RCB, KSCAಗೆ ಮತ್ತೊಂದು ಶಾಕ್: ಹೈಕೋರ್ಟ್ ಮೆಟ್ಟಿಲೇರಿದ ಕಬ್ಬನ್ ಪಾರ್ಕ್ ಅಸೋಸಿಯೇಷನ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿಜಯೋತ್ಸವ ಕಾರ್ಯಕ್ರಮ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತ ಪ್ರಕರಣದ ತನಿಖೆ ನಡೆಯುತ್ತಿದೆ. ಈ ನಡುವೆ ಇದೀಗ ಕೆಎಸ್‌ಸಿಎ ಹಾಗೂ ಆರ್‌ಸಿಬಿಗೆ ಕಬ್ಬನ್ ಪಾರ್ಕ್ ಅಸೋಸಿಯೇಷನ್ ಶಾಕ್ ನೀಡಿದೆ. ಏನದು ಮತ್ತೊಂದು ಶಾಕ್? ಇಲ್ಲಿದೆ ವಿವರ

ಬೆಂಗಳೂರು, ಆಗಸ್ಟ್ 10: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ (RCB) ಐಪಿಎಲ್ (IPL) ಟ್ರೋಫಿ ಗೆದ್ದ ಸಂಭ್ರಮಾಚರಣೆ ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ಸ್ ಮೇಲೆ ನೆರವೇರಿತ್ತು. ಆರ್‌ಸಿಬಿ ಆಟಗಾರರನ್ನು ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ಸ್ನಲ್ಲಿ ಸರ್ಕಾರ ಸನ್ಮಾನಿಸಿತ್ತು. ಆರ್‌ಸಿಬಿ ಆಟಗಾರರನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಕಿಕ್ಕಿರಿದು ಸೇರಿದ್ದರು. ಅಭಿಮಾನಿಗಳು ವಿಧಾನಸೌಧದ ಪಕ್ಕದಲ್ಲಿ ಇದ್ದ ಕಬ್ಬನ್ ಪಾರ್ಕ್ನಲ್ಲಿನ (Cubbon Park) ಮರಗಳ ಮೇಲೆ ಹತ್ತಿ ಆಟಗಾರರನ್ನು ನೋಡಲು ಮುಂದಾದರು. ಈ ವೇಳೆ ಅಭಿಮಾನಿಗಳ ಕಾಲ್ತುತುಳಿತದಿಂದ ಸಾಕಷ್ಟು ಸಸಿಗಳು ಹಾಳಾಗಿವೆ. ಇದರಿಂದ ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ ಎಂದು ಕಬ್ಬನ್ ಪಾರ್ಕ್ ಅಸೋಸಿಯೇಷನ್ ಆರೋಪಿಸಿ, ಕೋರ್ಟ್ ಮೆಟ್ಟಿಲು ಏರಿದೆ.
ಕಬ್ಬನ್ ಪಾರ್ಕ್‌ನಲ್ಲಿದ್ದ ಸಸಿಗಳು, ಮರಗಳಿಗೆ ಮತ್ತು ಉದ್ಯಾನವನಕ್ಕೆ ಹಾನಿಯಾಗಿದೆ. ಹಾಗೇ ವಿಧಾನಸೌಧದ ಮುಂಭಾಗದ ಗಾರ್ಡನ್ನಲ್ಲೂ ಹಾನಿಯಾಗಿದೆ. ತೋಟಗಾರಿಕೆ ಇಲಾಖೆ ಕಬ್ಬನ್ ಪಾರ್ಕ್ನಲ್ಲಿ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಲಾನ್ ಅಳವಡಿಸಿತ್ತು. ಈ ಲಾನ್ಗು ಕೂಡ ಕಾಲ್ತುತುಳಿತದಲ್ಲಿ ಹಾನಿಯಾಗಿದೆ. ಕಬ್ಬನ್ ಪಾರ್ಕ್ಗೆ ಹಾನಿಯಾದರೇ ನೀವೇ ಹೊಣೆಗಾರರು ಅಂತ ಆರ್‌ಸಿಬಿ ಮತ್ತು ಕೆಎಸ್‌ಸಿಎಗೆ ಮೊದಲೇ ಷರತ್ತು ಹಾಕಲಾಗಿತ್ತು.
