ಹಲಾಲ್, ಮುಸ್ಲಿಂ ಬಜೆಟ್ ಎಂದು ಟೀಕಿಸಿದವರಿಗೆ ಖಡಕ್ ತಿರುಗೇಟು ಕೊಟ್ಟ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು (ಮಾರ್ಚ್ 07) 2025ನೇ ಸಾಲಿನ ಕರ್ನಾಟಕ ಬಜೆಟ್ ಮಂಡನೆ ಮಾಡಿದ್ದಾರೆ. ನಾಲ್ಕು ಲಕ್ಷ ಕೋಟಿ ಗಾತ್ರದ ಬಜೆಟ್ ಮಂಡನೆ ಮಾಡಿದ್ದು, ಹಲವು ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ಅದರಲ್ಲೂ ಅಲ್ಪಸಂಖ್ಯಾತರಿಗೆ ಸಾಲು ಸಾಲು ಕೊಡುಗೆಗಳನ್ನು ನೀಡಿರುವುದು ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಇದೀಗ ಇದಕ್ಕೆ ಸ್ವತಃ ಸಿಎಂ ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರು, ಮಾರ್ಚ್ 07): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ (ಮಾ.7) ತಮ್ಮ ದಾಖಲೆಯ ಹದಿನಾರನೇ ಬಜೆಟ್ ಮಂಡಿಸಿದ್ದಾರೆ. 2025ನೇ ಸಾಲಿನ ಕರ್ನಾಟಕ ಬಜೆಟ್ನ ಗಾತ್ರದ ಮೊತ್ತ ನಾಲ್ಕು ಲಕ್ಷ ಕೋಟಿ ರೂಪಾಯಿ. ಇನ್ನು ಈ ಬಜೆಟ್ನಲ್ಲಿ ಅಲ್ಪಸಂಖ್ಯಾತರು ಅಂದರೆ, ಮುಸ್ಲಿಂ ಕ್ರಿಶ್ಚಿಯನ್ ಸಮುದಾಯಕ್ಕೂ ಕೊಡುಗೆ ನೀಡಿದ್ದಾರೆ. ಇದರಿಂದ ಸಿಡಿದೆದ್ದಿರುವ ವಿಪಕ್ಷ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳು ಸಿದ್ದರಾಮಯ್ಯ ಬಜೆಟ್ ವಿರುದ್ಧ ಕ್ರೋಶ ಹೊರಹಾಕುತ್ತಿವೆ. ಇದೊಂದು ಸಾಬರ ಬಜೆಟ್, ರಂಜಾನ್ ಹಬ್ಬಕ್ಕೆ ಈ ಬಜೆಟ್ನಲ್ಲಿ ಭರ್ಜರಿ ಕೊಡುಗೆ ನೀಡಲಾಗಿದೆ. ಹಲಾಲ್ ಬಜೆಟ್, ಪಾಕಿಸ್ತಾನ್ ಬಜೆಟ್ ಅಂತೆಲ್ಲಾ ಟೀಕೆಗಳನ್ನು ಮಾಡುತ್ತಿವೆ. ಇದೀಗ ಇದಕ್ಕೆ ಸ್ವತಃ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ಎಲ್ಲಾ ಆರೋಪಗಳಿಗೆ ಸ್ಪಷ್ಟನೆ ನೀಡುವ ಮೂಲಕ ತಿರುಗೇಟು ನೀಡಿದ್ದಾರೆ.
ವಿಪಕ್ಷ ನಾಯಕರಾದ ಆರ್ ಅಶೋಕ್ನಿಂದ ಹಿಡಿದು ಬಿಜೆಪಿ ಶಾಸಕರು, ನಾಯಕರು ಸೇರಿದಂತೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಇದೊಂದು ಅಲ್ಪಸಂಖ್ಯಾತರ ಬಜೆಟ್, ಹಲಾಲ್ ಬಜೆಟ್ ಅಂತೆಲ್ಲಾ ವ್ಯಂಗ್ಯವಾಡಿದ್ದಾರೆ. ಅಲ್ಲದೇ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧದ ಚರ್ಚೆಗೆ ಗ್ರಾಸವಾಗಿದೆ. ಇದರ ಮಧ್ಯ ಇತ್ತ ಸಿದ್ದರಾಮಯ್ಯನವರು ಬಜೆಟ್ ಮಂಡನೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿದ್ದರಾಮಯ್ಯ, ಬಜೆಟ್ನ ಸಂಪೂರ್ಣ ವಿವರವನ್ನು ನೀಡಿದರು. ಅಲ್ಲದೇ ಸಾಲದ ಬಜೆಟ್, ಮುಸ್ಲಿಮರ ಬಜೆಟ್ ಎನ್ನುವ ಟೀಕೆಗಳಿಗೆ ತಿರುಗೇಟು ನೀಡಿದರು. ಅಲ್ಲದೇ ಎಸ್ಸಿಪಿ-ಟಿಎಸ್ಪಿ ಹಣದ ಬಗ್ಗೆ ವಿವರಿಸಿದ್ದಾರೆ.
