AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭದ್ರತಾ ಲೋಪ: KPSC ಪರೀಕ್ಷೆ ಬರೆದಿದ್ದ ಪರಶುರಾಮ ಸಿಎಂ ಬಳಿ ಬಂದಿದ್ದು ಏಕೆ? ಇಲ್ಲಿದೆ ಮಾಹಿತಿ

ಶುಕ್ರವಾರ ಜನವರಿ 26 ರಂದು ಬೆಂಗಳೂರಿನ ಮಾಣೀಕ್ ಷಾ ಪರೇಡ್ ಮೈದಾನದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಷಣ ಮಾಡುತ್ತಿದ್ದರು. ಈ ವೇಳೆ ಧಿಡೀರನೆ ಓರ್ವ ವ್ಯಕ್ತಿ ಮೈದಾನದ ಒಳಗೆ ನುಗ್ಗಿ ಮುಖ್ಯಮಂತ್ರಿಗಳನ್ನು ಭೇಟಿಯಾಗಲು ಯತ್ನಿಸಿದ್ದರು. ಅಷ್ಟಕ್ಕೂ ಯಾರು ಈ ವ್ಯಕ್ತಿ? ಇಲ್ಲಿದೆ ಓದಿ

ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭದ್ರತಾ ಲೋಪ: KPSC ಪರೀಕ್ಷೆ ಬರೆದಿದ್ದ ಪರಶುರಾಮ ಸಿಎಂ ಬಳಿ ಬಂದಿದ್ದು ಏಕೆ? ಇಲ್ಲಿದೆ ಮಾಹಿತಿ
ಪರಶುರಾಮ
ರಾಚಪ್ಪಾಜಿ ನಾಯ್ಕ್
| Edited By: |

Updated on:Jan 27, 2024 | 11:58 AM

Share

ಬೆಂಗಳೂರು, ಜನವರಿ 27: ಗಣರಾಜ್ಯೋತ್ಸವದ (Republic Day) ದಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ಬಳಿ ನುಗ್ಗಲು ಯತ್ನಿಸಿದ್ದ ಪರಶುರಾಮ (62 ವರ್ಷ) ಅವರ ಹಿನ್ನಲೆಯೇ ವಿಚಿತ್ರವಾಗಿದೆ. ಪರಶುರಾಮ ಅವರು 1993ರಲ್ಲಿ ಕೆಪಿಎಸ್​ಸಿ ಪರೀಕ್ಷೆ ಬರೆದಿದ್ದರು. ಸರ್ಕಾರ ಪರೀಕ್ಷೆಯ ಫಲಿತಾಂಶವನ್ನು ಕಾಯ್ದಿರಿಸಿದೆ. ಹೀಗಾಗಿ ಪರುಶರಾಮ ಅಂದಿನಿಂದ ಅನೇಕ ಬಾರಿ ಸರ್ಕಾರಿ ಕಚೇರಿಗೆ ಅಲೆದಾಡುತ್ತಿದ್ದಾರೆ.

ಇದೇ ವಿಷಯಕ್ಕೆ ಸಂಬಂಧಿಸಿ 2017ರ ಫೆಬ್ರವರಿ 2 ರಂದು ಜ್ಞಾನ ಜ್ಯೋತಿ ಆಡಿಟೋರಿಯಂನಲ್ಲಿ ನಡೆಯುತ್ತಿದ್ದ ಸರ್ಕಾರಿ ಕಾರ್ಯಕ್ರಮಕ್ಕೆ ನುಗ್ಗಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎದುರು ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಈ ವೇಳೆ ಹಲಸೂರು ಗೇಟ್ ಪೊಲೀಸರು ವಶಕ್ಕೆ ಪಡೆದು ಆತ್ಮಹತ್ಯೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದರು. ಈ ವೇಳೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರಶುರಾಮ ಅವರ ಪತ್ರ ತೆಗೆದುಕೊಂಡು ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು.

