Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯಪಾಲರು ತರಾತುರಿಯಲ್ಲಿ ನಿರ್ಧಾರ ಕೈಗೊಂಡಿದ್ದಾರೆ, ನಾವೆಲ್ಲ ಸಿದ್ದರಾಮಯ್ಯ ಪರ ಇದ್ದೇವೆ -ಡಿಕೆ ಶಿವಕುಮಾರ್

ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿದ ಬಗ್ಗೆ ವಿಧಾನಸೌಧದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸುದ್ದಿಗೋಷ್ಠಿ ನಡೆಸಿದ್ದು ತರಾತುರಿಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಪ್ರಾಥಮಿಕ ತನಿಖೆ ನಡೆಯದಿದ್ದರೂ ಪ್ರಾಸಿಕ್ಯೂಷನ್​​ಗೆ ಅನುಮತಿ ನೀಡಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ರಾಜ್ಯಪಾಲರು ತರಾತುರಿಯಲ್ಲಿ ನಿರ್ಧಾರ ಕೈಗೊಂಡಿದ್ದಾರೆ, ನಾವೆಲ್ಲ ಸಿದ್ದರಾಮಯ್ಯ ಪರ ಇದ್ದೇವೆ -ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್
Follow us
TV9 Web
| Updated By: ಆಯೇಷಾ ಬಾನು

Updated on: Aug 17, 2024 | 2:20 PM

ಬೆಂಗಳೂರು, ಆಗಸ್ಟ್​​.17: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಬದಲಿ ನಿವೇಶನ ಹಂಚಿಕೆ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲ ಥಾವರಚಂದ ಗೆಹ್ಲೋಟ್ (Thawar Chand Gehlot) ಅನುಮತಿಯನ್ನು ನೀಡಿದ್ದಾರೆ. ಈ ಸಂಬಂಧ ವಿಧಾನಸೌಧದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DK Shivakumar) ಸುದ್ದಿಗೋಷ್ಠಿ ನಡೆಸಿದ್ದು ತರಾತುರಿಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಪ್ರಾಥಮಿಕ ತನಿಖೆ ನಡೆಯದಿದ್ದರೂ ಪ್ರಾಸಿಕ್ಯೂಷನ್​​ಗೆ ಅನುಮತಿ ನೀಡಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ರಾಜ್ಯಪಾಲರ ಕಚೇರಿಯನ್ನು ಬಿಜೆಪಿ ಕಚೇರಿ ಮಾಡುವ ಕೆಲಸ ಆಗ್ತಿದೆ. ಸಂವಿಧಾನದ ರಕ್ಷಣೆ ಮಾಡುತ್ತೇವೆ. ಗ್ಯಾರಂಟಿ ಯೋಜನೆ ಮೂಲಕ ಬಡವರಿಗೆ ಸಹಾಯ ಮಾಡ್ತಿದ್ದೇವೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ಷಡ್ಯಂತ್ರ ಮಾಡಲಾಗುತ್ತಿದೆ. ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು ಹಾಗೂ ಪಂಜಾಬ್​ನಲ್ಲೂ ಸರ್ಕಾರ ಅಸ್ಥಿರಗೊಳಿಸಲು ಪ್ರಯತ್ನ ಮಾಡಲಾಗ್ತಿದೆ. ಇಂಡಿಯಾ ಒಕ್ಕೂಟ ಕೂಡ ಸಿಎಂ ಸಿದ್ದರಾಮಯ್ಯ ಪರ ಇದೆ. ನಾನು ಸಿಎಂ ಸಿದ್ದರಾಮಯ್ಯ ಪರ ಇದ್ದೇನೆ ಎಂದು ಸುದ್ದಿಗೋಷ್ಠಿಯಲ್ಲಿ ಡಿಕೆ ಶಿವಕುಮಾರ್ ತಿಳಿಸಿದರು.

ರಾಜ್ಯಪಾಲರ ಹುದ್ದೆಗೆ ಬಹಳ ಗೌರವ ಇದೆ

ಇಂದು ಬೆಳಗ್ಗೆ ಸಿಎಂ ವಿರುದ್ಧ ಪ್ರಾಸಿಕ್ಯೂಷನ್​​ಗೆ ಅನುಮತಿ ಕೊಟ್ಟಿದ್ದಾರೆ. ಪ್ರಜಾಪ್ರಭುತ್ವಕ್ಕೆ ಮಾರಕವಾದ ನಿರ್ಧಾರ ರಾಜ್ಯಪಾಲರು ಕೈಗೊಂಡಿದ್ದಾರೆ. ಶೋಕಾಸ್​ ನೋಟಿಸ್​ಗೆ ಈಗಾಗಲೇ ನಾವೆಲ್ಲಾ ಉತ್ತರ ಕೊಟ್ಟಿದ್ದೇವೆ. ಕಾನೂನಿನ ಚೌಕಟ್ಟಿನಲ್ಲಿ ಎಲ್ಲ ಉತ್ತರ ಕೊಟ್ಟಿದ್ದೇವೆ. ರಾಜಕೀಯ ಪ್ರೇರಿತವಾದ ದೂರಿಗೆ ಪರಿಗಣಿಸಬೇಡಿ ಅಂತಾ ಹೇಳಿದ್ದೆವು. ರಾಜ್ಯಪಾಲರ ಹುದ್ದೆಗೆ ಬಹಳ ಗೌರವ ಇದೆ. ಇಡೀ ಸರ್ಕಾರ ರಾಜ್ಯಪಾಲರ ಮಾರ್ಗದರ್ಶನದಲ್ಲಿ ನಡೆಯುತ್ತದೆ ಎಂದರು.

