KPSC ಕರ್ಮಕಾಂಡ: ಇಡಿ ತನಿಖೆ ವೇಳೆ ಬಯಲಾಯ್ತು ಮತ್ತಷ್ಟು ಸ್ಫೋಟಕ ವಿಚಾರ
ಕೆಪಿಎಸ್ಸಿ ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ನಡೆಸಿರುವ ದಾಳಿ ವೇಳೆ ಬೃಹತ್ ಅಕ್ರಮ ಬಯಲಾಗಿದ್ದು, ಪ್ರಶ್ನೆ ಪತ್ರಿಕೆ ಲೀಕ್ ಮಾಡಿ ಅಭ್ಯರ್ಥಿಗಳಿಗೆ ರೆಸಾರ್ಟ್‌ನಲ್ಲಿ ತರಬೇತಿ ನೀಡಿದ್ದ ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ. ಪಶುವೈದ್ಯಾಧಿಕಾರಿ ನೇಮಕಾತಿಯಲ್ಲಿ ಅಕ್ರಮ ನಡೆದಿದ್ದು, ಅಭ್ಯರ್ಥಿಗಳಿಂದ 70-80 ಲಕ್ಷ ಲಂಚ ಪಡೆದಿರೋ ಆರೋಪ ಕೇಳಿಬಂದಿತ್ತು. ಮಧ್ಯವರ್ತಿಗಳ ಲಂಚದ ಬೇಡಿಕೆ ಕುರಿತು 4 FIR ಕೂಡ ದಾಖಲಾಗಿತ್ತು. ಈ ಸಂಬಂಧ ಇಡಿ ನಡೆಸಿದ್ದ ದಾಳಿಯ ವೇಳೆ ಮತ್ತಷ್ಟು ವಿಚಾರಗಳು ಬಯಲಾಗಿವೆ.

ಮುಖ್ಯಾಂಶಗಳು
- ಕರ್ನಾಟಕ ಲೋಕಸೇವಾ ಆಯೋಗದಿಂದ ಭಾರಿ ಕಳ್ಳಾಟ?
- ಇಡಿ ತನಿಖೆ ವೇಳೆ ಬಯಲಾಯ್ತು ಸ್ಫೋಟಕ ವಿಚಾರ
- ಪ್ರಶ್ನೆಗಳು ಲೀಕ್, ರೆಸಾರ್ಟ್‌ನಲ್ಲಿ ನಡೆದಿತ್ತು ತರಬೇತಿ!
ಬೆಂಗಳೂರು, ಆಗಸ್ಟ್ 20: ಕರ್ನಾಟಕ ಲೋಕಸೇವಾ ಆಯೋಗದ (Karnataka Public Service Commission) ಕರ್ಮಕಾಂಡಗಳು ಒಂದೊಂದೇ ಬಯಲಾಗುತ್ತಿದ್ದು, ಉದ್ಯೋಗಾಕಾಂಕ್ಷಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡಿರುವ ವಿಚಾರಗಳು ತನಿಖೆವೇಳೆ ಗೊತ್ತಾಗಿವೆ. ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಬೃಹತ್ ಅಕ್ರಮ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಕರ್ನಾಟಕದ 21ಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕಕಾಲಕ್ಕೆ ಬೃಹತ್ ಶೋಧ ಕಾರ್ಯಾಚರಣೆ ನಡೆಸಿತ್ತು. ಕೆಪಿಎಸ್ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಸೇರಿದಂತೆ ಹಲವರ ಮನೆಗಳ ಮೇಲೆ ದಾಳಿ ನಡೆಸಿದ್ದ ವೇಳೆ ಸ್ಫೋಟಕ ಮಾಹಿತಿಗಳು ಅಧಿಕಾರಿಗಳಿಗೆ ಸಿಕ್ಕಿವೆ.
ಪ್ರಶ್ನೆಗಳು ಲೀಕ್, ರೆಸಾರ್ಟ್‌ನಲ್ಲಿ ತರಬೇತಿ!
