‘ಪಾಪರ್ ಆಗಿರೋದಕ್ಕೆ ಇದಕ್ಕಿಂತ ಉದಾಹರಣೆ ಬೇಕಾ?’: ರಾಜ್ಯ ಸರ್ಕಾರದ ವಿರುದ್ಧ ಅಶೋಕ್​​ ವಾಗ್ದಾಳಿ

ಬರ ಪರಿಹಾರ, ಆಶಾ ಕಾರ್ಯಕರ್ತೆಯರ ಪ್ರತಿಭಟನೆ ಹಾಗೂ ಕ್ಷೇತ್ರ ಮರುವಿಂಗಡಣೆ ವಿಚಾರವಾಗಿ ವಿಪಕ್ಷ ನಾಯಕ ಆರ್. ಅಶೋಕ್ ರಾಜ್ಯ ಸರ್ಕಾರ ಮತ್ತು ಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಜೊತೆಗೆ ತಮಿಳುನಾಡು ಸಿಎಂ ವಿಜಯ್ ವಿರುದ್ಧವೂ ಕಿಡಿಕಾರಿದ್ದಾರೆ. ಹುಡುಗಾಟದ ಹುಡುಗ ಅಂದ್ರೆ ರಾಹುಲ್ ಗಾಂಧಿ ಎಂದೂ ಅವರು ವ್ಯಂಗ್ಯವಾಡಿದ್ದಾರೆ.

ಪಾಪರ್ ಆಗಿರೋದಕ್ಕೆ ಇದಕ್ಕಿಂತ ಉದಾಹರಣೆ ಬೇಕಾ?: ರಾಜ್ಯ ಸರ್ಕಾರದ ವಿರುದ್ಧ ಅಶೋಕ್​​ ವಾಗ್ದಾಳಿ
ವಿಪಕ್ಷ ನಾಯಕ ಆರ್​. ಅಶೋಕ್
Edited By:

Updated on: Nov 29, 2026 | 12:43 PM

ಬೆಂಗಳೂರು, ನವೆಂಬರ್​​ 29: ಬರ ಪರಿಹಾರ ವಿಚಾರದಲ್ಲಿ ಕೇಂದ್ರಕ್ಕೆ ಸಿಎಂ ಡಿಕೆ ಶಿವಕುಮಾರ್​​ ಡೆಡ್​ಲೈನ್ ನೀಡಿರುವು ವಿಚಾರಕ್ಕೆ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಆರ್​. ಅಶೋಕ್​​, ಪಾಪರ್ ಆಗಿರೋದಕ್ಕೆ ಇದಕ್ಕಿಂತ ಉದಾಹರಣೆ ಬೇಕಾ? ಎಲ್ಲ ಕೋರ್ಟ್‌ನಲ್ಲೇ ತೀರ್ಮಾನ ಆಗುತ್ತಾ? ಎಂದು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ದೇಶದ ಎಲ್ಲಾ ರಾಜ್ಯಗಳ ಬಗ್ಗೆ ಒಂದೇ ಸಭೆ ಆಗೋದು. ಕಾನೂನಿನ ಬಗ್ಗೆ ಅಧಿಕಾರಿಗಳು ಸಿಎಂ ಡಿ.ಕೆ.ಶಿವಕುಮಾರ್‌ಗೆ ಹೇಳಬೇಕು. ಇವರು ಕೋರ್ಟ್​​ಗೆ ಹೋಗುವುದು ಬರ ಪರಿಹಾರ ನೀಡುವುದು ತಡ ಮಾಡಲು. ಅನ್ಯಾಯ ಅಂತೀರಲ್ಲ, ಮನಮೋಹನ್ ಸಿಂಗ್ ಇದ್ದಾಗ ಕರ್ನಾಟಕಕ್ಕೆ‌ ಎಷ್ಟು ಹಣ ಕೊಟ್ಟಿದ್ದಾರೆ? ಮೋದಿ ಎಷ್ಟು ಬರ ಪರಿಹಾರ ಕೊಟ್ಟಿದ್ದಾರೆ ಹೇಳಿ. ಗೊಡ್ಡು ಬೆದರಿಕೆಗೆ ಹೆದರುವುದಿಲ್ಲ, ಪಾಪರ್ ಆಗಿದ್ದೀವಿ ಅಂತಾ ಹೇಳಿ. ಆಮೇಲೆ ಬೇಕಾದರೆ ನಾವು ಸರ್ವ ಪಕ್ಷ ನಿಯೋಗದಲ್ಲಿ ಹೋಗೋಣ ಎಂದು ಅಶೋಕ್​​ ಹೇಳಿದ್ದಾರೆ.

