AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಹೃದಯ ಭಾಗದಲ್ಲೇ ಕಾರಾಗೃಹ ಇಲಾಖೆಯ 50 ಕೋಟಿ ರೂ. ಮೌಲ್ಯದ ಜಾಗ ಕಬ್ಜಾ: ಅಲೋಕ್ ಕುಮಾರ್ ಎಂಟ್ರಿ ಬೆನ್ನಲ್ಲೇ ಎಫ್‌ಐಆರ್

ಬೆಂಗಳೂರಿನ ಗಾಂಧಿನಗರದಲ್ಲಿರುವ ಕಾರಾಗೃಹ ಇಲಾಖೆಗೆ ಸೇರಿದ 50 ಕೋಟಿ ರೂ. ಮೌಲ್ಯದ 10 ಸಾವಿರ ಚದರ ಅಡಿ ಜಾಗವನ್ನು ಅಕ್ರಮವಾಗಿ ಕಬ್ಜಾ ಮಾಡಿದ್ದ ಕಲೀಂ ಮತ್ತು ಅನಿಲ್ ಎಂಬುವವರ ವಿರುದ್ಧ ಡಿಜಿಪಿ ಅಲೋಕ್ ಕುಮಾರ್ ಆದೇಶದ ಮೇರೆಗೆ ಉಪ್ಪಾರಪೇಟೆ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಬೆಂಗಳೂರು ಹೃದಯ ಭಾಗದಲ್ಲೇ ಕಾರಾಗೃಹ ಇಲಾಖೆಯ 50 ಕೋಟಿ ರೂ. ಮೌಲ್ಯದ ಜಾಗ ಕಬ್ಜಾ: ಅಲೋಕ್ ಕುಮಾರ್ ಎಂಟ್ರಿ ಬೆನ್ನಲ್ಲೇ ಎಫ್‌ಐಆರ್
ಗಾಂಧಿನಗರದಲ್ಲಿರುವ ಕಾರಾಗೃಹ ಇಲಾಖೆಯ ಜಾಗImage Credit source: tv9
ಪ್ರಜ್ವಲ್​ ಕುಮಾರ್ ಎನ್​ ವೈ
| Edited By: |

Updated on: May 30, 2026 | 7:56 AM

Share

ಬೆಂಗಳೂರು, ಮೇ 30: ರಾಜಧಾನಿ ಬೆಂಗಳೂರಿನಲ್ಲಿ (Bengaluru) ಭೂ ಮಾಫಿಯಾ ಕೈಚಳಕ ಎಷ್ಟರಮಟ್ಟಿಗೆ ಬೆಳೆದಿದೆ ಎಂದರೆ, ಸಾರ್ವಜನಿಕರು ತಪ್ಪು ಮಾಡಿದರೆ ಜೈಲಿಗೆ ಹಾಕುವ ಕಾರಾಗೃಹ ಇಲಾಖೆಗೆ (Prisons Department) ಸೇರಿದ ಜಾಗವನ್ನೇ ಖದೀಮರ ತಂಡವೊಂದು ಅತಿಕ್ರಮಣ ಮಾಡಿಕೊಂಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ನಗರದ ಹೃದಯಭಾಗವಾದ ಗಾಂಧಿನಗರದಲ್ಲಿರುವ ಕಾರಾಗೃಹ ಇಲಾಖೆಯ ಬರೋಬ್ಬರಿ 10,000 ಚದರ ಅಡಿ ವಿಸ್ತೀರ್ಣದ ಪ್ರೈಮ್ ಲೊಕೇಶನ್ ಜಾಗವನ್ನು ಕಬಳಿಸಲು ಯತ್ನಿಸಲಾಗಿದೆ. ಈ ಕೋಟ್ಯಂತರ ರೂಪಾಯಿ ಮೌಲ್ಯದ ಜಾಗವನ್ನು ಅತಿಕ್ರಮಣ ಮಾಡಿಕೊಂಡಿದ್ದ ಆರೋಪಿಗಳ ವಿರುದ್ಧ ಕಾರಾಗೃಹ ಇಲಾಖೆ ನೀಡಿದ ದೂರಿನನ್ವಯ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಈಗ ಅಧಿಕೃತವಾಗಿ ಎಫ್‌ಐಆರ್ (FIR) ದಾಖಲಾಗಿದೆ.

