
ಬೆಂಗಳೂರು, ಜೂನ್ 12: ಬೆಂಗಳೂರಿನ ವಾಹನ ಸವಾರರು ಹಾಗೂ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ (BMRCL) ಭರ್ಜರಿ ಸಿಹಿ ಸುದ್ದಿ ನೀಡಿದೆ. ದೇಶದಲ್ಲೇ ಅತಿ ಎತ್ತರದ ಹಾಗೂ ವಿಶಿಷ್ಟ ತಂತ್ರಜ್ಞಾನದ ಇಂಟರ್‌ಚೇಂಜ್ ನಿಲ್ದಾಣ ಎಂದೇ ಖ್ಯಾತಿ ಪಡೆದಿರುವ ಜಯದೇವ ಆಸ್ಪತ್ರೆ ಮೆಟ್ರೋ ಸ್ಟೇಷನ್ (Jayadeva Metro Station) ಇದೇ ಆಗಸ್ಟ್ ತಿಂಗಳಿನಲ್ಲಿ ಸಾರ್ವಜನಿಕರ ಬಳಕೆಗೆ ಮುಕ್ತವಾಗಲಿದೆ. ಒಟ್ಟು ಐದು ಸ್ತರಗಳಲ್ಲಿ (5-Tier) ನಿರ್ಮಾಣವಾಗಿರುವ ದೇಶದ ಮೊದಲ ಮೆಟ್ರೋ ನಿಲ್ದಾಣ ಇದಾಗಿದ್ದು, ಇದರ ಆರಂಭದಿಂದ ಬನ್ನೇರುಘಟ್ಟ ರಸ್ತೆ ಮತ್ತು ಸುತ್ತಮುತ್ತಲಿನ ಐಟಿ ಉದ್ಯೋಗಿಗಳು ಹಾಗೂ ಸ್ಥಳೀಯ ನಿವಾಸಿಗಳ ದಶಕದ ಟ್ರಾಫಿಕ್ ಸಂಕಷ್ಟಕ್ಕೆ ಕೊನೆಗೂ ಮುಕ್ತಿ ದೊರೆಯಲಿದೆ.
ಸುಮಾರು 155 ಕೋಟಿ ರೂ. ಭಾರಿ ವೆಚ್ಚದಲ್ಲಿ ಜಯದೇವ ಇಂಟರ್‌ಚೇಂಜ್ ಮೆಟ್ರೋ ನಿಲ್ದಾಣವನ್ನು ನಿರ್ಮಿಸಲಾಗಿದೆ. ಈ ಸ್ಟೇಷನ್‌ನ ವಿನ್ಯಾಸವೇ ಅತ್ಯಂತ ರೋಚಕವಾಗಿದ್ದು, ಇಂಜಿನಿಯರಿಂಗ್ ಅದ್ಭುತ ಎನ್ನಲಾಗಿದೆ. ನೆಲದ ಕೆಳಗೆ ಅಂಡರ್‌ಪಾಸ್ (Underpass), ಅದರ ಮೇಲೆ ಸಾಮಾನ್ಯ ರಸ್ತೆ, ಮೂರನೇ ಸ್ತರದಲ್ಲಿ ಡಬಲ್ ಡೆಕ್ಕರ್ ಫ್ಲೈ ಓವರ್ (Double Decker Flyover), ನಾಲ್ಕನೇ ಸ್ತರದಲ್ಲಿ ನಮ್ಮ ಮೆಟ್ರೋದ ಹಳದಿ ಮಾರ್ಗ (Yellow Line) ಹಾಗೂ ಎಲ್ಲದಕ್ಕಿಂತ ಮೇಲಿನ ಅಂದರೆ ಐದನೇ ಸ್ತರದಲ್ಲಿ ಪಿಂಕ್ ಲೈನ್ (Pink Line) ಹಾದು ಹೋಗುತ್ತದೆ. ಸದ್ಯ ಆಗಸ್ಟ್‌ನಲ್ಲಿ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ ಆರು ಮೆಟ್ರೋ ನಿಲ್ದಾಣಗಳ ಮಾರ್ಗವನ್ನು ಮುಕ್ತಗೊಳಿಸಲು ಬಿಎಂಆರ್‌ಸಿಎಲ್ ಭರದಿಂದ ಸಿದ್ಧತೆ ನಡೆಸುತ್ತಿದೆ.