‘ಆಶಾ ಕಾರ್ಯಕರ್ತೆಯರಿಗೆ ನೋವಾಗಿದೆ’

ಸಿಎಂ ಎಡಬಿಡಂಗಿತನ, ಖಾದರ್ ದುರಹಂಕಾರದ ಹೇಳಿಕೆಗಳಿಂದ ಆಶಾ ಕಾರ್ಯಕರ್ತೆಯರಿಗೆ ನೋವುಂಟಾಗಿದೆ. ಇತ್ತೀಚೆಗೆ ಮುಂದುವರಿದ ದೇಶ ಜಪಾನ್ ಪ್ರವಾಸಕ್ಕೆ ಸಿಎಂ ಹೋಗಿದ್ರು. ಜಪಾನ್ ರೀತಿ ಸಿಎಂ ಆಶಾಗಳ ಸಮಸ್ಯೆ ಬಗೆಹರಿಸ್ತಾರೆಂದು ಅಂದುಕೊಂಡಿದ್ವಿ. ಬೆಳಗಾವಿ ಅಧಿವೇಶನ ಆರಂಭವಾಗುತ್ತಿದೆ, ಆಶಾಗಳಿಗೆ ನ್ಯಾಯ ಕೊಡಬೇಕು. ಹೀಗಾಗಿ ನಾವು ಸಹ ಹೋರಾಟ ಮಾಡುತ್ತೇವೆ. ಡಿಕೆಶಿ ಸರ್ಕಾರವನ್ನು ಸುಮ್ಮನೇ ಕೇಳುತ್ತಿಲ್ಲ, ಹೇಳಿದಂತೆ ನಡೆದುಕೊಳ್ಳಿ. ಆಶಾಗಳಿಗೆ 15 ಸಾವಿರ ಕೊಡ್ತೀವಿ ಅಂತಾ ಕೇಂದ್ರ ಸರ್ಕಾರ ಹೇಳಿತ್ತಾ? ಮೋದಿ ಹಲವು ಚುನಾವಣಾ ಪ್ರಚಾರ ಮಾಡಿದ್ದಾರೆ, ಎಂದಾದ್ರೂ ಹೇಳಿದ್ದಾರಾ? ಎಂದು ಅಶೋಕ್​​ ಪ್ರಶ್ನಿಸಿದ್ದಾರೆ. ಇದು ಮಾತು ತಪ್ಪಿದ, ಮೋಸ ಮಾಡಿದ, ಬೆನ್ನಿಗೆ ಚೂರಿ ಹಾಕಿದ ಸರ್ಕಾರ ಎಂದು ​​ ಕಿಡಿ ಕಾರಿದ್ದಾರೆ.

Loading...

ಇದನ್ನೂ ಓದಿ: ಜಪಾನ್​​ ಮಾದರಿಯಲ್ಲಿ ಕರ್ನಾಟಕದ ಅಭಿವೃದ್ಧಿ ಕನಸು ಬಿಚ್ಚಿಟ್ಟ ಸಿಎಂ ಡಿಕೆ ಶಿವಕುಮಾರ್​​

‘ಹುಡುಗಾಟದ ಹುಡುಗ ಅಂದ್ರೆ ರಾಹುಲ್ ಗಾಂಧಿ’

Delimitation Bill 2026: ಡಿಎಂಕೆ ಬೆನ್ನಿಗೆ ಚೂರಿ ಹಾಕಿ ವಿಜಯ್ ಜೊತೆ ಕೈಜೋಡಿಸಿದ್ರಲ್ಲಪ್ಪ ಎಂದ Rಅಶೋಕ್ #TV9D

