ಹೈಕಮಾಂಡ್‌ನಿಂದ ಸಿಎಂ ಸಿದ್ದರಾಮಯ್ಯಗೆ ದೆಹಲಿ ಬುಲಾವ್​​ ಯಾಕೆ?: ಇಲ್ಲಿದೆ ಅಸಲಿ ಕಾರಣ

ಹೈಕಮಾಂಡ್​​ ಬುಲಾವ್​​ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಇಂದು ದೆಹಲಿಗೆ ತೆರಳಲಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ನಾಳೆ ಮಹತ್ವದ ಸಭೆ ನಡೆಯಲಿದ್ದು, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಕೂಡ ಈ ವೇಳೆ ಉಪಸ್ಥಿತರಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ ನಿಖರವಾಗಿ ಯಾವ ವಿಷಯದ ಸಂಬಂಧ ಸಭೆ ಕರೆಯಲಾಗಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ಮೂಲಗಳ ಪ್ರಕಾರ ರಾಜ್ಯಸಭಾ ಮತ್ತು ಪರಿಷತ್​​ ಚುನಾವಣೆ ಸೇರಿ, ಸಂಪುಟ ಪುನಾರಚನೆ ಹಾಗೂ ನಾಯಕತ್ವ ಬದಲಾವಣೆ ವಿಚಾರವಾಗಿಯೂ ಮಾತುಕತೆಯ ನಿರೀಕ್ಷೆ ಇದೆ.

ಹೈಕಮಾಂಡ್‌ನಿಂದ ಸಿಎಂ ಸಿದ್ದರಾಮಯ್ಯಗೆ ದೆಹಲಿ ಬುಲಾವ್​​ ಯಾಕೆ?: ಇಲ್ಲಿದೆ ಅಸಲಿ ಕಾರಣ
ಸಿದ್ದರಾಮಯ್ಯ
Image Credit source: PTI

Updated on: May 25, 2026 | 12:46 PM

ಬೆಂಗಳೂರು, ಮೇ 25: ನಾಯಕತ್ವ ಬದಲಾವಣೆ ಮತ್ತು ಸಂಪುಟ ಪುನಾರಚನೆ ಬಗ್ಗೆ ರಾಜ್ಯ ಕಾಂಗ್ರೆಸ್​​ನಲ್ಲಿ (Congress) ಬಿಸಿಬಿಸಿ ಚರ್ಚೆಯ ನಡುವೆಯೇ ಸಿಎಂ ಸಿದ್ದರಾಮಯ್ಯಗೆ (Siddaramaiah) ಹೈಕಮಾಂಡ್​​ನಿಂದ ಬುಲಾವ್​​ ಬಂದಿರೋದು ಸಾಕಷ್ಟು ಊಹಾಪೋಹಗಳಿಗೆ ಕಾರಣವಾಗಿದೆ. ಸಂಜೆ 7 ಗಂಟೆಗೆ ಸಿದ್ದರಾಮಯ್ಯ ದೆಹಲಿಗೆ ಪ್ರಯಾಣ ಬೆಳೆಸಲಿದ್ದು, HALನಿಂದ ವಿಶೇಷ ವಿಮಾನದಲ್ಲಿ ತೆರಳಲಿದ್ದಾರೆ. ರಾತ್ರಿ 9.30ಕ್ಕೆ ಅವರು ದೆಹಲಿ ತಲುಪಲಿದ್ದು, ನಾಳೆ ಹೈಕಮಾಂಡ್ ನಾಯಕರೊಂದಿಗೆ ಸಿಎಂ ಮಾತುಕತೆ ನಡೆಸಲಿದ್ದಾರೆ.

ಸಭೆಯಲ್ಲಿ ಏನೆಲ್ಲ ಚರ್ಚೆ ಸಾಧ್ಯತೆ?

ನಾಳೆ ಬೆಳಗ್ಗೆ 11 ಗಂಟೆಗೆ ಹೈಕಮಾಂಡ್‌ ನಾಯಕರ ಜೊತೆ ಸಿದ್ದರಾಮಯ್ಯ ಮಾತುಕತೆ ನಡೆಸಲಿದ್ದು, ದೆಹಲಿಯಲ್ಲಿರುವ ಐಸಿಸಿಸಿ ಅಧ್ಯಕ್ಷ ಖರ್ಗೆ ನಿವಾಸದಲ್ಲಿ ಸಭೆ ನಡೆಯಲಿದೆ. ಈ ವೇಳೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಭಾಗಿ ಸಾಧ್ಯತೆ ಇದ್ದು, ಸಭೆ ಬಳಿಕ ಸಿಎಂ ಸಿದ್ದರಾಮಯ್ಯರಿಂದ ರಾಹುಲ್ ಗಾಂಧಿ ಭೇಟಿ ಅಂದಾಜಿಸಲಾಗಿದೆ. ಸಭೆ ವೇಳೆ ಸಂಪುಟ ಪುನರ್ ರಚನೆ ಬಗ್ಗೆ ಸಿದ್ದರಾಮಯ್ಯ ಪ್ರಸ್ತಾಪ ಸಾಧ್ಯತೆ ಇದ್ದು, ದೆಹಲಿ ಪ್ರವಾಸದ ಬಗ್ಗೆ ಈಗಾಗಲೇ ಸಚಿವರ ಜೊತೆ ಸಿಎಂ ಮಾಹಿತಿ ಹಂಚಿಕೊಂಡಿದ್ದಾರೆ. ಆ ಮೂಲಕ ದೆಹಲಿ ಭೇಟಿಗೂ ಮುನ್ನ ಸಚಿವರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಲು ಸಿದ್ದರಾಮಯ್ಯ ಮುಂದಾಗಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯಗೆ ಹೈಕಮಾಂಡ್ ಬುಲಾವ್ ಬಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್​​ ಏನಂದ್ರು?

