ಮಳೆ ಅಬ್ಬರಕ್ಕೆ ಬೆಸ್ಕಾಂಗೆ ಲಕ್ಷಾಂತರ ರೂ. ಹಾನಿ: ವಿದ್ಯುತ್ ಕಂಬಗಳು, ಮರ ಬಿದ್ದಿದ್ದೆಷ್ಟು?
ಬೆಂಗಳೂರಿನಲ್ಲಿ ಬುಧವಾರ (ಏಪ್ರಿಲ್ 29) ಸುರಿದ ಮಳೆಯು 25 ವರ್ಷದ ಬಳಿಕ ಹೊಸ ದಾಖಲೆ ಬರೆದಿದೆ. ಈ ವರ್ಷಧಾರೆಗೆ ರಾಜಧಾನಿ ತತ್ತರಿಸಿ ಹೋಗಿದೆ. ಮುಂಗಾರು ಆರಂಭಕ್ಕೂ ಮುನ್ನವೇ ಸುರಿದ ಭಾರೀ ಮಳೆಗೆ ನಗರದಲ್ಲಿ ದೊಡ್ಡ ಅವಾಂತರಗಳನ್ನೇ ಸೃಷ್ಟಿಸಿದ್ದು, ಬೆಸ್ಕಾಂಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಹಾಗಾದ್ರೆ, ಒಂದು ಮಳೆಗೆ ಏನೆಲ್ಲಾ ಆಯ್ತು ಎನ್ನುವ ವಿವರ ಇಲ್ಲಿದೆ.

ಬೆಂಗಳೂರು, (ಏಪ್ರಿಲ್ 30): ಉದ್ಯಾನ ನಗರಿ ಬೆಂಗಳೂರಿನಲ್ಲಿ (Bengaluru) ನಿನ್ನೆ (ಏಪ್ರಿಲ್ 29) ಒಂದೆರಡು ಗಂಟೆಗಳ ಕಾಲ ಸುರಿದ ಬಿರುಗಾಳಿ ಮಳೆಗೆ 25 ವರ್ಷಗಳ ದಾಖಲೆ ಮುರಿದಿದೆ. ಏಪ್ರಿಲ್ ತಿಂಗಳಲ್ಲಿ ಗರಿಷ್ಠ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. 2001ರ ಏಪ್ರಿಲ್ 19ರಂದು ನಗರದಲ್ಲಿ 108.6 ಮಿಲಿ ಮೀಟರ್ ಮಳೆಯಾಗಿತ್ತು. ಆದ್ರೆ, 2026ರ ಏಪ್ರಿಲ್ 29ರಂದು ಬುಧವಾರ ಸುರಿದ ಮಳೆಯು 111.5 ಮಿಲಿ ಮೀಟರ್ ಆಗಿದೆ. ಈ ಮೂಲಕ 25 ವರ್ಷಗಳ ಬಳಿಕ ಏಪ್ರಿಲ್ನಲ್ಲಿ ಸುರಿದ ದಾಖಲೆಯ ವರ್ಷಧಾರೆಯಾಗಿದೆ. ಇದರಿಂದ ನಗರದಲ್ಲಿ ಸಾಲು ಸಾಲು ಅವಾಂತರಗಳು ಸೃಷ್ಟಿಯಾಗಿದ್ದು, ಒಂದೇ ಮಳೆಗೆ ಬೆಸ್ಕಾಂಗೆ (Bescom) 87.32 ಲಕ್ಷ ರೂ. ಹಾನಿಯಾಗಿದೆ ಎಂದು ತಿಳಿದುಬಂದಿದೆ.
ಬೆಸ್ಕಾಂಗೆ 87.32 ಲಕ್ಷ ರೂ. ಹಾನಿ
ಏಪ್ರಿಲ್ 29ರ ಸಂಜೆ ಸುರಿದ ಗಾಳಿಸಹಿತ ಭಾರೀ ಮಳೆಗೆ ಬೆಸ್ಕಾಂಗೆ ಭಾರೀ ನಷ್ಟವಾಗಿದೆ. ಮರ, ಮರದ ರೆಂಬೆ ಕೊಂಬೆಗಳು ವಿದ್ಯುತ್ ತಂತಿ ಹಾಗೂ ಕಂಬಗಳ ಮೇಲೆ ಉರುಳಿ ಬರೋಬ್ಬರಿ 87.32 ಲಕ್ಷ ರೂಪಾಯಿನಷ್ಟು ಹಾನಿಯಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ 186 ವಿದ್ಯುತ್ ಕಂಬಗಳು, 38 ಟ್ರಾನ್ಸ್ ಫಾರ್ಮರ್ಸ್, 0.9 ಕಿಮೀ ಉದ್ದದ ವಿದ್ಯುತ್ ತಂತಿಗಳು ಹಾನಿಯಾಗಿದ್ದು, ಬೆಂಗಳೂರು ನಗರ ವ್ಯಾಪ್ತಿಯಲ್ಲೇ 50.52 ಲಕ್ಷ ರೂಪಾಯಿ ನಷ್ಟವಾಗಿದೆ. ಇದೀಗ ಸಮರ್ಪಕ ವಿದ್ಯುತ್ ವ್ಯವಸ್ಥೆ ಮರುಸ್ಥಾಪಿಸಲು ಬೆಸ್ಕಾಂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಮಳೆ ಅಬ್ಬರ: ಅವಾಂತರಗಳ ಬೆನ್ನಲ್ಲೇ ಅಗತ್ಯ ಕ್ರಮಕ್ಕೆ ಮುಂದಾದ ಜಿಬಿಎ
