
ಬೆಂಗಳೂರು, ಸೆಪ್ಟೆಂಬರ್ 18: ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಕುರಿತು ಸಾರ್ವಜನಿಕರಿಗೆ ಯಾವುದೇ ಮಾಹಿತಿ, ಗೊಂದಲ ಅಥವಾ ಸಮಸ್ಯೆಗಳಿದ್ದರೆ 1950 ಹೆಲ್ಪ್‌ಲೈನ್‌ಗೆ ಕರೆ ಮಾಡುವಂತೆ ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಬಿಎ ಮುಖ್ಯ ಆಯುಕ್ತ ಎಂ. ಮಹೇಶ್ವರ್ ರಾವ್ ಸೂಚಿಸಿದ್ದಾರೆ. ಎಸ್ಐಆರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ಗುರುವಾರ ನಡೆದ ಸಭೆಯಲ್ಲಿ ಮಾತನಾಡಿದ ಮಹೇಶ್ವರ್ ರಾವ್, ಸಾರ್ವಜನಿಕರಿಂದ ಬರುವ ದೂರುಗಳನ್ನು ದಾಖಲಿಸಿಕೊಂಡು ಸೂಕ್ತ ಪರಿಹಾರ ಒದಗಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ನಿಯಮಾನುಸಾರ ಕಠಿಣ ಕ್ರಮ ಕೈಗೊಳ್ಳುವುದಾಗಿಯೂ ಎಚ್ಚರಿಕೆ ನೀಡಿದರು.
ತಮ್ಮ ವ್ಯಾಪ್ತಿಯಲ್ಲಿರುವ ಯಾವುದೇ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಸಹಾಯಕ ಜಿಲ್ಲಾ ಚುನಾವಣಾಧಿಕಾರಿಗಳು (ADEO) ಖಚಿತಪಡಿಸಿಕೊಳ್ಳಬೇಕು ಎಂದು ಅವರು ಸೂಚಿಸಿದರು. ಎಸ್ಐಆರ್ ಪ್ರಕ್ರಿಯೆಯನ್ನು ನಿಯಮಾನುಸಾರ ಹಾಗೂ ಜವಾಬ್ದಾರಿಯಿಂದ ನಡೆಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಚುನಾವಣಾ ಅಧಿಕಾರಿಗಳೊಂದಿಗೆ ಸಹಕರಿಸುವಂತೆ ಮಹೇಶ್ವರ್ ರಾವ್ ಮನವಿ ಮಾಡಿದರು. ಪಾರದರ್ಶಕ ಹಾಗೂ ಪರಿಣಾಮಕಾರಿ ಎಸ್ಐಆರ್ ಪ್ರಕ್ರಿಯೆಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.
ಕರ್ನಾಟಕದಲ್ಲಿ ಎಸ್ಐಆರ್ ಪ್ರಕ್ರಿಯೆಯ ಅಂತಿಮ ಹಂತಕ್ಕೆ ಸಿದ್ಧತೆ ನಡೆಯುತ್ತಿದ್ದು, ಕರಡು ಮತದಾರರ ಪಟ್ಟಿಯಿಂದ 1.07 ಕೋಟಿ ಮತದಾರರನ್ನು ಹೊರಗಿಡಲಾಗಿದೆ. ವಿಚಾರಣೆ ಪ್ರಕ್ರಿಯೆಯನ್ನು ಸರಳಗೊಳಿಸಲಾಗುತ್ತಿದ್ದರೂ, ಹೊಸ ಮತದಾರರ ನೋಂದಣಿ ನಿಧಾನಗತಿಯಲ್ಲಿ ಸಾಗುತ್ತಿರುವುದು ಗಮನ ಸೆಳೆದಿದೆ. ಎಸ್ಐಆರ್ ಜೊತೆಗೆ ಸರ್ಕಾರದ ‘ಪ್ರಜಾ ಸೇವಾ ಅಭಿಯಾನ’ ಸೇರಿದಂತೆ ವಿವಿಧ ನಾಗರಿಕ ಸೇವಾ ಕಾರ್ಯಕ್ರಮಗಳ ಜವಾಬ್ದಾರಿಯೂ ಇರುವುದರಿಂದ ಕಂದಾಯ ಇಲಾಖೆಯ ಸಿಬ್ಬಂದಿ ಮೇಲೆ ಒತ್ತಡ ಹೆಚ್ಚಾಗಿದೆ ಎಂದು ಅಧಿಕಾರಿಗಳು ಹಾಗೂ ನಾಗರಿಕ ಸಮಾಜದ ಸಂಘಟನೆಗಳು ಕಳವಳ ವ್ಯಕ್ತಪಡಿಸಿವೆ.