ಇದನ್ನೂ ಓದಿ: ಮುಡಾ ಹಗರಣದಲ್ಲಿ ಪ್ರಾಸಿಕ್ಯೂಷನ್: ಹೈಕೋರ್ಟ್ ಮೆಟ್ಟಿಲೇರಲು ಸಿದ್ದರಾಮಯ್ಯ ಪರ ವಕೀಲರ ಸಿದ್ಧತೆ

ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ಇಡೀ ಸರ್ಕಾರ, ಸಚಿವ ಸಂಪುಟ, ಪಕ್ಷ ಸಿಎಂ ಬೆಂಬಲಕ್ಕೆ ಇದೆ. ಕಾನೂನು ಚೌಕಟ್ಟಿನಲ್ಲೂ ಹೋರಾಟ ಮಾಡುತ್ತೇವೆ. ರಾಜಕೀಯವಾಗಿಯೂ ನಾವು ಹೋರಾಟ ಮಾಡುತ್ತೇವೆ. ಕಾನೂನು ಬಗ್ಗೆ ನಮಗೆ ಗೌರವವಿದೆ, ರಕ್ಷಣೆ ಸಿಗುತ್ತೆ ಎಂಬ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತರಾತುರಿಯಲ್ಲಿ ನಿರ್ಧಾರ ಕೈಗೊಂಡಿದ್ದಾರೆ

ಯಡಿಯೂರಪ್ಪ, ಜನಾರ್ದನ ರೆಡ್ಡಿ, ಮುರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ ಬಿಜೆಪಿಯ ನಾಯಕರ ವಿರುದ್ಧವೂ ಪ್ರಾಸಿಕ್ಯೂಷನ್​​ಗೆ ಅನುಮತಿ ಕೇಳಲಾಗಿತ್ತು. ಸೂಕ್ತ ತನಿಖೆ ನಡೆಸಿ ಅನುಮತಿ ಕೇಳಿದ್ರೂ ಇನ್ನೂ ತೀರ್ಮಾನಕ್ಕೆ ಬಂದಿಲ್ಲ. ಆದರೆ ಈಗ ಸಿಎಂ ವಿಚಾರದಲ್ಲಿ ತರಾತುರಿಯಲ್ಲಿ ನಿರ್ಧಾರ ಕೈಗೊಂಡಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.

ರಾಜ್ಯದ ಜನರು 136 ಶಾಸಕರನ್ನು ಗೆಲ್ಲಿಸಿದ್ದಾರೆ. ಈ ಹಿಂದೆ ಕೇಂದ್ರ ಸಚಿವರಾದ ಜೋಶಿ, ಕುಮಾರಸ್ವಾಮಿ ಮಾತನಾಡಿದ್ದರು. ಅದಕ್ಕೆ ಪೂರಕವಾಗಿ ಸರ್ಕಾರ ಅಸ್ಥಿರಗೊಳಿಸುವ ಕೆಲಸ ನಡೆಯುತ್ತಿದೆ. ರಾಜ್ಯಪಾಲರ ನಿರ್ಧಾರದ ವಿರುದ್ಧ ಕಾನೂನು ಹೋರಾಟ ಮಾಡ್ತೇವೆ. ಪ್ರಾಸಿಕ್ಯೂಷನ್​​ಗೆ ಅನುಮತಿ ನೀಡಿರುವ ಬಗ್ಗೆ ಹೋರಾಟ ಮಾಡ್ತೇವೆ. ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ತಿದ್ದಾರೆ. ನಮ್ಮ ಸರ್ಕಾರ ಕಾನೂನು ಸಮರ ಮಾಡುತ್ತೆ. ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡು ಷಡ್ಯಂತ್ರ ಮಾಡ್ತಿದ್ದಾರೆ. ಹಿಂದುಳಿದ ವರ್ಗದ ನಾಯಕ 2ನೇ ಬಾರಿ ಸಿಎಂ ಆಗಿದ್ದನ್ನು ಸಹಿಸಿಕೊಳ್ತಿಲ್ಲ ಎಂದು ಬಿಜೆಪಿ ವಿರುದ್ಧ ಡಿಸಿಎಂ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