Electric Bus: 100 ಹೊಸ ಎಲೆಕ್ಟ್ರಿಕ್ ಬಸ್ಗಳಿಗೆ ಸಿಎಂ ಸಿದ್ದರಾಮಯ್ಯ ಚಾಲನೆ, ವಿಶೇಷತೆಗಳೇನು?
ಸಿಎಂ ಸಿದ್ದರಾಮಯ್ಯನವರು 100 ಹೊಸ ಎಲೆಕ್ಟ್ರಿಕ್ ಬಸ್ಗಳಿಗೆ ಚಾಲನೆ ನೀಡಿದರು. ಕೇಂದ್ರ ಸರ್ಕಾರದ ಫೇಮ್- 2 ಅಡಿಯಲ್ಲಿ 921 ಬಸ್ಗಳನ್ನು ಅಳವಡಿಸಿಕೊಳ್ಳಲು ಬಿಎಂಟಿಸಿ ಮುಂದಾಗಿದ್ದು ಮೊದಲ ಹಂತದಲ್ಲಿ 100 ಟಾಟಾ ಕಂಪನಿಯ ಇವಿ ಬಸ್ಗಳಿಗೆ ಚಾಲನೆ ನೀಡಲಾಗಿದೆ. 12 ವರ್ಷಗಳ ಕಾಂಟ್ರ್ಯಾಕ್ಟ್ ಅಡಿಯಲ್ಲಿ ಬೆಂಗಳೂರಿನಲ್ಲಿ ಈ ಬಸ್ಗಳು ಸಂಚಾರ ನಡೆಸಲಿವೆ.
ಬೆಂಗಳೂರು, ಡಿ.26: ವಿಧಾನಸೌಧದ ಮುಂಭಾಗ ಸಿಎಂ ಸಿದ್ದರಾಮಯ್ಯನವರು (Siddaramaiah) 100 ಹೊಸ ಎಲೆಕ್ಟ್ರಿಕ್ ಬಸ್ಗಳಿಗೆ (Electric Bus) ಚಾಲನೆ ನೀಡಿದ್ದಾರೆ. ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಈ ವೇಳೆ ಡಿಸಿಎಂ ಡಿಕೆ ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಸಚಿವ ಪ್ರಿಯಾಂಕ್ ಖರ್ಗೆ ಸೇರಿ ಹಲವರು ಉಪಸ್ಥಿತರಿದ್ದರು. ಕೇಂದ್ರ ಸರ್ಕಾರದ ಫೇಮ್- 2 ಅಡಿಯಲ್ಲಿ 921 ಬಸ್ಗಳನ್ನು ಅಳವಡಿಸಿಕೊಳ್ಳಲು ಬಿಎಂಟಿಸಿ ಮುಂದಾಗಿದ್ದು ಮೊದಲ ಹಂತದಲ್ಲಿ 100 ಟಾಟಾ ಕಂಪನಿಯ ಇವಿ ಬಸ್ಗಳಿಗೆ ಚಾಲನೆ ನೀಡಲಾಗಿದೆ. 12 ವರ್ಷಗಳ ಕಾಂಟ್ರ್ಯಾಕ್ಟ್ ಅಡಿಯಲ್ಲಿ ಬೆಂಗಳೂರಿನಲ್ಲಿ ಈ ಬಸ್ಗಳು ಸಂಚಾರ ನಡೆಸಲಿವೆ.
