ಇದು ನ್ಯಾಯನಾ? ನಮ್ಮ ಜೀವಕ್ಕೆ ಬೆಲೆ ಅನ್ನೋದೆ ಇಲ್ವಾ?: ರ್ಯಾಪಿಡೋ ಅಪಘಾತದಿಂದ ಆದ ನರಕಯಾತನೆ ಬಿಚ್ಚಿಟ್ಟ ಸಾನಿ ಕೃಷ್ಣ!

ಬೆಂಗಳೂರಿನಲ್ಲಿ ರ್ಯಾಪಿಡೋ ಬೈಕ್ ಟ್ಯಾಕ್ಸಿ ಅಪಘಾತಕ್ಕೊಳಗಾಗಿ ಸಾವು-ಬದುಕಿನ ನಡುವೆ ಹೋರಾಡಿದ ಸಾನಿ ಕೃಷ್ಣ ಎಂಬ ಯುವತಿ ತಮಗೆ ಆದ ನರಕಯಾತನೆ ಬಿಚ್ಚಿಟ್ಟಿದ್ದಾರೆ. ಬಾಗಮನೆ ಟೆಕ್ ಪಾರ್ಕ್ ಬಳಿ ನಡೆದ ಭೀಕರ ಅಪಘಾತದಿಂದ ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿಯಾಗಿದ್ದು, ಆಸ್ಪತ್ರೆ ಬಿಲ್ 20 ಲಕ್ಷ ರೂಪಾಯಿ ದಾಟಿದೆ. ಸಂಸ್ಥೆಯು ಕನಿಷ್ಠ ಸೌಜನ್ಯ ಹಾಗೂ ಪರಿಹಾರ ನೀಡದೆ ನಿರ್ಲಕ್ಷ್ಯ ವಹಿಸಿದೆ ಎಂದು ಸಂತ್ರಸ್ತೆ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.

ಇದು ನ್ಯಾಯನಾ? ನಮ್ಮ ಜೀವಕ್ಕೆ ಬೆಲೆ ಅನ್ನೋದೆ ಇಲ್ವಾ?: ರ್ಯಾಪಿಡೋ ಅಪಘಾತದಿಂದ ಆದ ನರಕಯಾತನೆ ಬಿಚ್ಚಿಟ್ಟ ಸಾನಿ ಕೃಷ್ಣ!
ರ್ಯಾಪಿಡೋ ಅಪಘಾತದಿಂದ ಆದ ನರಕಯಾತನೆ ಬಿಚ್ಚಿಟ್ಟ ಸಾನಿ ಕೃಷ್ಣ!
Edited By:

Updated on: Aug 05, 2026 | 11:48 AM

ಮುಖ್ಯಾಂಶಗಳು

  • ರ್ಯಾಪಿಡೋ ಬೈಕ್ ಟ್ಯಾಕ್ಸಿ ಅಪಘಾತದಿಂದ ಯುವತಿಗೆ ಭೀಕರ ನರಕಯಾತನೆ ಎದುರಾಗಿದೆ.
  • ಆಸ್ಪತ್ರೆ ಬಿಲ್ ಬರೋಬ್ಬರಿ 20 ಲಕ್ಷ ದಾಟಿದರೂ ಸಂಸ್ಥೆಯಿಂದ ಸ್ಪಂದನೆ ಸಿಕ್ಕಿಲ್ಲ.
  • ಮಹಿಳಾ ಸುರಕ್ಷತೆ ನೆಪದಲ್ಲಿ ಗ್ರಾಹಕರಿಗೆ ವಂಚಿಸುತ್ತಿದ್ದಾರೆ ಎಂದು ಸಂತ್ರಸ್ತೆ ಆಕ್ರೋಶ.

ಬೆಂಗಳೂರು, ಆಗಸ್ಟ್ 05: ಮಹಿಳೆಯರ ಸುರಕ್ಷತೆಯಂತ ದೊಡ್ಡ ದೊಡ್ಡ ಜಾಹೀರಾತು ನೀಡಿ ಮಾರ್ಕೆಟಿಂಗ್ ಮಾಡ್ತಾರೆ, ಆದ್ರೆ ಅದೆಲ್ಲ ಬರೀ ಸುಳ್ಳು! ನಮ್ಮ ಜೀವಕ್ಕೆ ಬೆಲೆ ಅನ್ನೋದೆ ಇಲ್ವಾ? ಇದು ರ್ಯಾಪಿಡೋ (Rapido) ಬೈಕ್ ಟ್ಯಾಕ್ಸಿ ಅಪಘಾತಕ್ಕೊಳಗಾಗಿ ಸಾವು-ಬದುಕಿನ ನಡುವೆ ಹೋರಾಡಿ ಬದುಕುಳಿದಿರುವ ಸಾನಿ ಕೃಷ್ಣ ಎಂಬ ಯುವತಿಯ ಆಕ್ರೋಶದ ನುಡಿಗಳು. ಸಾನಿ ಜೂನ್ 17ರಂದು ಭೀಕರ ಅಪಘಾತಕ್ಕೀಡಾಗಿದ್ದರು. ಈಗ ಸಾವನ್ನೇ ಗೆದ್ದು ಬಂದಿರುವ ಸಾನಿ ಕೃಷ್ಣ ನ್ಯಾಯಕ್ಕಾಗಿ ಹೋರಾಟ ಆರಂಭಿಸಿದ್ದಾರೆ.

