AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುಪಿಐ ಗ್ರಾಹಕರಿಗೆ ಯಾವುದೇ ಶುಲ್ಕವಿಲ್ಲ; ಕೇಂದ್ರ ಸರ್ಕಾರ ಸ್ಪಷ್ಟನೆ

ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (UPI) ಡಿಜಿಟಲ್ ಪಾವತಿಗಳ ಮೇಲಿನ ಶುಲ್ಕಗಳ ಕುರಿತು ಹರಡುತ್ತಿರುವ ವದಂತಿಗಳಿಗೆ ಕೇಂದ್ರ ಸರ್ಕಾರ ತೆರೆ ಎಳೆದಿದೆ. ಪಾವತಿ ಮತ್ತು ಇತ್ಯರ್ಥ ವ್ಯವಸ್ಥೆಗಳ ಕಾಯ್ದೆಗೆ (PSS Act) ತರಲಾದ ತಿದ್ದುಪಡಿಯು ಯುಪಿಐ ವ್ಯವಸ್ಥೆಯನ್ನು ಮತ್ತಷ್ಟು ಸುರಕ್ಷಿತ, ಸುಸ್ಥಿರ ಮತ್ತು ಆಧುನಿಕಗೊಳಿಸುವ ಉದ್ದೇಶ ಹೊಂದಿದೆಯೇ ಹೊರತು ಸಾಮಾನ್ಯ ಬಳಕೆದಾರರ ಮೇಲೆ ಶುಲ್ಕ ಹೇರಲು ಅಲ್ಲ ಎಂದು ಸ್ಪಷ್ಟಪಡಿಸಿದೆ. ಯುಪಿಐ ಮೂಲಕ ಪಾವತಿ ಮಾಡುವ ಯಾವುದೇ ಗ್ರಾಹಕರಿಗೆ ಅಥವಾ ನಾಗರಿಕರಿಗೆ ಎಷ್ಟೇ ವಹಿವಾಟು ನಡೆಸಿದರೂ ಯಾವುದೇ ಶುಲ್ಕ ಇರುವುದಿಲ್ಲ.

ಯುಪಿಐ ಗ್ರಾಹಕರಿಗೆ ಯಾವುದೇ ಶುಲ್ಕವಿಲ್ಲ; ಕೇಂದ್ರ ಸರ್ಕಾರ ಸ್ಪಷ್ಟನೆ
Upi PaymentsImage Credit source: Getty Image
ಸುಷ್ಮಾ ಚಕ್ರೆ
|

Updated on: Aug 08, 2026 | 8:55 PM

Share

ನವದೆಹಲಿ, ಆಗಸ್ಟ್ 8: ಗ್ರಾಹಕರಿಗೆ ಯುಪಿಐ (UPI) ಪಾವತಿ ಸಂಪೂರ್ಣ ಉಚಿತವಾಗಿರಲಿದ್ದು, ವ್ಯಕ್ತಿಯಿಂದ ವ್ಯಕ್ತಿಗೆ ನಡೆಯುವ ಎಲ್ಲಾ ವಹಿವಾಟುಗಳು ಉಚಿತವಾಗಿಯೇ ಮುಂದುವರಿಯಲಿವೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಯುಪಿಐ ಮೂಲಕ ಪಾವತಿ ಮಾಡುವಾಗ ಗ್ರಾಹಕರು ಯಾವುದೇ ವಹಿವಾಟು ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಬಹುತೇಕ ವರ್ತಕರ ವಹಿವಾಟುಗಳು ಸಹ ಸಂಪೂರ್ಣ ಉಚಿತವಾಗಿ ಉಳಿಯಲಿವೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಒಂದು ವೇಳೆ ಎಂಡಿಆರ್ (MDR) ಶುಲ್ಕವನ್ನು ವಿಧಿಸಿದರೂ, ಅದು ನಿರ್ದಿಷ್ಟ ಮಿತಿಗಿಂತ ಹೆಚ್ಚಿನ ವಹಿವಾಟು ನಡೆಸುವ ಸಣ್ಣ ಪ್ರಮಾಣದ ವರ್ತಕರಿಗೆ ಮಾತ್ರ ಅನ್ವಯಿಸಲಿದೆ. ಆ ಮೊತ್ತವೂ ಬಹಳ ಕಡಿಮೆ ಇರಲಿದೆ ಎಂದು ಸರ್ಕಾರ ಖಚಿತಪಡಿಸಿದೆ.

