
ಬೆಂಗಳೂರು, ಮೇ 25: ನಮ್ಮ ಮೆಟ್ರೋ ಪ್ರಯಾಣಿಕರಿಗೆ, ಅದರಲ್ಲೂ ಪ್ರಮುಖವಾಗಿ ತುಮಕೂರು ಭಾಗದ ಜನತೆಗೆ ಬಂಪರ್ ಗುಡ್ ನ್ಯೂಸ್ ಸಿಕ್ಕಿದೆ. ಹಲವು ದಶಕಗಳ ಕನಸಾಗಿದ್ದ ಬೆಂಗಳೂರು-ತುಮಕೂರು ಮೆಟ್ರೋ ಮಾರ್ಗ ನಿರ್ಮಾಣದ ಪ್ರಕ್ರಿಯೆಗೆ ಬಿಎಂಆರ್ಸಿಎಲ್ (BMRCL) ಈ ಯೋಜನೆಯ ವಿವರವಾದ ಯೋಜನಾ ವರದಿ ಅಂದರೆ ಡಿಪಿಆರ್ (DPR) ಅನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ.
ಬೆಂಗಳೂರು ಹಾಗೂ ತುಮಕೂರು ನಡುವೆ ನಮ್ಮ ಮೆಟ್ರೋ ರೈಲು ಓಡಾಡಬೇಕು ಎಂಬ ಸಾರ್ವಜನಿಕರ ದಶಕಗಳ ಕನಸು ನನಸಾಗುವ ದಿನಗಳು ಹತ್ತಿರ ಬಂದಿವೆ. ಮಾದವರ ನಿಲ್ದಾಣದಿಂದ ತುಮಕೂರಿನವರೆಗೆ ಹಸಿರು ಮಾರ್ಗದ ಬರೋಬ್ಬರಿ 59.60 ಕಿ.ಮೀ ವಿಸ್ತರಣೆಗಾಗಿ ಬಿಎಂಆರ್ಸಿಎಲ್ ವಿವರವಾದ ಯೋಜನಾ ವರದಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಹಸ್ತಾಂತರಿಸಿದೆ. ಹೊಸ ಕಾರಿಡಾರ್ ಪ್ರಮುಖವಾಗಿ ನೆಲಮಂಗಲ, ದಾಬಸ್‌ಪೇಟೆ ಮತ್ತು ಕ್ಯಾತಸಂದ್ರ ಮೂಲಕ ಹಾದು ಹೋಗಲಿದ್ದು, ಈ ಭಾಗದ ನಿತ್ಯ ಪ್ರಯಾಣಿಕರಿಗೆ ಟ್ರಾಫಿಕ್ ಕಿರಿಕಿರಿಯಿಂದ ದೊಡ್ಡ ಮಟ್ಟದ ಮುಕ್ತಿ ಸಿಗಲಿದೆ.
ಇನ್ನು ಈ ಬಗ್ಗೆ ಮಾತನಾಡಿದ ಮೆಟ್ರೋ ಪ್ರಯಾಣಿಕರಾದ ನಾಗರಾಜ್, ಈ ಮಾರ್ಗದಿಂದ ತುಂಬಾ ಸಹಾಯ ಆಗಲಿದೆ. ಈ ಮಾರ್ಗದಲ್ಲಿ ತುಂಬಾ ಟ್ರಾಫಿಕ್ ಇರುತ್ತದೆ. ನೆಲಮಂಗಲ ದಾಟಿ ಬರಲು ಆಗುವುದಿಲ್ಲ. ತುಮಕೂರಿಗೆ ಮೆಟ್ರೋ ಸಂಚಾರ ಮಾಡುತ್ತಿರುವುದು ತುಂಬಾ ಸಂತೋಷದ ವಿಷಯ ಎಂದು ಹೇಳಿದ್ದಾರೆ.