ಅಂದು ನಡೆದಿದ್ದೇನು?

ಬೆಂಗಳೂರಿನ ಬೈರಸಂದ್ರದ ನಿವಾಸಿಯಾಗಿರುವ ಸಾನಿ ಕೃಷ್ಣ, ದೊಮ್ಮಲೂರಿನಲ್ಲಿರುವ ತಮ್ಮ ಕಚೇರಿಗೆ ತೆರಳಲು ಜೂನ್ 17ರಂದು ಬೆಳಗ್ಗೆ ರ್ಯಾಪಿಡೋ ಬೈಕ್ ಟ್ಯಾಕ್ಸಿ ಬುಕ್ ಮಾಡಿದ್ದರು. ಆದರೆ, ಬಾಗಮನೆ ಟೆಕ್ ಪಾರ್ಕ್ ಬಳಿ ಸಂಚರಿಸುತ್ತಿದ್ದಾಗ, ರ್ಯಾಪಿಡೋ ಚಾಲಕ ಮುಂದಿದ್ದ ಟ್ರ್ಯಾಕ್ಟರ್ ಅನ್ನು ಅಜಾಗರೂಕತೆಯಿಂದ ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ ಸಂಭವಿಸಿದೆ.

ಆಸ್ಪತ್ರೆ ಬಿಲ್ 20 ಲಕ್ಷ ದಾಟಿದ್ರೂ ಚಿಕಿತ್ಸೆ ಮುಗಿದಿಲ್ಲ!

ಅಪಘಾತದ ತೀವ್ರತೆಗೆ ಸಾನಿ ಕೃಷ್ಣ ಅವರ ಮುಖ ತೀವ್ರವಾಗಿ ಜಜ್ಜುಹೋಗಿದ್ದು, ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಬೇಕಾಗಿ ಬಂತು. ಮೊದಲು ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ, ಬಳಿಕ ಹೆಚ್ಚಿನ ಚಿಕಿತ್ಸೆಗೆ ಕೇರಳದ ಕೋಯಿಕ್ಕೋಡ್‌ನ ಮಿತ್ರಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಈವರೆಗೆ ಆಸ್ಪತ್ರೆಯ ಬಿಲ್ ಬರೋಬ್ಬರಿ 20 ಲಕ್ಷ ರೂಪಾಯಿ ದಾಟಿದ್ದು, ಯುವತಿ ಹಾಸಿಗೆ ಹಿಡಿಯುವಂತಾಗಿದೆ.

ಕನಿಷ್ಠ ಸೌಜನ್ಯವೂ ಇಲ್ಲದ ರ್ಯಾಪಿಡೋ, ಸಂತ್ರಸ್ತೆಯ ಹೋರಾಟ!

ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಉದ್ದುದ್ದ ಮಾತುಗಳನ್ನಾಡುವ ರ್ಯಾಪಿಡೋ ಸಂಸ್ಥೆ, ಈ ಭೀಕರ ಅಪಘಾತದ ನಂತರ ಕನಿಷ್ಠ ಸೌಜನ್ಯಕ್ಕಾದರೂ ಸ್ಪಂದಿಸಿಲ್ಲ ಹಾಗೂ ಸೂಕ್ತ ಪರಿಹಾರ ನೀಡದೆ ನಿರ್ಲಕ್ಷ್ಯ ವಹಿಸಿದೆ ಎಂದು ಸಂತ್ರಸ್ತೆ ಕಣ್ಣೀರಿಟ್ಟಿದ್ದಾರೆ. “ನನ್ನೊಬ್ಬಳ ಸ್ಥಿತಿ ಮಾತ್ರ ಹೀಗಾಗಿಲ್ಲ, ನನ್ನಂತೆ ಇನ್ನೂ ಹತ್ತಾರು ಮಂದಿ ಇಂತಹ ಸಂಸ್ಥೆಗಳಿಂದ ನರಕಯಾತನೆ ಅನುಭವಿಸುತ್ತಿದ್ದಾರೆ” ಎಂದು ಸಾನಿ ಕೃಷ್ಣ ಆಕ್ರೋಶ ಹೊರಹಾಕಿದ್ದು, ತಮಗೆ ನ್ಯಾಯ ಸಿಗುವವರೆಗೆ ಹೋರಾಟ ಮುಂದುವರಿಸುವುದಾಗಿ ತಿಳಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕಿರಣ್​ ಸೂರ್ಯ

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More
Loading...
Unable to load recommendations.
Follow Us