ಹೆಸರಘಟ್ಟದಲ್ಲಿ ಹಕ್ಕಿಜ್ವರ ದೃಢ: ಸಾರ್ವಜನಿಕರಿಗೆ ಆತಂಕ ಬೇಡ, ಜಾಗರೂಕತೆ ಅಗತ್ಯ
ಬೆಂಗಳೂರಿನ ಹೆಸರಘಟ್ಟದ ಮತ್ಕೂರಲ್ಲಿ H5N1 ಹಕ್ಕಿಜ್ವರ ದೃಢಪಟ್ಟಿದೆ. ಸರ್ಕಾರ ತಕ್ಷಣ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಸಾರ್ವಜನಿಕರ ಮೇಲೆ ನಿಗಾ ಇರಿಸಲಾಗಿದೆ. ಮನುಷ್ಯರಲ್ಲಿ ಯಾವುದೇ ಸೋಂಕು ಕಂಡುಬಂದಿಲ್ಲ, ಆದರೆ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಬೆಂಗಳೂರು, ಏಪ್ರಿಲ್ 17: ಹೆಸರಘಟ್ಟದ ಮತ್ಕೂರು ಗ್ರಾಮದಲ್ಲಿ ಕೋಳಿಗಳಲ್ಲಿ ಹಕ್ಕಿಜ್ವರ (H5N1) ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರ ಸುರಕ್ಷತೆಗಾಗಿ ನಮ್ಮ ಸರ್ಕಾರವು ಸಮರೋಪಾದಿಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಜನರು ಆತಂಕಪಡುವ ಅಗತ್ಯವಿಲ್ಲ, ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಮಾಹಿತಿ ನೀಡಿದ್ದಾರೆ.
ಹಕ್ಕಿಜ್ವರ ದೃಢ: ಒಂದು ವರ್ಷದವರೆಗೆ ನಿಷೇಧ
ಈ ಕುರಿತಾಗಿ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಅವರು, ಭೋಪಾಲ್‌ನ NIHSAD ಪ್ರಯೋಗಾಲಯದ ವರದಿಯ ಪ್ರಕಾರ, ಏಪ್ರಿಲ್ 14 ರಂದು ಮತ್ಕೂರಿನ ಕೇಂದ್ರದಲ್ಲಿ ಹಕ್ಕಿಜ್ವರ ದೃಢಪಟ್ಟಿದೆ. ವಿಷಯ ತಿಳಿಯುತ್ತಿದ್ದಂತೆಯೇ ಏಪ್ರಿಲ್ 16 ರಂದು ರಾಜ್ಯ ಮತ್ತು ಜಿಲ್ಲಾ ಮಟ್ಟದ ಆರೋಗ್ಯ ಇಲಾಖೆಯ ತ್ವರಿತ ಪ್ರತಿಕ್ರಿಯೆ ತಂಡಗಳು (RRT) ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿವೆ. ಈಗಾಗಲೇ ಮುತ್ಕೂರು ಗ್ರಾಮವನ್ನು ಸೋಂಕಿತ ವಲಯ (3km ವ್ಯಾಪ್ತಿ) ಮತ್ತು ಸುತ್ತಲಿನ 10 ಕಿ.ಮೀ ಪ್ರದೇಶವನ್ನು ಕಣ್ಗಾವಲು ವಲಯ ಎಂದು ಘೋಷಿಸಲಾಗಿದೆ. ಈ ಪ್ರದೇಶವನ್ನು ಒಂದು ವರ್ಷದವರೆಗೆ ನಿಷೇಧಿತ ಪ್ರದೇಶವೆಂದು ಗುರುತಿಸಲಾಗಿದೆ.
ಸಚಿವ ದಿನೇಶ್ ಗುಂಡೂರಾವ್ ಟ್ವೀಟ್
ಹೆಸರಘಟ್ಟದ ಮತ್ಕೂರು ಗ್ರಾಮದಲ್ಲಿ ಕೋಳಿಗಳಲ್ಲಿ ಹಕ್ಕಿಜ್ವರ (H5N1) ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರ ಸುರಕ್ಷತೆಗಾಗಿ ನಮ್ಮ ಸರ್ಕಾರವು ಸಮರೋಪಾದಿಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಜನರು ಆತಂಕಪಡುವ ಅಗತ್ಯವಿಲ್ಲ, ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ.
ಮತ್ಕೂರು ಗ್ರಾಮದ ಕೋಳಿ ಸಾಕಾಣಿಕೆ ತರಬೇತಿ…
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) April 17, 2026
ಏಪ್ರಿಲ್ 15 ರಂದು ಪಶುಪಾಲನಾ ಇಲಾಖೆಯ ನೇತೃತ್ವದಲ್ಲಿ 7,444 ಕೋಳಿಗಳು, 14 ಸಾವಿರಕ್ಕೂ ಹೆಚ್ಚು ಮೊಟ್ಟೆಗಳು ಮತ್ತು 2,250 ಕೆಜಿ ಕೋಳಿ ಆಹಾರವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗಿದೆ. ಈ ಕಾರ್ಯಾಚರಣೆಯಲ್ಲಿ ಭಾಗಿಯಾದ 10 ಸಿಬ್ಬಂದಿಯನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದ್ದು, ಅವರಿಗೆ ‘ಒಸೆಲ್ಟಾಮಿವಿರ್’ ಔಷಧ ನೀಡಿ ವೈದ್ಯಕೀಯ ನಿಗಾ ವಹಿಸಲಾಗಿದೆ.
