
ಬೆಂಗಳೂರು, ನವೆಂಬರ್ 27: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಪ್ರತಿಭಟನೆ 11ನೇ ದಿನಕ್ಕೆ ತಲುಪಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಡಿಕೆ ಶಿವಕುಮಾರ್, ಪ್ರಣಾಳಿಕೆಯಲ್ಲಿ ಹೇಳಿದಂತೆ ನಾವು ನಡೆದುಕೊಳ್ಳುತ್ತೇವೆ. ಆಶಾ ಕಾರ್ಯಕರ್ತೆಯರ ಕಷ್ಟದ ಬಗ್ಗೆ ನನಗೆ ಅರಿವಿದ್ದು, ಹೋರಾಟವನ್ನು ಹಿಂಪಡೆಯುವಂತೆ ಮನವಿ ಮಾಡುತ್ತೇನೆ ಎಂದಿದ್ದಾರೆ. ರಾಜಕಾರಣ ಮಾಡುವವರು ರಾಜಕಾರಣ ಮಾಡುತ್ತಾರೆ. ಆಶಾ ಕಾರ್ಯಕರ್ತೆಯರು ನನ್ನ ಸಹೋದರಿಯರಿದ್ದಂತೆ ಎಂದವರು ತಿಳಿಸಿದ್ದಾರೆ.
ಆಶಾ ಕಾರ್ಯಕರ್ತೆಯರ ಹೋರಾಟ ಸಂಬಂಧ ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಟೀಕೆ ವಿಚಾರವಾಗಿಯೂ ಪ್ರತಿಕ್ರಿಯಿಸಿರುವ ಸಿಎಂ, ಈ ಕುರಿತ ಎನ್ಡಿಎ ನಾಯಕರ ಹೇಳಿಕೆಗೆ ಪ್ರತಿಕ್ರಿಯೆ ನೀಡಲ್ಲ. ಅವರಿಗೆ ಆಶಾ ಕಾರ್ಯಕರ್ತೆಯರ ಸಮಸ್ಯೆಗಳ ಬಗ್ಗೆ ಕಾಳಜಿ ಇಲ್ಲ. ಎನ್ಡಿಎ ನಾಯಕರು ಈ ಬಗ್ಗೆ ಧ್ವನಿ ಎತ್ತಿ ಕೇಂದ್ರದಿಂದ ಕೊಡಿಸಬೇಕು. ಆಶಾ ಕಾರ್ಯಕರ್ತೆಯರ ಮೇಲೆ ಕನಿಕರ ಇದ್ದರೆ, ಬಿಜೆಪಿಯವರು ಕೇಂದ್ರದಿಂದ ಹಣ ಕೊಡಿಸುವ ಕೆಲಸ ಮಾಡಲಿ. ಹೀಗಾಗಿ ಹೆಚ್.ಡಿ.ಕುಮಾರಸ್ವಾಮಿ ಮತ್ತು ಬಿಜೆಪಿಯವರಿಗೆ ಮಾತಾಡೋದಕ್ಕೆ ಹಕ್ಕಿಲ್ಲ. ಆಶಾ ಕಾರ್ಯಕರ್ತೆಯರ ಸಂಬಳವನ್ನು ನಾವೇ ಹೆಚ್ಚಳ ಮಾಡಿದ್ದೇವೆ ಎಂದವರು ತಿಳಿಸಿದ್ದಾರೆ.
