ಉಡುಪಿ ಕಾಂಗ್ರೆಸ್ ಮಖಂಡನ ಹತ್ಯೆ: ಶಾರ್ಪ್ ಶೂಟರ್ಸ್ಗಳ ಭಯಾನಕ ಕ್ರೈಂ ಡೈರಿ ತೆರೆದಿಟ್ಟ ಎಸ್ಪಿ
ಉಡುಪಿಯ ಮುದರಂಗಡಿಯಲ್ಲಿ ಹಾಡಹಗಲೇ ನಡೆದ ಕಾಂಗ್ರೆಸ್ ಮುಖಂಡ ಡೇವಿಡ್ ಡಿಸೋಜಾ ಹತ್ಯೆ ಇಡೀ ಕರಾವಳಿಯನ್ನು ಬೆಚ್ಚಿಬೀಳಿಸಿದೆ. ಮಾಜಿ ಪಂಚಾಯತ್ ಅಧ್ಯಕ್ಷನಾಗಿದ್ದ ಡೇವಿಡ್, ತನ್ನ ಕಚೇರಿ ಎದುರೇ ಗುಂಡೇಟಿಗೆ ಬಲಿಯಾಗಿದ್ದ. ಸದ್ಯ ಪೊಲೀಸರು ಉತ್ತರ ಭಾರತ ಮೂಲದ ಮೂವರು ಹಂತಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಹಂತಕರ ಕ್ರೈಂ ಡೈರಿಯನ್ನು ಸಹ ಉಡುಪಿ ಎಸ್ಪಿ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಉಡುಪಿ, (ಆಗಸ್ಟ್ 08): ಉಡುಪಿ ಕಾಂಗ್ರೆಸ್ ಮುಖಂಡ (Udupi Congress Leader) ಡೇವಿಡ್ ಡಿಸೋಜಾ ಶೂಟ್ ಔಟ್ ಪ್ರಕರಣಕ್ಕೆ (david desouza Murder Case) ಸಂಬಂಧಿಸಿದಂತೆ ಮೂವರು ಹಂತಕರನ್ನು ಪೊಲೀಸರು ಬಂಧಿಸಿದ್ದಾರೆ. ಎ1 ಆರೋಪಿ ರಾಜು ಹಾಗೂ ಎ2 ಅನಮೋಲ್ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ. ಇನ್ನು ಬಂಧಿತ ಹಂತಕರ ವಿರುದ್ಧ ವಿವಿಧ ರಾಜ್ಯಗಳಲ್ಲಿ ಕೊಲೆ, ಹಲ್ಲೆ ಹಾಗೂ ದರೋಡೆ ಪ್ರಕರಣಗಳಿವೆ. ಅದರಲ್ಲೂ ಎ1 ಆರೋಪಿ ರಾಜುವಿನ ಮೇಲೆ ಮಹಾರಾಷ್ಟ್ರ, ದೆಹಲಿ, ಉತ್ತರಪ್ರದೇಶ, ರಾಜಸ್ಥಾನ ಸೇರಿದಂತೆ 5 ರಾಜ್ಯಗಳಲ್ಲಿ ಕೊಲೆ, ಮಹಿಳೆಯರ ಮೇಲೆ ಹಲ್ಲೆ, ದರೋಡೆ ಸೇರಿದಂತೆ 26 ಪ್ರಕರಣಗಳಿವೆ. ಈ ಬಗ್ಗೆ ಉಡುಪಿ ಎಸ್ಪಿ ಹರಿರಾಮ್ ಶಂಕರ್ ಸುದ್ದಿಗೋಷ್ಠಿ ನಡೆಸಿ ಹಂತಕರ ಕ್ರೈಂ ಡೈರಿಯನ್ನು ಬಿಟ್ಟಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್ಪಿ ಹರಿರಾಮ್ ಶಂಕರ್ , ಗುತ್ತಿಗೆ ವಿಚಾರಕ್ಕೆ ಕಾಂಗ್ರೆಸ್ ಮುಖಂಡ, ಗುತ್ತಿಗೆದಾರ ಡೇವಿಡ್ ಡಿಸೋಜನನ್ನು ಕೊಲೆ ಮಾಡಲಾಗಿದೆ. ಎ1 ಆರೋಪಿ 9 ಎಮ್‌ಎಮ್ ಪಿಸ್ತೂಲಿನಿಂದ ಗುಂಡು ಹಾರಿಸಿ ಡೇವಿಡ್ ನನ್ನು ಹತ್ಯೆ ಮಾಡಿದ್ದಾನೆ. ಇನ್ನು ಶೂಟರ್ ರಾಜು ಖಾತೆಗೆ 2 ಲಕ್ಷಕ್ಕೂ ಹೆಚ್ಚು ಹಣ ಪಾವತಿ ಆಗಿದೆ. ಕೊಲೆ ನಡೆಯುವ ಮೊದಲು ಹಾಗೂ ನಂತರ ಹಂತ ಹಂತವಾಗಿ ಪಾವತಿಯಾಗಿದ್ದು, ಆರೋಪಿಗಳನ್ನು ಬೈಂದೂರಿನ ಒತ್ತಿನೆಣೆ, ಭಟ್ಕಳ ಹಾಗು ಕುಮುಟಾದಲ್ಲಿ ಬಂಧಿಸಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಉಡುಪಿಯಲ್ಲಿ ಕೈ ಮುಖಂಡ ಶೂಟೌಟ್: ಯುಪಿ ಮೂಲದ ಶೂಟರ್ಸ್ ಖಾಕಿ ಬಲೆಗೆ ಬಿದ್ದಿದ್ಹೇಗೆ?