ಮುಖ್ಯಾಂಶಗಳು

  • ಮೈಸೂರು ಅರಸರು ಕಾರಾಗೃಹ ಇಲಾಖೆಗೆ ದಾನವಾಗಿ ನೀಡಿದ್ದ 40 ರಿಂದ 50 ಕೋಟಿ ರೂ. ಮೌಲ್ಯದ 10 ಸಾವಿರ ಚದರ ಅಡಿ ಜಾಗದ ಮೇಲೆ ಭೂಮಾಫಿಯಾ ಕಣ್ಣು.
  • ಕಳೆದ 20 ವರ್ಷಗಳಿಂದ ಪಾಳುಬಿದ್ದಿದ್ದ ಜಾಗವನ್ನು ಅಕ್ರಮವಾಗಿ ಸ್ವಾಧೀನಪಡಿಸಿಕೊಂಡು ಗುಜರಿ ಉದ್ಯಮ ನಡೆಸುತ್ತಿದ್ದ ಕಲೀಂ ಮತ್ತು ಅನಿಲ್ ಎಂಬ ಕಿಲಾಡಿಗಳು.
  • ಕಾರಾಗೃಹ ಇಲಾಖೆ ಡಿಜಿಪಿ ಅಲೋಕ್ ಕುಮಾರ್ ಕಟ್ಟುನಿಟ್ಟಿನ ಆದೇಶದ ಬೆನ್ನಲ್ಲೇ ಉಪ್ಪಾರಪೇಟೆ ಪೊಲೀಸರಿಂದ ಆರೋಪಿಗಳಿಗೆ ನೋಟಿಸ್ ಜಾರಿ.

ಮೈಸೂರು ಅರಸರು ನೀಡಿದ್ದ ಆಸ್ತಿ ಮೇಲೆ ಕಣ್ಣಿಟ್ಟ ಖದೀಮರು

ಗಾಂಧಿನಗರದ 2ನೇ ಕ್ರಾಸ್‌ನಲ್ಲಿರುವ ರಾಮಮಂದಿರದ ಎದುರು ಇರುವ ಈ ಜಾಗಕ್ಕೆ ಬರೋಬ್ಬರಿ 70 ರಿಂದ 80 ವರ್ಷಗಳ ಇತಿಹಾಸವಿದೆ. ಹಿಂದೆ ಮೈಸೂರು ಮಹಾರಾಜರು ಈ ಜಾಗವನ್ನು ಕಾರಾಗೃಹ ಇಲಾಖೆಗೆ ದಾನವಾಗಿ ನೀಡಿದ್ದರು. ಇಲಾಖೆಯು ಇಲ್ಲಿ ಕೆಲವು ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿ ಬಾಡಿಗೆಗೆ ನೀಡಿತ್ತು. ಆದರೆ, ಕಳೆದ 20 ವರ್ಷಗಳಿಂದ ಇಲಾಖೆಯ ಹಿರಿಯ ಅಧಿಕಾರಿಗಳು ಈ ಕಡೆ ಗಮನ ಹರಿಸದ ಕಾರಣ ಕಟ್ಟಡಗಳು ಹಳೆಯದಾಗಿ ಪಾಳು ಬಿದ್ದಿದ್ದವು. ಇದನ್ನೇ ಬಂಡವಾಳ ಮಾಡಿಕೊಂಡ ಕಲೀಂ ಮತ್ತು ಅನಿಲ್ ಎಂಬುವವರು ಜಾಗಕ್ಕೆ ಬೇಲಿ ಹಾಕಿ, ಗುಜರಿ ಸಾಮಗ್ರಿಗಳನ್ನು ಇಟ್ಟುಕೊಂಡು ಅಕ್ರಮವಾಗಿ ಕಬ್ಜಾ ಮಾಡಿಕೊಂಡಿದ್ದರು.

ಅಲೋಕ್ ಕುಮಾರ್ ಮಾಸ್ಟರ್ ಪ್ಲಾನ್​ನಿಂದ ಬಯಲಾದ ಅಕ್ರಮ!