ಇದನ್ನೂ ಓದಿ: “ಹಳ್ಳಿಗಳಲ್ಲಿ ಮನೆ ಹೆರಿಗೆ, ಸಾವುಗಳಾಗುತ್ತಿವೆ, ವರದಿ ಕೊಡ್ತೇವೆ”:ಯು.ಟಿ. ಖಾದರ್ ಹೇಳಿಕೆಗೆ ನಾಗಲಕ್ಷ್ಮೀ ಕಿಡಿ
ನಿಮ್ಮ ಮೇಲೆ ನಮಗೆ ಭರವಸೆ ಇದೆ ಎಂದು ನನಗೆ ಹಲವು ಆಶಾ ಕಾರ್ಯಕರ್ತೆಯರು ಸಂದೇಶ ಕಳಿಸಿದ್ದಾರೆ. ನಾವು ಮತ್ತೆ ಕೆಲಸಕ್ಕೆ ಹೋಗಲು ಸಿದ್ಧವಿದ್ದೇವೆ ಅಂತ ಹೇಳಿದ್ದಾರೆ. ನಾನು ಅದನ್ನೆಲ್ಲಾ ಬಹಿರಂಗ ಮಾಡಿ ಒಡೆಯಲು ಹೋಗಲ್ಲ. ಹಿಂದೆ ಸಿದ್ದರಾಮಯ್ಯ, ದಿನೇಶ್ ಏನು ಹೇಳಿದ್ರು ಅಂತ ಗೊತ್ತಿದೆ. ನನಗೆ ಇದೆಲ್ಲದರ ಬಗ್ಗೆ ಅರಿವು ಇದೆ. ಸೇವೆ ಮಾಡಬೇಕು ಎಂದು ನೀವು ಮುಂದಕ್ಕೆ ಬಂದಿದ್ದೀರಿ. ನೀವು ಹೋರಾಟ ಮಾಡಬೇಕು ಎಂದು ಬಂದಿಲ್ಲ, ಹೋರಾಟ ನಿಮ್ಮದಲ್ಲ. ನೀವು ಪಟ್ಟು ಹಿಡಿದು ಸಹಿ ಹಾಕಿ ಅಂದ್ರೆ ಅದು ಸಾಧ್ಯವಿಲ್ಲ ಎಂದವರು ತಿಳಿಸಿದ್ದಾರೆ.
ಆದರೆ ಸಿಎಂ ಹೇಳಿಕೆಗೆ ಕೌಂಟರ್ ಕೊಟ್ಟಿರುವ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷ ಸೋಮಶೇಖರ್, ಎಷ್ಟು ಜನರ ಬಳಿ ಮುಖ್ಯ ಮಂತ್ರಿ ನಂಬರ್ ಇರುತ್ತೆ? ನಮ್ಮ ಬಳಿಯೇ ಸಿಎಂ ಪೋನ್ ನಂಬರ್ ಇಲ್ಲ. ಯಾವ ಆಶಾ ಕಾರ್ಯಕರ್ತೆ ನಿಮಗೆ ಕಾಲ್, ಮೇಸೆಜ್ ಮಾಡಿದ್ದಾರೆ ಹೇಳಿ ಎಂದು ಆಗ್ರಹಿಸಿದ್ದಾರೆ. ನಮ್ಮ ಬೇಡಿಕೆ ವಿಚಾರವಾಗಿ ಕೇಂದ್ರಕ್ಕೂ ಪತ್ರ ಬರೆದಿದ್ದೇವೆ. ಸಾಮಾಜಿಕ ಹೋರಾಟದ ದುರುಪಯೋಗಕ್ಕೆ ನಾವು ಆಸ್ಪದ ಕೊಟ್ಟಿಲ್ಲ. ಹೀಗಾಗಿ ಯಾವುದೇ ಪಕ್ಷಕ್ಕೂ ನಾವು ವೇದಿಕೆ ನೀಡಿಲ್ಲ. ಖಚಿತವಾಗಿ, ಲಿಖಿತವಾಗಿ ಏನೂ ಹೇಳಿಲ್ಲ. ಸರ್ಕಾರ ಏನು ಕೊಡುತ್ತೆ ಹೇಳೋಕೆ ಇವರು ರೆಡಿ ಇಲ್ಲ. ಹೀಗಾಗಿ ಹೋರಾಟ ಮುಂದುವರಿಯುತ್ತೆ ಎಂದವರು ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.