ಕಾಂಗ್ರೆಸ್​​ ಪಕ್ಷದ ಲೆಟರ್​​ ಹೆಡ್​​ನಲ್ಲಿ ಸಾಂವಿಧಾನಿಕ ಹುದ್ದೆಗಳ ನೇಮಕದ ಬಗ್ಗೆ ಉಲ್ಲೇಖ: ಬಿಜೆಪಿ ಶಾಸಕ ಸುರೇಶ್​​ ಕುಮಾರ್​​ ಕಿಡಿ

ಕಾಂಗ್ರೆಸ್ ಹೈಕಮಾಂಡ್ ಬಿಡುಗಡೆ ಮಾಡಿದ ನೂತನ ಸಚಿವರ ಹಾಗೂ ಸಾಂವಿಧಾನಿಕ ಹುದ್ದೆಗಳ ನೇಮಕಾತಿ ಪಟ್ಟಿಯು ಹೊಸ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಸ್ಪೀಕರ್ ಮತ್ತು ಸಭಾಪತಿಯಂತಹ ಪಕ್ಷಾತೀತ ಅತ್ಯುನ್ನತ ಹುದ್ದೆಗಳ ಹೆಸರುಗಳನ್ನು ಕಾಂಗ್ರೆಸ್ ತನ್ನ ಅಧಿಕೃತ ಪಕ್ಷದ ಲೆಟರ್‌ಹೆಡ್‌ನಲ್ಲಿ (Letterhead) ಪ್ರಕಟಿಸಿರುವುದಕ್ಕೆ ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್​​ ಪಕ್ಷದ ಲೆಟರ್​​ ಹೆಡ್​​ನಲ್ಲಿ ಸಾಂವಿಧಾನಿಕ ಹುದ್ದೆಗಳ ನೇಮಕದ ಬಗ್ಗೆ ಉಲ್ಲೇಖ: ಬಿಜೆಪಿ ಶಾಸಕ ಸುರೇಶ್​​ ಕುಮಾರ್​​ ಕಿಡಿ
ಸುರೇಶ್​​ ಕುಮಾರ್​​
Image Credit source: Tv9 Kannada

Updated on: Aug 03, 2026 | 7:39 PM

ಬೆಂಗಳೂರು, ಆಗಸ್ಟ್​​ 03: ಸಿಎಂ ಡಿಕೆ ಶಿವಕುಮಾರ್​​ ಅವರ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಲಿರುವ ಶಾಸಕರ ಹೆಸರಿನ ಜೊತೆಗೆ ವಿಧಾನಸಭೆಯ ಸ್ಪೀಕರ್​​, ಡೆಪ್ಯೂಟಿ ಸ್ಪೀಕರ್​​ ಮತ್ತು ಸಭಾಪತಿ, ಉಪ ಸಭಾಪತಿ ಹುದ್ದೆಗಳಿಗೂ ನೇಮಕ ಸಂಬಂಧ ಪಕ್ಷದ ಪತ್ರ ಶೀರ್ಷಿಕೆಯಲ್ಲಿ (ಲೆಟರ್‌ಹೆಡ್) ಕಾಂಗ್ರೆಸ್​​ ಹೈಕಮಾಂಡ್​​ ಉಲ್ಲೇಖಿಸಿರುವುದೀಗ ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್​​ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ಶಾಸಕ ಎಸ್​​. ಸುರೇಶ್​​ ಕುಮಾರ್​​, ಮತ್ತೊಂದು ಕೆಟ್ಟ ಸಂಪ್ರದಾಯಕ್ಕೆ ಕಾಂಗ್ರೆಸ್ ಪಕ್ಷ ನಾಂದಿ ಹಾಡಿದೆ ಎಂದು ಕಿಡಿ ಕಾರಿದ್ದಾರೆ.

‘ಸಾಂವಿಧಾನಿಕ ಹುದ್ದೆಗಳ ಘನತೆಗೆ ಧಕ್ಕೆ’