ಮಳೆಗೆ ಬೆಂಗಳೂರಿನಲ್ಲಿ ಅಸ್ತವ್ಯಸ್ತ
ಬುಧವಾರ ಸಂಜೆ ಸುರಿದ ಬಿರುಗಾಳಿ ಸಮೇತ ಆಲಿಕಲ್ಲು ಮಳೆಗೆ ರಾಜಧಾನಿ ತತ್ತರಿಸಿದೆ. ಸುಮಾರು ಒಂದೂವರೆ ಗಂಟೆಯ ಮಳೆಯಿಂದಾಗಿ 10 ಮಂದಿ ಸಾವನ್ನಪ್ಪಿದರೆ, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಜೋರು ಗಾಳಿ-ಮಳೆ ಪರಿಣಾಮ ನಿನ್ನೆಯಿಂದ ಇಂದು ಬೆಳಗ್ಗೆ 9.15ರೊಳಗೆ ಜಿಬಿಎ ವ್ಯಾಪ್ತಿಯಲ್ಲಿ 226 ಮರಗಳು ಧರಾಶಾಹಿಯಾಗಿವೆ. 623 ಮರದ ಕೊಂಬೆಗಳು ಉರುಳಿ ಬಿದ್ದಿವೆ. ಬೃಹದಾಕಾರದ ಮರ ಹಾಗೂ ಅದರ ಕೊಂಬೆಗಳು ಏಕಾಏಕಿ ಬಿದ್ದಿದ್ದರಿಂದ ಅವುಗಳ ಕೆಳಗೆ ನಿಲ್ಲಿಸಿದ್ದ ಹಾಗೂ ಚಲಿಸುತ್ತಿದ್ದ ವಾಹನಗಳು ಹಾನಿಗೊಳಗಾಗಿದ್ದು, ಮಳೆ ನೀರಿನ ರಭಸಕ್ಕೆ ರಸ್ತೆ ಇಕ್ಕೆಲ್ಲಗಳಲ್ಲಿ ನೀರು ತುಂಬಿಕೊಂಡು ಸಂಚಾರ ಅಸ್ತವ್ಯಸ್ತವಾಗಿದೆ.
ಯಾವ ಪಾಲಿಕೆಯಲ್ಲಿ ಎಷ್ಟೆಷ್ಟು ಮರಗಳು ಬಿದ್ದಿವೆ?
ಐದು ಪಾಲಿಕೆಗಳ ಪೈಕಿ ಬೆಂಗಳೂರು ಪಶ್ಚಿಮ ವಿಭಾಗ ಪಾಲಿಕೆಯಲ್ಲಿ 101 ಮರಗಳು ಉರುಳಿಬಿದ್ದರೆ, 313 ಕಡೆಗಳಲ್ಲಿ ಮರದ ಕೊಂಬೆಗಳು ನೆಲಕ್ಕೆ ಮುಖಮಾಡಿವೆ. ಬೆಂಗಳೂರು ಕೇಂದ್ರ ಪಾಲಿಕೆಯಲ್ಲಿ 70 ಕಡೆ ಮರಗಳು ಬಿದ್ದರೆ, 131 ಕಡೆಗಳಲ್ಲಿ ಕೊಂಬೆಗಳು ಉರುಳಿವೆ. ಬೆಂಗಳೂರು ದಕ್ಷಿಣದಲ್ಲಿ 26 ಮರಗಳು ಹಾಗೂ 95 ಕಡೆಗಳಲ್ಲಿ ಕೊಂಬೆಗಳು ಉರುಳಿಬಿದ್ದಿವೆ. ಒಟ್ಟಾರೆ 226 ಕಡೆಗಳಲ್ಲಿ ಮರಗಳು ಬಿದ್ದ ಪೈಕಿ, 138 ಕಡೆಗಳಲ್ಲಿ ಅವುಗಳನ್ನು ತೆರವುಗೊಳಿಸಿದರೆ, 623 ಮರದ ಕೊಂಬೆ ಬಿದ್ದ ಪೈಕಿ 308 ಕಡೆಗಳಲ್ಲಿ ತೆರವು ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಂಟ್ರೋಲ್ ರೂಮ್ಗಳಿಗೆ ದೂರು
ಪಂಚ ಪಾಲಿಕೆಗಳ ಕಂಟ್ರೋಲ್ ರೂಮ್ಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರಿಂದ ಮರ ಹಾಗೂ ವಿದ್ಯುತ್ ಕಂಬಗಳು ಬಿದ್ದಿರುವ ಬಗ್ಗೆ ದೂರುಗಳು ಬಂದರೆ, 68 ಕರೆಗಳು ಜಲಾವೃತವಾಗಿರುವ ಸಂಬಂಧ ದೂರುಗಳು ಬಂದಿವೆ ಎಂದು ಜಿಬಿಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವರದಿ: ಲಕ್ಷ್ಮೀನರಸಿಂಹ ಟಿವಿ9,ಬೆಂಗಳೂರು
Published On - 8:27 pm, Thu, 30 April 26




