
ಬೆಂಗಳೂರು, ನವೆಂಬರ್ 20: ‘ಗಾಂಧಿ ಹತ್ಯೆಯ ಸತ್ಯ’ ನಾಟಕದ ಮುಂದಿನ ಪ್ರದರ್ಶನಗಳಿಗೆ ಸೂಕ್ತ ಭದ್ರತೆ ಒದಗಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ನಾಟಕ ಪ್ರದರ್ಶನ ನಡೆಯುವ ಸ್ಥಳಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ನ್ಯಾಯಮೂರ್ತಿ ಸಿ.ಎಂ.ಪೂಣಚ್ಚ ಅವರಿದ್ದ ಹೈಕೋರ್ಟ್ ಪೀಠ ಸೂಚನೆ ನೀಡಿದೆ.
ನಾಟಕ ಪ್ರದರ್ಶನದ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಅಗತ್ಯ ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿದೆ. ಇದೇ ವೇಳೆ, ನಾಟಕ ಪ್ರದರ್ಶನ ಆಯೋಜಿಸುವ ಸ್ಥಳ ಮತ್ತು ದಿನಾಂಕದ ಕುರಿತು ಮುಂಚಿತವಾಗಿ ಪೊಲೀಸರಿಗೆ ಮಾಹಿತಿ ನೀಡುವಂತೆ ಅರ್ಜಿದಾರ ಅಡ್ಡಂಡ ಕಾರ್ಯಪ್ಪ ಅವರಿಗೆ ನಿರ್ದೇಶನ ನೀಡಿದೆ. ಜಿಲ್ಲಾಡಳಿತಕ್ಕೂ ಪೂರ್ವ ಮಾಹಿತಿ ನೀಡಬೇಕು ಎಂದು ನ್ಯಾಯಾಲಯ ತಿಳಿಸಿದೆ.
ಬೆಂಗಳೂರಿನ ಬನಶಂಕರಿಯ ಸುಚಿತ್ರಾ ಫಿಲಂ ಅಕಾಡೆಮಿ ರಂಗಮಂದಿರದಲ್ಲಿ ಕಳೆದ ಅಕ್ಟೋಬರ್ 31ರಂದು ‘ಗಾಂಧಿ ಹತ್ಯೆಯ ಸತ್ಯ’ ನಾಟಕ ಪ್ರದರ್ಶನ ಆಯೋಜಿಸಲಾಗಿತ್ತು. ಈ ವೇಳೆ ನಾಟಕದ ಪ್ರದರ್ಶನಕ್ಕೆ ವಿರೋಧ ವ್ಯಕ್ತಪಡಿಸಿದ್ದ ಕೆಲವರು ಅಡ್ಡಂಡ ಕಾರ್ಯಪ್ಪ ಅವರಿಗೆ ಮಸಿ ಬಳಿದಿದ್ದರು. ಘಟನೆಯಿಂದಾಗಿ ಅಂದು ನಾಟಕ ಪ್ರದರ್ಶನ ರದ್ದುಗೊಂಡಿತ್ತು. ಬಳಿಕ ರಾಜ್ಯದ ವಿವಿಧೆಡೆ ಆಯೋಜಿಸಲು ಉದ್ದೇಶಿಸಿದ್ದ ನಾಟಕದ ಮುಂದಿನ ಪ್ರದರ್ಶನಗಳೂ ರದ್ದಾಗಿದ್ದವು.
ಇದನ್ನೂ ಓದಿ: ʻಗಾಂಧಿ ಹತ್ಯೆಯ ಸತ್ಯʼ ನಾಟಕ ಪ್ರದರ್ಶನದ ವೇಳೆ ಅಡ್ಡಂಡ ಕಾರ್ಯಪ್ಪ ಮುಖಕ್ಕೆ ಮಸಿ: ದೂರು-ಪ್ರತಿದೂರು ದಾಖಲು
ಈ ಘಟನೆ ಬಳಿಕ ತಮ್ಮ ಜೀವ, ಆಸ್ತಿ ಮತ್ತು ಸ್ವಾತಂತ್ರ್ಯಕ್ಕೆ ಅಪಾಯವಿರುವುದಾಗಿ ತಿಳಿಸಿದ್ದ ಅಡ್ಡಂಡ ಕಾರ್ಯಪ್ಪ, ಮುಂದಿನ ನಾಟಕ ಪ್ರದರ್ಶನಗಳಿಗೆ ಪೊಲೀಸ್ ಭದ್ರತೆ ಒದಗಿಸುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ನಾಟಕ ಪ್ರದರ್ಶನದ ಸ್ಥಳಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.