ಕರ್ನಾಟಕದ ಹಲವೆಡೆ ದಿಢೀರ್ ವರುಣಾರ್ಭಟ: ಬೆಂಗಳೂರಿನಲ್ಲಿ ಆಲಿಕಲ್ಲು ಸಹಿತ ಧಾರಾಕಾರ ಮಳೆ
ಹವಾಮಾನ ಇಲಾಖೆ ಮಳೆ ಮುನ್ಸೂಚನೆ ಬೆನ್ನಲ್ಲೇ ಇಂದು ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆಯಾಗಿದೆ. ಬೆಂಗಳೂರಿನ ಹೆಬ್ಬಾಳ, ಮೇಖ್ರಿ ಸರ್ಕಲ್, ಭೂಪಸಂದ್ರ ಸೇರಿ ಹಲವು ಪ್ರದೇಶಗಳಲ್ಲಿ ಆಲಿಕಲ್ಲು ಮಳೆಯಾಗಿದೆ. ಮಳೆಯಿಂದ ವಾತಾವರಣ ತಂಪಾಗಿದ್ದು, ಉರಿ ಬಿಸಿಲಿನಿಂದ ತತ್ತರಿಸಿದ್ದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.

ಬೆಂಗಳೂರು, ಮಾರ್ಚ್ 22: ಕರ್ನಾಟಕದಲ್ಲಿ (Karnataka) ಬಿಸಿಲ ಬೇಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ವಿವಿಧೆಡೆ ನೆಲ ಕಾದ ಕುಲುಮೆಯಾಗಿದೆ. ಜಾಸ್ತಿ ಬಿಸಲಿನಿಂದಾಗಿ ಜನರು ಬೆಂಡಗಿದ್ದಾರೆ. ಹೀಗಿರುವಾಗಲೇ ಬೆಂಗಳೂರು ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಇಂದು ದಿಢೀರ್ ಬಂದ ಮಳೆ (Rain) ತಂಪೆರೆದಿದೆ. ಆ ಮೂಲಕ ವಾತಾವರಣ ಕೂಲ್ ಕೂಲ್ ಆಗಿದೆ. ಬೆಂಗಳೂರಿನ ಸಂಜಯನಗರ, ಭೂಪಸಂದ್ರ, ಹೆಬ್ಬಾಳ ಮತ್ತು ಮೇಖ್ರಿ ಸರ್ಕಲ್ ಸುತ್ತಮುತ್ತ ಸೇರಿದಂತೆ ಹಲವೆಡೆ ಆಲಿಕಲ್ಲು ಸಹಿತ ಧಾರಾಕಾರ ಮಳೆ ಆಗಿದೆ. ಹೀಗಾಗಿ ವಾಹನ ಸವಾರರು ಹಾಗೂ ಸಾರ್ವಜನಿಕರು ಮಳೆಯಲ್ಲಿ ಸಿಲುಕಿ, ಪರದಾಡಿದರು. ಹವಾಮಾನ ಇಲಾಖೆ ಮಳೆ ಮುನ್ಸೂಚನೆ ನೀಡಿತ್ತು.
ದೇವನಹಳ್ಳಿ ಸುತ್ತಮುತ್ತ ಗುಡುಗು ಸಹಿತ ಮಳೆ
ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ರಣ ಬಿಸಿಲಿನ ವಾತಾವರಣ ಇದೆ. ಈ ಮಧ್ಯೆ ಹಲವು ಜಿಲ್ಲೆಗಳಲ್ಲಿ ವರ್ಷದ ಮೊದಲ ಮಳೆ ಆಗುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಗುಡುಗು ಸಹಿತ ಮಳೆ ಆಗಿದೆ. ಸುತ್ತಾಮುತ್ತ ಮಳೆರಾಯ ತಂಪೆರೆದಿದ್ದಾನೆ. ಅರ್ಧಗಂಟೆ ಸುರಿದ ಮಳೆಗೆ ವಾತಾವರಣ ಫುಲ್ ಕೂಲ್ ಆಗಿದೆ. ವರ್ಷದ ಮೊದಲ ಮಳೆ ಕಂಡು ಜನರು ಸಂತಸಗೊಂಡರು.
