
ಬೆಂಗಳೂರು, ಸೆಪ್ಟೆಂಬರ್ 13: ಕೆಪಿಎಸ್‌ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಹಗರಣ ಸಂಬಂಧ ಸಿಐಡಿ ಅಧಿಕಾರಿಗಳಿಂದ ತನಿಖೆ ಮುಂದುವರಿದಿದ್ದು, ಒಂದೊಂದೇ ಸ್ಫೋಟಕ ಮಾಹಿತಿ ರಿವೀಲ್ ಆಗ್ತಿದೆ. 5 ಕೋಟಿ ರೂಪಾಯಿ ವಹಿವಾಟು ನಡೆದಿರೋದು ಸಿಐಡಿ ಪ್ರಾಥಮಿಕ ತನಿಖೆ ವೇಳೆ ಬೆಳಕಿಗೆ ಬಂದಿದ್ದು, 85 ಲಕ್ಷ ಹಣ ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಆಗಿರೋದು ಪತ್ತೆಯಾಗಿದೆ. ಇದುವರೆಗೂ ಪ್ರಕರಣದಲ್ಲಿ 273 ಮಂದಿ ವಿಚಾರಣೆ ನಡೆಸಲಾಗಿದ್ದು, ಈ ವೇಳೆ 15 ಅಭ್ಯರ್ಥಿಗಳು ಸೇರಿ ಕೆಲ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ನಗದು ಮೂಲಕವೇ ಹೆಚ್ಚು ವ್ಯವಹಾರವಾಗಿರೋದು ತನಿಖೆ ವೇಳೆ ಪತ್ತೆಯಾಗಿದ್ದು, ಬೀದರ್ ಸೌಹಾರ್ದ ಬ್ಯಾಂಕ್ ಮ್ಯಾನೇಜರ್ ವಿಚಾರಣೆ ಸಂದರ್ಭ, ಕನ್ನಾಳೆ ಜೊತೆಗಿನ ವ್ಯವಹಾರದ ಬಗ್ಗೆ ಅವರು ತಪ್ಪೊಪ್ಪಿಕೊಂಡಿದ್ದಾರೆ. ಉಳಿದಂತೆ ಶಾಂತ ಹೊಸಮನಿ ವಿಚಾರಣೆಗೆ ಬಾರದ ಹಿನ್ನಲೆ ಅವರಿಗೆ ಮತ್ತೊಮ್ಮೆ ನೋಟಿಸ್ ಕೊಡಲು ಸಿಐಡಿ ತಯಾರಿ ಮಾಡಿಕೊಂಡಿದೆ. ಪ್ರಕರಣ ಸಂಬಂಧ ಈಗಾಗಲೇ ಐಎಎಸ್ ಅಧಿಕಾರಿ ಜ್ಞಾನೇಂದ್ರ ವಿಚಾರಣೆ ನಡೆಸಿರೋ ಅಧಿಕಾರಿಗಳು, ಅವರ ಜೊತೆಗಿದ್ದ ಯುವತಿ ಬಳಿಯಿದ್ದ 23 ಲಕ್ಷದ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ. ಮತ್ತೋರ್ವ ಆರೋಪಿ ಬಸವರಾಜ್ ಕನ್ನಾಳೆ ಸಹಚರರಿಗೂ ಬಲೆ ಬೀಸಿರುವ ಸಿಐಡಿ, ಪ್ರಕರಣ ಸಂಬಂಧ ಇನ್ನೂ ಹಲವರನ್ನು ಬಂಧಿಸುವ ಸಾಧ್ಯತೆ ಇದೆ.
ಇದನ್ನೂ ಓದಿ: ಕೆಪಿಎಸ್ಸಿಯಲ್ಲಿ ಮತ್ತೊಂದು ಭಾರೀ ಅಕ್ರಮ: ಗ್ರಾಮೀಣ ಕುಡಿಯುವ ನೀರು ಇಲಾಖೆ ನೇಮಕಾತಿಯಲ್ಲೂ ಅಕ್ರಮ, ಒಎಂಆರ್ ಶೀಟ್ ತಿದ್ದುಪಡಿ!
KPSCಯ 3 ನೇಮಕಾತಿಯಲ್ಲೂ ಶಾಂತ ಹೊಸಮನಿ ಎಡವಟ್ಟು ಮಾಡಿಕೊಂಡಿದ್ದು, RWD ಇಲಾಖೆ AEE ಅಕ್ರಮದಲ್ಲೂ ಶಾಂತಾ ಹೆಸರು ತಳಕುಹಾಕಿಕೊಂಡಿದೆ. 2023ರಲ್ಲಿ AEE ಅಕ್ರಮ ತನಿಖೆಗೆ ಉಪ ಸಮಿತಿ ನೇಮಿಸಲಾಗಿತ್ತು. ಆದರೆ ಸದಸ್ಯರಿಗೆ ತಿಳಿಸಿದೆ ಆಯ್ಕೆ ಪಟ್ಟಿ ಪ್ರಕಟಿಸಲು ಶಾಂತ ಹೊಸಮನಿ ಮುಂದಾಗಿದ್ದರು. ಆಗಿನ ಕಾರ್ಯದರ್ಶಿ ಲತಾ ಕುಮಾರಿ ಮೂಲಕ ಪ್ರಕಟಣೆಗೆ ಮುಂದಾಗಿದ್ದರು. ಆದರೆ ಕೆಲ ಸದಸ್ಯರ ಆಕ್ಷೇಪದಿಂದ ಪಟ್ಟಿ ಪ್ರಕಟವಾಗಿರಲಿಲ್ಲ. ಬಳಿಕ ಉಪ ಸಮಿತಿಯಿಂದ ಶಾಂತ ಹೊಸಮನಿ ಹೊರಗಿಡಲಾಗಿತ್ತು ಎಂಬುದೀಗ ಬಹಿರಂಗಗೊಂಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:59 am, Sun, 13 September 26