AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಳೆಗೆ ಬೆಂಗಳೂರಲ್ಲಿ ಸಾಲು ಸಾಲು ಅನಾಹುತ: ವಾಹನ ಸವಾರರೇ ಈ ರಸ್ತೆಗಳಲ್ಲಿ ಸಂಚರಿಸುವ ಮುನ್ನ ಗಮನಿಸಿ

ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ವ್ಯಾಪಕ ಅನಾಹುತಗಳು ಸಂಭವಿಸಿವೆ. ಪ್ರತ್ಯೇಕ ಘಟನೆಗಳಲ್ಲಿ ಒಟ್ಟು 9 ಮಂದಿ ಸಾವನ್ನಪ್ಪಿದ್ದಾರೆ. ಹಲವು ಅಂಡರ್‌ಪಾಸ್‌ಗಳು ಜಲಾವೃತಗೊಂಡಿದ್ದು, ಮರಗಳುಧರೆಗುರುಳಿವೆ. ಇದರಿಂದ ನಗರದ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ವಾಹನ ಸವಾರರು ಅಸ್ತವ್ಯಸ್ತಗೊಂಡ ರಸ್ತೆಗಳಲ್ಲಿ ಎಚ್ಚರಿಕೆಯಿಂದ ಸಂಚರಿಸುವಂತೆ ಪೊಲೀಸರು ಸೂಚಿಸಿದ್ದಾರೆ.

ಮಳೆಗೆ ಬೆಂಗಳೂರಲ್ಲಿ ಸಾಲು ಸಾಲು ಅನಾಹುತ: ವಾಹನ ಸವಾರರೇ ಈ ರಸ್ತೆಗಳಲ್ಲಿ ಸಂಚರಿಸುವ ಮುನ್ನ ಗಮನಿಸಿ
ಮಳೆಯಿಂದಾದ ಅನಾಹುತಗಳುImage Credit source: Tv9 Kannada
ಪ್ರಸನ್ನ ಹೆಗಡೆ
|

Updated on: Apr 30, 2026 | 8:15 AM

Share

ಬೆಂಗಳೂರು, ಏಪ್ರಿಲ್​​ 30: ತೀವ್ರ ಸೆಕೆಯಿಂದ ಬೆಂದು ಹೋಗಿದ್ದ ನಗರಕ್ಕೆ ನಿನ್ನೆ ವರುಣ ತಂಪೆರೆದಿದ್ದಾನೆ ಎಂದು ಖುಷಿ ಪಡಬೇಕೋ ಅಥವಾ ಮಳೆಯ ಅಬ್ಬರಕ್ಕೆ ಉಂಟಾಗಿರುವ ಸಾಲು ಸಾಲು ಅನಾಹುತಗಳಿಗೆ ದುಃಖ ಪಡಬೇಕೋ ಎನ್ನುವ ಸ್ಥಿತಿಯಲ್ಲಿ ಸದ್ಯ ರಾಜ್ಯ ರಾಜಧಾನಿ ಬೆಂಗಳೂರಿನ ನಿವಾಸಿಗಳಿದ್ದಾರೆ. ಗಾಳಿ ಮತ್ತು ಗುಡುಗಿನ ಸಹಿತ ಸುರಿದ ಭಾರಿ ಆಲಿಕಲ್ಲು ಮಳೆಗೆ ಸಾಲು ಸಾಲು ಅನಾಹುತಗಳೇ ನಡೆದಿದ್ದು, ಪ್ರತ್ಯೇಕ ಘಟನೆಗಳಲ್ಲಿ ಒಟ್ಟು 9 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ತೀವ್ರ ಗಾಳಿಗೆ ನಗರದ ಹಲವೆಡೆ ಮರಗಳು ಧರೆಗುರುಳಿದ್ದರೆ, ಅಂಡರ್​​ ಪಾಸ್​​ ಸೇರದಂತೆ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿರುವ ಕಾರಣ ಸಂಚಾರ ಸಮಸ್ಯೆ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಹೀಗಾಗಿ ಬೆಂಗಳೂರು ನಗರ ಸಂಚಾರ ಪೊಲೀಸರು ಹಂಚಿಕೊಂಡಿರುವ ಕೆಲ ಮಹತ್ವದ ಮಾಹಿತಿ ಇಲ್ಲಿದೆ.

