2ನೇ ಅತ್ಯಾಚಾರ ಪ್ರಕರಣದಲ್ಲೂ ರಾಘವೇಶ್ವರ ಶ್ರೀಗೆ ರಿಲೀಫ್: ಕೇಸ್ ರದ್ದುಪಡಿಸಿದ ಹೈಕೋರ್ಟ್
ಹೈಕೋರ್ಟ್‌ನ ಏಕಸದಸ್ಯ ಪೀಠವು ರಾಘವೇಶ್ವರ ಶ್ರೀಗಳ ವಿರುದ್ಧ ದಾಖಲಾಗಿದ್ದ ಎರಡನೇ ಅತ್ಯಾಚಾರ ಪ್ರಕರಣವನ್ನು ರದ್ದುಗೊಳಿಸಿದೆ. 2015ರಲ್ಲಿ ದಾಖಲಾದ ಈ ಪ್ರಕರಣದಲ್ಲಿ ಸಿಐಡಿ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದರು. ವೈಯಕ್ತಿಕ ವೈವಾಹಿಕ ಸಮಸ್ಯೆಯಿಂದಾಗಿ ಮಹಿಳೆ ಕೇಸ್ ದಾಖಲಿಸಿದ್ದಾರೆಂದು ವಾದ ಹಿನ್ನೆಲೆ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿದೆ.

ಬೆಂಗಳೂರು, ಮಾರ್ಚ್ 07: ಹೊಸನಗರ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ (Raghaveshwara Bharati) ವಿರುದ್ಧದ ಎರಡನೇ ಅತ್ಯಾಚಾರ ಪ್ರಕರಣವನ್ನು ಹೈಕೋರ್ಟ್ (high court) ರದ್ದುಗೊಳಿಸಿದೆ. ಕೇಸ್ ರದ್ದುಪಡಿಸಿ ನ್ಯಾ. ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠವು ಶುಕ್ರವಾರ ಆದೇಶ ಹೊರಡಿಸಿದೆ. ಆ ಮೂಲಕ ರಾಘವೇಶ್ವರ ಶ್ರೀಗಳಿಗೆ ಬಿಗ್ ರಿಲೀಫ್ ಸಿಕ್ಕಿದೆ.
2015ರಲ್ಲಿ ಮಹಿಳೆಯೊಬ್ಬರು ರಾಘವೇಶ್ವರ ಶ್ರೀಗಳ ವಿರುದ್ಧ ಪ್ರಕರಣ ದಾಖಲಿಸಿದ್ದರು. ಬಳಿಕ ಸಿಐಡಿ ಪೊಲೀಸರು ಶ್ರೀಗಳ ವಿರುದ್ಧ ಆರೋಪಪಟ್ಟಿ ದಾಖಲಿಸಿದ್ದರು. ಹೈಕೋರ್ಟ್ ವಿಚಾರಣೆ ವೇಳೆ ರಾಘವೇಶ್ವರ ಶ್ರೀಗಳ ಪರ ವಕೀಲ ಪಿ.ಎನ್.ಮನಮೋಹನ್ ವಾದ ಮಂಡಿಸಿದ್ದು, ವೈಯಕ್ತಿಕ ವೈವಾಹಿಕ ಸಮಸ್ಯೆಯಿಂದಾಗಿ ಮಹಿಳೆ ಕೇಸ್ ದಾಖಲಿಸಿದ್ದಾರೆ. ದುರುದ್ದೇಶದಿಂದ ಅತ್ಯಾಚಾರದ ದೂರು ನೀಡಿದ್ದಾರೆಂದು ವಾದಿಸಿದ್ದಾರೆ.
ಇದನ್ನೂ ಓದಿ: ಕರ್ನಾಟಕ ಸರ್ಕಾರದ ಮೇಲ್ಮನವಿ ವಜಾ: ಅತ್ಯಾಚಾರ ಪ್ರಕರಣದಲ್ಲಿ ರಾಘವೇಶ್ವರ ಭಾರತಿ ಸ್ವಾಮೀಜಿಗೆ ರಿಲೀಫ್
ಕಲಾವಿದೆಯೊಬ್ಬರು ದಾಖಲಿಸಿದ್ದ ಎರಡನೇ ಅತ್ಯಾಚಾರ ಪ್ರಕರಣದಲ್ಲಿ ಇತ್ತೀಚೆಗೆ ರಾಘವೇಶ್ವರ ಸ್ವಾಮೀಜಿಗೆ 52ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಿಂದ ಷರತ್ತು ಬದ್ಧ ನಿರೀಕ್ಷಣಾ ಜಾಮೀನು ನೀಡಲಾಗಿತ್ತು. ಆದಾಗ್ಯೂ, ಪೊಲೀಸರು ಅಂತಿಮ ವರದಿಯನ್ನು ಸಲ್ಲಿಸುವವರೆಗೆ ರಾಘವೇಶ್ವರ ಸ್ವಾಮೀಜಿ ನಗರ ಬಿಟ್ಟು ಹೋಗದಂತೆ ಷರತ್ತನ್ನು ನ್ಯಾಯಾಧೀಶ ಜಿ. ಡಿ. ಮಹಾವರ್ಕರ್ ವಿಧಿಸಿದ್ದರು. ಜೊತೆಗೆ ವೈಯಕ್ತಿಕ ಭದ್ರತೆಯನ್ನು ಸಹ ನೀಡಬೇಕು ಎಂದು ನ್ಯಾಯಾಧೀಶರು ಆದೇಶಿಸಿದ್ದರು.