ಎಲೆಕ್ಟ್ರಿಕ್ ಬಸ್ಗಳಿಗೆ ಚಾಲನೆ ಕೊಟ್ಟ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬೆಂಗಳೂರಿನ ಜನರ ಅನುಕೂಲಕ್ಕೆ ಇವತ್ತು 100 ವಿದ್ಯುತ್ ಚಾಲಿತ ಬಸ್ಗಳಿಗೆ ಚಾಲನೆ ನೀಡಿದ್ದೇವೆ. ಬಿಎಂಟಿಸಿ ಮತ್ತು ಟಾಟಾ ಮೋಟಾರ್ಸ್ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೀತಿದೆ. 2024ರ ವೇಳೆಗೆ 1,600 ಬಸ್ಗಳು ಸೇರ್ಪಡೆಯಾಗುತ್ತೆ. ಇದೆಲ್ಲ ನಮ್ಮ ರಾಜ್ಯದಲ್ಲೇ ತಯಾರಾಗುವ ಬಸ್ಗಳು. ಧಾರವಾಡದ ಟಾಟಾ ಮೋಟಾರ್ಸ್ ನಲ್ಲಿ ತಯಾರಾಗುತ್ತೆ. ಇದರಿಂದ ವಾತಾವರಣದಲ್ಲಿ ಮಾಲಿನ್ಯ ಕಡಿಮೆಯಾಗುತ್ತೆ. ಬೆಂಗಳೂರಲ್ಲಿ 6,144 ಬಸ್ ಓಡಾಡ್ತಿವೆ, 40 ಲಕ್ಷ ಜನ ಪ್ರಯಾಣ ಮಾಡ್ತಾರೆ. 40 ಲಕ್ಷ ಜನರಲ್ಲಿ ಮಹಿಳೆಯರೆಲ್ಲರೂ ಉಚಿತವಾಗಿ ಪ್ರಯಾಣ ಮಾಡ್ತಾರೆ. ಯಾವ ಧರ್ಮ ಇಲ್ಲ, ಜಾತಿ ಇಲ್ಲ, ಅಂತಸ್ಥಿಲ್ಲ. ಬರೀ ಬೆಂಗಳೂರಲ್ಲ, ಇಡೀ ರಾಜ್ಯದಲ್ಲಿ ಓಡಾಡಬಹುದು ಎಂದರು.
ಶಕ್ತಿ ಯೋಜನೆ ಕಾರ್ಮಿಕ ಮಹಿಳೆಯರಿಗೆ, ಶಾಲಾಮಕ್ಕಳಿಗೆ ಹೆಚ್ಚು ಉಪಯೋಗವಾಗುತ್ತೆ. ಹಿಂದೆ ಯಾವ ಸರ್ಕಾರ ಕೂಡ ಮಾಡಿರಲಿಲ್ಲ. ವಿರೋಧ ಪಕ್ಷದವರು ಟೀಕೆ ಮಾಡ್ತಾರೆ. ನಿಮ್ಮ ಕಾಲದಲ್ಲಿ ಯಾಕೆ ಮಾಡಲಿಲ್ಲ. ಮಹಿಳೆಯರು ಮುಂದಿನ ಚುನಾವಣೆಯಲ್ಲಿ ಅದಕ್ಕೆ ಉತ್ತರ ಕೊಡಬೇಕು. ನಮಗೆ ಆರ್ಶೀವಾದ ಮಾಡೋ ಮೂಲಕ ತಕ್ಕ ಉತ್ತರ ಕೊಡಬೇಕು. ಸಾರಿಗೆ ಬಸ್ ಲಾಭ ಮಾಡಬೇಕು ಅನ್ನೋದು ಸರ್ಕಾರದ ಉದ್ದೇಶ ಅಲ್ಲ. ಹಾಗಂತ ನಷ್ಟ ಮಾಡಬಾರದು, ಪುರುಷರು ದುಡ್ಡು ಕೊಟ್ಟು ತಿರುಗಾಡ್ತಾರೆ. ಶಕ್ತಿ ಯೋಜನೆಯಿಂದ ಹಣ ಉಳಿತಾಯ ಆಗುತ್ತೆ. ಕೊಳ್ಳುವ ಶಕ್ತಿ ಹೆಚ್ಚಾಗಿ ಆರ್ಥಿಕ ಚಟುವಟಿಕೆಗೆ ಲಾಭ ಆಗುತ್ತೆ. ಇದರಿಂದ ಸರ್ಕಾರಕ್ಕೂ ತೆರಿಗೆ ಆದಾಯ ಬರುತ್ತೆ. ಇದೆಲ್ಲವನ್ನ ಗಮನಿಸಿ ಈ ಯೋಜನೆ ಮಾಡಿದ್ದೇವೆ. ದೇವಸ್ಥಾನಕ್ಕೆ ಬರೋ ಮಹಿಳೆಯರಿಂದ ದೇವಸ್ಥಾನದ ಆದಾಯ ಹೆಚ್ಚಿದೆ. ಹೊಟೇಲ್ಗಳ ಆದಾಯ ಹೆಚ್ಚಿದೆ ಎಂದರು.
