
ಬೆಂಗಳೂರು, ಸೆಪ್ಟೆಂಬರ್ 26: ಕೆಪಿಎಸ್‌ಸಿ ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣದ ತನಿಖೆಗೆ ಹೈಕೋರ್ಟ್ ಆದೇಶಿಸಿದ್ದ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆಯನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಹೈ ಕೋರ್ಟ್ ಆದೇಶದಂತೆ ಕಾರಾಗೃಹ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಐವರು ಅಧಿಕಾರಿಗಳ ತಂಡವು 100 ದಿನಗಳ ಒಳಗಾಗಿ ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸಬೇಕು. ಈಗಾಗಲೇ ಪ್ರಕರಣದ ಶೇ 80ರಷ್ಟು ತನಿಖೆ ನಡೆಸಿರುವ ಸಿಐಡಿ ಅಧಿಕಾರಿಗಳು ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಸೇರಿದಂತೆ ಹಲವರನ್ನು ಬಂಧಿಸಿದ್ದಾರೆ. ಸಾಕ್ಷ್ಯಗಳನ್ನು ಕಲೆಹಾಕಿ, ಹಣವನ್ನು ಸೀಜ್ ಮಾಡಿದ್ದಾರೆ. ಇಷ್ಟಾದ ಮೇಲೆ ಇನ್ನೊಂದು ತಂಡವನ್ನು ರಚಿಸಿ ತನಿಖೆ ನಡೆಸಲು ಹೇಳುವ ಅಗತ್ಯವೇನಿದೆ ಎಂಬ ಪ್ರಶ್ನೆ ಸರ್ಕಾರದ್ದು.
ಕೆಪಿಎಸ್‌ಸಿ ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣದ ತನಿಖೆಗೆ ಹೈಕೋರ್ಟ್ ಆದೇಶಿಸಿದ್ದ ಅಲೋಕ್ ಕುಮಾರ್ ನೇತೃತ್ವದ 5 ಅಧಿಕಾರಿಗಳ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆಯನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಮೂಲ ಅರ್ಜಿದಾರರು ಸಿಬಿಐ ತನಿಖೆಗೆ ಮನವಿ ಮಾಡಿದ್ದರೂ ಹೈಕೋರ್ಟ್ ಎಸ್‌ಐಟಿ ರಚನೆ ಮಾಡಿದ್ದು ಸರಿಯಲ್ಲ ಹಾಗೂ ಸದ್ಯ ನಡೆಯುತ್ತಿರುವ ಸಿಐಡಿ ತನಿಖೆಯಲ್ಲಿ ಏನು ಲೋಪವಿದೆ ಎಂಬುದನ್ನು ಹೈಕೋರ್ಟ್ ಸರಿಯಾಗಿ ಉಲ್ಲೇಖಿಸಿಲ್ಲ ಎಂದು ಸರ್ಕಾರ ಪ್ರತಿಪಾದಿಸಿದೆ. ಅಲ್ಲದೆ, ಕೋರ್ಟ್ ಆಗಸ್ಟ್ 24ರಂದು ತನಿಖಾ ವರದಿಯನ್ನು ಪಡೆದುಕೊಂಡ ನಂತರ ನಡೆಸಲಾದ ಸಿಐಡಿ ತನಿಖೆಯ ಮಾಹಿತಿಯನ್ನು ಪರಿಗಣಿಸದೆ ಆದೇಶ ಹೊರಡಿಸಿದೆ ಎಂದು ಆಕ್ಷೇಪಿಸಿರುವ ಸರ್ಕಾರ, ಹೈಕೋರ್ಟ್‌ನ ಎಸ್‌ಐಟಿ ರಚನೆ ಆದೇಶವನ್ನು ತಕ್ಷಣವೇ ರದ್ದುಪಡಿಸುವಂತೆ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ಮನವಿ ಮಾಡಿದೆ.
ಹಾಗಾಗಿ ಹೈ ಕೋರ್ಟ್ ಆದೇಶವನ್ನು ರದ್ದು ಪಡಿಸುವಂತೆ ಸುಪ್ರೀಂ ಕೋರ್ಟ್‌ಗೆ ಸರ್ಕಾರ ಅರ್ಜಿ ಸಲ್ಲಿಸಿದೆ.
ರಾಜ್ಯ ಸರ್ಕಾರದ ಈ ನಡೆಯ ವಿರುದ್ಧ ಬೆಂಗಳೂರಿನಲ್ಲಿ ವಾಗ್ದಾಳಿ ನಡೆಸಿದ ಹೆಚ್.ಡಿ. ಕುಮಾರಸ್ವಾಮಿ, ಸಿಐಡಿ ತನಿಖೆಯ ಮೂಲಕ ಹಗರಣ ಮತ್ತು ಭ್ರಷ್ಟಾಚಾರವನ್ನು ಮುಚ್ಚಿಹಾಕಲು ಸರ್ಕಾರ ಪ್ರಯತ್ನಿಸುತ್ತಿದೆ. ಪಾರದರ್ಶಕ ತನಿಖೆ ನಡೆದಿದ್ದರೆ ಸರ್ಕಾರಕ್ಕೆ ಎಸ್‌ಐಟಿ ಎಂದರೆ ಏಕೆ ಭಯ? ತಮಗೆ ಬೇಕಾದ ರೀತಿಯಲ್ಲಿ ತನಿಖೆ ನಡೆಸುವ ಅಧಿಕಾರಿಗಳು ಬೇಕು ಎನ್ನುವ ಕಾರಣಕ್ಕೆ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:19 pm, Sat, 26 September 26