ಕರ್ನಾಟಕದಲ್ಲಿ ಜಿಪಿಎಸ್, ಪ್ಯಾನಿಕ್ ಬಟನ್ ಕಡ್ಡಾಯ: ಎಫ್ಸಿ ಮಾಡಿಸಲು ಆಂಧ್ರ ಪ್ರದೇಶಕ್ಕೆ ಹೋಗುತ್ತಿರುವ ಕ್ಯಾಬ್ ಮಾಲೀಕರು!
ಕೇಂದ್ರ ಸರ್ಕಾರದ ನಿರ್ಭಯ ಯೋಜನೆಯಡಿಯಲ್ಲಿ ಕರ್ನಾಟಕದ ಎಲ್ಲಾ ಯೆಲ್ಲೋ ಬೋರ್ಡ್ ವಾಹನಗಳಿಗೂ ಜಿಪಿಎಸ್, ಪ್ಯಾನಿಕ್ ಬಟನ್ ಕಡ್ಡಾಯ ಮಾಡಿ ಆದೇಶ ಹೊರಡಿಸಲಾಗಿದೆ. ಇದರಿಂದ ನಮಗೆ ಯಾವುದೇ ಪ್ರಯೋಜನ ಇಲ್ಲ ಎಂದು ಕ್ಯಾಬ್ ಚಾಲಕರು, ಮಾಲೀಕರು ಅಸಮಾಧಾನ ಹೊರ ಹಾಕುತ್ತಿದ್ದಾರೆ. ಇಷ್ಟೇ ಅಲ್ಲದೆ, ಆಂಧ್ರ ಪ್ರದೇಶಕ್ಕೆ ಹೋಗಿ ಎಫ್ಸಿ ಮಾಡಿಸಿಕೊಳ್ಳುತ್ತಿದ್ದಾರೆ!

ಬೆಂಗಳೂರು, ಸೆಪ್ಟೆಂಬರ್ 16: ಕ್ಯಾಬ್ನಲ್ಲಿ ಹೋಗುವಾಗ ಚಾಲಕರಿಗೆ, ಪ್ರಯಾಣಿಕರಿಗೆ ಏನಾದರೂ ಸಮಸ್ಯೆ ಆದರೆ ರಕ್ಷಣೆಗಾಗಿ ಎಂಬ ಉದ್ದೇಶದೊಂದಿಗೆ ಜಿಪಿಎಸ್, ಪ್ಯಾನಿಕ್ ಬಟನ್ (GPS, Panic Button) ಕಡ್ಡಾಯಗೊಳಿಸಿ ಸಾರಿಗೆ ಇಲಾಖೆ (Karnataka Transport Department) ಆದೇಶಿಸಿದೆ. ಯೆಲ್ಲೋ ಬೋರ್ಡ್ ಕ್ಯಾಬ್ಗಳಲ್ಲಿ ಲೋಕೆಷನ್ ಟ್ರ್ಯಾಕ್ ಮಾಡಲು ಜಿಪಿಎಸ್ (GPS), ಸಮಸ್ಯೆ ಉಂಟಾದ ಸಂದರ್ಭದಲ್ಲಿ ಅಲರ್ಟ್ ಮಾಡಲು ಪ್ಯಾನಿಕ್ ಬಟನ್ ಅಳವಡಿಸುವಂತೆ ಸೂಚನೆ ನೀಡಲಾಗಿದೆ. ಈಗಿನ ಹೊಸ ವಾಹನಗಳಿಗೆ ಷೋರೂಂನಿಂದ ಹೊರಬರುವಾಗಲೇ ಜಿಪಿಎಸ್, ಪ್ಯಾನಿಕ್ ಬಟನ್ ಅಳವಡಿಸಲಾಗಿರುತ್ತದೆ. ಆದರೆ, ಹಳೆಯ ವಾಹನಗಳಿಗೆ ಎಫ್ಸಿ ಮಾಡಿಸಬೇಕಿದ್ದರೆ ಜಿಪಿಎಸ್, ಪ್ಯಾನಿಕ್ ಬಟನ್ ಕಡ್ಡಾಯ ಮಾಡಿ ಆದೇಶ ಹೊರಡಿಲಾಗಿದೆ. ಇದಕ್ಕೆ ಕ್ಯಾಬ್ ಮಾಲೀಕರು, ಚಾಲಕರಿಂದ ಅಸಮಾಧಾನ ವ್ಯಕ್ತವಾಗಿದೆ.