ಇದನ್ನೂ ಓದಿ: ಕರ್ನಾಟಕದ ಹಲವೆಡೆ ಮಳೆ: ಮಂಗಳೂರಿನಲ್ಲಿ ಗಾಳಿ ಮಳೆಯಿಂದ ಲ್ಯಾಂಡ್ ಆಗಬೇಕಿದ್ದ ವಿಮಾನಗಳು ಡೈವರ್ಟ್
ಯಲಹಂಕ ಸುತ್ತಮುತ್ತಲು ಕೂಡ ಧಾರಾಕಾರ ಮಳೆ ಆಗಿದೆ. ಅಕಾಲಿಕ ಮಳೆಯಿಂದಾಗಿ ಸಾರ್ವಜನಿಕರು ಪರದಾಡಿದರು. ಯಲಹಂಕದ ಅಟ್ಟೂರು ಬಡಾವಣೆಯಲ್ಲಿ ರಸ್ತೆ ಬದಿಯಲ್ಲಿ ಮಳೆ ನೀರು ಹರಿಯುತ್ತಿದೆ. ಹೀಗಾಗಿ ಕೆಲಸ ಮುಗಿಸಿ ಮನೆ ತೆರಳಲು ವಾಹನ ಸವಾರರು ಪರದಾಡಿದರು.
ಕೋಲಾರ ಜಿಲ್ಲೆಯಲ್ಲಿ ಹಲವೆಡೆ ಮಳೆ
ಕೋಲಾರ ನಗರ, ಶ್ರೀನಿವಾಸಪುರ, ಸೇರಿದಂತೆ ಹಲವೆಡೆ ಅರ್ಧ ಗಂಟೆ ಮಳೆ ಸುರಿದಿದೆ. ಆ ಮೂಲಕ ಭೂಮಿಗೆ ಮಳೆರಾಯ ತಂಪರೆದಿದ್ದಾನೆ. ಬಿಸಿಲಿನ ತಾಪದಿಂದ ಜಿಲ್ಲೆಯ ಜನರು ತತ್ತರಿಸಿದ್ದರು. ಆದರೆ ಮಳೆರಾಯನ ಆಗಮನದಿಂದ ಜನರಲ್ಲಿ ಸಂತಸ ಮೂಡಿದೆ. ಕಳೆದರೆಡು ದಿನಗಳಿಂದ ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಮಳೆ ಸುರಿದಿದ್ದು, ಮಳೆಯಿಂದ ಜಾನುವಾರಗಳಿಗೆ ಕುಡಿಯುವ ನೀರು ಮತ್ತು ಮೇವಿಗೆ ಸಹಕಾರಿಯಾಗಿದೆ.
ಇದನ್ನೂ ಓದಿ: Karnataka Weather: ಶಿವಮೊಗ್ಗ, ಬೆಂಗಳೂರು ಸೇರಿ ಕರ್ನಾಟಕದ 25ಕ್ಕೂ ಅಧಿಕ ಜಿಲ್ಲೆಗಳಲ್ಲಿ ಒಂದು ವಾರ ಮಳೆ
ಹಾಸನ ಜಿಲ್ಲೆಯ ಬೇಲೂರು ತಾಲೂಕು ಸೇರಿದಂತೆ ಜಿಲ್ಲೆಯ ವಿವಿಧೆಡೆ ಮಳೆ ಅಬ್ಬರಿಸಿದೆ. ಬೇಲೂರಿನಲ್ಲಿ ಅರ್ಧಗಂಟೆ ಆಲಿಕಲ್ಲು ಸಹಿತ ಮಳೆ ಸುರಿದಿದೆ. ಆ ಮೂಲಕ ಬಿಸಿಲಿನ ಬೇಗೆಯಿಂದ ಹೈರಾಣಾಗಿದ್ದ ರೈತರು, ಕಾಫಿ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಕ್ಲಿ ಕ್ಲಿಕ್ ಮಾಡಿ.
Published On - 5:24 pm, Sat, 22 March 25