ರಾಮನಗರ ನಕಲಿ ಔಷಧ ಜಾಲ: ಮಹಾರಾಷ್ಟ್ರ, ಹಿಮಾಚಲ ಪ್ರದೇಶ ಸೇರಿ 6 ರಾಜ್ಯಗಳ 10 ಕಡೆ ಕರ್ನಾಟಕ ಎಸ್‌ಐಟಿ ದಾಳಿ

ದೊಡ್ಡೇರಿ ಫಾರ್ಮ್‌ಹೌಸ್‌ನಲ್ಲಿ ಪತ್ತೆಯಾದ ನಕಲಿ ಔಷಧ ಜಾಲದ ತನಿಖೆ ಚುರುಕುಗೊಂಡಿದ್ದು, ಕರ್ನಾಟಕ ಎಸ್‌ಐಟಿ ಹಾಗೂ ಔಷಧ ನಿಯಂತ್ರಣ ಇಲಾಖೆ ಆರು ರಾಜ್ಯಗಳ 10 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿವೆ. ಕ್ಯಾನ್ಸರ್ ಸೇರಿದಂತೆ ಹಲವು ಔಷಧ ಪೂರೈಕೆಯ ಆರೋಪದ ಬಗ್ಗೆ ತನಿಖೆ ಮುಂದುವರಿದಿದೆ.

ರಾಮನಗರ ನಕಲಿ ಔಷಧ ಜಾಲ: ಮಹಾರಾಷ್ಟ್ರ, ಹಿಮಾಚಲ ಪ್ರದೇಶ ಸೇರಿ 6 ರಾಜ್ಯಗಳ 10 ಕಡೆ ಕರ್ನಾಟಕ ಎಸ್‌ಐಟಿ ದಾಳಿ
ಸಾಂದರ್ಭಿಕ ಚಿತ್ರ
Image Credit source: tv9
Edited By:

Updated on: Sep 11, 2026 | 2:30 PM

ಮುಖ್ಯಾಂಶಗಳು

  • ಆರು ರಾಜ್ಯಗಳ ಹತ್ತು ಕಡೆ ಎಸ್‌ಐಟಿ ದಾಳಿ
  • ನಕಲಿ ಔಷಧ ಜಾಲದ ಬಗ್ಗೆ ತೀವ್ರ ತನಿಖೆ
  • ಕ್ಯಾನ್ಸರ್ ಔಷಧ ಪೂರೈಕೆ ಬಗ್ಗೆಯೂ ಶಂಕೆ

ಬೆಂಗಳೂರು, ಸೆಪ್ಟೆಂಬರ್ 11: ರಾಮನಗರದ ದೊಡ್ಡೇರಿ ಫಾರ್ಮ್‌ಹೌಸ್‌ನಲ್ಲಿ ಪತ್ತೆಯಾದ ನಕಲಿ ಔಷಧ ಜಾಲ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಕರ್ನಾಟಕದ ವಿಶೇಷ ತನಿಖಾ ತಂಡ (SIT) ಮತ್ತು ಔಷಧ ನಿಯಂತ್ರಣ ಇಲಾಖೆ ಜಂಟಿಯಾಗಿ ಆರು ರಾಜ್ಯಗಳ 10 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಪರಿಶೀಲನೆ ನಡೆಸಿವೆ. ಕರ್ನಾಟಕ, ಹಿಮಾಚಲ ಪ್ರದೇಶ, ಹರಿಯಾಣ, ತಮಿಳುನಾಡಿನ ಚೆನ್ನೈ, ಮಹಾರಾಷ್ಟ್ರದ ಮುಂಬೈ ಹಾಗೂ ತೆಲಂಗಾಣದಲ್ಲಿ ಎಸ್‌ಐಟಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಸುಮಾರು 80ರಿಂದ 100 ಅಧಿಕಾರಿಗಳ ತಂಡ ವಿವಿಧ ಸ್ಥಳಗಳಲ್ಲಿ ಪರಿಶೀಲನೆ ನಡೆಸಿದ್ದು, ನಕಲಿ ಫಾರ್ಮ್‌ಗಳ ಕಚೇರಿಗಳು, ಔಷಧ ಸಂಗ್ರಹ ಸ್ಥಳಗಳು ಹಾಗೂ ಜಾಲಕ್ಕೆ ಸಂಬಂಧಿಸಿದ ಇತರ ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ.