ಯೆಲ್ಲೋ ಬೋರ್ಡ್ ವಾಹನ ಮಾಲೀಕರು, ಚಾಲಕರ ವಿರೋಧಕ್ಕೆ ಕಾರಣವೇನು?
ಕರ್ನಾಟಕದಲ್ಲಿ ಹಳೆಯ ಯೆಲ್ಲೋ ಬೋರ್ಡ್ ವಾಹನಗಳ ಎಫ್ಸಿ ಮಾಡಿಸಲು 800 ರೂಪಾಯಿ, ಪ್ಯಾನಿಕ್ ಬಟನ್ ಹಾಗೂ ಜಿಪಿಎಸ್ ಅಳವಡಿಸಲು 13 ರಿಂದ 16 ಸಾವಿರ ರೂಪಾಯಿ ಮತ್ತು ಪ್ರತಿವರ್ಷ 2200 ರುಪಾಯಿ ಕೊಟ್ಟು ರಿನೀವಲ್ ಮಾಡಿಸುವುದು ಸೇರಿ ಒಟ್ಟು 19 ಸಾವಿರ ರೂಪಾಯಿ ಪಾವತಿಸಬೇಕು. ಇಷ್ಟೊಂದು ಹೆಚ್ಚು ಹಣ ಪಾವತಿ ಮಾಡಬೇಕಾಗುತ್ತದೆ ಎಂಬುದೇ ಯೆಲ್ಲೋ ಬೋರ್ಡ್ ವಾಹನ ಮಾಲೀಕರು, ಚಾಲಕರ ವಿರೋಧಕ್ಕೆ ಕಾರಣವಾಗಿದೆ.
ಆಂಧ್ರ ಪ್ರದೇಶದತ್ತ ಮುಖ ಮಾಡುತ್ತಿರುವ ಚಾಲಕ, ಮಾಲೀಕರು
ನೆರೆಯ ಆಂಧ್ರ ಪ್ರದೇಶದಲ್ಲಿ ಕೇವಲ 800 ರೂಪಾಯಿ ಪಾವತಿ ಮಾಡಿದರೆ ಹಳೆಯ ಯೆಲ್ಲೋ ಬೋರ್ಡ್ ವಾಹನಗಳ ಎಫ್ಸಿ ಮಾಡಬಹುದಾಗಿದೆ. ಹೀಗಾಗಿ ಯೆಲ್ಲೋ ಬೋರ್ಡ್ ವಾಹನ ಮಾಲೀಕರು, ಚಾಲಕರು ಆಂಧ್ರ ಪ್ರದೇಶದ ಪೇನುಗೊಂಡ, ಚಿತ್ತೂರು, ಅನಂತಪುರ ಸೇರಿದಂತೆ ಕರ್ನಾಟಕ ಗಡಿ ಪ್ರದೇಶಗಳಲ್ಲಿರುವ ಆಂಧ್ರದ ಆರ್ಟಿಒ ಕಚೇರಿಗಳಿಗೆ ಹೋಗಿ ಎಫ್ಸಿ ಮಾಡಿಸಿಕೊಳ್ಳುತ್ತಿದ್ದಾರೆ.
ನಮಗೆ ಜಿಪಿಎಸ್, ಪ್ಯಾನಿಕ್ ಬಟನ್ ಬೇಡ. ಅದರಿಂದ ಯಾವುದೇ ಪ್ರಯೋಜನ ಇಲ್ಲ ಎಂದು ಕ್ಯಾಬ್ ಚಾಲಕರು ಮತ್ತು ಮಾಲೀಕರು ಹೇಳುತ್ತಿದ್ದಾರೆ.
ಯೆಲ್ಲೋ ಬೋರ್ಡ್ ವಾಹನಗಳಲ್ಲಿ ಜಿಪಿಎಸ್, ಪ್ಯಾನಿಕ ಬಟನ್ ಯಾಕೆ?