ಅಂಡರ್​​ಪಾಸ್​​ನಲ್ಲಿ ನೀರು ನಿಂತು ಸಂಚಾರಕ್ಕೆ ಸಮಸ್ಯೆ

ನಿನ್ನೆಯ ಮಳೆ ಅಬ್ಬರಕ್ಕೆ ಕೆಲ ಪ್ರದೇಶಗಳಲ್ಲಿ ತುಂಬಿದ್ದ ನೀರು ಹಾಗೆಯೇ ಇಂದು ಕೂಡ ಉಳಿದುಕೊಂಡಿದೆ. ಲೌರಿ ಅಂಡರ್‌ಪಾಸ್‌ನಲ್ಲಿ ಮಳೆ ನೀರು ನಿಂತಿರುವುದರಿಂದ ಸುಗಮ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು, ಮಹದೇವಪುರ ಕಡೆಗೆ ನಿಧಾನಗತಿಯ ಸಂಚಾರವಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಕೆ.ಆರ್.ಸರ್ಕಲ್ ಅಂಡರ್ ಪಾಸ್​​​​ ಕೂಡ ಜಲಾವೃತವಾಗಿದ್ದು, ಬ್ಯಾರಿಕೇಡ್ ಹಾಕಿ ಪೊಲೀಸರು ಅಂಡರ್ ಪಾಸ್ ಬಂದ್ ಮಾಡಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಹವಾಮಾನ ವರದಿ; ಬೆಂಗಳೂರು ಸೇರಿದಂತೆ ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಅಬ್ಬರಿಸಲಿದ್ದಾನೆ ವರುಣ

ಭಾಷ್ಯಂ ವೃತ್ತದ ಬಳಿ ರಸ್ತೆಗೆ ಬಿದ್ದ ಮರ

ಗಾಳಿ ಮಳೆಯ ಅಬ್ಬರಕ್ಕೆ ನಗರದ ವಿವಿಧೆಡೆ ಹಲವು ಮರಗಳು ಮತ್ತು ರೆಂಬೆಗಳು ಧರೆಗೆ ಉರುಳಿವೆ. ರಾತ್ರಿಯಿಂದಲೇ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಇವುಗಳ ತೆರವು ಮಾಡಿ, ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿದೆಯಾದರೂ ಕೆಲವೆಡೆ ತೆರವು ಕಾರ್ಯ ಇನ್ನೂ ಮುಂದುವರಿದಿದೆ. ಭಾಷ್ಯಂ ವೃತ್ತದ ಬಳಿ ಮರ ಬಿದ್ದಿರುವುದರಿಂದ ಕಾವೇರಿ ಥಿಯೇಟರ್ ಜಂಕ್ಷನ್‌ ಕಡೆಗೆ ನಿಧಾನಗತಿಯ ಸಂಚಾರ ಕಂಡುಬಂದಿದೆ. ಬಸವನಗುಡಿಯಲ್ಲಿಯೂ ಬೃಹತ್​​ ಮರ ಬಿದ್ದು ಅವಾಂತರ ಸೃಷ್ಟಿಯಾಗಿದೆ. ವಿದ್ಯಾಪೀಠ ಸರ್ಕಲ್-ಬಸವನಗುಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ಅಡ್ಡಲಾಗಿ ಬೃಹತ್ ಮರ ಬಿದ್ದಿದ್ದು, ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ಬಂದ್​​ ಆಗಿದೆ. ಸ್ಥಳಕ್ಕೆ ಬಾರದ ಜಿಬಿಎ ಅಧಿಕಾರಿಗಳ ವಿರುದ್ಧ ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಸ್ತೆಯಲ್ಲೇ ಕೆಟ್ಟುನಿಂತ ವಾಹನ

ಬೊಮ್ಮನಹಳ್ಳಿ ಜಂಕ್ಷನ್ ಬಳಿ ರಸ್ತೆಯಲ್ಲಿವೇ ವಾಹನ ಕೆಟ್ಟು ನಿಂತಿರುವುದರಿಂದ ರೂಪೇನ ಅಗ್ರಹಾರ ಕಡೆಗೆ ನಿಧಾನಗತಿಯ ಸಂಚಾರವಿರೋದಾಗಿ ಎಕ್ಸ್​​ ಪೋಸ್ಟ್​​ ಮೂಲಕ ಬೆಂಗಳೂರು ಟ್ರಾಫಿಕ್​​ ಪೊಲೀಸರು ಮಾಹಿತಿ ನೀಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us