ಬೆಂಗಳೂರಿನ 200 ಪ್ರದೇಶಗಳಿಗೆ ಪ್ರವಾಹ ಭೀತಿ: ತಿಂಗಳ ಹಿಂದೆಯೇ ಎಚ್ಚರಿಕೆ ನೀಡಿದ್ದ ವಿಪತ್ತು ನಿರ್ವಹಣಾ ಇಲಾಖೆ
Bangalore Rains: ಬೆಂಗಳೂರಿನಲ್ಲಿ ಅತಿವೃಷ್ಟಿಯಿಂದ 200 ಪ್ರದೇಶಗಳು ಪ್ರವಾಹಕ್ಕೆ ತುತ್ತಾಗುವ ಸಾಧ್ಯತೆ ಇದೆ ಎಂದು ಒಂದು ತಿಂಗಳ ಹಿಂದೆಯೇ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ ಎಚ್ಚರಿಕೆ ನೀಡಿತ್ತು. ಆದಾಗ್ಯೂ, ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳದಿರುವುದಕ್ಕೆ ಟೀಕೆ ವ್ಯಕ್ತವಾಗಿದೆ. ಮಳೆ ಮುನ್ಸೂಚನೆ ಇದ್ದರೂ, ಸರ್ಕಾರ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲ ಎಂಬ ಆಕ್ಷೇಪ ಸಾರ್ವಜನಿಕರಿಂದ ವ್ಯಕ್ತವಾಗಿದೆ.

ಬೆಂಗಳೂರು, ಮೇ 20: ಬೆಂಗಳೂರು ನಗರದಾದ್ಯಂತ ಕಳೆದ ಮೂರು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು (Bengaluru Rains), ಇನ್ನೂ ಮೂರು ದಿನ ಮಳೆ ಮುನ್ಸೂಚನೆ ಇದೆ. ಹೊಸೂರು ರಸ್ತೆ, ಹೆಣ್ಣೂರು ಸೇರಿದಂತೆ ಅನೇಕ ಕಡೆಗಳಲ್ಲಿ ರಸ್ತೆಗಳು, ಅಪಾರ್ಟ್ಮೆಂಟ್ಗಳು ಜಲಾವೃತಗೊಂಡಿದ್ದು, ಪ್ರವಾಹ ಭೀತಿ ಎದುರಿಸುತ್ತಿವೆ. ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಬೆಂಗಳೂರಿನ 200 ಪ್ರದೇಶಗಳು ಪ್ರವಾಹ ಭೀತಿ ಎದುರಿಸುತ್ತಿರುವ ಬಗ್ಗೆ ಒಂದು ತಿಂಗಳ ಹಿಂದೆಯೇ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ ಎಚ್ಚರಿಕೆ ನೀಡಿತ್ತು ಎಂಬುದು ಈಗ ತಿಳಿದುಬಂದಿದೆ.
ಬೆಂಗಳೂರಿನ ಬೊಮ್ಮನಹಳ್ಳಿ ವಲಯ, ರಾಜರಾಜೇಶ್ವರಿ ನಗರ, ಯಲಹಂಕ ಸೇರಿದಂತೆ ವಲಯವಾರು ಪ್ರವಾಹ ಸಾಧ್ಯತೆ ಇರುವ ಏರಿಯಾಗಳ ಗುರುತು ಮಾಡಲಾಗಿತ್ತು. ನಂತರ ಪ್ರವಾಹದ ಎಚ್ಚರಿಕೆ ನೀಡಲಾಗಿತ್ತು. 8 ವಲಯಗಳಲ್ಲಿ ಏಪ್ರಿಲ್ 15ರಿಂದಲೇ ಪ್ರವಾಹದ ಮುನ್ನೆಚ್ಚರಿಕೆ ವಹಿಸುವಂತೆ ಬಿಬಿಎಂಪಿ, ಜಲಮಂಡಳಿ, ಬೆಸ್ಕಾಂ, ಪೊಲೀಸ್ ಇಲಾಖೆಗೆ ನೀಡಲಾಗಿತ್ತು.
ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ ಎಚ್ಚರಿಕೆ ನೀಡಿದ್ದರೂ ರಾಜ್ಯ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದ್ದರಿಂದ ಹೀಗಾಗಿದೆ ಎಂಬ ಆರೋಪ ಇದೀಗ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ. ವಾಡಿಕೆಗಿಂತಲೂ ಹೆಚ್ಚು ಮಳೆಯಾಗಲಿದೆ ಎಂಬುದನ್ನು ಇಲಾಖೆ ತಿಳಿಸಿದ್ದರೂ ಸರ್ಕಾರ ಮೈಮರೆತಿದ್ದೇಕೆ ಎಂಬ ಪ್ರಶ್ನೆಗಳು ಕೇಳಿಬಂದಿವೆ.
ಏಪ್ರಿಲ್ 2ರ ಸುತ್ತೋಲೆಯಲ್ಲಿ ಏನು ಹೇಳಿತ್ತು ವಿಪತ್ತು ನಿರ್ವಹಣಾ ಇಲಾಖೆ?