ಇತ್ತೀಚೆಗೆ ಕಾರಾಗೃಹ ಇಲಾಖೆಯ ಮುಖ್ಯಸ್ಥರಾದ ಡಿಜಿಪಿ ಅಲೋಕ್ ಕುಮಾರ್ (DGP Alok Kumar) ಅವರ ಗಮನಕ್ಕೆ ಈ ಜಾಗದ ವಿಚಾರ ಬಂದಾಗ, ಅವರು ಸ್ಥಳ ಪರಿಶೀಲನೆ ನಡೆಸಿದ್ದರು. ಈ ಪ್ರೈಮ್ ಏರಿಯಾದಲ್ಲಿ ಇಲಾಖೆಯ ವತಿಯಿಂದ ಹೊಸ ಕಟ್ಟಡ ನಿರ್ಮಿಸಿ, ಜೈಲಿನ ಕೈದಿಗಳು ಸಿದ್ಧಪಡಿಸುವ ಬೇಕರಿ ತಿನಿಸುಗಳು ಹಾಗೂ ಬಟ್ಟೆಗಳ ಮಾರಾಟ ಮಳಿಗೆಯನ್ನು (Prison Outlet) ಆರಂಭಿಸಲು ಮಾಸ್ಟರ್ ಪ್ಲಾನ್ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಜಾಗ ಖಾಲಿ ಮಾಡುವಂತೆ ಅತಿಕ್ರಮಣದಾರರಿಗೆ ನೋಟಿಸ್ ನೀಡಲಾಗಿತ್ತಾದರೂ, ಅವರು ಜಾಗ ಖಾಲಿ ಮಾಡಲು ನಿರಾಕರಿಸಿದ್ದರು.

ಇದನ್ನೂ ಓದಿ: ಹಳದಿ ಮಾರ್ಗದಲ್ಲಿ ಮೆಟ್ರೋ ರೈಲುಗಳ ಕೊರತೆ ಹಿನ್ನೆಲೆ ನಿತ್ಯ ಪರದಾಟ: BMRCL ವಿರುದ್ಧ ಪ್ರಯಾಣಿಕರ ಆಕ್ರೋಶ

ಇದೀಗ ಕಠಿಣ ನಿಲುವು ತಳೆದಿರುವ ಇಲಾಖೆಯು ಉಪ್ಪಾರಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಇಬ್ಬರೂ ಆರೋಪಿಗಳಿಗೆ ತಕ್ಷಣ ಜಾಗ ಖಾಲಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದಾರೆ. ಸದ್ಯ ಮುನ್ನೆಚ್ಚರಿಕೆ ಕ್ರಮವಾಗಿ ಇಲಾಖೆಯು ಆ ಜಾಗದಲ್ಲಿ ‘ಇದು ಕಾರಾಗೃಹ ಇಲಾಖೆಗೆ ಸೇರಿದ ಸ್ವತ್ತು’ ಎಂದು ಬೋರ್ಡ್ ಅಳವಡಿಸಿ, ಇಬ್ಬರು ಸಶಸ್ತ್ರ ಭದ್ರತಾ ಸಿಬ್ಬಂದಿಯನ್ನು ಕಾವಲಿಗೆ ನಿಯೋಜಿಸಿದೆ. ಈ ಹಿಂದೆ ಮಲ್ಲೇಶ್ವರಂ ಮುಖ್ಯರಸ್ತೆಯಲ್ಲೂ ಪೊಲೀಸ್ ಇಲಾಖೆಯ ಒಂದು ಎಕರೆ ಜಾಗವನ್ನು ಕಬಳಿಸಲು ಯತ್ನಿಸಲಾಗಿತ್ತು. ರಕ್ಷಣೆ ನೀಡಬೇಕಾದ ಪೊಲೀಸ್ ಹಾಗೂ ಕಾರಾಗೃಹ ಇಲಾಖೆಯ ಆಸ್ತಿಗಳಿಗೇ ಈ ಪರಿಸ್ಥಿತಿ ಬಂದರೆ ಸಾಮಾನ್ಯ ಜನರ ಆಸ್ತಿಪಾಸ್ತಿಗಳ ಗತಿ ಏನು ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪ್ರಜ್ವಲ್​ ಕುಮಾರ್ ಎನ್​ ವೈ
ಪ್ರಜ್ವಲ್​ ಕುಮಾರ್ ಎನ್​ ವೈ