ಕೆಪಿಎಸ್‌ಸಿ ಅಕ್ರಮ ಕಿಂಗ್‌ಪಿನ್ ಕನ್ನಾಳೆ ಮೊಬೈಲ್‌ನಲ್ಲಿ50ಕ್ಕೂ ಹೆಚ್ಚು ಪ್ರಭಾವಿಗಳ ನಂಬರ್: ಸಿಐಡಿ ಅಧಿಕಾರಿಗಳೇ ಶಾಕ್
ಕೆಪಿಎಸ್‌ಸಿ ಅಕ್ರಮ ತನಿಖೆ ತೀವ್ರಗೊಂಡಿದ್ದು, ಬಸವರಾಜ್ ಕನ್ನಾಳೆ ರಾಜಕೀಯ ಸಂಪರ್ಕ ಜಾಲ ಬಯಲಾಗಿದೆ. ಶಾಸಕರು, ಸಂಸದರು ಸೇರಿದಂತೆ 50ಕ್ಕೂ ಹೆಚ್ಚು ಪ್ರಭಾವಿ ವ್ಯಕ್ತಿಗಳ ಫೋನ್ ಸಂಖ್ಯೆಗಳು ಸಿಕ್ಕಿವೆ. ತುಮಕೂರು ವಿವಿ ಸಿಂಡಿಕೇಟ್ ಸದಸ್ಯನಾದ ಕನ್ನಾಳೆ, ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲೂ ಅಕ್ರಮ ನಡೆಸಿದ್ದಾನೆಂದು ಸಿಐಡಿ ಮಾಹಿತಿ ನೀಡಿದೆ. ಸಾಕ್ಷ್ಯಗಳು ಸಿಕ್ಕಿದ್ದು, ಹಲವು ಪ್ರಭಾವಿಗಳಿಗೆ ನಡುಕ ಶುರುವಾಗಿದೆ.

ಬೆಂಗಳೂರು, ಸೆ.3: ಕೆಪಿಎಸ್‌ಸಿ (KPSC) ಅಕ್ರಮ ನೇಮಕಾತಿ ಹಗರಣದ ತನಿಖೆಯನ್ನು ತೀವ್ರಗೊಳಿಸಿರುವ ಸಿಐಡಿ (CID) ಅಧಿಕಾರಿಗಳಿಗೆ ದಿನಕ್ಕೊಂದು ಸ್ಫೋಟಕ ಸತ್ಯಗಳು ಲಭ್ಯವಾಗುತ್ತಿವೆ. ಪ್ರಕರಣದ ಪ್ರಮುಖ ಆರೋಪಿ ಬಸವರಾಜ್ ಕನ್ನಾಳೆಯ ಮೊಬೈಲ್ ಫೋನ್ ಹಾಗೂ ಕರೆಗಳ ವಿವರ (CDR) ಪರಿಶೀಲಿಸಿದ ಅಧಿಕಾರಿಗಳಿಗೆ ಆತನ ಹೈ-ಫೈ ರಾಜಕೀಯ ಸಂಪರ್ಕ ಜಾಲ ಕಂಡುಬಂದು ತೀವ್ರ ಆಘಾತವಾಗಿದೆ. ಕನ್ನಾಳೆಯ ಮೊಬೈಲ್‌ನಲ್ಲಿ ಶಾಸಕರು, ಸಂಸದರು ಸೇರಿದಂತೆ ದೇಶ ಹಾಗೂ ರಾಜ್ಯದ 50ಕ್ಕೂ ಹೆಚ್ಚು ಪ್ರಭಾವಿ ರಾಜಕೀಯ ವ್ಯಕ್ತಿಗಳ ಅಸಲಿ ದೂರವಾಣಿ ಸಂಖ್ಯೆಗಳು ಪತ್ತೆಯಾಗಿವೆ.