ಕಳೆದ ವರ್ಷವೇ ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರ ನಡುವಿನ ಹಳದಿ ಮಾರ್ಗ ಉದ್ಘಾಟನೆಯಾಗಿದ್ದರೂ, ಜಯದೇವ ಮೆಟ್ರೋ ನಿಲ್ದಾಣ ಮಾತ್ರ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಇದೀಗ ಆಗಸ್ಟ್‌ನಲ್ಲಿ ಪಿಂಕ್ ಲೈನ್‌ನ ಕಾಳೇನ ಅಗ್ರಹಾರ-ತಾವರೆಕೆರೆ ನಡುವೆ ಮೆಟ್ರೋ ಸಂಚಾರ ಆರಂಭವಾದರೆ, ಪ್ರಯಾಣಿಕರು ಸುಲಭವಾಗಿ ಮಾರ್ಗ ಬದಲಾಯಿಸಬಹುದು. ಬನ್ನೇರುಘಟ್ಟ ರಸ್ತೆಯಿಂದ ಬರುವವರು ಜಯದೇವ ನಿಲ್ದಾಣದಲ್ಲಿ ಇಳಿದು ಹಳದಿ ಮಾರ್ಗದ ಮೂಲಕ ಆರ್.ವಿ. ರಸ್ತೆ ತಲುಪಬಹುದು. ಅಲ್ಲಿಂದ ನೇರವಾಗಿ ಮೆಜೆಸ್ಟಿಕ್ ಹಾಗೂ ಹಸಿರು ಮಾರ್ಗದ (Green Line) ಸಿಲ್ಕ್ ಇನ್ಸ್ಟಿಟ್ಯೂಟ್‌ನಿಂದ ಮಾದಾವರದವರೆಗೆ ಟ್ರಾಫಿಕ್ ಕಿರಿಕಿರಿ ಇಲ್ಲದೆ ಪ್ರಯಾಣಿಸಬಹುದಾಗಿದೆ.
ಈ ನೂತನ ಇಂಟರ್‌ಚೇಂಜ್ ನಿಲ್ದಾಣದ ಕಾರ್ಯಾಚರಣೆಯಿಂದ ಬನ್ನೇರುಘಟ್ಟ ರಸ್ತೆಯ ಕಾಳೇನ ಅಗ್ರಹಾರ, ಹುಳಿಮಾವು, ಐಐಎಂಬಿ (IIMB), ಜೆ.ಪಿ. ನಗರ ಹಾಗೂ ತಾವರೆಕೆರೆ ಸುತ್ತಮುತ್ತಲಿನ ಲಕ್ಷಾಂತರ ಜನರಿಗೆ ಆನೆ ಬಲ ಬಂದಂತಾಗಲಿದೆ. ಪಿಂಕ್ ಲೈನ್ ಸಂಪೂರ್ಣವಾಗಿ ಕಾರ್ಯಾರಂಭ ಮಾಡುತ್ತಿದ್ದಂತೆ ಪ್ರಯಾಣಿಕರು ಗ್ರೀನ್, ಪರ್ಪಲ್ ಮತ್ತು ಯೆಲ್ಲೋ ಲೈನ್‌ಗಳಿಗೆ ಸುಲಭವಾಗಿ ಕನೆಕ್ಟ್ ಮಾಡಿಕೊಂಡು ನಗರದ ಯಾವುದೇ ಮೂಲೆಗಾದರೂ ನಿರಾಯಾಸವಾಗಿ ಸಂಚರಿಸಬಹುದಾಗಿದೆ ಎಂದು ಸ್ಥಳೀಯ ನಿವಾಸಿಗಳು ಹಾಗೂ ವಾಹನ ಸವಾರರು ಸಂತಸ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