ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಯುವಕನ ಬರ್ಬರ ಕೊಲೆ; ಹತ್ಯೆಯಾದವನ ಮೇಲಿವೆ 10ಕ್ಕೂ ಹೆಚ್ಚು ಕೇಸ್ಗಳು!
ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ಭಾನುವಾರ ಮುಂಜಾನೆ ಆಟೋ ಚಾಲಕ ಕಿರಣ್ನನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಲೆ ಮಾಡಲಾಗಿದೆ. ಹಳೆಯ ದ್ವೇಷವೇ ಈ ಕೃತ್ಯಕ್ಕೆ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ. ಪೊಲೀಸರು ಆರೋಪಿಗಳ ಪತ್ತೆಗಾಗಿ ಸಿಸಿಟಿವಿ ಪರಿಶೀಲಿಸುತ್ತಿದ್ದು, ಕೊಲೆಗೆ ನಿಖರ ಕಾರಣವೇನೆಂಬುದು ಸಧ್ಯಕ್ಕೆ ತಿಳಿದುಬಂದಿಲ್ಲ.

ಬೆಂಗಳೂರು, ಮಾರ್ಚ್ 22: ನಗರದಲ್ಲಿ ಬೆಚ್ಚಿಬೀಳಿಸುವ ಘಟನೆ ನಡೆದಿದ್ದು, ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ಯುವಕನನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಬರ್ಬರವಾಗಿ ಕೊಲೆ (Murder) ಮಾಡಲಾಗಿದೆ. ಇಂದು (ಮಾ.22)ಮುಂಜಾನೆ ಸುಮಾರು 5 ಗಂಟೆ ಸುಮಾರಿಗೆ ಟಿ.ಸಿ.ಪಾಳ್ಯ ಮುಖ್ಯರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಕಿರಣ್ (25) ಎಂಬ ಯುವಕನನ್ನು ದುಷ್ಕರ್ಮಿಗಳು ತಲೆ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಹತ್ಯೆಗೈದು ಪರಾರಿಯಾಗಿದ್ದಾರೆ. ಸ್ಥಳಕ್ಕೆ ರಾಮಮೂರ್ತಿ ನಗರ ಪೊಲೀಸ್ ಠಾಣೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹಳೆಯ ದ್ವೇಷಕ್ಕೆ ನಡೀತಾ ಕೊಲೆ?
ಕುಡಿದು ಗಲಾಟೆ ಮಾಡಿದ ಪ್ರಕರಣಗಳು ಸೇರಿದಂತೆ ಕೊಲೆಯಾದ ಕಿರಣ್ ವಿರುದ್ಧ ಕೆ.ಆರ್ ಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸುಮಾರು 10ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು ಎಂಬ ಮಾಹಿತಿಯನ್ನು ಪೊಲೀಸರು ಬಿಚ್ಚಿಟ್ಟಿದ್ದು, ಹಳೆಯ ದ್ವೇಷವೇ ಕೊಲೆಗೆ ಕಾರಣವಾಗಿರಬಹುದು ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಘಟನೆಯ ಮುನ್ನರಾತ್ರಿ ಕೂಡ ಕಿರಣ್ ಕುಡಿದು ಗಲಾಟೆ ಮಾಡಿದ್ದು, ತಡರಾತ್ರಿವರೆಗೆ ವಾಗ್ವಾದ ನಡೆದ ಬಳಿಕ ಮುಂಜಾನೆ ಈ ದಾಳಿ ನಡೆದಿರುವ ಸಾಧ್ಯತೆಯಿದೆ ಎಂದು ಪೊಲಿಸರು ಹೇಳಿದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸರು ತೀವ್ರ ಶೋಧ ಕಾರ್ಯ ಕೈಗೊಂಡಿದ್ದು, ಸುತ್ತಮುತ್ತಲಿನ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.
ಸ್ಥಳೀಯ ನಿವಾಸಿ ಗೋಪಾಲ್ ಮಾತನಾಡಿ, ಕಿರಣ್ ತನ್ನ ತಾಯಿಯೊಂದಿಗೆ ಕಳೆದ ನಾಲ್ಕು ವರ್ಷಗಳಿಂದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಆಟೋ ಚಾಲನೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಎಂದು ತಿಳಿಸಿದ್ದಾರೆ. ಒಟ್ಟಾರೆ, ಈ ಕೊಲೆ ಪ್ರಕರಣ ನಗರದಲ್ಲಿ ಆತಂಕ ಮೂಡಿಸಿದ್ದು, ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಚುರುಕುಗೊಂಡಿದ್ದಾರೆ.
ಇದನ್ನೂ ಓದಿ ಮೂಡಬಿದ್ರೆ ಇನ್ಸ್ಪೆಕ್ಟರ್ ಕಾಮಕಾಂಡ ಪ್ರಕರಣ: ಸಂತ್ರಸ್ತೆಗೆ ಜೀವ ಬೆದರಿಕೆ ಹಾಕಿಸಿದ್ರಾ ಸಂದೇಶ್?
ಮೊಸಳೆ ದಾಳಿಗೆ ಮೀನುಗಾರ ಬಲಿ
ಯಾದಗಿರಿ ಜಿಲ್ಲೆಯ ಜೋಳದಡಗಿ ಗ್ರಾಮದ ಬಳಿ ಭೀಮಾ ನದಿಯಲ್ಲಿ ಮೀನುಗಾರ ನಾಗರಾಜ್ (28) ದುರ್ಮರಣಕ್ಕೀಡಾದ ಘಟನೆ ನಡೆದಿದೆ. ನಸುಕಿನ ಜಾವ ಮೀನು ಹಿಡಿಯಲು ತೆರಳಿದ್ದ ನಾಗರಾಜ್, ಬೆಂಡ್ ಮೇಲೆ ಕುಳಿತು ಬಲೆ ಹಾಕುತ್ತಿದ್ದಾಗ ಬೃಹತ್ ಮೊಸಳೆ ದಾಳಿ ಮಾಡಲು ಮುಂದಾಗಿ ಬೆಂಡ್ ಕೆಡವಿದೆ. ನದಿಗೆ ಬಿದ್ದ ಆತ ಈಜಾಡಿ ಪಾರಾಗಲು ಯತ್ನಿಸಿದರೂ ಕಾಲಿಗೆ ಮೀನಿನ ಬಲೆ ಸಿಲುಕಿಕೊಂಡು ಹೊರಬರಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ. ಸ್ಥಳೀಯ ಮೀನುಗಾರರು ಕೂಗಿದ ಪರಿಣಾಮ ಮೊಸಳೆ ಪರಾರಿಯಾಗಿದ್ದು, ಬಳಿಕ ಮೃತದೇಹವನ್ನು ಹೊರತೆಗೆಯಲಾಗಿದೆ. ಪ್ರಕರಣ ವಡಗೇರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.