ಮಾದಾವರ, ಮಾಕಳಿ, ದಾಸನಪುರ, ನೆಲಮಂಗಲ, ವೀವರ್ಸ್ ಕಾಲೋನಿ, ನೆಲಮಂಗಲ ವಿಶ್ವೇಶ್ವರಪುರ, ನೆಲಮಂಗಲ ಟೋಲ್‌ಗೇಟ್, ಬೂದಿಹಾಳ್, ಟಿ. ಬೇಗೂರು, ತಿಪ್ಪಗೊಂಡನಹಳ್ಳಿ, ಕುಲವನಹಳ್ಳಿ, ಮಹಿಮಾಪುರ, ಬಿಲ್ಲನ್‌ಕೋಟೆ, ಸೋಂಪುರ ಕೈಗಾರಿಕಾ ಪ್ರದೇಶ, ದಾಬಸ್‌ಪೇಟೆ, ನಲ್ಲಾಯನಪಾಳ್ಯ, ಚಿಕ್ಕಹಳ್ಳಿ, ಹಿರೇಹಳ್ಳಿ ಕೈಗಾರಿಕಾ ಪ್ರದೇಶ, ಪಂಡಿತನಹಳ್ಳಿ, ಕ್ಯಾತ್ಸಂದ್ರ ಬೈಪಾಸ್, ಕ್ಯಾತ್ಸಂದ್ರ, ಎಸ್‌ಐಟಿ (ಸಿದ್ಧಾರ್ಥ ಕಾಲೇಜು), ತುಮಕೂರು ಬಸ್ ನಿಲ್ದಾಣ, ಟೂಡಾ ಲೇಔಟ್, ನಾಗಣ್ಣ ಪಾಳ್ಯ ಮತ್ತು ಶಿರಾ ಗೇಟ್.
ಇನ್ನು ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ಅನುಷ್ಠಾನಗೊಳ್ಳಲಿರುವ ಈ ಮಹತ್ವಾಕಾಂಕ್ಷಿ ಯೋಜನೆಯ ಮೊದಲ ಹಂತಕ್ಕೆ ಬರೋಬ್ಬರಿ 20,649 ಕೋಟಿ ರೂ ವೆಚ್ಚವಾಗುವ ನಿರೀಕ್ಷೆಯಿದೆ. 2024-25ರ ಕರ್ನಾಟಕ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಈ ಯೋಜನೆಯನ್ನು ಪ್ರಸ್ತಾಪಿಸಿದ್ದರು. ಯೋಜನೆ ಪೂರ್ಣಗೊಂಡರೆ ಈ ಮಾರ್ಗದಲ್ಲಿ ಪ್ರತಿ ಗಂಟೆಗೆ, ಒಂದು ದಿಕ್ಕಿನಲ್ಲಿ ಸುಮಾರು 15 ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಸಂಚರಿಸಲಿದ್ದಾರೆ ಎಂದು ಅಂದಾಜಿಸಲಾಗಿದೆ. ಈ ಯೋಜನೆ ಜಾರಿಯಾಗುತ್ತಿರುವುದಕ್ಕೆ ಉದ್ಯೋಗಿಗಳು ಹಾಗೂ ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಉತ್ತರ ಜಿಲ್ಲೆಯಾಗುವುದೇ ತುಮಕೂರು? ಮತ್ತೆ ಮುನ್ನೆಲೆಗೆ ಬರಲು ಕಾರಣವೇನು?
ಒಟ್ಟಾರೆಯಾಗಿ ಬೆಂಗಳೂರು ಟು ತುಮಕೂರು ಮೆಟ್ರೋ ಮಾರ್ಗಕ್ಕೆ ಚಾಲನೆ ಸಿಕ್ಕರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಉಂಟಾಗುತ್ತಿದ್ದ ತೀವ್ರ ವಾಹನ ದಟ್ಟಣೆ ಹಾಗೂ ಟ್ರಾಫಿಕ್ ಜಾಮ್‌ಗೆ ಶಾಶ್ವತ ಪರಿಹಾರ ಸಿಗುವುದರಲ್ಲಿ ಯಾವುದೇ ಸಂಶಯವಿಲ್ಲ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:09 pm, Mon, 25 May 26