ಇದೇ ವೇಳೆ ಕ್ಷೇತ್ರ ಮರುವಿಂಗಡಣೆ ವಿಚಾರವಾಗಿಯೂ ಪ್ರತಿಕ್ರಿಯಿಸಿರುವ ಅಶೋಕ್​​, ಮಸೂದೆಯನ್ನು ಹೊಸದಾಗಿ ಮಂಡಿಸುತ್ತಿಲ್ಲ. ಕಾಂಗ್ರೆಸ್‌ನವರು ಮಹಿಳಾ ಮೀಸಲಾತಿ ವಿರೋಧಿಗಳು. ಈಗಲೇ ಅವರಿಗೆ ಚುನಾವಣಾ ಭಯ ಶುರುವಾಗಿದೆ. ಇಂಡಿಯಾ ಮೈತ್ರಿಕೂಟದಲ್ಲಿ ಯಾರೂ ಉಳಿದಿಲ್ಲ. ಸೋನಿಯಾ, ಪ್ರಿಯಾಂಕಾ, ರಾಹುಲ್‌ ಮೂವರೇ ಉಳಿಯೋದು. ದಲಿತರಿಗೆ ಹೆಚ್ಚು ಅವಕಾಶ ಸಿಗುತ್ತೆ, ಮೋದಿ, ಬಿಜೆಪಿಗೆ ಕ್ರೆಡಿಟ್ ಬರಬಾರದೆಂದು ಡಿಲಿಮಿಟೇಶನ್‌ ಬಿಲ್‌ನ್ನು ಕಾಂಗ್ರೆಸ್‌ ವಿರೋಧಿಸುತ್ತಿದೆ. ಭ್ರಷ್ಟಾಚಾರದಲ್ಲಿ‌ ಸಿಕ್ಕಿ ಹಾಕಿಕೊಂಡಾಗ ನಿಮ್ಮ ಬೆನ್ನಿಗೆ ಡಿಎಂಕೆ‌ ನಿಂತಿತ್ತು. ಆದರೆ ಡಿಎಂಕೆ ಬೆನ್ನಿಗೆ ಕಾಂಗ್ರೆಸ್​ ನಾಯಕರು ಚೂರಿ ಹಾಕಿದ್ರು. ಹುಡುಗಾಟದ ಹುಡುಗ ಅಂದ್ರೆ ರಾಹುಲ್ ಗಾಂಧಿ. ಕಾಂಗ್ರೆಸಿಗರಿಗೆ ಡಿಎಂಕೆ‌ ನಾಯಕರು ಕಪಾಳಮೋಕ್ಷ ಮಾಡ್ತಾರೆ ಎಂದವರು ಭವಿಷ್ಯ ನುಡಿದಿದ್ದಾರೆ.

‘ತಮಿಳುನಾಡಿನ ಜನರು ವಿಜಯ್​​ಗೆ ಬುದ್ಧಿ ಕಲಿಸಬೇಕು’