ಸುಪಾರಿ ನೀಡಿ ಕೊಲೆ
ಡೇವಿಡ್ ಡಿಸೋಜಾ ಗುತ್ತಿಗೆ ಕೆಲಸ ಮಾಡಿಕೊಂಡಿದ್ದ. ಆರ್ಥಿಕ ವ್ಯವಹಾರಕ್ಕೆ ಉತ್ತರ ಭಾರತದ ವ್ಯಕ್ತಿಯೊಬ್ಬ ಸುಪಾರಿ ನೀಡಿ ಕೊಲೆ ಮಾಡಿದ್ದಾನೆ . ಸುಪಾರಿ ಕೊಟ್ಟವರ ಪತ್ತೆಗಾಗಿ ಈಗಾಗಲೇ ಒಂದು ತಂಡವನ್ನು ಹೊರ ರಾಜ್ಯಕ್ಕೆ ಕಳುಹಿಸಲಾಗಿದೆ. ಆರೋಪಿಗಳು ಉಡುಪಿ ಜಿಲ್ಲೆಯನ್ನು ದಾಟದಂತೆ ಎಲ್ಲ ಗಡಿಭಾಗದಲ್ಲಿ ನಾಕಬಂಧಿ ಹಾಕಲಾಗಿತ್ತು. ಉಡುಪಿ, ಭಟ್ಕಳ ರೈಲ್ವೇ ನಿಲ್ದಾಣದಲ್ಲಿ ತಪಾಸಣೆ ನಡೆಸಿದ್ದೆವು. 500ಕ್ಕೂ ಹೆಚ್ಚು ಪೊಲೀಸರು ಇದರ ಹಿಂದೆ ಕೆಲಸ ಮಾಡಿದ್ದಾರೆ. ರೈಲ್ವೇ ಪೋಲಿಸ್ ಹಾಗು ಉತ್ತರ ಕನ್ನಡ ಎಸ್ಪಿಯವರ ಸಹಾಯದೊಂದಿಗೆ ಬಿಗಿಬಂದೋಬಸ್ತ್ ನಡೆಸಲಾಗಿತ್ತು ಎಂದು ಹೇಳಿದ್ದಾರೆ.
ಗುತ್ತಿಗೆ ವಿಚಾರಕ್ಕೆ ಹತ್ಯೆ
ಆರೋಪಿಗಳು ಎರ್ಮಾಳ್ ಬಳಿ ಬೈಕ್ ಅನ್ನು ಬಿಟ್ಟು ಹೋಗಿದ್ದು, ಬೈಕ್ ಒದಗಿಸಿದವರು ಯಾರು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಆರೋಪಿಗಳಿಗೆ ಒಬ್ಬರ ಪರಿಚಯ ಮತ್ತೊಬ್ಬರಿಗೆ ಸರಿಯಾಗಿ ಇರಲಿಲ್ಲ. ಸುಳ್ಳು ಹೆಸರು ಹೇಳಿಕೊಂಡು ಪರಿಚಯಿಸಿಕೊಂಡಿದ್ದರು. ಒಂದು ವೇಳೆ ತಪ್ಪಿಸಿಕೊಂಡಿದ್ದರೆ ಅವರಲ್ಲಿದ್ದ ಮೊಬೈಲ್ ಫೋನುಗಳು ಸಿಗುತ್ತಿರಲಿಲ್ಲ. ಅಂದಾಜು 2 ರಿಂದ 3 ಕೋಟಿ ರೂಪಾಯಿ ವಿಚಾರಕ್ಕೆ ಡೇವಿಡ್ ಹಾಗು ಮತ್ತೋರ್ವ ಗುತ್ತಿಗೆದಾರನ ನಡುವೆ ವೈಮನಸ್ಸು ಉಂಟಾಗಿದ್ದು, ಇದಕ್ಕೆ ಹತ್ಯೆ ಮಾಡಲಾಗಿದೆ. ಇನ್ನು ಆರೋಪಿಗಳು 2 ತಿಂಗಳ ಹಿಂದೆ ಸ್ಥಳಕ್ಕೆ ಆಗಮಿಸಿ, ಕೃತ್ಯಕ್ಕೆ ಸ್ಕೆಚ್ ಹಾಕಿದ್ದರು. ಅವರಿಗೆ ಯಾರೆಲ್ಲ ಸ್ಥಳೀಯರು ಯಾರು ಸಹಾಯ ಮಾಡಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಹಂತರಕರನ್ನು ಸೆರೆ ಹಿಡಿದಿದ್ಹೇಗೆ?
