ಬೆಂಗಳೂರಲ್ಲಿ ಸಂಚಾರ ದಟ್ಟಣೆ ನಿವಾರಣೆಗೆ ಪ್ಲ್ಯಾನ್: ಮೊದಲು ನೋಟಿಸ್, ಆಮೇಲೆ ಬಿಡ್ಡಿಂಗ್; ಕಠಿಣ ಕ್ರಮಕ್ಕೆ ಮುಂದಾದ GBA
ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹೊಸ ಕ್ರಮಕ್ಕೆ ಮುಂದಾಗಿದೆ. ರಸ್ತೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ನಿಲ್ಲಿಸಿರುವ ವಾಹನಗಳ ವಿರುದ್ಧ ಕಠಿಣ ಕಾರ್ಯಾಚರಣೆಗೆ ಸಜ್ಜಾಗಿದೆ. ಆ ಮೂಲಕ ಬೆಂಗಳೂರಿನಲ್ಲಿ ವಾಹನ ಸಂಚಾರ ಸುಗಮಗೊಳಿಸಲು GBA ನಯಾ ಪ್ಲ್ಯಾನ್ ಮಾಡಿದೆ. ಈ ಕುರಿತ ಮಾಹಿತಿ ಇಲ್ಲಿದೆ.

ಬೆಂಗಳೂರು, ಜುಲೈ 09: ನಗರದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಸಂಚಾರ ದಟ್ಟಣೆಗೆ ಶಾಶ್ವತ ಮುಕ್ತಿ ನೀಡಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಹೊಸ ಹಾಗೂ ಕಠಿಣ ಕ್ರಮಕ್ಕೆ ಮುಂದಾಗಿದೆ. ನಗರದ ರಸ್ತೆಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ಬಿಟ್ಟು ಹೋಗಿರುವ ವಾಹನಗಳನ್ನು ತೆರವುಗೊಳಿಸಲು ಕಠಿಣ ಕಾರ್ಯಾಚರಣೆಗೆ ಮುಂದಾಗಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ನೋಟಿಸ್‌ನಿಂದ ಹಿಡಿದು ವಾಹನ ಹರಾಜಿನವರೆಗೆ ಬಿಗಿ ಕ್ರಮಕೈಗೊಳ್ಳುವುದಾಗಿ ಅಧಿಕೃತ ಪ್ರಕಟಣೆ ಹೊರಡಿಸಿದೆ.
7 ದಿನಗಳ ಡೆಡ್‌ಲೈನ್!
ನಗರದ ರಸ್ತೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ಬಿಟ್ಟು ಹೋಗಿರುವ ವಾಹನಗಳು ಸಂಚಾರಕ್ಕೆ ಅಡ್ಡಿಯಾಗುತ್ತಿರುವ ಹಿನ್ನೆಲೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕಾಯ್ದೆ–2024ರ ಸೆಕ್ಷನ್ 324ರ ಅನ್ವಯ ಈ ಕ್ರಮ ಜಾರಿಯಾಗಲಿದೆ. ಮೊದಲ ಹಂತದಲ್ಲಿ ಅನಧಿಕೃತ ವಾಹನಗಳಿಗೆ ನೋಟಿಸ್ ನೀಡಲಾಗುತ್ತದೆ. ಆ ಬಳಿಕ ಏಳು ದಿನಗಳ ಒಳಗೆ ವಾಹನವನ್ನು ತೆರವುಗೊಳಿಸದಿದ್ದರೆ, ವಾಹನ ಮಾಲೀಕರು ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಏಳು ದಿನಗಳ ಬಳಿಕವೂ ವಾಹನ ತೆರವುಗೊಳಿಸದಿದ್ದರೆ, ಅಧಿಕಾರಿಗಳು ವಾಹನವನ್ನು ಟೋಯಿಂಗ್ ಮೂಲಕ ಸ್ಥಳಾಂತರಿಸುತ್ತಾರೆ.
ವಾಹನ ವಾಪಸ್ ಪಡೆಯದಿದ್ದರೆ ಬಹಿರಂಗ ಹರಾಜು
ಟೋಯಿಂಗ್ ವೆಚ್ಚ ಸೇರಿದಂತೆ ಎಲ್ಲಾ ಖರ್ಚನ್ನು ವಾಹನ ಮಾಲೀಕರಿಂದಲೇ ವಸೂಲಿ ಮಾಡಲಾಗುತ್ತದೆ. ಇನ್ನು ಟೋಯಿಂಗ್ ಬಳಿಕವೂ ವಾಹನವನ್ನು ಮಾಲೀಕರು ಪಡೆದುಕೊಳ್ಳದಿದ್ದರೆ, ನಿಯಮಾನುಸಾರ ಸಾರ್ವಜನಿಕ ಬಿಡ್ಡಿಂಗ್ ಮೂಲಕ ವಾಹನವನ್ನು ಹರಾಜು ಹಾಕುವ ಅಧಿಕಾರ GBAಗೆ ಇರುತ್ತದೆ. ಸಂಚಾರಕ್ಕೆ ಅಡ್ಡಿಯಾಗುವಂತೆ ರಸ್ತೆ, ಫುಟ್‌ಪಾತ್ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ವಾಹನಗಳನ್ನು ಬಿಟ್ಟು ಹೋಗದಂತೆ GBA ಸಾರ್ವಜನಿಕರಿಗೆ ಮನವಿ ಮಾಡಿದೆ. ನಿಯಮ ಉಲ್ಲಂಘಿಸಿದರೆ ಯಾವುದೇ ವಿನಾಯಿತಿ ಇಲ್ಲದೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: ಫುಟ್‌ಪಾತ್ ತೆರವು ಬೆನ್ನಲ್ಲೇ ವಾಹನ ಟೋಯಿಂಗ್ ಬಗ್ಗೆ ಸಚಿವ ಕೃಷ್ಣಬೈರೇಗೌಡ ಸುಳಿವು
ಅನಧಿಕೃತವಾಗಿ ಬಿಟ್ಟುಹೋಗುವ ವಾಹನಗಳಿಂದ ರಸ್ತೆ ಸಂಚಾರಕ್ಕೆ ಉಂಟಾಗುತ್ತಿರುವ ಸಮಸ್ಯೆ ನಿವಾರಣೆಗೆ ಜಿಬಿಎಯ ಈ ಹೊಸ ಕ್ರಮ ಪರಿಣಾಮಕಾರಿಯಾಗಲಿದೆಯೇ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.
ವರದಿ: ನಟರಾಜ್ ಟಿವಿ9 ಬೆಂಗಳೂರು
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




