ಬೆಂಗಳೂರಿನಲ್ಲಿ ತಡರಾತ್ರಿ ಅಬ್ಬರಿಸಿ, ಬೊಬ್ಬಿರಿದ ಮಳೆ; ಹಲವೆಡೆ ಅವಾಂತರ
ರಾತ್ರೋರಾತ್ರಿ ಬೆಂಗಳೂರಲ್ಲಿ ದಿಢೀರ್ ಮಳೆ ಸುರಿದಿದ್ದು, ಮುಂಜಾನೆ ವರೆಗೂ ಮಳೆ ಮುಂದುವರೆದಿದೆ. ಮನೆಯಿಂದ ಹೊರಬಂದವರು ನಲುಗಿ ಹೋಗಿದ್ದಾರೆ. ಮೆಜೆಸ್ಟಿಕ್, ರಾಜಾಜಿನಗರ, ಮಲ್ಲೇಶ್ವರಂ, ಯಶವಂತಪುರ, ಶಾಂತಿನಗರ, ವಿಧಾನಸೌಧ, ಶಿವಾಜಿನಗರ, ಕಾರ್ಪೊರೇಷನ್ ಸರ್ಕಲ್, ಟೌನ್ಹಾಲ್, ಜಯನಗರ ಸೇರಿ ಹಲವೆಡೆ ಅವಾಂತರಗಳನ್ನು ಸೃಷ್ಟಿಸಿದೆ.
ಬೆಂಗಳೂರು, ಆಗಸ್ಟ್.12: ಬೆಂಗಳೂರಲ್ಲಿ ರಾತ್ರಿಯಿಡೀ ಸುರಿದ ಮಳೆ ಹಲವು ಅವಾಂತರಗಳನ್ನು ಸೃಷ್ಟಿಸಿದೆ (Karnataka Rain). ರಾಜಧಾನಿಯ ಹಲವು ರಸ್ತೆಗಳು ಕೆಸರು ಮಯವಾಗಿವೆ. ನೀರು ನಿಂತು ಅಂಡರ್ಪಾಸ್ಗಳು ಜಲಾವೃತಗೊಂಡಿವೆ. ಚಿಕ್ಕಪೇಟೆ ಮೆಟ್ರೋ ನಿಲ್ದಾಣ (Chickpet Metro Station) ಮುಂಭಾಗದ ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ.
ಮಧ್ಯರಾತ್ರಿಯಿಂದ ಬೆಳಗ್ಗೆವರೆಗೂ ಬೆಂಗಳೂರಿನಲ್ಲಿ ಮಳೆಯ ಅಬ್ಬರ ಮುಂದುವರೆದಿದೆ. ಮೆಜೆಸ್ಟಿಕ್, ಓಕಳಿಪುರ, ರಾಜಾಜಿನಗರ, ಮಲ್ಲೇಶ್ವರಂ, ಯಶವಂತಪುರ, ಶಾಂತಿನಗರ, ಕೋರಮಂಗಲ, ವಿಧಾನಸೌಧ, ಶಿವಾಜಿನಗರ, ಕಾರ್ಪೊರೇಷನ್ ಸರ್ಕಲ್, ಟೌನ್ಹಾಲ್, ಕೆ.ಆರ್.ಮಾರ್ಕೆಟ್, ತ್ಯಾಗರಾಜನಗರ, ಜಯನಗರ, ಹನುಮಂತನಗರ, ಶ್ರೀನಗರ, ಮೈಸೂರು ರಸ್ತೆ, ನಾಯಂಡಹಳ್ಳಿ, ಮಾಗಡಿ ರಸ್ತೆ, ವಿಜಯನಗರ, ಕೆಂಗೇರಿ, ಶಿವಾನಂದ ಸರ್ಕಲ್, ಮೇಖ್ರಿ ಸರ್ಕಲ್, ಹೆಬ್ಬಾಳ, ಯಲಹಂಕ, ಕೆ.ಆರ್.ಪುರಂ ಸೇರಿದಂತೆ ಸುತ್ತಮುತ್ತ ಭಾರಿ ಮಳೆಯಾಗುತ್ತಿದ್ದು ರಸ್ತೆಗಳು ಜಲಾವೃತಗೊಂಡಿವೆ.
ಇದನ್ನೂ ಓದಿ: ಮಳೆಗಾಲದಲ್ಲೂ ಖಾಲಿ ಖಾಲಿಯಾದ ಕೆರೆ, ಬರಿದಾದ ಕೆರೆಯಲ್ಲಿ ಧರಣಿ ಕುಳಿತ ರೈತರು
ತಗ್ಗುಪ್ರದೇಶಗಳಿಗೆ ನೀರು ನುಗ್ಗಿ ನಿವಾಸಿಗಳು ನಿದ್ದೆಗೆಟ್ಟಿದ್ದಾರೆ. ಒಕಳಿಪುರಂನ ಅಂಡರ್ಪಾಸ್ಗೆ ನೀರು ನುಗ್ಗಿ, ವಾಹನ ಸವಾರರು ತಡರಾತ್ರಿ ಹರಸಾಹಸ ಪಡುವ ಸ್ಥಿತಿ ನಿರ್ಮಾಣವಾಗಿತ್ತು. ನೀರು ನಿಂತದ್ದ ರಸ್ತೆಯಲ್ಲಿಯೇ ಆ್ಯಂಬುಲೆನ್ಸ್ ಸಿಲುಕಿಕೊಂಡಿತ್ತು. ಪೇಷಂಟ್ ಇಲ್ಲದಿರೋದ್ರಿಂದ, ನೀರಿನ ಪ್ರಮಾಣ ಕಡಿಮೆ ಆದ್ಮೇಲೆ ಆ್ಯಂಬುಲೆನ್ಸ್ ತೆರಳಿತು.
ಚಿಕ್ಕಪೇಟೆ ಮೆಟ್ರೋ ಸ್ಟೇಷನ್ ಮುಂಭಾಗದ ರಸ್ತೆ ಮುಳುಗಡೆ!
ಚಿಕ್ಕಪೇಟೆ ಮೆಟ್ರೋ ಸ್ಟೇಷನ್ ಮುಭಾಗದ ರಸ್ತೆ ಮುಳುಗಡೆಯಾಗಿದೆ. ಸುಮಾರು 2 ಅಡಿಯಷ್ಟು ನೀರು ರಸ್ತೆಯಲ್ಲೇ ನಿಂತಿದೆ. ವಾಹನ ಸವಾರರು ಭಯದಲ್ಲಿಯೇ ಸಂಚಾರ ಮಾಡ್ತಿದ್ದಾರೆ. ಇತ್ತ ಕೆ.ಆರ್.ಮಾರ್ಕೆಟ್ನ ರಸ್ತೆಗಳೂ ಕೆಸರುಮಯವಾಗಿದ್ದು, ವ್ಯಾಪಾರ ವಹಿವಾಟಿಗೆ ತೊಂದರೆ ಎದುರಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