ವಿಧಾನಸಭೆಯ ಮಾನ್ಯ ಸಭಾಧ್ಯಕ್ಷರು, ಮಾನ್ಯ ಉಪಸಭಾಧ್ಯಕ್ಷರು ಹಾಗೂ ವಿಧಾನ ಪರಿಷತ್ತಿನ ಮಾನ್ಯ ಸಭಾಪತಿಗಳು ಮತ್ತು ಉಪಸಭಾಪತಿ ಹುದ್ದೆಗಳು ಯಾವುದೇ ರಾಜಕೀಯ ಪಕ್ಷದ ವ್ಯಾಪ್ತಿಗೆ ಸೀಮಿತವಾಗದ, ಅತ್ಯುನ್ನತ ಸಾಂವಿಧಾನಿಕ ಸ್ಥಾನಗಳಾಗಿವೆ. ಈ ಹುದ್ದೆಗಳು ತಮ್ಮದೇ ಆದ ಘನತೆ, ಗೌರವ, ನಿಷ್ಪಕ್ಷಪಾತತೆ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಪ್ರತಿನಿಧಿಸುವ ಪರಂಪರೆಯನ್ನು ಹೊಂದಿವೆ. ಆದರೆ, ಕಾಂಗ್ರೆಸ್ ತನ್ನ ಅಧಿಕೃತ ಪಕ್ಷದ ಪತ್ರ ಶೀರ್ಷಿಕೆಯಲ್ಲಿ ಈ ಸಾಂವಿಧಾನಿಕ ಹುದ್ದೆಗಳ ಹೆಸರನ್ನು ಬಳಸಿರುವುದು ಅತ್ಯಂತ ಆಕ್ಷೇಪಾರ್ಹ. ಇಂತಹ ನಡೆ ಈ ಹುದ್ದೆಗಳ ಪಕ್ಷಾತೀತ ಸ್ವರೂಪಕ್ಕೆ ಧಕ್ಕೆ ತರುವುದಲ್ಲದೆ, ಅವುಗಳ ಘನತೆ ಮತ್ತು ಗೌರವಕ್ಕೂ ಕಳಂಕ ತರುವ ಪ್ರಯತ್ನವಾಗಿದೆ ಎಂದಿದ್ದಾರೆ.

ಇದನ್ನೂ ಓದಿ: ಡಿಕೆ ಶಿವಕುಮಾರ್‌ ಸಂಪುಟ ಸೇರಿದ 19 ಸಚಿವರು: ಹೊಸಬರಿಗೆ ಅವಕಾಶ; ಹಳಬರಿಗೂ ಮಣೆ!

‘ಕಾಂಗ್ರೆಸ್‌ನ ದ್ವಂದ್ವ ನೀತಿ ಮತ್ತೊಮ್ಮೆ ಬಹಿರಂಗ’

ತನಗೆ ಗೊತ್ತಿರುವಂತೆ ಮುಂದೆ ಆಯ್ಕೆಯಾಗಬೇಕಿರುವ ಸಭಾಧ್ಯಕ್ಷರ, ಉಪಸಭಾಧ್ಯಕ್ಷರ, ಸಭಾಪತಿಗಳ ಹಾಗೂ ಉಪ ಸಭಾಪತಿಗಳ ಹೆಸರುಗಳನ್ನು ಆಳುವ ಪಕ್ಷದ ಲೆಟರ್ ಹೆಡ್ ನಲ್ಲಿ ದೆಹಲಿಯಿಂದಲೇ ಕಳುಹಿಸುತ್ತಿರುವುದು ಇದೇ ಮೊದಲ ಬಾರಿ. ಇದು ಕೇವಲ ಸಂಸದೀಯ ಸಂಪ್ರದಾಯಗಳ ಉಲ್ಲಂಘನೆಯಷ್ಟೇ ಅಲ್ಲ; ಸಾಂವಿಧಾನಿಕ ಮೌಲ್ಯಗಳು ಮತ್ತು ಪ್ರಜಾಪ್ರಭುತ್ವದ ಮೂಲಭೂತ ತತ್ವಗಳ ಮೇಲಿನ ನಿರ್ಲಕ್ಷ್ಯದ ಪ್ರತೀಕವಾಗಿದೆ. ಬಾಯಲ್ಲಿ ಸಂವಿಧಾನದ ರಕ್ಷಣೆ ಎಂದು ಹೇಳಿಕೊಂಡು, ಆಚರಣೆಯಲ್ಲಿ ಸಾಂವಿಧಾನಿಕ ಸಂಸ್ಥೆಗಳು ಮತ್ತು ಉನ್ನತ ಹುದ್ದೆಗಳನ್ನು ಪಕ್ಷದ ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳುವ ಕಾಂಗ್ರೆಸ್‌ನ ದ್ವಂದ್ವ ನೀತಿ ಮತ್ತೊಮ್ಮೆ ಬಹಿರಂಗವಾಗಿದೆ ಎಂದವರು ಆರೋಪಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Loading...
Unable to load recommendations.
Follow Us