3 ವರ್ಷಗಳಲ್ಲಿ ರಾಜ್ಯ ಸರ್ಕಾರ ಭರ್ತಿ ಮಾಡಿರುವ ಉದ್ಯೋಗ 40 ಸಾವಿರವಲ್ಲ, ಕೇವಲ 8 ಸಾವಿರ?

ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗ ನೇಮಕಾತಿ ಕುರಿತು ದೊಡ್ಡ ವಿವಾದ ಭುಗಿಲೆದ್ದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2.5 ವರ್ಷಗಳಲ್ಲಿ 40,000 ಹುದ್ದೆಗಳನ್ನು ಭರ್ತಿ ಮಾಡಿರುವುದಾಗಿ ಹೇಳಿದ್ದಾರೆ. ಆದರೆ, ವಿರೋಧ ಪಕ್ಷ ಬಿಜೆಪಿ ಇದು ಸುಳ್ಳು ಎಂದು ಆರೋಪಿಸಿದೆ. ಸದನದ ಒಳಗೊಂದು ಮಾಹಿತಿ, ಹೊರಗೆ ಸುಳ್ಳಿನ ಪ್ರದರ್ಶನ ಮಾಡಿ ಇನ್ನೂ ಎಷ್ಟು ದಿನ ಜನರನ್ನು ವಂಚಿಸುವಿರಿ? ಎಂದು ಪ್ರಶ್ನಿಸಿದೆ.

3 ವರ್ಷಗಳಲ್ಲಿ ರಾಜ್ಯ ಸರ್ಕಾರ ಭರ್ತಿ ಮಾಡಿರುವ ಉದ್ಯೋಗ 40 ಸಾವಿರವಲ್ಲ, ಕೇವಲ 8 ಸಾವಿರ?
ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ಕೌಂಟರ್​
Image Credit source: Google

Updated on: Feb 25, 2026 | 1:52 PM

ಬೆಂಗಳೂರು, ಫೆಬ್ರವರಿ 25: ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಧಾರವಾಡದಲ್ಲಿ ಸಾವಿರಾರು ಉದ್ಯೋಗಾಕಾಂಕ್ಷಿಗಳಿಂದ ಬೃಹತ್ ಪ್ರತಿಭಟನೆ ಬೆನ್ನಲ್ಲೇ ಪ್ರತಿಕ್ರಿಯಿಸಿದ್ದ ಸಿಎಂ ಸಿದ್ದರಾಮಯ್ಯ, ಕಳೆದ 2.5 ವರ್ಷಗಳಲ್ಲಿ 40,000ಕ್ಕೂ ಹೆಚ್ಚು ನೇಮಕಾತಿಗಳನ್ನು ವಿವಿಧ ಇಲಾಖೆಗಳಲ್ಲಿ ಮಾಡಲಾಗಿದೆ ಎಂದು ತಿಳಿಸಿದ್ದರು. ಆದ್ರೆ ಮುಖ್ಯಮಂತ್ರಿಗಳ ಹೇಳಿಕೆ ಹಸೀ ಸುಳ್ಳು ಎಂದು ವಿಪಕ್ಷ ಬಿಜೆಪಿ ಆರೋಪಿಸಿದ್ದು, ಮಿಂಚಿನ ವೇಗಕ್ಕಿಂತಲೂ ಸಿದ್ದರಾಮಯ್ಯನವರು ಹೇಳುವ ಸುಳ್ಳಿನ ವೇಗವೇ ಹೆಚ್ಚು ಎಂದು ವ್ಯಂಗ್ಯವಾಡಿದೆ.

ಬಿಜೆಪಿ ಆರೋಪವೇನು?

