ರಾಜಧಾನಿ ಬೆಂಗಳೂರಿನಲ್ಲಿ ಶಾಲಾ ಸಮಯ ಬದಲಾವಣೆಗೆ ಸರ್ಕಾರದ ಮಾಸ್ಟರ್ ಪ್ಲಾನ್: ಸಚಿವ ಮಧು ಬಂಗಾರಪ್ಪ ಸಮ್ಮತಿ, ಶೀಘ್ರವೇ ಮಹತ್ವದ ಸಭೆ

ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆಯಿಂದಾಗಿ ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ತೊಂದರೆಯಾಗುತ್ತಿದೆ. ಇದನ್ನು ನಿವಾರಿಸಲು ಸರ್ಕಾರಿ ಶಾಲಾ ಅವಧಿಯನ್ನು ಬೆಳಗ್ಗೆ 8:30 ರಿಂದ ಮಧ್ಯಾಹ್ನ 3:30 ರವರೆಗೆ ಬದಲಾಯಿಸಲು ಶಾಲಾ ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ. ಇದರಿಂದ ಸಂಚಾರ ಸಮಸ್ಯೆ ಕಡಿಮೆಯಾಗಿ, ಪಾಠ ಬೋಧನೆಗೆ ಹೆಚ್ಚು ಸಮಯ ಸಿಕ್ಕು ಶೈಕ್ಷಣಿಕ ಪ್ರಗತಿಯೂ ಸುಧಾರಿಸುತ್ತದೆ. ಈ ಕುರಿತು ಶೀಘ್ರವೇ ಉನ್ನತ ಮಟ್ಟದ ಸಭೆ ನಡೆಯಲಿದೆ.

ರಾಜಧಾನಿ ಬೆಂಗಳೂರಿನಲ್ಲಿ ಶಾಲಾ ಸಮಯ ಬದಲಾವಣೆಗೆ ಸರ್ಕಾರದ ಮಾಸ್ಟರ್ ಪ್ಲಾನ್: ಸಚಿವ ಮಧು ಬಂಗಾರಪ್ಪ ಸಮ್ಮತಿ, ಶೀಘ್ರವೇ ಮಹತ್ವದ ಸಭೆ
ಸಾಂದರ್ಭಿಕ ಚಿತ್ರ
Edited By:

Updated on: Sep 14, 2026 | 8:45 AM

ಬೆಂಗಳೂರು, ಸೆ.14: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನೇ ದಿನೇ ಹೆಚ್ಚುತ್ತಿರುವ ನರಕಯಾತನೆಯ ವಾಹನ ದಟ್ಟಣೆಗೆ ಮುಕ್ತಿ ನೀಡಲು ಹಾಗೂ ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಹಿತದೃಷ್ಟಿಯಿಂದ ಸರ್ಕಾರಿ ಶಾಲೆಗಳ ವೇಳಾಪಟ್ಟಿಯನ್ನು ಬದಲಾಯಿಸಲು ರಾಜ್ಯ ಶಾಲಾ ಶಿಕ್ಷಣ ಇಲಾಖೆ ಗಂಭೀರ ಚಿಂತನೆ ನಡೆಸಿದೆ.

ನಗರದಲ್ಲಿ ಎದುರಾಗುತ್ತಿರುವ ಸಂಚಾರ ಸಮಸ್ಯೆಯಿಂದಾಗಿ ಶಿಕ್ಷಕರು ಸಮಯಕ್ಕೆ ಸರಿಯಾಗಿ ಶಾಲೆ ತಲುಪಲು ಕಷ್ಟಪಡುತ್ತಿದ್ದು, ಶಿಕ್ಷಕರ ಸಂಘಟನೆಗಳು ನೀಡಿದ ಸುದೀರ್ಘ ಮನವಿಗೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಧನಾತ್ಮಕವಾಗಿ ಸ್ಪಂದಿಸಿದ್ದಾರೆ.