ಸೆಪ್ಟೆಂಬರ್ 19 ಮತ್ತು 20ರಂದು ನಡೆಯಲಿರುವ ಹೊಸ ಮತದಾರರ ನೋಂದಣಿಯ ವಿಶೇಷ ಅಭಿಯಾನ ಮಹತ್ವದ್ದಾಗಿದೆ. ಮೊದಲ ಬಾರಿಗೆ ಮತದಾರರಾಗುವವರು ಹಾಗೂ ಗೈರುಹಾಜರಿ ಅಥವಾ ಸ್ಥಳಾಂತರದ ಕಾರಣ ಕರಡು ಪಟ್ಟಿಯಿಂದ ಹೊರಗುಳಿದವರು ಈ ಸಂದರ್ಭದಲ್ಲಿ ಫಾರ್ಮ್-6 ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಸೆಪ್ಟೆಂಬರ್ 23ರಂದು ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಅಂತಿಮ ಗಡುವು ಇರುವ ಹಿನ್ನೆಲೆಯಲ್ಲಿ ಎಸ್ಐಆರ್ ಸಂಬಂಧಿತ ಕಾರ್ಯಗಳಿಗೆ ಆದ್ಯತೆ ನೀಡುವಂತೆ ನಾಗರಿಕ ಸಮಾಜದ ಸಂಘಟನೆಗಳು ಒತ್ತಾಯಿಸಿವೆ.
ಇದನ್ನೂ ಓದಿ: ಹಿರಿಯ ನಾಗರಿಕರು, ಅಸ್ವಸ್ಥರಿಗೆ ಚುನಾವಣಾ ಆಯೋಗದಿಂದ ಬಿಗ್ ರಿಲೀಫ್: ಮನೆ ಬಾಗಿಲಲ್ಲೇ ವಿಚಾರಣೆಗೆ ಅವಕಾಶ!
ಎಸ್ಐಆರ್ ಪ್ರಕ್ರಿಯೆಗಾಗಿ ವಿವಿಧ ಇಲಾಖೆಗಳ ಸಿಬ್ಬಂದಿಯನ್ನು ಒಳಗೊಂಡಂತೆ 60,923 ಬೂತ್ ಮಟ್ಟದ ಅಧಿಕಾರಿಗಳು (BLO), 224 ಚುನಾವಣಾ ನೋಂದಣಿ ಅಧಿಕಾರಿಗಳು (ERO) ಹಾಗೂ 4,262 ಸಹಾಯಕ ಚುನಾವಣಾ ನೋಂದಣಿ ಅಧಿಕಾರಿಗಳು (AERO) ಕಾರ್ಯನಿರ್ವಹಿಸುತ್ತಿದ್ದಾರೆ. ಸಹಾಯಕ ಆಯುಕ್ತರು, ತಹಶೀಲ್ದಾರ್‌ಗಳು, ಉಪ ತಹಶೀಲ್ದಾರ್‌ಗಳು, ಗ್ರೇಡ್-2 ತಹಶೀಲ್ದಾರ್‌ಗಳು, ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳವರೆಗೆ ಕಂದಾಯ ಇಲಾಖೆಯ ಸಿಬ್ಬಂದಿ ಎಸ್ಐಆರ್ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:28 am, Fri, 18 September 26