ಪಾವತಿ ಮತ್ತು ಇತ್ಯರ್ಥ ವ್ಯವಸ್ಥೆಗಳ ಕಾಯ್ದೆಗೆ ತರಲಾದ ತಿದ್ದುಪಡಿಯು ಯುಪಿಐ ವ್ಯವಸ್ಥೆಯ ದೀರ್ಘಕಾಲೀನ ಸುಸ್ಥಿರತೆ, ತಾಂತ್ರಿಕ ಪ್ರಗತಿ ಮತ್ತು ಹೊಸ ಮಾದರಿಯ ಸೈಬರ್ ಅಪಾಯಗಳನ್ನು ಎದುರಿಸುವ ಸಾಮರ್ಥ್ಯವನ್ನು ಖಚಿತಪಡಿಸಿಕೊಳ್ಳುವ ಉದ್ದೇಶವನ್ನು ಹೊಂದಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ವಹಿವಾಟುಗಳ ಪ್ರಮಾಣ ಬೆಳೆದಂತೆ ಸೈಬರ್ ಭದ್ರತೆ, ವಂಚನೆ ತಡೆಗಟ್ಟುವಿಕೆ, ತಂತ್ರಜ್ಞಾನ ಮತ್ತು ಮೂಲಸೌಕರ್ಯಗಳಲ್ಲಿ ನಿರಂತರ ಹೂಡಿಕೆ ಅಗತ್ಯವಾಗಿದೆ. ಭಾರತದ ಡಿಜಿಟಲ್ ಪಾವತಿ ಮೂಲಸೌಕರ್ಯದ ಪ್ರಮುಖ ಭಾಗವಾಗಿ ಯುಪಿಐ ಬೆಳೆಯುತ್ತಿರುವ ಮಹತ್ವವನ್ನು ಸರ್ಕಾರ ಎತ್ತಿಹಿಡಿದಿದೆ. ಕಳೆದ ತಿಂಗಳು ಒಂದರಲ್ಲೇ ಯುಪಿಐ ಮೂಲಕ 2,366 ಕೋಟಿ ವಹಿವಾಟುಗಳ ನಡೆದು, 29.9 ಲಕ್ಷ ಕೋಟಿ ರೂ. ಮೊತ್ತದ ಪಾವತಿಯಾಗಿದೆ. ಪ್ರಸ್ತುತ ಯುಪಿಐ ಜಗತ್ತಿನ 11 ವಿದೇಶಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ.

ಇದನ್ನೂ ಓದಿ: ಯುಪಿಐ ಬಳಸಲು ಶುಲ್ಕ ಪಾವತಿಸಬೇಕೇ? ಹಲವು ವದಂತಿಗಳಿಗೆ ಇಲ್ಲಿದೆ ಸ್ಪಷ್ಟನೆ

ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಹಣ ವರ್ಗಾವಣೆ ಮಾಡುವ ಎಲ್ಲಾ ವಹಿವಾಟುಗಳು ಎಂದಿನಂತೆ ಉಚಿತವಾಗಿಯೇ ಇರಲಿವೆ. ಹೆಚ್ಚಿನ ಪ್ರಮಾಣದ ವರ್ತಕರ ವಹಿವಾಟುಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ. ಒಂದು ವೇಳೆ ಎಂಡಿಆರ್ ಶುಲ್ಕವನ್ನು ವಿಧಿಸಿದರೂ, ಅದು ನಿರ್ದಿಷ್ಟ ಪರಿಮಿತಿಗಿಂತ ಹೆಚ್ಚಿನ ವಹಿವಾಟು ನಡೆಸುವ ಶೇಕಡಾವಾರು ತೀರ ಕಡಿಮೆ ಪ್ರಮಾಣದ ದೊಡ್ಡ ವರ್ತಕರಿಗೆ ಮಾತ್ರ ಅನ್ವಯಿಸಲಿದೆ. ಈ ಶುಲ್ಕವೂ ಸಹ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗಳ ಎಂಡಿಆರ್‌ಗಿಂತ ಅತ್ಯಂತ ಕಡಿಮೆಯಿರಲಿದೆ.

ಇದನ್ನೂ ಓದಿ: ಯುಪಿಐ ಪೇಮೆಂಟ್​ಗೆ ಎಂಡಿಆರ್ ಶುಲ್ಕ ಇದ್ದರೆ ಯಾರು ಭರಿಸಬೇಕು? ಆರ್​ಬಿಐ ಗವರ್ನರ್ ಹೇಳಿದ್ದಿದು

ಪಿಎಸ್‌ಎಸ್ ಕಾಯ್ದೆ ತಿದ್ದುಪಡಿ ಏಕೆ?:

ಯುಪಿಐ ದಿನೇ ದಿನೇ ತೀವ್ರವಾಗಿ ಬೆಳೆಯುತ್ತಿದ್ದು, ಜುಲೈ 2026 ಒಂದರಲ್ಲೇ 2,366 ಕೋಟಿ ವಹಿವಾಟುಗಳ ಮೂಲಕ 29.9 ಲಕ್ಷ ಕೋಟಿ ರೂಪಾಯಿಗಳ ಪಾವತಿ ನಡೆದಿದೆ. ಇಷ್ಟೊಂದು ಬೃಹತ್ ಮಟ್ಟದ ವ್ಯವಸ್ಥೆಗೆ ಸೈಬರ್ ಭದ್ರತೆ, ವಂಚನೆ ತಡೆಗಟ್ಟುವಿಕೆ ಮತ್ತು ತಾಂತ್ರಿಕ ಮೂಲಸೌಕರ್ಯಗಳನ್ನು ಆಧುನಿಕಗೊಳಿಸಲು ಖಾಸಗಿ ಕಂಪನಿಗಳ ಹೂಡಿಕೆ ಹಾಗೂ ಸ್ವಯಂ-ಸುಸ್ಥಿರ ಆದಾಯ ಮಾದರಿಯ ಅಗತ್ಯವಿದೆ. ಕೇವಲ ಸರ್ಕಾರಿ ಸಬ್ಸಿಡಿಗಳ ಮೇಲೆ ಆಧರಿಸುವುದು ಭವಿಷ್ಯದ ಬೆಳವಣಿಗೆಗೆ ಸಾಲದು ಎಂಬ ಕಾರಣಕ್ಕೆ ಈ ತಿದ್ದುಪಡಿ ತರಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us