ಒಂದೊಂದು ರಾಜ್ಯದಲ್ಲಿ ಒಂದೊಂದು ಔಷಧದ ಸ್ಟಾಕ್

ತನಿಖೆಯ ವೇಳೆ, ನಕಲಿ ಔಷಧ ಜಾಲದ ಕಾರ್ಯವೈಖರಿ ಕುರಿತು ಹಲವು ಮಾಹಿತಿ ಲಭ್ಯವಾಗಿರುವ ಹಿನ್ನೆಲೆಯಲ್ಲಿ ಏಕಕಾಲದಲ್ಲಿ 10 ಕಡೆ ದಾಳಿ ನಡೆಸಲಾಗಿದೆ. ಒಂದೊಂದು ಸ್ಥಳದಿಂದ ಒಂದೊಂದು ರೀತಿಯ ಔಷಧಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಅಲ್ಲದೆ, ಬೇರೆ ಬೇರೆ ಸ್ಥಳಗಳಲ್ಲಿ ವಿಭಿನ್ನ ಔಷಧಗಳ ಸ್ಟಾಕ್ ಸಂಗ್ರಹಿಸಿಡಲಾಗುತ್ತಿತ್ತು ಎಂದು ತನಿಖಾಧಿಕಾರಿಗಳಿಗೆ ಮಾಹಿತಿ ಲಭಿಸಿದೆ.

ನಕಲಿ ಔಷಧ, ನಕಲಿ ಬಾಟಲ್‌ಗಳು ಹಾಗೂ ನಕಲಿ ಲೇಬಲ್‌ಗಳನ್ನು ಬಳಸಿ ಔಷಧಗಳನ್ನು ಸರಬರಾಜು ಮಾಡುತ್ತಿದ್ದ ಜಾಲದ ಕುರಿತು ಎಸ್‌ಐಟಿ ತನಿಖೆ ಮುಂದುವರಿಸಿದೆ. ಕಿಂಗ್‌ಪಿನ್‌ ಎಂದು ಶಂಕಿಸಲಾಗಿರುವ ಪ್ರಶಾಂತ್ ಸೇರಿದಂತೆ ಇತರ ಡೀಲರ್‌ಗಳ ಮೂಲಕ ಔಷಧಗಳ ಪೂರೈಕೆ ನಡೆಯುತ್ತಿತ್ತು ಎಂಬುದು ತಿಳಿದುಬಂದಿದೆ.

ಪ್ರತಿಷ್ಠಿತ ಆಸ್ಪತ್ರೆಗಳಿಗೆ ಕಡಿಮೆ ಬೆಲೆಗೆ ಔಷಧ ಪೂರೈಕೆ

ತನಿಖೆಯ ಪ್ರಕಾರ, ವೀರೇಶ್ ಎಂಬಾತ 2021ರಲ್ಲಿ ಕೃಪಾ ಹೆಲ್ತ್‌ಕೇರ್ ಕಂಪನಿಯನ್ನು ನೋಂದಣಿ ಮಾಡಿಸಿದ್ದ. ಬಳಿಕ ಪ್ರಶಾಂತ್ ಸೇರಿದಂತೆ ಇತರ ಡೀಲರ್‌ಗಳಿಂದ ಔಷಧಗಳನ್ನು ತರಿಸಿಕೊಂಡು, ಅವುಗಳನ್ನು ಪ್ರತಿಷ್ಠಿತ ಆಸ್ಪತ್ರೆಗಳಿಗೆ ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ಪೂರೈಸಲಾಗುತ್ತಿತ್ತು ಎಂಬ ಮಾಹಿತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಮುಂಬೈ, ಗುಜರಾತ್ ಸೇರಿದಂತೆ ಇತರ ರಾಜ್ಯಗಳಿಗೂ ಔಷಧ ಸರಬರಾಜು