ಇದನ್ನೂ ಓದಿ: ಸದ್ದಿಲ್ಲದೇ ಸರ್ಕಾರಿ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ ಘೋಷಿಸಿದ ಸಿದ್ದರಾಮಯ್ಯ!
ರಾಜ್ಯದ ಅಲ್ಪಸಂಖ್ಯಾತರಿಗೂ ಹಣ ಜಾಸ್ತಿ ಮಾಡಿದ್ದೇವೆ. ಅಲ್ಪಸಂಖ್ಯಾತರು ಅಂದ್ರೆ ಬರೀ ಮುಸ್ಲಿಮರು ಮಾತ್ರ ಅಲ್ಲ. ಕ್ರಿಶ್ಚಿಯನ್ ಅಭಿವೃದ್ಧಿಗೂ 500 ಕೋಟಿ ರೂ. ಮೀಸಲಿಟ್ಟಿದ್ದೇವೆ. ಆದರೆ ಬಿಜೆಪಿಯವರು ಹಲಾಲ್ ಬಜೆಟ್ ಎಂದು ಕರೆದಿದ್ದಾರೆ. ಬಿಜೆಪಿಯವರ ಮನಸಿನ ಕೊಳಕು ಭಾವನೆ ಹೊರಗೆ ಬರುತ್ತಿದೆ ಎಂದು ತಿವಿದರು.
ಎಲ್ಲರಿಗೂ ಸಾಮಾಜಿಕ ನ್ಯಾಯ ಕೊಡೋದು ಬೇಡ್ವಾ? ಅಲ್ಪಸಂಖ್ಯಾತರಿಗೆ ಶಿಕ್ಷಣ ಸರಿಯಾಗಿಲ್ಲ, ಅವರ ಶೈಕ್ಷಣಿಕ ಪ್ರಮಾಣ ಕಡಿಮೆ. ನಾವು ಸಮಾನತೆಯಲ್ಲಿ ನಂಬಿಕೆ ಇಟ್ಟುಕೊಂಡವರು. ಅದಕ್ಕೆ ಮಾಡಿದ್ದೇವೆ. ಹಲಾಲ್ ಬಜೆಟ್, ಪಾಕಿಸ್ತಾನ್ ಬಜೆಟ್ ಎನ್ನುವುದೆಲ್ಲ ಅವರು ಸೆಕ್ಯುಲರ್ ಅಲ್ಲ ಎಂಬುದನ್ನು ತೋರಿಸುತ್ತದೆ. ಅವರು ಜಾತ್ಯಾತೀತೆಯ ವಿರುದ್ದವೇ ಇದ್ದಾರೆ. ಸಂವಿಧಾನ ಹೇಳಿದಂತೆ ನಾವು ನಡೆದುಕೊಳ್ತಿದ್ದೇವೆ. ಬಿಜೆಪಿಯವರಿಗೆ ಅಸೆಂಬ್ಲಿಯಲ್ಲೇ ಉತ್ತರ ಕೊಡುತ್ತೇನೆ. ಬಿಜೆಪಿಯವರು ಸಂವಿಧಾನಕ್ಕೆ ವಿರುದ್ದವಾಗಿದ್ದಾರೆ . ಬಜೆಟ್ ದೂರದೃಷ್ಟಿ, ಸಮಾನತೆ ಆರ್ಥಿಕ ಸಾಮಾಜಿಕ ಬೆಳವಣಿಗೆ ಇರುವ ಬಜೆಟ್ ಇದು ವಿಕ್ಷಗಳಿಗೆ ತಿರುಗೇಟು ನೀಡಿದರು.
ವಿಪಕ್ಷಕ್ಕೆ ಡಿಕೆ ಶಿವಕುಮಾರ್ ಟಾಂಗ್
ಅಲ್ಪಸಂಖ್ಯಾತರಿಗೆ ಪರವಾಗಿರೋ ಬಜೆಟ್ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ನಮಗೆ ಎಲ್ಲಾ ವರ್ಗಕ್ಜೂ ನ್ಯಾಯ ಸಿಗಬೇಕು. ಅಲ್ಪಸಂಖ್ಯಾತರು ಪಂಚರ್ ಹಾಕೋರು ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ. ಅವರು ಪಂಚರ್ ಹಾಕೋದು ಬೇಡ, ಈ ರೀತಿ ಬೀಲ್ಡಿಂಗ್ ಕಟ್ಟೋ ರೀತಿ ಆಗಬೇಕು ಎನ್ನುವುದು ನಮ್ಮ ಇಚ್ಛೆ ಎಂದು ಟಾಂಗ್ ಕೊಟ್ಟರು.