ದೆಹಲಿಯಲ್ಲಿ ಎರಡು ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ಸಾಧ್ಯತೆ ಇದ್ದು, ರಾಜ್ಯಸಭಾ ಸ್ಥಾನಗಳ ಹಂಚಿಕೆ ವಿಚಾರವಾಗಿ ಮೊದಲು ಮಾತುಕತೆ ನಡೆಯಲಿದೆ. ಸಂಪುಟ ಪುನಾರಚನೆ ಬಗ್ಗೆಯೂ ಸಿದ್ದರಾಮಯ್ಯ ಪ್ರಸ್ತಾಪ ಮಾಡಲಿದ್ದು, ಪುನಾರಚನೆ ಮಾಡದಿದ್ದರೆ ಏನೇನಾಗಬಹುದೆಂದು ಮನವರಿಕೆ ಮಾಡಿಕೊಡಲಿದ್ದಾರೆ. ಡಿ.ಕೆ.ಶಿವಕುಮಾರ್ ಸಭೆಗೆ ಹಾಜರಾದರೆ ಮಾತ್ರ ನಾಯಕತ್ವ ಬಗ್ಗೆ ಚರ್ಚೆ ನಡೆಯಬಹುದು ಎಂಬ ಮಾತುಗಳು ಕೇಳಿಬಂದಿವೆ.

ಸಿಎಂ ಜೊತೆ ಸಚಿವರು, ಶಾಸಕರ ಪ್ರಯಾಣ

ಈ ಸಂಬಂಧ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿರುವ ಸಿಎಂ ಸಿದ್ದರಾಮಯ್ಯ ಹೌದು, ಇಂದು ಸಂಜೆ ದೆಹಲಿಗೆ ಹೋಗುತ್ತಿದ್ದೇನೆ ಎಂದಷ್ಟೇ ತಿಳಿಸಿದ್ದಾರೆ. ಇನ್ನು ಮುಖ್ಯಮಂತ್ರಿಗಳ ಜೊತೆಗೆ ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಕೆಲ ಶಾಸಕರೂ ದೆಹಲಿಗೆ ತೆರಳುವ ಸಾಧ್ಯತೆ ಇದೆ ಎನ್ನಲಾಗಿದೆ. ಶಾಸಕರಾದ ಹಂಪನಗೌಡ ಬಾದರ್ಲಿ, ದದ್ದಲ್, ನರೇಂದ್ರಸ್ವಾಮಿ, MLCಗಳಾದ ಶರಣಗೌಡ ಬೈಯ್ಯಾಪುರ, ವಸಂತ್ ಕುಮಾರ್ ಕೂಡ ದೆಹಲಿ ಪ್ರವಾಸ ಕೈಗೊಳ್ಳುವ ಬಗ್ಗೆ ಮಾಹಿತಿ ಸಿಕ್ಕಿದೆ.

ಊಹಾಪೋಹ ಬೇಡ ಎಂದ ಸುರ್ಜೇವಾಲ

ಹೈಕಮಾಂಡ್‌ನಿಂದ ಸಿಎಂ ಸಿದ್ದರಾಮಯ್ಯಗೆ ದೆಹಲಿ ಬುಲಾವ್ ವಿಚಾರ ಸಂಬಂಧ ದಯಮಾಡಿ ಏನೂ ಊಹಾಪೋಹಗಳಿಗೆ ಹೆಚ್ಚು ಗಮನ ಕೊಡಬೇಡಿ. ಸುಳ್ಳು ಸುದ್ದಿ ಹರಡಬೇಡಿ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದ್ದಾರೆ. ಈಗಾಗಲೇ ರಾಜ್ಯಸಭೆ ಚುನಾವಣೆಗೆ ನೋಟಿಫಿಕೇಷನ್ ಆಗಿದೆ. ನಂತರ ವಿಧಾನಪರಿಷತ್ ಚುನಾವಣೆ ನಡೆಯಬೇಕಿದೆ. ಈ ಸಂಬಂಧ ಪಕ್ಷ ಅಭಿಪ್ರಾಯ ಕೇಳುತ್ತದೆ ಎಂದವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 12:43 pm, Mon, 25 May 26

Prasanna Hegde

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
Follow Us