ಬೆಂಗಳೂರು ಜಲಮಂಡಳಿ, ಬಿಬಿಎಂಪಿ, ಬೆಸ್ಕಾಂ ಮತ್ತು ಸಂಚಾರ ಪೊಲೀಸ್ ಇಲಾಖೆಗಳ ಸಹಯೋಗದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 8 ವಲಯವಾರು ಪ್ರದೇಶಗಳಾದ ಬೊಮ್ಮನಹಳ್ಳಿ ವಲಯ-19, ದಾಸರಹಳ್ಳಿ ವಲಯ-11, ಬೆಂಗಳೂರು ಪೂರ್ವ ವಲಯ-29, ಮಹದೇವಪುರ ವಲಯ-30, ರಾಜರಾಜೇಶ್ವರಿ ನಗರ ವಲಯ-29, ಬೆಂಗಳೂರು ದಕ್ಷಿಣ ವಲಯ-34, ಬೆಂಗಳೂರು ಪಶ್ಚಿಮ ವಲಯ-38 ಮತ್ತು ಯಲಹಂಕ ವಲಯ-10 ರಂತೆ ಒಟ್ಟು 200 ಪ್ರವಾಹ ಪೀಡಿತ ಪ್ರದೇಶಗಳನ್ನು ಗುರುತಿಸಲಾಗಿದೆ ಎಂದು ಏಪ್ರಿಲ್ 2ರ ಸುತ್ತೋಲೆಯಲ್ಲಿ ವಿಪತ್ತು ನಿರ್ವಹಣಾ ಇಲಾಖೆ ತಿಳಿಸಿತ್ತು.
ಈ ಪ್ರದೇಶಗಳಿಗೆ ರಿಯಲ್ ಟೈಮ್ನಲ್ಲಿ 12 ಗಂಟೆಗೆ ಮುಂಚಿತವಾಗಿ ಪ್ರವಾಹ ಮುನ್ನೆಚ್ಚರಿಕೆ ಹಾಗೂ ಮಳೆ ಮುನ್ಸೂಚನೆ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಬೇಕು. ‘ಬೆಂಗಳೂರು ಮೇಘ ಸಂದೇಶ’ ಎಂಬ ಮೊಬೈಲ್ ತಂತ್ರಾಂಶ, ಕೇಂದ್ರದ (www.varunamitra.karnataka.gov.in), BBMP DM core group ಗಳಲ್ಲಿ ಹವಾಮಾನ. ಮಳೆ ಪ್ರಮಾಣ, ತೀವ್ರ ಪ್ರವಾಹಕ್ಕೆ ತುತ್ತಾಗುವ ಸಂಭವನೀಯ ಪ್ರದೇಶಗಳು, ಪರ್ಯಾಯ ರಸ್ತೆ ಮಾರ್ಗಗಳು, ಸಿಡಿಲಿನ ಮಾಹಿತಿ, ಪ್ರಮುಖ ಮಳೆ ನೀರಿನ ಕಾಲುವೆಗಳಲ್ಲಿನ ನೀರಿನ ಮಟ್ಟದ ಬಗ್ಗೆ ಹಾಗೂ ಸುರಕ್ಷತೆಗೆ ಸಂಬಂಧಿಸಿದ ಎಚ್ಚರಿಕೆ ಮತ್ತು ಸಂದೇಶಗಳನ್ನು ಪ್ರತಿ 12 ಗಂಟೆಗೊಮ್ಮೆ ನೀಡಲಾಗುತ್ತಿದೆ. ಮುಂದಿನ 24 ಗಂಟೆ ಹಾಗೂ ಮುಂದಿನ 3 ದಿನಗಳ ಮುನ್ಸೂಚನೆಯನ್ನು ನೀಡಲಾಗುತ್ತಿದೆ ಎಂದು ಇಲಾಖೆ ಹೇಳಿತ್ತು.
ಇದನ್ನೂ ಓದಿ: ಬೆಂಗಳೂರಿನ ಯಾವೆಲ್ಲ ರಸ್ತೆಗಳು ಜಲಾವೃತ? ಇಲ್ಲಿದೆ ಮಾಹಿತಿ
ಭಾರತೀಯ ಹವಾಮಾನ ಇಲಾಖೆ ನೀಡಿರುವ 2025 ರ ಏಪ್ರಿಲ್ 15 ರ ಮೊದಲ ಹಂತದ ಮುಂಗಾರು ಮುನ್ಸೂಚನೆಯ ಪ್ರಕಾರ, ಕರ್ನಾಟಕದಲ್ಲಿಯೂ ವಾಡಿಕೆಗಿಂತ ಅಧಿಕ ಮಳೆಯಾಗುವ ಮುನ್ಸೂಚನೆ ಇದೆ. ಈ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅತಿವೃಷ್ಟಿ ಅಥವಾ ಪ್ರವಾಹದಿಂದ ಉಂಟಾಗಬಹುದಾದ ಅನಾಹುತ, ಹಾನಿ ಮತ್ತು ವಿಪತ್ತುಗಳನ್ನು ತಗ್ಗಿಸಲು ಸಿದ್ಧತೆ ಮಾಡಿಕೊಳ್ಳಬೇಕು ಎಂದೂ ಸುತ್ತೋಲೆಯಲ್ಲಿ ತಿಳಿಸಲಾಗಿತ್ತು. ಅಲ್ಲದೆ, ಏನೇನು ಕ್ರಮಗಳನ್ನು ಕೈಗೊಳ್ಳಬೇಕೆಂಬ ಸಲಹೆ ಸೂಚನೆಗಳನ್ನೂ ನೀಡಲಾಗಿತ್ತು.