KPSC ನೇಮಕಾತಿ ಸಂಬಂಧ ಪ್ರಶ್ನೆ ಪತ್ರಿಕೆ ಲೀಕ್ ಮಾಡಿದ್ದಲ್ಲದೆ, ಅಭ್ಯರ್ಥಿಗಳಿಗೆ ರೆಸಾರ್ಟ್ ಒಂದರಲ್ಲಿ ತರಬೇತಿ ನೀಡಲಾಗಿತ್ತು. ಹೀಗಾಗಿ ಸಿಸಿ ಟಿವಿ ದೃಶ್ಯಗಳನ್ನು ಸಂಗ್ರಹಿಸಲು ರೆಸಾರ್ಟ್ ಮೇಲೆಯೂ ಇಡಿ ದಾಳಿ ನಡೆಸಿತ್ತು. ರೆಸಾರ್ಟ್‌ನಲ್ಲಿ ಪರೀಕ್ಷೆಗೂ ಮೊದಲೇ ಅಭ್ಯರ್ಥಿಗಳಿಗೆ ಪ್ರಶ್ನೆಗಳನ್ನು ತಿಳಿಸಿದ್ದಲ್ಲದೆ, ಪರೀಕ್ಷೆಗೆ ಅಗತ್ಯ ತಯಾರಿಯನ್ನೂ ಮಾಡಲಾಗಿತ್ತು ಎಂಬ ಮಾಹಿತಿ ಹಿನ್ನೆಲೆ ಅಭ್ಯರ್ಥಿಗಳ ಸಮೇತ ಹೋಟೆಲ್ ಮತ್ತು ರೆಸಾರ್ಟ್ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಆದರೆ ಯಾವ ಪರೀಕ್ಷೆ ಸಂಬಂಧ ಪ್ರಶ್ನೆಗಳು ಲೀಕ್ ಆಗಿದ್ದವು ಮತ್ತು ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗಿತ್ತು ಎಂಬ ಬಗ್ಗೆ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ.
ಇದನ್ನೂ ಓದಿ: ಕೆಪಿಎಸ್ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ಗೆ ಗುಡ್ ನ್ಯೂಸ್: ರಾಜ್ಯಪಾಲರು ಹೊರಡಿಸಿದ್ದ ಅಮಾನತು ಆದೇಶ ರದ್ದು
KPSC ಕಚೇರಿ ಸೇರಿ, ವಿವಿಧೆಡೆ ಏಕಕಾಲಕ್ಕೆ ಇಡಿ ಅಧಿಕಾರಿಗಳು ಶೋಧ ನಡೆಸಿದ್ದರು. ಕೆಪಿಎಸ್ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಪ್ಲಾಟ್, KPSC ಸದಸ್ಯೆ ಶಾಂತಾ ಹೊಸಮನಿ ಮನೆ ಮೇಲೂ ರೇಡ್ ನಡೆದಿತ್ತು. ಮಧ್ಯವರ್ತಿಗಳಿಗೂ ಶಾಕ್ ಕೊಟ್ಟಿದ್ದ ಅಧಿಕಾರಿಗಳು, ಪಶುವೈದ್ಯಾಧಿಕಾರಿ ಹುದ್ದೆಗೆ ಆಯ್ಕೆಯಾದವರ ಮನೆಗಳ ಮೇಲೂ ದಾಳಿ ಮಾಡಿ ಶೋಧ ನಡೆಸಿದ್ದರು. ಪಶುವೈದ್ಯಾಧಿಕಾರಿ ನೇಮಕಾತಿಯಲ್ಲಿ ಅಕ್ರಮ ನಡೆದಿದ್ದು, ಅಭ್ಯರ್ಥಿಗಳಿಂದ 70-80 ಲಕ್ಷ ಲಂಚ ಪಡೆದಿರೋ ಆರೋಪ ಕೇಳಿಬಂದಿತ್ತು. ಮಧ್ಯವರ್ತಿಗಳ ಲಂಚದ ಬೇಡಿಕೆ ಕುರಿತು 4 FIR ಕೂಡ ದಾಖಲಾಗಿತ್ತು. ಈ ಸಂಬಂಧ ಇಡಿ ನಡೆಸಿದ್ದ ದಾಳಿಯ ವೇಳೆ ಮತ್ತಷ್ಟು ಸ್ಫೋಟಕ ವಿಚಾರಗಳು ಬಯಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:20 pm, Thu, 20 August 26




