ಕಾಂಗ್ರೆಸ್ ಅವಧಿಯಲ್ಲಿ ನೀರಾವರಿ, ಉನ್ನತ ಶಿಕ್ಷಣ, ಆರೋಗ್ಯ ಇಲಾಖೆಗಳಲ್ಲಿ ಹಗರಣ: ಸಚಿವ ಸುಧಾಕರ್ ಟೀಕೆ
ಯಾವುದೇ ಯೋಜನೆಯಲ್ಲಿ ಭ್ರಷ್ಟಾಚಾರ ಹೇಗೆ ಅಡಗಿತ್ತು ಎಂಬುದನ್ನು ಕಾಂಗ್ರೆಸ್ ಆಡಳಿತ ಇದ್ದಾಗ ನೋಡಿದ್ದೇವೆ. ಈಗ ರಾಜ್ಯದ ಮೂಲೆ ಮೂಲೆಗೆ ಹೋಗಿ ನಮ್ಮ ಭ್ರಷ್ಟಾಚಾರ ಹೆಚ್ಚಾಗಿದೆ ಅಂತ ಹೇಳುವ ತವಕದಲ್ಲಿದ್ದಾರೆ.
ಬೆಂಗಳೂರು: ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಡಾ.ಸುಧಾಕರ್ ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇಂದಿರಾ ಕ್ಯಾಂಟೀನ್ ಆರಂಭಿಸಿ ಊಟದಲ್ಲೂ ಕಮಿಷನ್ ಹೊಡೆದರು ಎಂದು ಕಾಂಗ್ರೆಸ್ ವಿರುದ್ಧ ಸಚಿವ ಡಾ.ಸುಧಾಕರ್ ಆರೋಪ ಮಾಡಿದ್ದಾರೆ. ಅಲ್ಪಸಂಖ್ಯಾತರು, ದಲಿತರು, ವಿದ್ಯಾರ್ಥಿಗಳಿಗೆ ನ್ಯಾಯ ಕೊಡಲಿಲ್ಲ. ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಣೆಯಲ್ಲಿ ಭ್ರಷ್ಟಾಚಾರ ಆಗಿಲ್ವಾ? ಕಾಂಗ್ರೆಸ್ನವರು ಸತ್ಯಹರಿಶ್ಚಂದ್ರ ರೀತಿ ಹೇಳುತ್ತಾರೆ ಎಂದು ಸುಧಾಕರ್ ವಾಗ್ದಾಳಿ ನಡೆಸಿದ್ದಾರೆ.
ಯಾವುದೇ ಯೋಜನೆಯಲ್ಲಿ ಭ್ರಷ್ಟಾಚಾರ ಹೇಗೆ ಅಡಗಿತ್ತು ಎಂಬುದನ್ನು ಕಾಂಗ್ರೆಸ್ ಆಡಳಿತ ಇದ್ದಾಗ ನೋಡಿದ್ದೇವೆ. ಈಗ ರಾಜ್ಯದ ಮೂಲೆ ಮೂಲೆಗೆ ಹೋಗಿ ನಮ್ಮ ಭ್ರಷ್ಟಾಚಾರ ಹೆಚ್ಚಾಗಿದೆ ಅಂತ ಹೇಳುವ ತವಕದಲ್ಲಿದ್ದಾರೆ. ಕಾಂಗ್ರೆಸ್ 2013ರ ಪ್ರಣಾಳಿಕೆಯಲ್ಲಿ ಭ್ರಷ್ಟಾಚಾರ ತಡೆಯುವುದಾಗಿ ಹೇಳಿತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಲೋಕಾಯುಕ್ತ ತೆಗೆದು ಎಸಿಬಿ ರಚನೆ ಮಾಡಿದ್ರು. ತಮ್ಮ ಅಧಿಕಾರಾವಧಿಯಲ್ಲಿ ಭ್ರಷ್ಟಾಚಾರ ದೂರು ದಾಖಲಾದಾಗ ತನಿಖೆ ಎದುರಿಸಬೇಕಾಗುತ್ತದೆ ಅಂತಾ ಏಕಾಏಕಿ ಎಲ್ಲೂ ಚರ್ಚೆ ಮಾಡದೆ ರಾತ್ರೋ ರಾತ್ರಿ ಎಸಿಬಿ ಜಾರಿಗೆ ತಂದರು. ಲೋಕಾಯುಕ್ತ ತನ್ನದೇ ಗೌರವ ಸಂಪಾದನೆ ಮಾಡಿದೆ, ಅದು ಉಳಿಯಬೇಕು. ಬಿಜೆಪಿ ಪ್ರಣಾಳಿಕೆಯಲ್ಲಿ ಲೋಕಾಯುಕ್ತ ಮರು ಸ್ಥಾಪನೆ ಮಾಡೋದಾಗಿ ಹೇಳಿದ್ದೆವು. ಭ್ರಷ್ಟಾಚಾರ ಕಡಿವಾಣ ಹಾಕಬೇಕು ಅಂತಲೇ ಲೋಕಾಯುಕ್ತ ತೆರೆದಿದ್ದು. ಇಲ್ಲದಿದ್ದರೆ ಎಸಿಬಿಯನ್ನೇ ಮುಂದುವರೆಸುತ್ತಿದ್ದೆವು. ಹೈಕೋರ್ಟ್‌ಗೆ ಮೇಲ್ಮನವಿ ಹೋಗಿ ಎಸಿಬಿ ಉಳಿಸಿಕೊಳ್ಳುತ್ತಿದ್ದೆವು.
ಇದನ್ನೂ ಓದಿ: ನಮ್ಮ ಮೆಟ್ರೋ ಪಿಲ್ಲರ್ ದುರಂತ: IISc ತಜ್ಞರಿಂದ BMRCL ಎಂಜಿನಿಯರ್ಗಳಿಗೆ ಸ್ಪೆಷಲ್ ಸಿವಿಲ್ ಎಂಜಿನಿಯರಿಂಗ್ ಕ್ಲಾಸ್!
2018ರಲ್ಲಿ ಸಿಎಜಿ ರಿಪೋರ್ಟ್ ಬಂದಿದೆ. 35 ಸಾವಿರ ಕೋಟಿ ಫೈನಾನ್ಸಿಯಲ್ ಅವ್ಯವಹಾರ 2013, 2018ರಲ್ಲಿ ಇದೆ ಅಂತ ಹೇಳಿದೆ. ರೀಡೂ ಅಂತ ಅವರ ಅನುಕೂಲಕ್ಕೆ ಹೊಸ ಪದವನ್ನೇ ಸೃಷ್ಟಿ ಮಾಡಿದ್ದಾರೆ. 10 ಸಾವಿರ ಬೆಂಗಳೂರು ನಿವಾಸಿಗಳಿಗೆ ಅನ್ಯಾಯ ಮಾಡಿದ್ದಾರೆ. 900 ಎಕರೆಗೂ ಹೆಚ್ಚು ಜಾಗ ಡಿ ನೋಟಿಫಿಕೇಷನ್ ಮಾಡಿದ್ದಾರೆ. ಇದಕ್ಕಾಗಿ ಲೋಕಾಯುಕ್ತ ಮುಚ್ಚಿ ಎಸಿಬಿ ತೆರೆದರು. ಇವರ ಬಲಗೈ ಬಂಟ ಕೆ.ಜೆ. ಜಾರ್ಜ್ ನಗರಾಭಿವೃದ್ಧಿ ಸಚಿವರಾಗಿದ್ದರು. 292 ಕೋಟಿ ವೈಟ್ ಟಾಪಿಂಗ್ ಎಸ್ಟಿಮೇಟ್ ಇತ್ತು. ಅದನ್ನು 374 ಕೋಟಿಗೆ ಹೆಚ್ಚಿಸಿದರು. ಯಾಕೆ 23% ಹೆಚ್ಚಳವಾಗಿ ಕೊಟ್ಟರು. ಜಾರ್ಜ್ ಅವರೇ ಯಾಕೆ ಯಾವ ಉದ್ದೇಶಕ್ಕೆ ಹೆಚ್ಚಿಗೆ ಕೊಟ್ಟಿರಿ ಹೇಳಿ.