ಮುಂಬೈ, ಗುಜರಾತ್ ಸೇರಿದಂತೆ ಇತರ ರಾಜ್ಯಗಳಿಗೂ ಔಷಧಗಳನ್ನು ಸರಬರಾಜು ಮಾಡಲಾಗುತ್ತಿತ್ತು ಎನ್ನಲಾಗಿದೆ. ಆಸ್ಪತ್ರೆಗಳಿಗೆ ಔಷಧ ಪೂರೈಕೆ ಮಾಡುವಂತೆ ಮೆಡಿಕಲ್ ರೆಪ್ರೆಸೆಂಟೇಟಿವ್‌ಗಳಿಗೆ ಹೆಚ್ಚಿನ ಕಮಿಷನ್‌ನ ಆಮಿಷವೊಡ್ಡಲಾಗುತ್ತಿತ್ತು ಎಂಬ ಆರೋಪವೂ ಇದೆ. ಈ ಜಾಲದಲ್ಲಿ 15ಕ್ಕೂ ಹೆಚ್ಚು ಮೆಡಿಕಲ್ ರೆಪ್ರೆಸೆಂಟೇಟಿವ್‌ಗಳು ಕೆಲಸ ಮಾಡುತ್ತಿದ್ದರು ಎಂಬುದೂ ಗೊತ್ತಾಗಿದೆ.

ಮಿನರ್ವಾ ಸರ್ಕಲ್ ಬಳಿಯ ಗೋಡೌನ್‌ನಿಂದ ಔಷಧಗಳನ್ನು ವಿವಿಧೆಡೆಗೆ ಪೂರೈಕೆ ಮಾಡಲಾಗುತ್ತಿತ್ತು ಎಂದು ತನಿಖಾಧಿಕಾರಿಗಳಿಗೆ ಮಾಹಿತಿ ಲಭ್ಯವಾಗಿದೆ.

ಕ್ಯಾನ್ಸರ್ ಔಷಧಗಳ ಮೇಲೂ ಕಣ್ಣು?

ಈ ಜಾಲದ ಮೂಲಕ ಪ್ರಮುಖವಾಗಿ ಕ್ಯಾನ್ಸರ್ ಔಷಧಗಳನ್ನು ಆಸ್ಪತ್ರೆಗಳಿಗೆ ಪೂರೈಕೆ ಮಾಡಲಾಗುತ್ತಿತ್ತು. ಇದರ ಜೊತೆಗೆ ಥೈರಾಯ್ಡ್ ಔಷಧಗಳು, ವಿಟಮಿನ್ ಮಾತ್ರೆಗಳು ಹಾಗೂ ವಿವಿಧ ಇಂಜೆಕ್ಷನ್‌ಗಳು ಸೇರಿದಂತೆ ಹಲವು ರೀತಿಯ ಔಷಧಗಳನ್ನು ಪೂರೈಸಲಾಗುತ್ತಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ.

ಇದನ್ನೂ ಓದಿ: ರಾಮನಗರ ನಕಲಿ ಔಷಧ ಜಾಲ: ಪೋರ್ಟರ್’ ಆ್ಯಪ್ ಮೂಲಕ ನಡೆಯುತ್ತಿತ್ತು ಸಪ್ಲೈ!

ಇತರ ಡೀಲರ್‌ಗಳಿಗೆ ಹೋಲಿಸಿದರೆ ಕಡಿಮೆ ಬೆಲೆಗೆ ಔಷಧಗಳು ದೊರೆಯುತ್ತಿದ್ದ ಕಾರಣ ಕೆಲವು ಆಸ್ಪತ್ರೆಗಳು ಹಾಗೂ ಮೆಡಿಕಲ್‌ ಶಾಪ್‌ಗಳು ಅವುಗಳನ್ನು ಖರೀದಿಸುತ್ತಿದ್ದವು ಎನ್ನಲಾಗಿದೆ. ಇದೀಗ ಆರು ರಾಜ್ಯಗಳಲ್ಲಿ ನಡೆದಿರುವ ಎಸ್‌ಐಟಿ ದಾಳಿಗಳ ಮೂಲಕ ಈ ಜಾಲದ ಸಂಪೂರ್ಣ ಕಾರ್ಯವೈಖರಿ, ಔಷಧಗಳ ಮೂಲ ಮತ್ತು ಸರಬರಾಜಿನ ಮಾರ್ಗದ ಕುರಿತು ತನಿಖೆ ನಡೆಯುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us