ಇನ್ನು ಈ ಈ ಪ್ರಕರಣದಲ್ಲಿ ಬೆದರಿಕೆ ಆರೋಪ ಎದುರಿಸುತ್ತಿದ್ದ ಇತರ ಆರೋಪಿಗಳಾದ ಅರುಣ್ ಶ್ಯಾಮ್, ಅನಂತ, ಮಂಜುನಾಥ್ ಹೆಬ್ಬಾರ್, ರಮೇಶ್, ಸುಧಾಕರ್, ಮಧುಕೇಶ್ವರ ಹೆಬ್ಬಾರ್ ಮತ್ತು ಜಗದೀಶ್ ಶರ್ಮಾ ಅವರಿಗೂ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಮಂಜೂರು ಮಾಡಲಾಗಿತ್ತು.
ಮೊದಲನೇ ಅತ್ಯಾಚಾರ ಪ್ರಕರಣದಲ್ಲೂ ರಿಲೀಫ್
ಇದಕ್ಕೂ ಮೊದಲನೇ ಅತ್ಯಾಚಾರ ಪ್ರಕರಣದಲ್ಲಿ ರಾಘವೇಶ್ವರ ಭಾರತಿ ಸ್ವಾಮೀಜಿಗೆ ಹೈಕೋರ್ಟ್ನಲ್ಲಿ ತಾಂತ್ರಿಕ ಕಾರಣದಿಂದ ರಿಲೀಫ್ ಸಿಕ್ಕಿತ್ತು. ಸಿಐಡಿಯನ್ನು ಪೊಲೀಸ್ ಠಾಣೆ ಎಂದು ಘೋಷಿಸಿಲ್ಲ, ಸರ್ಕಾರ ಈ ಬಗ್ಗೆ ಪ್ರತ್ಯೇಕ ಅಧಿಸೂಚನೆ ಹೊರಡಿಸಿಲ್ಲ. ಹೀಗಾಗಿ ಸಿಐಡಿ ಪೊಲೀಸರಿಗೆ ಠಾಣೆಯ ಅಧಿಕಾರವಿಲ್ಲ. ಹೀಗಾಗಿ ಸಿಐಡಿ ಪೊಲೀಸರಿಗೆ ಆರೋಪಪಟ್ಟಿ ಸಲ್ಲಿಸಲು ಅವಕಾಶವಿಲ್ಲ ಎಂಬ ಕಾರಣಕ್ಕೆ ರಾಘವೇಶ್ವರ ಶ್ರೀಗಳ ವಿರುದ್ಧದ ಪ್ರಕರಣ ರದ್ದುಗೊಳಿಸಲಾಗಿತ್ತು.
ಇದನ್ನೂ ಓದಿ: ವಂಚನೆ ಕೇಸ್: ಬಿಜೆಪಿ ಶಾಸಕ ಮುನಿರತ್ನಗೆ ಬಿಗ್ ಶಾಕ್ ಕೊಟ್ಟ ಹೈಕೋರ್ಟ್
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಘವೇಶ್ವರ ಭಾರತಿ ಸ್ವಾಮೀಜಿ ವಿರುದ್ಧದ ಪ್ರಕರಣ ಕೈಬಿಟ್ಟಿದ್ದ ವಿಚಾರಣಾ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಗಾಯಕಿ ಪ್ರೇಮಲತಾ ಸಲ್ಲಿಸಿದ್ದ ಅರ್ಜಿಯನ್ನೂ ಹೈಕೋರ್ಟ್ ವಜಾಗೊಳಿಸಿತ್ತು. ವಿಚಾರಣಾ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಸರ್ಕಾರ ಮತ್ತು ಪ್ರೇಮಲತಾ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.