ಆದರೆ ಪರುಶರಾಮ ಸಮಸ್ಯೆ ಬಗೆಹರಿದಿರಲಿಲ್ಲ. ಇದಾದ ಬಳಿಕ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಸರ್ಕಾರಿ ಕಾರ್ಯಕ್ರಮದಲ್ಲಿ ಪರಶುರಾಮ ಪಟಾಕಿ ಸಿಡಿಸಿ ಅವಂತಾರ ಸೃಷ್ಟಿಸಿದ್ದರು. ಇದೀಗ ಗಣರಾಜ್ಯೋತ್ಸವದ ದಿನ ಮುಖ್ಯಮಂತ್ರಿಗಳನ್ನು ಭೇಟಿಯಾಗಲು ಮೈದಾನದ ಒಳಗೆ ನುಗ್ಗಿದ್ದಾರೆ.

ಇದನ್ನೂ ಓದಿ: ಕೋಮುವಾದಿ ಶಕ್ತಿಗಳ ಹುಟ್ಟಡಗಿಸಲು ನಮ್ಮ ಸರ್ಕಾರ ಸರ್ವ ಸನ್ನದ್ಧವಾಗಿದೆ: ಸಿಎಂ ಸಿದ್ದರಾಮಯ್ಯ

ಪರಶುರಾಮ ಮಾಣಿಕ್​ ಷಾ ಪರೇಡ್​ ಮೈದಾನದ ಒಳಗೆ ಬಂದಿದ್ದು ಹೇಗೆ?

ಪರಶುರಾಮ ಪಾಕ್ಷಿಕ ಪತ್ರಿಕೆಯ ಸಂಪಾದಕನ ಹೆಸರಲ್ಲಿ ಕಾರ್ಯಕ್ರಮದ ಪಾಸ್ ಪಡೆದುಕೊಂಡಿದ್ದಾರೆ. ಶುಕ್ರವಾರ (ಜ.26) ಮೈಸೂರಿಂದ ಬೆಂಗಳೂರಿಗೆ ರೈಲಿನ ಮೂಲಕ ಬಂದಿದ್ದಾರೆ. ಇಲ್ಲಿ ಕಾರ್ಯಕ್ರಮ ನಡೆಯುವಾಗ ಸಿಎಂ ಸಿದ್ದರಾಮಯ್ಯ ಅವರ ಗಮನ ಸೆಳೆಯಲು ಕೆಪಿಎಸ್ ಸಿಯ ಕೆಲ ಪತ್ರಗಳನ್ನು ಪ್ರದರ್ಶಿಸಿದ್ದಾರೆ. ಮುಖ್ಯಮಂತ್ರಿಗಳು ಗಮನಿಸದಿದ್ದಾಗ ಮೈದಾನದ ಒಳಗೆ ನುಗ್ಗಿದ್ದಾರೆ.

ತಕ್ಷಣ ಪೊಲೀಸರು ಪರುಶರಾಮರನ್ನು ವಶಕ್ಕೆ ಪಡೆದರು. ನನಗೆ ನ್ಯಾಯ ಬೇಕು, ಇಲ್ಲ ಪರಿಹಾರ ಕೊಡಿಸಿ ಎಂದು ಪೊಲೀಸರ ಮುಂದೆ ಕೇಳಿಕೊಂಡಿದ್ದಾರೆ. ಸದ್ಯ ಪರುಶರಾಮ ಮೇಲೆ ಪ್ರಕರಣ ದಾಖಲಿಸಲು ಪೊಲೀಸರ ಸಿದ್ಧತೆ ನಡೆಸಿದ್ದಾರೆ.

ಶುಕ್ರವಾರ ಜನವರಿ 26 ರಂದು ಬೆಂಗಳೂರಿನ ಮಾಣೀಕ್ ಷಾ ಪರೇಡ್ ಮೈದಾನದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಷಣ ಮಾಡುತ್ತಿದ್ದರು. ಈ ವೇಳೆ ಧಿಡೀರನೆ ಓರ್ವ ವ್ಯಕ್ತಿ ಮೈದಾನದ ಒಳಗೆ ನುಗ್ಗಿ ಮುಖ್ಯಮಂತ್ರಿಗಳನ್ನು ಭೇಟಿಯಾಗಲು ಯತ್ನಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 11:57 am, Sat, 27 January 24