ಬೆಳಿಗ್ಗೆ 8:30 ರಿಂದ ಮಧ್ಯಾಹ್ನ 3:30 ರವರೆಗೆ ಹೊಸ ಸಮಯದ ಪ್ರಸ್ತಾವನೆ

ಪ್ರಸ್ತುತ ಬೆಂಗಳೂರು ನಗರದ ಸರ್ಕಾರಿ ಶಾಲೆಗಳು ಬೆಳಗ್ಗೆ 10:30 ರಿಂದ ಸಂಜೆ 4:30 ರವರೆಗೆ ಕಾರ್ಯನಿರ್ವಹಿಸುತ್ತಿವೆ. ಆದರೆ ಖಾಸಗಿ ಶಾಲೆಗಳು ಬೆಳಗ್ಗೆ 8:45 ರಿಂದ ಮಧ್ಯಾಹ್ನ 3:45 ರವರೆಗೆ ನಡೆಯುತ್ತಿವೆ. ಸರ್ಕಾರಿ ಶಾಲಾ ಅವಧಿಯಲ್ಲೇ ವಿದ್ಯಾರ್ಥಿಗಳಿಗೆ ಕ್ಷೀರಭಾಗ್ಯದ ಹಾಲು, ಮೊಟ್ಟೆ/ಬಾಳೆಹಣ್ಣು ಹಾಗೂ ಮಧ್ಯಾಹ್ನದ ಬಿಸಿಯೂಟ ವಿತರಿಸಲು ಕನಿಷ್ಠ 1 ಗಂಟೆ ಸಮಯ ವ್ಯಯವಾಗುತ್ತಿದೆ. ಇದರಿಂದಾಗಿ ಪಠ್ಯ ಬೋಧನೆಗೆ ಸರಿಯಾದ ಸಮಯ ಸಿಗದೆ ಶೈಕ್ಷಣಿಕ ಪ್ರಗತಿಯ ಮೇಲೆಯೂ ಪರಿಣಾಮ ಬೀರುತ್ತಿದೆ.

ಈ ಎಲ್ಲಾ ತೊಡಕುಗಳನ್ನು ನೀಗಿಸಲು ಸರ್ಕಾರಿ ಶಾಲೆಗಳ ಅವಧಿಯನ್ನು ಬೆಳಿಗ್ಗೆ 8:30 ರಿಂದ ಮಧ್ಯಾಹ್ನ 3:30 ರವರೆಗೆ ಮರುನಿಗದಿಪಡಿಸಬೇಕು ಎಂದು ಶಿಕ್ಷಕರು ಸಲಹೆ ನೀಡಿದ್ದಾರೆ. ಶಾಲಾ ಸಮಯ ಬೆಳಿಗ್ಗೆ 8:30 ಕ್ಕೆ ಬದಲಾದರೆ, ಸಂಜೆಯ ‘ಪೀಕ್ ಅವರ್’ (Peak Hour) ಭಾರಿ ವಾಹನ ದಟ್ಟಣೆ ಆರಂಭವಾಗುವ ಮುನ್ನವೇ ವಿದ್ಯಾರ್ಥಿಗಳು ಸುರಕ್ಷಿತವಾಗಿ ಮನೆ ತಲುಪಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: ಕಳಪೆ ಶೂ ಭಾಗ್ಯ: ಗುತ್ತಿಗೆದಾರನನ್ನು ಬಿಟ್ಟು ಸ್ಥಳೀಯ ಅಧಿಕಾರಿಗಳ ಮೇಲೆ ಕ್ರಮಕ್ಕೆ ಸೂಚನೆ; ಇದೆಂಥಾ ನಿರ್ಧಾರ?

ಎಲ್ಲಾ ಇಲಾಖೆಗಳೊಂದಿಗೆ ಶೀಘ್ರದಲ್ಲೇ ಉನ್ನತ ಮಟ್ಟದ ಸಭೆ

ಶಾಲಾ ಸಮಯ ಬದಲಾವಣೆಯು ಕೇವಲ ಶಿಕ್ಷಣ ಇಲಾಖೆಗೆ ಸೀಮಿತವಾಗಿರದೆ ಇಡೀ ನಗರದ ಸಾರಿಗೆ ವ್ಯವಸ್ಥೆಯ ಮೇಲೆ ಪರಿಣಾಮ ಬೀರಲಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ನೇತೃತ್ವದಲ್ಲಿ ಶೀಘ್ರದಲ್ಲೇ ಉನ್ನತ ಮಟ್ಟದ ಸಭೆ ಕರೆಯಲು ನಿರ್ಧರಿಸಲಾಗಿದೆ. ಈ ಸಭೆಯಲ್ಲಿ ಸಂಚಾರ ಪೊಲೀಸ್ ಇಲಾಖೆ, ಸಾರಿಗೆ ಇಲಾಖೆ (BMTC), ಖಾಸಗಿ ಶಾಲಾ ವಾಹನ ಮಾಲೀಕರ ಸಂಘ, ಪೋಷಕರ ಸಂಘಟನೆಗಳು ಹಾಗೂ ಶಿಕ್ಷಕರ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಸಭೆಯಲ್ಲಿ ಸರ್ವಸಮ್ಮತ ನಿರ್ಧಾರ ಕೈಗೊಂಡ ಬಳಿಕ ಹೊಸ ವೇಳಾಪಟ್ಟಿಯ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆಯಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us