ತಮಿಳುನಾಡಿನ ತಿರುಪ್ಪರಂಕುಂದ್ರಂ ಬೆಟ್ಟದಲ್ಲಿ ದೀಪ ಬೆಳಗುವ ಬಗ್ಗೆ ವಿವಾದ ವಿಚಾರವಾಗಿ ತಮಿಳುನಾಡು ಸರ್ಕಾರದ ವಿರುದ್ಧ ಅಶೋಕ್​​ ಕಿಡಿ ಕಾರಿದ್ದಾರೆ. ಹಿಂದೆ ಸ್ಟಾಲಿನ್ ಸರ್ಕಾರ ಇತ್ತು, ಈಗ ಜೋಸೆಫ್ ಸರ್ಕಾರ ಇದೆ. ತಮಿಳುನಾಡಿನಲ್ಲಿ ಮುರುಗನ್​ಗೆ ಜನರು ಹೆಚ್ಚು ಪೂಜೆ ಮಾಡ್ತಾರೆ. ಬೆಟ್ಟದಲ್ಲಿ ದೀಪ ಬೆಳಗಿಸಲು ಸುಪ್ರೀಂಕೋರ್ಟ್​ ಆದೇಶ ಮಾಡಿತ್ತು. ಆ ಆದೇಶಕ್ಕೆ ವಿರುದ್ಧವಾಗಿ ವಿಜಯ್​ ಹೀಗೆ ಮಾಡಿದ್ದಾರೆ. ಅವರನ್ನು ಯಾವುದೇ ದೇವಸ್ಥಾನಕ್ಕೆ ಬಿಡಬಾರದು. ಕರ್ನಾಟಕದ ಒಳಗೆ ಬಿಡದೇ ಬಾಯ್ಕಾಟ್​ ಮಾಡಬೇಕು. ಆಗ ಪಾಠ ಕಲಿಸಿದಂತೆ ಆಗುತ್ತೆ. ತಮಿಳುನಾಡು ಪೊಲೀಸರಿಗೆ ಮೂರು ಕಾಸಿನ ಮರ್ಯಾದೆ ಇಲ್ಲದಂತೆ ಅವಮಾನ ಮಾಡುವ ಕೆಲಸ ಅಲ್ಲಿನ ಸಿಎಂ ಮಾಡಿದ್ದಾರೆ. ಸಿನಿಮಾ‌ ಸ್ಟೈಲ್‌ನಲ್ಲಿ ಮಾಡೋಕೆ ಹೋಗಿ ಹಳ್ಳಕ್ಕೆ ಬಿದ್ದ ನರಿ ರೀತಿ ಆಗಿದ್ದಾರೆ. ಸಂವಿಧಾನಕ್ಕೆ ಅಪಚಾರ ಮಾಡಿದ ಸಿಎಂ ಜೋಸೆಫ್ ವಿಜಯ್ ತೊಲಗಬೇಕು. ತಮಿಳುನಾಡಿನ ಜನರು ವಿಜಯ್​​ಗೆ ಬುದ್ಧಿ ಕಲಿಸಬೇಕು ಎಂದು ಅಶೋಕ್​​ ಆಗ್ರಹಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 12:41 pm, Sun, 29 November 26

ಅನಿಲ್​ ಕಲ್ಕೆರೆ

ಅನಿಲ್ ಕಲ್ಕೆರೆ ಮೂಲತಃ ಬೆಂಗಳೂರಿನವರಾಗಿದ್ದು, ಕಳೆದ 11 ವರ್ಷಗಳಿಂದ ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಬೆಂಗಳೂರು ರಾಜಕೀಯ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೆ.ಆರ್. ಪುರಂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಪೂರೈಸಿದ ಬಳಿಕ ಬೆಂಗಳೂರು ವಿಶ್ವವಿದ್ಯಾಲಯ (ಸೆಂಟ್ರಲ್ ಕಾಲೇಜು) ದಲ್ಲಿ Msc (ಮಾಸ್ ಕಮ್ಯುನಿಕೇಷನ್) ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. ಸೃಜನಶೀಲ ಬರವಣಿಗೆ ಜೊತೆಗೆ ವಿಧಾನಸೌಧದ ಆಡಳಿತಾತ್ಮಕ ಸುದ್ದಿಗಳೂ ಸೇರಿದಂತೆ, ರಾಜಕೀಯ ಪಕ್ಷಗಳು ಹಾಗೂ ರಾಜಕೀಯದ ಪ್ರಸಕ್ತ ವಿದ್ಯಮಾನಗಳನ್ನ ಒಳಗೊಂಡಂತಹ ಸುದ್ದಿಗಳತ್ತ ಗಮನ ಹರಿಸುತ್ತಿದ್ದಾರೆ. ಜೊತೆಗೆ ಪ್ರಜಾಪ್ರಭುತ್ವ ನಾಲ್ಕನೇ ಆಧಾರ ಸ್ತಂಭವಾಗಿ ಸಾಮಾನ್ಯಜನರ ಪರ ಧ್ವನಿಯಾಗಿ ಸರ್ಕಾರಕ್ಕೆ ಸಮಸ್ಯೆ ಮುಟ್ಟಿಸುವ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಮುಂದಿನ ದಿನಗಳಲ್ಲೂ ನಾಗರಿಕರ ಸೇವೆಯನ್ನೂ ಮುಂದುವರೆಸುವ ಗುರಿಯೊಂದಿಗೆ ಉತ್ತಮ ಸಮಾಜಕ್ಕಾಗಿ ಬದ್ಧನಾಗಿದ್ದಾರೆ.

Read More
Loading...
Unable to load recommendations.
Follow Us