ಸುಳ್ಳು ಹೇಳಿದರೂ ಸತ್ಯದ ತಲೆ ಮೇಲೆ ಹೊಡೆದಂತೆ ಹೇಳಬೇಕು ಎಂಬ ನಾಣ್ಣುಡಿ ಇದೆ. ಆದರೆ ಸಿದ್ದರಾಮಯ್ಯ ಅವರು ಸತ್ಯದ ತಲೆ ಮೇಲೆ ಮಾತ್ರವಲ್ಲ, ಸತ್ಯದ ಪೂರ್ತಿ ದೇಹದ ಮೇಲೆಯೇ ಹೊಡೆಯುವಂತಹ ಸುಳ್ಳು ಹೇಳಿದ್ದಾರೆ. ತಮ್ಮ ಕರ್ನಾಟಕ ನಿರ್ನಾಮದ ಬೋಗಸ್‌ ಗ್ಯಾರಂಟಿ ಸರ್ಕಾರದ ಈ ಅವಧಿಯಲ್ಲಿ 40 ಸಾವಿರಕ್ಕೂ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡಿದ್ದೇವೆ ಎಂದು ನಿನ್ನೆ ಹಸಿಹಸಿ ಸುಳ್ಳು ಹೇಳಿದ್ದರು. ಆದರೆ ಕಾಂಗ್ರೆಸ್​​ ಸರ್ಕಾರದ ಈ ಅವಧಿಯಲ್ಲಿ ನೇಮಕಾತಿ ಪೂರ್ಣಗೊಂಡ ಸರ್ಕಾರಿ ಹುದ್ದೆಗಳು ಕೇವಲ 8,157 ಹಾಗೂ ನೇಮಕಾತಿ ಪ್ರಗತಿಯಲ್ಲಿರುವ ಹುದ್ದೆಗಳು ಕೇವಲ 3,081. ಈ ಮಾಹಿತಿಯನ್ನು ಸ್ವತಃ ಸಿಎಂ ಸಿದ್ದರಾಮಯ್ಯನವರೇ ಎರಡು ತಿಂಗಳ ಹಿಂದೆ ನಡೆದ ಚಳಿಗಾಲದ ಅಧಿವೇಶನದಲ್ಲಿ ತಿಳಿಸಿದ್ದಾರೆ ಎಂದು ಬಿಜೆಪಿ ಹೇಳಿದೆ.

ಇದನ್ನೂ ಓದಿ: ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆಗೆ ಸಿಎಂ ಸ್ಪಂದನೆ; ಸಮಸ್ಯೆಗೆ ಬಿಜೆಪಿಯೇ ಕಾರಣ ಎಂದ ಸಿದ್ದರಾಮಯ್ಯ

2025ರ ಡಿಸೆಂಬರ್​​ 18ರಂದು ಈ ಬಗ್ಗೆ ಸತ್ಯ ಮಾಹಿತಿ ನೀಡಿದ್ದ ಸಿಎಂ 2026ರ ಫೆಬ್ರವರಿ 24ರಂದು ಸುಳ್ಳು ಹೇಳಿದ್ದಾರೆ. ಸತ್ಯ ಏನೆಂಬುದು ತಿಳಿದಿದ್ದರೂ, ಸಿಎಂ ಹುದ್ದೆಯಲ್ಲಿ ಕುಳಿತು ಹೀಗೆ ಹಸಿಹಸಿ ಸುಳ್ಳು ಹೇಳುವುದಕ್ಕೆ ಅವರಿಗೆ ನಾಚಿಕೆಯಾಗಬೇಕು ಎಂದು ವಿಪಕ್ಷ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಸದನದ ಒಳಗೊಂದು ಮಾಹಿತಿ, ಹೊರಗೆ ಸುಳ್ಳಿನ ಪ್ರದರ್ಶನ ಮಾಡಿ ಇನ್ನೂ ಎಷ್ಟು ದಿನ ಜನರನ್ನು ವಂಚಿಸುವಿರಿ? ಜನರ ಮುಂದೆ, 40,000 ಹುದ್ದೆ ಭರ್ತಿ ಮಾಡಿದ್ದೇವೆ ಎಂದು ಹಸಿ ಸುಳ್ಳು ಹೇಳುವುದು ರಾಜ್ಯದ ನಿರುದ್ಯೋಗಿ ಯುವಜನತೆಗೆ ಮಾಡುತ್ತಿರುವ ನೇರ ವಂಚನೆಯಲ್ಲವೇ? ರಾಜ್ಯದ ಅತಿ ದೀರ್ಘಾವಧಿ ಮುಖ್ಯಮಂತ್ರಿಗಳಾಗಿರುವ ತಾವೇ ಈ ರೀತಿ ರಾಜ್ಯದ ಜನತೆಯ ದಾರಿ ತಪ್ಪಿಸಿದರೆ ಹೇಗೆ? ದಯವಿಟ್ಟು ಸುಳ್ಳಿನ ಪ್ರಚಾರ ನಿಲ್ಲಿಸಿ, ಯುವಜನರ ಆಕ್ರೋಶ, ನೋವನ್ನು ಅರ್ಥಮಾಡಿಕೊಳ್ಳಿ. ಪರಿಸ್ಥಿತಿ ಕೈಮೀರುವ ಮುನ್ನ ಬಾಕಿ ಇರುವ ನೇಮಕಾತಿ ಪ್ರಕ್ರಿಯೆಗಳನ್ನು ಕೂಡಲೇ ಪೂರ್ಣಗೊಳಿಸಿ, ನಮ್ಮ ಯುವಜನತೆಗೆ ನ್ಯಾಯ ಒದಗಿಸಿ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಕೂಡ ಕೌಂಟರ್​​ ಕೊಟ್ಟಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
Follow Us