ಇಷ್ಟೊಂದು ಪ್ರಭಾವಿ ರಾಜಕಾರಣಿಗಳ ಸಂಪರ್ಕ ಹೇಗೆ ಸಿಕ್ಕಿತು ಎಂಬ ಸಿಐಡಿ ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಿದ ಕನ್ನಾಳೆ, “ನಾನೊಬ್ಬ ಬ್ಯುಸಿನೆಸ್‌ಮ್ಯಾನ್ ಹಾಗೂ ರಾಜಕಾರಣಿ. ನನಗೆ ಟ್ರಾವೆಲ್ಸ್ ಸೇರಿದಂತೆ ಹಲವು ಉದ್ದಿಮೆಗಳಿವೆ, ಹೀಗಾಗಿ ದೆಹಲಿಯಿಂದ ಭಾಲ್ಕಿಯವರೆಗೆ ಎಲ್ಲರೂ ನನಗೆ ಪರಿಚಿತರು” ಎಂದು ಜಾರಿಕೊಳ್ಳಲು ಯತ್ನಿಸಿದ್ದಾನೆ. ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನವನಾಗಿದ್ದರೂ ಬಸವರಾಜ್ ಕನ್ನಾಳೆ ತುಮಕೂರು ವಿಶ್ವವಿದ್ಯಾಲಯದ ಹಾಲಿ ಸಿಂಡಿಕೇಟ್ ಸದಸ್ಯನಾಗಿದ್ದಾನೆ ಎಂಬ ವಿಚಾರ ತನಿಖೆಯಲ್ಲಿ ಬಯಲಾಗಿದೆ.
ಬಿಜೆಪಿಯ ತುಮಕೂರಿನ ಪ್ರಭಾವಿ ನಾಯಕರೊಬ್ಬರ ನಿಕಟ ಸಂಪರ್ಕ ಬಳಸಿಕೊಂಡು ಈತ ಸಿಂಡಿಕೇಟ್ ಸದಸ್ಯ ಸ್ಥಾನ ಗಿಟ್ಟಿಸಿಕೊಂಡಿದ್ದನು ಎಂಬುದು ಸಿಐಡಿ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಕೆಪಿಎಸ್‌ಸಿ ಅಕ್ರಮದ ಜೊತೆಗೆ ರಾಜ್ಯದಲ್ಲಿ ನಡೆದಿದ್ದ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಯಲ್ಲೂ ದೊಡ್ಡ ಮಟ್ಟದ ಅಕ್ರಮ ನಡೆದಿದೆ ಎಂಬ ಶಾಕಿಂಗ್ ಮಾಹಿತಿ ಸಿಐಡಿಗೆ ಲಭ್ಯವಾಗಿದೆ.
ಇದನ್ನೂ ಓದಿ: ಕೆಪಿಎಸ್‌ಸಿ ನೇಮಕಾತಿ ಅಕ್ರಮ: 2025ರ ಸಿಸಿಬಿ ತನಿಖೆ ವಿಫಲವಾಗಲು ಇದೆ ಬಲವಾದ ಕಾರಣ! ಸಿಐಡಿ ತನಿಖೆಯಲ್ಲಿ ಸ್ಫೋಟಕ ಸತ್ಯ ಬಯಲು
ಈ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳಿಗೆ ಮಹತ್ವದ ಸಾಕ್ಷ್ಯಗಳು ಸಿಕ್ಕಿದ್ದು, ಆ ಆಧಾರದ ಮೇಲೆ ದಾಖಲೆಗಳನ್ನು ಕಲೆಹಾಕಲಾಗುತ್ತಿದೆ. ಬಸವರಾಜ್ ಕನ್ನಾಳೆ ಬಂಧನದ ಬೆನ್ನಲ್ಲೇ ಆತನ ಜಾಲದಲ್ಲಿದ್ದ ಹಲವು ಪ್ರಭಾವಿಗಳು ಹಾಗೂ ಅಕ್ರಮದ ಫಲಾನುಭವಿಗಳ ಎದೆಯಲ್ಲಿ ಇದೀಗ ನಡುಕ ಶುರುವಾಗಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