ಇದೀಗ, ಕಾಲ್ತುತುಳಿತದಲ್ಲಿ ಪಾರ್ಕ್ಗೆ ಹಾನಿಯಾಗಿದ್ದು, ಈ ನಷ್ಟವನ್ನು ಆರ್‌ಸಿಬಿ ಹಾಗೂ ಕೆಎಸ್‌ಸಿಎ ಭರಿಸಿಕೊಡಬೇಕು ಅಂತ ಕಬ್ಬನ್ ಪಾರ್ಕ್ ಅಸೋಸಿಯೇಷನ್ ಹೈಕೋರ್ಟ್ನಲ್ಲಿ ಪಿಐಎಲ್ ಸಲ್ಲಿಸಿದೆ. ಕಾಲ್ತುತುಳಿತದಲ್ಲಿ ಉಂಟಾದ ಸಂಪೂರ್ಣ ನಷ್ಟ ಭರಿಸುವಂತೆ ಕಬ್ಬನ್ ಪಾರ್ಕ್ ಅಸೋಸಿಯೇಷನ್ ಕೋರ್ಟ್ ಮೊರೆ ಹೋಗಿ ಒತ್ತಾಯ ಮಾಡಿದ್ದು, ಆರ್‌ಸಿಬಿ ಹಾಗೂ ಕೆಎಸ್‌ಸಿಎಗೆ ಮತ್ತೊಂದು ಬಿಗ್ ಶಾಕ್ ಎದುರಾಗಿದೆ.
ಒಟ್ಟಿನಲ್ಲಿ ಈಗಾಗಲೇ ಕಾಲ್ತುತುಳಿತ ಪ್ರಕರಣದಿಂದ ಕಂಗಾಲಾಗಿರುವ ಆರ್‌ಸಿಬಿ ಹಾಗೂ ಕೆಎಸ್‌ಸಿಎಗೆ ಇದೀಗ ಕಬ್ಬನ್ ಪಾರ್ಕ್ ಅಸೋಸಿಯೇಷನ್ ಶಾಕ್ ನೀಡಿದ್ದು, ಈ ಬಗ್ಗೆ ಎರಡೂ ಆಡಳಿತ ಮಂಡಳಿ ಏನು ಹೇಳುತ್ತವೆ ಎಂದು ಕಾದು ನೋಡಬೇಕಿದೆ.
ಇದನ್ನೂ ಓದಿ: ಚಿನ್ನಸ್ವಾಮಿ ಕ್ರೀಡಾಂಗಣ ಕಾಲ್ತುಳಿತಕ್ಕೆ ಕಾರಣ ಬಹಿರಂಗ: ಕುನ್ಹಾ ಸಲ್ಲಿಸಿದ ವರದಿಯಲ್ಲಿದೆ ಸ್ಫೋಟಕ ಅಂಶ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಟ್ರೋಫಿ ಗೆದ್ದ ನಿಮಿತ್ತ ಜೂನ್ 4 ರಂದು ನಡೆದ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 11 ಮಂದಿ ಸಾವನ್ನಪ್ಪಿದ್ದರು. ಪ್ರಕರಣದ ತನಿಖೆ ನಡೆಸಿದ ನಿವೃತ್ತ ನ್ಯಾಯಮೂರ್ತಿ ಮೈಕಲ್ ಡಿ. ಕುನ್ಹಾ ನೇತೃತ್ವದ ತನಿಖಾ ತಂಡ ಸರ್ಕಾರಕ್ಕೆ ತನಿಖಾ ಸಲ್ಲಿಸಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:42 pm, Sun, 10 August 25