ಇದನ್ನೂ ಓದಿ: Bird Flu: ಬೆಂಗಳೂರಿಗೂ ಕಾಲಿಟ್ಟ H5N1 ಹಕ್ಕಿ ಜ್ವರ; ಪೌಲ್ಟ್ರಿ ಫಾರಂ ಬಂದ್!
ಸೋಂಕಿತ ವಲಯದ ವ್ಯಾಪ್ತಿಯಲ್ಲಿ ಬರುವ 2 ಗ್ರಾಮಗಳ 3,422 ಜನಸಂಖ್ಯೆ ಹಾಗೂ ಕಣ್ಗಾವಲು ವಲಯದ 17 ಗ್ರಾಮಗಳ 22,395 ಜನರ ಮೇಲೆ ಆರೋಗ್ಯ ಇಲಾಖೆ ತೀವ್ರ ನಿಗಾ ಇರಿಸಿದೆ. ಆಶಾ ಕಾರ್ಯಕರ್ತೆಯರು ಮುಂದಿನ 10 ದಿನಗಳ ಕಾಲ ಮನೆ ಮನೆಗೆ ಭೇಟಿ ನೀಡಿ ಜ್ವರದ ತಪಾಸಣೆ ನಡೆಸಲಿದ್ದಾರೆ. ಹೆಸರಘಟ್ಟ ಮತ್ತು ಸೊನ್ನೇನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯವಿರುವ ಪಿಪಿಇ ಕಿಟ್, ಮಾಸ್ಕ್ ಮತ್ತು ಔಷಧಗಳನ್ನು ದಾಸ್ತಾನು ಇರಿಸಲು ಸೂಚಿಸಲಾಗಿದೆ.
ಸಾರ್ವಜನಿಕರಿಗೆ ಸಲಹೆ
ಈವರೆಗೆ ಯಾವುದೇ ಮನುಷ್ಯರಲ್ಲಿ ಈ ಸೋಂಕು ವರದಿಯಾಗಿಲ್ಲ, ಹಾಗಾಗಿ ಸಾರ್ವಜನಿಕರು ಆತಂಕಕ್ಕೊಳಗಾಗುವ ಅಗತ್ಯವಿಲ್ಲ. ಆದರೆ ಮುನ್ನೆಚ್ಚರಿಕೆ ಅಗತ್ಯ. ಈ ನಿಟ್ಟಿನಲ್ಲಿ ಅನಾರೋಗ್ಯ ಪೀಡಿತ ಅಥವಾ ಸತ್ತ ಹಕ್ಕಿಗಳ ಸಂಪರ್ಕದಿಂದ ದೂರ ಇರುವುದು. ಕೋಳಿ ಮಾಂಸ ಮತ್ತು ಮೊಟ್ಟೆಯನ್ನು ಚೆನ್ನಾಗಿ ಬೇಯಿಸಿ ಸೇವಿಸುವುದು. ಯಾವುದೇ ಅನುಮಾನಾಸ್ಪದ ಲಕ್ಷಣ ಕಂಡುಬಂದಲ್ಲಿ ತಕ್ಷಣ ಆರೋಗ್ಯ ಅಥವಾ ಪಶುಸಂಗೋಪನೆ ಇಲಾಖೆಗೆ ಮಾಹಿತಿ ನೀಡುವಂತೆ ತಿಳಿಸಲಾಗಿದೆ.
ಹಕ್ಕಿಜ್ವರ ಮನುಷ್ಯರಲ್ಲಿ ಕಾಣಿಸಿಕೊಂಡಿಲ್ಲ ಎಂದ ಸಚಿವ ದಿನೇಶ್ ಗುಂಡೂರಾವ್
ಇನ್ನು ಈ ಬಗ್ಗೆ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, H5N1 ವೈರಸ್ ಹಕ್ಕಿಗಳಲ್ಲಿ ಪತ್ತೆಯಾಗಿದೆ, ಮನುಷ್ಯರಲ್ಲಿ ಕಾಣಿಸಿಕೊಂಡಿಲ್ಲ. ಹಕ್ಕಿಜ್ವರ ಬಂದ ಪ್ರದೇಶಗಳ 10 ಕಿ.ಮೀ. ವ್ಯಾಪ್ತಿಯಲ್ಲಿ ನಿಗಾ ಇಡಲಾಗಿದೆ. ಜ್ವರ ಸೇರಿದ್ದಂತೆ ಸೋಂಕಿನ ಲಕ್ಷಣಗಳ ಬಗ್ಗೆ ಗಮನ ಹರಿಸಲಾಗಿದೆ. ಮುನ್ನೆಚ್ಚರಿಕೆಯಿಂದ ಸರ್ವೆಲೆನ್ಸ್ ಮಾಡಲಾಗುತ್ತಿದೆ. ಪ್ರಕರಣಗಳ ಸಂಖ್ಯೆ ಏರಿಕೆಯಾದರೆ ಕ್ರಮವಹಿಸಲಾಗುವುದು. ರೋಗದ ಲಕ್ಷಣ ಕಂಡು ಬಂದ್ರೆ ಹತ್ತಿರದ ವೈದ್ಯರನ್ನ ಸಂಪರ್ಕಿಸಬೇಕು. ಪಶುಸಂಗೋಪನಾ ಇಲಾಖೆಯ ವರದಿ ಮೇಲೆ ನಾವು ಕ್ರಮವಹಿಸುತ್ತೇವೆ. ಪ್ರಕರಣಗಳು ಕಂಡು ಬಂದ್ರೆ ಟೆಸ್ಟಿಂಗ್ ಶುರು ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




