬಿಟ್ಟಿದ್ದಾರೆ. ಬದುಕಿರುವ ಇವರಿಗೆ ಡೆತ್ ಸರ್ಟಿಫಿಕೇಟ್ ಸಿಕ್ಕಿದ್ದನ್ನು ಕಂಡು ಇಡೀ ಕುಟುಂಬವೇ ಬೆಚ್ಚಿಬಿದ್ದಿದೆ. ಕೂಡಲೇ ನಗರಸಭೆಗೆ ತೆರಳಿ ವಿಚಾರಣೆ ನಡೆಸಿದ್ದಾರೆ. ಅಲ್ಲಿ ಅವರಿಗೆ ಆಘಾತಕಾರಿ ಸಂಗತಿ ಎದುರಾಗಿದೆ. ನಗರಸಭೆ ಅಧಿಕಾರಿಗಳು ನೀವು 2024ರಲ್ಲಿಯೇ ಸಾವನ್ನಪ್ಪಿದ್ದೀರಿ ಎಂದು ಅದೇ ಡೆತ್ ಸರ್ಟಿಫಿಕೇಟ್ ಅನ್ನು ಕೈಗೆ ಇಟ್ಟಿದ್ದಾರೆ.
ಹೀಗೆ ಏಕಾಏಕಿ ಅದರಲ್ಲೂ ಬಿಪಿಎಲ್ ಕಾರ್ಡುದಾರರು ಸಾವನ್ನಪ್ಪಿದ್ದಾರೆ ಎಂದು ಪಡಿತರ ಚೀಟಿಗಳು ಡಿಲೀಟ್ ಆಗುತ್ತಿವೆ. ಹೀಗೆ ಹಲವು ರೀತಿಯಾಗಿ ಬಹಳಷ್ಟು ಜನರು ರೇಷನ್ ಕಾರ್ಡ್ ಸಮಸ್ಯೆ ಎದುರಿಸುತ್ತಿದ್ದಾರೆ. ಹಾಗಾದ್ರೆ, ಇದಕ್ಕೆಲ್ಲ ಹೊಣೆ ಯಾರು? ಈ ರೀತಿಯಾಗಿ ಯಾರು ಮಾಡುತ್ತಿದ್ದಾರೆ? ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ ನೆಪದಲ್ಲಿ ಈ ರೀತಿ ಮಾಡಲಾಗುತ್ತಿದೆಯೇ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.
ಇನ್ನು ಎಸ್ಐಆರ್ ನಲ್ಲಿ ಆಡಳಿರೂಢ ಪಕ್ಷ ಹೇಗೆ ಜಾಗೃತಿ ವಹಿಸಿದೆಯೋ ಹಾಗೇ ಈ ರೇಷನ್ ಕಾರ್ಡ್ ವಿಚಾರದಲ್ಲೂ ಸಹ ಜನ ಸಾಮಾನ್ಯರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:38 pm, Wed, 7 October 26