ರಾಜ್ಯದಲ್ಲಿ 6 ಲಕ್ಷಕ್ಕೂ ಹೆಚ್ಚು ಯೆಲ್ಲೋ ಬೋರ್ಡ್ ವಾಹನಗಳಿದ್ದು, ಆ ಪೈಕಿ ಇಲ್ಲಿಯವರೆಗೆ ಸುಮಾರು 1.5 ಲಕ್ಷ ವಾಹನಗಳಿಗೆ ಜಿಪಿಎಸ್, ಪ್ಯಾನಿಕ್ ಬಟನ್ ಅಳವಡಿಸಿಕೊಳ್ಳಲಾಗಿದೆ. ಈ ವಾಹನಗಳಲ್ಲಿ ಪ್ರಯಾಣ ಮಾಡುವ ವೇಳೆ ಪ್ರಯಾಣಿಕರಿಗೆ ಮತ್ತು ಚಾಲಕರಿಗೆ ಏನಾದರೂ ಸಮಸ್ಯೆ ಆದರೆ ಪ್ಯಾನಿಕ್ ಬಟನ್ ಪ್ರೆಸ್ ಮಾಡಬಹುದಾಗಿದೆ. ಹೀಗೆ ಮಾಡಿದಾಗ ಆರ್ಟಿಒ ಕಂಟ್ರೋಲ್ ರೂಂಗೆ ಮಾಹಿತಿ ತಿಳಿಯುತ್ತದೆ. ಕಂಟ್ರೋಲ್ ರೂಂನಿಂದ ಸಿಬ್ಬಂದಿ ಆ ವಾಹನ ಮಾಲೀಕನ ಮೊಬೈಲ್ಗೆ ಕರೆ ಮಾಡಿ ನಿಮ್ಮ ವಾಹನದಲ್ಲಿ ಯಾರಿಗಾದರೂ ಏನಾದರೂ ಸಮಸ್ಯೆ ಆಗಿದೆಯಾ? ಏನಾದರೂ ಸಹಾಯ ಬೇಕಾ ಎಂದು ಎಂದು ಕೇಳುತ್ತಾರೆ. ಏನಾದರೂ ಸಮಸ್ಯೆ ಇದೆ ಎಂದಾದರೆ ಆಸ್ಪತ್ರೆ, ಆ್ಯಂಬುಲೆನ್ಸ್, ಅಗ್ನಿಶಾಮಕ ದಳ, ಪೋಲಿಸ್ ಸ್ಟೇಷನ್ ಹೀಗೆ ಕರೆ ಮಾಡಿದವರ ಸಮಸ್ಯೆಗೆ ಯಾವ ಪರಿಹಾರ ಬೇಕೋ ಅದರ ಮೇಲೆ ಸಹಾಯಕ್ಕೆ ಮುಂದಾಗುತ್ತಾರೆ.
ಇದನ್ನೂ ಓದಿ: ಬೆಂಗಳೂರು: ಧಗಧಗನೇ ಹೊತ್ತಿ ಉರಿದ ಬಿಎಂಟಿಸಿ ಬಸ್, ಚಾಲಕನ ಸಮಯಪ್ರಜ್ಞೆಯಿಂದ ಪ್ರಯಾಣಿಕರು ಬಚಾವ್!
ಪ್ರತಿದಿನ 800 ಕರೆಗಳು ಕಂಟ್ರೋಲ್ ರೂಂಗೆ ಬರುತ್ತವೆ ಎಂದು ಮೂಲಗಳು ತಿಳಿಸಿವೆ. ಪ್ಯಾನಿಕ್ ಬಟನ್ ಪ್ರೆಸ್ ಮಾಡಿದರೆ ಕಂಟ್ರೋಲ್ ರೂಂನಿಂದ ಕರೆ ಬರುತ್ತದೆಯೋ ಇಲ್ಲವೋ ಎಂದು ಪರಿಶೀಲಿಸುವುದಕ್ಕೆಂದೇ ಹೆಚ್ಚಿನವರು ಕರೆ ಮಾಡುತ್ತಿದ್ದಾರಂತೆ! ಈವರಗೆ ದೊಡ್ಡ ಸಮಸ್ಯೆಗಳಿಗೆ ಸಂಬಂಧಿಸಿ 22 ಕರೆಗಳು ಬಂದಿದ್ದು, ಪೋಲಿಸ್ ಸ್ಟೇಷನ್ ಗೆ ಮಾಹಿತಿ ನೀಡಿ ಸಮಸ್ಯೆ ಬಗೆಹರಿಸಲು ಮುಂದಾಗಿದ್ದೇವೆ ಎಂದು ಆರ್ಟಿಒ ಕಂಟ್ರೋಲ್ ರೂಂ ಎಕ್ಸಿಕ್ಯೂಟಿವ್ ದೀಪಾ ತಿಳಿಸಿದ್ದಾರೆ.