9.47 ಕಿ.ಮೀ. 75 ಕೋಟಿ ಎಸ್ಟಿಮೇಟ್ ಇದ್ದು 115 ಕೋಟಿಗೆ ಕೊಡುತ್ತಾರೆ. 53% ಹೆಚ್ಚಿಗೆ ಕೊಟ್ಟಿದ್ದಾರೆ. ಯಾವ ಉದ್ದೇಶಕ್ಕೆ ಹೆಚ್ಚಿಗೆ ಕೊಟ್ಟಿದ್ದಾರೆ? ಒಳ್ಳೆಯ ಉದ್ದೇಶ ಇದ್ರೆ 5% ಹೆಚ್ಚಿನ ಎಸ್ಟಿಮೇಟ್‌ಗೆ ಕೊಡ್ತಾರೆ. ಸಾರ್ವಜನಿಕ ಸಂಗ್ರಹದಲ್ಲಿ ಟೆಂಡರ್ ಪ್ರೀಮಿಯರ್ ಕುರಿತು 5% ಹೆಚ್ಚಿಗೆ ಕೊಡಬಾರದು. 40% ಕಮಿಷನ್ ಆರೋಪ ಮಾಡಿದ್ದಾರೆ. 5% ಟೆಂಡರ್ ಪ್ರೀಮಿಯಂ ತೆಗೆದುಕೊಳ್ಳುವ ಕಂಟ್ರಾಕ್ಟರ್ 40% ಕೊಡಲು ಸಾಧ್ಯವೇ? ಕಾಂಗ್ರೆಸ್ ಕಾಲದಲ್ಲಿ ಬಿಬಿಎಂಪಿ ವ್ಯಾಪ್ತಿಯ ಅನೇಕ ಟೆಂಡರ್ ನೋಡಿದೆ. ಎಲ್ಲವೂ 30% ನಿಂದ 50%ವರೆಗೂ ಇದೆ. ನಮ್ಮ ಮೇಲಿನ ಆರೋಪಕ್ಕೆ ಇವರು ಯಾವುದೇ ದಾಖಲೆ ಕೊಡುವ ಕೆಲಸ ಮಾಡಿಲ್ಲ. ಕೋರ್ಟ್ ಕೂಡಾ ಛೀಮಾರಿ ಹಾಕಿದೆ ನಿಮ್ಮ ಬಳಿ ದಾಖಲೆ ಇಲ್ಲ ಅಂತ. ನಿಮ್ಮ ಬಳಿ ದಾಖಲೆ ಇದ್ರೆ ದೂರು ಕೊಡಿ ಹತ್ತಾರು ಸಾವಿರ ಸೈಟುಗಳ ನಷ್ಟ ಮಾಡ್ತಿದ್ದೀರಿ. ಹಿಂದೆ ಬೆಳ್ಳಂದೂರಲ್ಲಿ ನೊರೆ ಬರುತ್ತಿತ್ತು, ಬೆಂಕಿ ಹತ್ತಿಕೊಳ್ಳುತ್ತಿತ್ತು. ಆಗ ಸಿಎಂ ಆಗಿದ್ದ ಸಿದ್ದರಾಮಣ್ಣ ಅದು ಯಾವಾಗ್ಲೂ ಆಗುತ್ತೆ ಬಿಡ್ರಿ ಅಂದರು.
ನಿಮ್ಮ ಬೆನ್ನು ಬಹಳ ದೊಡ್ಡದಿದೆ. ಒಮ್ಮೆ ಮುಟ್ಟಿ ನೋಡಿಕೊಳ್ಳಿ. ಎಷ್ಟು ಜನ ಬೇಲ್ ಮೇಲಿದ್ದೀರಿ, ಹೊರಗಿದ್ದೀರಿ. ಕನ್ನಡಿ ಮುಂದೆ ನಿಂತು ನಿಮಗೆ ನೀವೇ ಪ್ರಶ್ನೆ ಮಾಡಿಕೊಳ್ಳಿ. ನನಗೆ ನೈತಿಕತೆ ಇದೆಯಾ ಅಂತ ನೀವೇ ಪ್ರಶ್ನೆ ಮಾಡಿಕೊಳ್ಳಿ ಎಂದು ಸುಧಾಕರ್ ವಾಗ್ದಾಳಿ ನಡೆಸಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 11:54 am, Mon, 23 January 23