ಬೈಂದೂರಿನ ಒತ್ತಿನೆಣೆ ಬಳಿಯಲ್ಲಿ ಬಸ್ ತಪಾಸಣೆ ನಡೆಸುತ್ತಿದ್ದ ಪೋಲಿಸರನ್ನು ಕಂಡು ಮೂರು ವ್ಯಕ್ತಿಗಳು ಬಸ್‌ನಿಂದ ಇಳಿದಿದ್ದಾರೆ. ಆಗ ರಾಜು ಎಂಬಾತನನ್ನು ಕಾಪು ಪಿಎಸ್ಐ ತೇಜಸ್ವಿ ಬೆನ್ನಟ್ಟಿದ್ದಾರೆ. ಆ ವೇಳೆ ತೇಜಸ್ವಿ ಅವರಿಗೆ ಆರೋಪಿ ಹಲ್ಲೆ ಮಾಡಿದ್ದಾನೆ. ಈ ಹಿನ್ನೆಲೆಯಲ್ಲಿ ಆತ್ಮರಕ್ಷಣೆಗಾಗಿ ಆರೋಪಿಯ ಕಾಲಿಗೆ ಗುಂಡು ಹಾರಿಸಲಾಗಿದ್ದು, ಪಿಎಸ್ಐ ಹಾಗು ಆರೋಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ . ಉಳಿದ ಇಬ್ಬರು ಆರೋಪಿಗಳನ್ನು ಭಟ್ಕಳ ಹಾಗು ಕುಮುಟಾದಲ್ಲಿ ಶನಿವಾರ ಬೆಳಗ್ಗೆ ಬಂಧಿಸಲಾಗಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ವಿವರಿಸಿದ್ದಾರೆ.
ಆರೋಪಿಗಳ ಮೇಲಿವೆ ಹಲವು ಪ್ರಕರಣಗಳು
ಎ1 ಆರೋಪಿರಾಜುವಿನ ಮೇಲೆ ಮಹಾರಾಷ್ಟ್ರ, ದೆಹಲಿ, ಉತ್ತರಪ್ರದೇಶ, ರಾಜಸ್ಥಾನ ಸೇರಿದಂತೆ 5 ರಾಜ್ಯಗಳಲ್ಲಿ ಕೊಲೆ, ಮಹಿಳೆಯರ ಮೇಲೆ ಹಲ್ಲೆ, ದರೋಡೆ ಸೇರಿದಂತೆ 26 ಪ್ರಕರಣಗಳಿವೆ. ಎ2 ಆರೋಪಿ ಅನಮೋಲ್ ಮೇಲೆ 2018ರ ನಂತರ 4 ರಾಜ್ಯಗಳಲ್ಲಿ 8 ಪ್ರಕರಣ ಹಾಗೂ ಜಿಯಾವುಲ್ ವಜುಲ್ ಶೇಖ್ ಮೇಲೆ ದರೋಡೆ, ಶೂಟೌಟ್, ಡಕಾಯಿತಿ ಸೇರಿದಂತೆ 12 ಪ್ರಕರಣಗಳಿವೆ. ಸದ್ಯ ಆರೋಪಿ ರಾಜುವಿನಿಂದ 9 ಎಮ್‌ಎಮ್ ಪಿಸ್ತೂಲನ್ನು ವಶಕ್ಕೆ ಪಡೆಯಲಾಗಿದೆ. ಜೊತೆಗೆ ಆರೋಪಿಗಳಿಂದ 3 ಮೊಬೈಲ್ ಪೋನ್‌ಗಳು, ಸಿಮ್ ಕಾರ್ಡ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದರು.