ಇದನ್ನೂ ಓದಿ: ಚಿಕ್ಕಮಗಳೂರಿನ ಶಾಂತವೇರಿ ದರ್ಗಾದಲ್ಲಿ ದಾಂಧಲೆ ನಡೆಸಿದ ಯುವಕರ ಗುಂಪು
ಅಪಘಾತಕ್ಕೆ 1 ಕೋಟಿ ಪರಿಹಾರ ನಿಗದಿ
ಇನ್ನು ಇದೇ ವೇಳೆ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಈಗಾಗಲೇ ಹಲವು ಎಲೆಕ್ಟ್ರಿಕ್ ಬಸ್ ಓಡಾಡುತ್ತಿವೆ. ಎಸಿ ಬಸ್ ಗಳಿಗೆ ಟೆಂಡರ್ ಕರೆದಿದ್ದೇವೆ. ಶೀರ್ಘದಲ್ಲೇ ಆಗುತ್ತೆ. ಮಾರ್ಚ್ ಒಳಗೆ 1200 ಎಲೆಕ್ಟ್ರಿಕ್ ಬಸ್ ಇರುತ್ತೆ. ದೆಹಲಿ ಬಿಟ್ಟರೇ ಎಲೆಕ್ಟ್ರಿಕ್ ಬಸ್ ಹೆಚ್ಚು ಇರೋ ನಗರ ನಮ್ಮದೇ ಆಗುತ್ತೆ. 1 ಕೋಟಿ 40 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇದೆ. ಈ ಜನಸಂಖ್ಯೆಗೆ ತಕ್ಕಂತೆ ಕನಿಷ್ಠ 10 ಸಾವಿರ ಬಸ್ ಬೇಕು. ಮೆಟ್ರೋಗಿಂತ ಬಿಎಂಟಿಸಿಯಲ್ಲಿ ಹೆಚ್ಚು ಜನ ಓಡಾಡುತ್ತಿದ್ದಾರೆ. ಪ್ರತಿದಿನ 42 ಲಕ್ಷ ಜನ ಬಿಎಂಟಿಸಿ ಬಸ್ ಬಳಸ್ತಿದ್ದಾರೆ. ಶಕ್ತಿ ಯೋಜನೆ ಬಳಿಕ ಬಸ್ ಬಳಕೆ ಹೆಚ್ಚಾಗಿದೆ. 9 ಸಾವಿರ ಸಿಬ್ಬಂದಿ ನೇಮಕಾತಿಗೆ ಸರ್ಕಾರ ಅನುಮತಿ ಕೊಟ್ಟಿದೆ. ಮಾರ್ಚ್ ವೇಳೆಗೆ ನೇಮಕಾತಿ ಕೂಡ ಆಗುತ್ತೆ. ದೇಶದಲ್ಲೇ ಮೊದಲ ಬಾರಿಗೆ ಅಪಘಾತಕ್ಕೆ 1 ಕೋಟಿ ಪರಿಹಾರ ನಿಗದಿಪಡಿಸಿದ್ದೇವೆ ಎಂದರು.
ಐದು ಬೆರಳು ಸೇರಿ ಹಸ್ತಕ್ಕೆ ಶಕ್ತಿ ನೀಡಲಿ
ಡಿಕೆ ಶಿವಕುಮಾರ್ ಮಾತನಾಡಿ, ಸರ್ಕಾರದ ಪರವಾಗಿ ಸಾರಿಗೆ ಇಲಾಖೆ ಮಂತ್ರಿಗಳ ನೇತೃತ್ವದಲ್ಲಿ ಇತಿಹಾಸ ಸೃಷ್ಟಿಸಲು ಹೊರಟಿದ್ದೇವೆ. ಮುಂದಿನ ವರ್ಷದೊಳಗೆ ಎಲೆಕ್ಟ್ರಿಕ್ ಬಸ್ ಗಳನ್ನ ಹೆಚ್ಚಿಸಲು ಹೋಗ್ತಿದ್ದೇವೆ. ಅದಕ್ಕಾಗಿ ಸಾರಿಗೆ ಸಚಿವರಿಗೆ, ಸಂಸ್ಥೆಗೆ ಅಭಿನಂದನೆ. ಈ ಹಿಂದೆ ಎಲೆಕ್ಟ್ರಿಕ್ ಮಾಡಲು ಹೋದಾಗ ಹಲವರು ನಗುತ್ತಿದ್ರು. ಈಗ ಎಲೆಕ್ಟ್ರಿಕ್ ನಲ್ಲೇ ಬಸ್ ಗಳು ಸಂಚರಿಸ್ತಿವೆ. ಇವತ್ತು ಇಡೀ ದೇಶ ಮಾಲಿನ್ಯ ನಿಯಂತ್ರಣದ ಬಗ್ಗೆ ಚಿಂತನೆ ಮಾಡಬೇಕಿದೆ. ಶಕ್ತಿಯೋಜನೆಯಿಂದ ಸರ್ಕಾರಕ್ಕೆ ಲಾಸ್ ಆಗ್ತಿರಬಹುದು. ಆದರೆ ಇದರಿಂದ ಎಕನಾಮಿಕ್ ರೆವಲೂಷನ್ ಆಗ್ತಿದೆ. ಸಮಾಜದಲ್ಲಿ ಹಣ ಸರ್ಕುಲೇಷನ್ ಆಗ್ತಿದೆ. ಸರ್ವೆಯಲ್ಲಿ 92% ಮಹಿಳೆಯರು ಸಂತಸ ಹಂಚಿಕೊಂಡಿದ್ದಾರೆ. ಶಕ್ತಿ ಯೋಜನೆ ಜಾರಿ ಮಾಡಿ ಒಳ್ಳೆಯ ಕೆಲಸ ಮಾಡಿದ್ದೇವೆ. ನಮ್ಮ ಗ್ಯಾರಂಟಿಗಳನ್ನ ಟೀಕೆ ಮಾಡ್ತಿದ್ರು. ಈಗ ನಮ್ಮ ಐದನೇ ಗ್ಯಾರಂಟಿ ಯುವನಿಧಿಯನ್ನ ಚಾಲನೆ ಮಾಡ್ತೀವೆ. ಐದು ಬೆರಳು ಸೇರಿ ಹಸ್ತಕ್ಕೆ ಶಕ್ತಿ ನೀಡಲಿ ಎಂದರು.
ಎಲೆಕ್ಟ್ರಿಕ್ ಬಸ್ಗಳ ವಿಶೇಷತೆ
- 12 ಮೀಟರ್ ಉದ್ದ, 400 ಮಿ.ಮೀ ಎತ್ತರ
- 35 ಸೀಟ್ ಗಳು, 3 ಕ್ಯಾಮರಾಗಳು, 1 ಹಿಂಬದಿ ಕ್ಯಾಮರಾ ಅಳವಡಿಕೆ
- 298 ಕಿಲೋವ್ಯಾಟ್ ಸಾಮರ್ಥ್ಯದ ಬ್ಯಾಟರಿ ಚಾಲಿತ ಬಸ್
- ವಾಯ್ಸ್ ಅನೌನ್ಸ್ ಮೆಂಟ್ , 4 ಎಲ್ ಇ ಡಿ ನಾಮಫಲಕ ಅಳವಡಿಕೆ
- ಮಹಿಳೆಯರ ಸುರಕ್ಷತೆಗಾಗಿ ಪ್ಯಾನಿಕ್ ಬಟನ್ ಅಳವಡಿಕೆ
- FDAS (ಫೈರ್ ಡಿಟೆಕ್ಷನ್ ಅಲರಾಂ ಸಿಸ್ಟಂ ) ಅಳವಡಿಕೆ
- ವಾಹನ ಟ್ರ್ಯಾಕಿಂಗ್ ಮಾಡುವ ವ್ಯವಸ್ಥೆ
- ಹಿರಿಯ ನಾಗರೀಕರು, ವಿಕಲಚೇತನರಿಗೆ ವೀಲ್ ಚೇರ್ ರಾಂಪ್ ಸೌಲಭ್ಯ
- ಕೋರಿಕೆ ನಿಲುಗಡೆಗಾಗಿ ಸ್ಟಾಪ್ ಬಟನ್ ಅಳವಡಿಕೆ
- ಈ ಸಾಲಿನಲ್ಲಿ ಸುಮಾರು 1300 ವಿದ್ಯುತ್ ಚಾಲಿತ ಬಸ್ ಗಳ ಸೇರ್ಪಡೆಗೆ ಚಿಂತನೆ ನಡೆದಿದ್ದು 921 ಎಲೆಕ್ಟ್ರಿಕ್ ಬಸ್ ಗಳ ಸೇರ್ಪಡೆಗೆ ಬಿಎಂಟಿಸಿ ಸಜ್ಜಾಗಿದೆ. ಇಂದು ಮೊದಲ ಹಂತವಾಗಿ 100 ಎಲೆಕ್ಟ್ರಿಕ್ ಬಸ್ ಗಳಿಗೆ ಚಾಲನೆ ಸಿಕ್ಕಿದೆ.ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